ಊಟಕ್ಕೆ ದುಡ್ಡಿಲ್ಲದೇ ಜೀವನವೇ ಸಾಕು ಎಂದು ನಿರ್ಧರಿಸಿದ್ದೆ.. ಆಗ ನನ್ನ ಬಾಳಿಗೆ ಬೆಳಕಾಗಿದ್ದು ಆ 'ರವಿ'
ರವಿ ಬಸ್ರೂರು. ಇದೀಗ ಸ್ಯಾಂಡಲ್‌ವುಡ್ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗದಲ್ಲಿ ಮಾರ್ದನಿಸುತ್ತಿರುವ ಹೆಸರು. 'ಉಗ್ರಂ' ಚಿತ್ರದಲ್ಲಿ ತಮ್ಮ ಅದ್ಭುತ ಸಂಗೀತದಿಂದ ಸದ್ದು ಮಾಡಿದ ಉಡುಪಿ ಮೂಲದ ಪ್ರತಿಭೆ ಈಗ ಬಾಲಿವುಡ್ ಸಿನಿಮಾಗಳಿಗೂ ಸಂಗೀತ ಸಂಯೋಜನೆ ಮಾಡುವ ಮಟ್ಟಿಗೆ ಬೆಳೆದು ನಿಂತಿದ್ದಾರೆ. 'KGF' ಸರಣಿ ಸಿನಿಮಾ ರವಿ ಬಾಳಿಗೆ ಬೆಳಕಾಗಿದ್ದು ಸುಳ್ಳಲ್ಲ.
ಸದ್ಯ 'ಸಲಾರ್' ಸಿನಿಮಾ ಮೂಲಕ ಮತ್ತೆ ರವಿ ಬಸ್ರೂರು ದೇಶಾದ್ಯಂತ ಸುದ್ದಿಯಲ್ಲಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ 'ಸಲಾರ್' ಉತ್ತರ ಭಾರತದಲ್ಲೂ ಸೂಪರ್ ಹಿಟ್ ಆಗಿದೆ. ಚಿತ್ರಕ್ಕೆ ರವಿ ಮ್ಯೂಸಿಕ್ ಪ್ಲಸ್ ಆಗಿದೆ. ಬರೀ ಹಾಡುಗಳು ಮಾತ್ರವಲ್ಲ ಮಾಸ್ ಸಿನಿಮಾಗಳಿಗೆ ತಮ್ಮ ಅದ್ಭುತ ಹಿನ್ನೆಲೆ ಸಂಗೀತದಿಂದ ಗುರ್ತಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್‌ಗಳು ತಮ್ಮ ಸಿನಿಮಾಗಳಿಗೆ ರವಿ ಬಸ್ರೂರು ಹಂಟಿಂಗ್ ಬಿಜಿಎಂ ಬೇಕು ಎಂದು ಪಟ್ಟು ಹಿಡಿಯುತ್ತಿದ್ದಾರೆ.

ರವಿಬಸ್ರೂರು ತಂದೆ ಊರಿನಲ್ಲಿ ಕುಲುಮೆ ನಡೆಸುತ್ತಿದ್ದಾರೆ. ತಂದೆಯ ಜೊತೆ ಕುಲುಮೆಯಲ್ಲಿ ಕೆಲಸ ಮಾಡಿ ಕುಸುರಿ ಕೆಲಸವನ್ನು ರವಿ ಕೂಡ ಕಲಿತರು. ಆದರೆ ಸಂಗೀತ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಅಚಲ ನಿರ್ಧಾರದಿಂದ ಇಂದು ನಮ್ಮ ಮುಂದೆ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ಸಂಗೀತ ನಿರ್ದೇಶಕನಾಗಿ ನಿಂತಿದ್ದಾರೆ. ಸರಿಗಮಪ ಸೀಸನ್ 10ರ ಅತಿಥಿಯಾಗಿ ಬಂದಿದ್ದ ರವಿ ತಮ್ಮ ಜೀವನದ ಇಂಟ್ರೆಸ್ಟಿಂಗ್ ಕಥೆ ಬಿಚ್ಚಿಟ್ಟಿದ್ದಾರೆ.
ಸಾಧಿಸುವ ಛಲ ಇದ್ದರೆ ಏನು ಬೇಕಾದರೂ ಸಾಧಿಸಬಹುದು. ಸಾಧಿಸಲು ಹೊರಟಾಗ ತಾನಾಗಿಯೇ ಸಾಕಷ್ಟು ಜನ ನಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ ಎನ್ನುವುದಕ್ಕೆ ರವಿ ಬಸ್ರೂರು ಸಾಧನೆಯ ಕಥೆ ಮತ್ತೊಂದು ಉದಾಹರಣೆ.

ಸರಿಗಮಪ ಶೋದಲ್ಲಿ ರವಿ ಬಸ್ರೂರು ಮತ್ತೊಮ್ಮೆ ತಮ್ಮ ಜೀವನದ ಆ ಘಟನೆಯನ್ನು ವಿವರಿಸಿದ್ದಾರೆ. "ಒಂದ್ಸಲ ಜೀವನವೇ ಸಾಕು ಎಂದು ವೆಸ್ಟ್ ಆಫ್ ಕಾರ್ಡ್ ರೋಡ್‌ನಲ್ಲಿ ಕೂತಿದ್ದೆ. ಊಟ ಮಾಡದೇ ಮೂರ್ನಾಲ್ಕು ದಿನ ಆಗಿತ್ತು. ನನ್ನ ಜೇಬಿನಲ್ಲಿ ಒಂದು ಲಿಸ್ಟ್ ಇತ್ತು. ಯಾವ ದೇವಸ್ಥಾನದಲ್ಲಿ ಯಾವ ದಿನ ಯಾವ ಪ್ರಸಾದ ಕೊಡ್ತಾರೆ ಅಂತ. ಸಮಯಕ್ಕೆ ಸರಿಯಾಗಿ ಹೋಗದಿದ್ದರೆ ಪ್ರಸಾದ ಸಿಗುತ್ತಿರಲಿಲ್ಲ" ಎಂದು ಆ ದಿನವನ್ನು ನೆನಪಿಸಿಕೊಂಡಿದ್ದಾರೆ.
"ನನ್ನ ಸ್ಥಿತಿ ಹೇಗಾಗಿತ್ತು ಅಂದ್ರೆ, ಇಲ್ಲದ ಆಲೋಚನೆಗಳು ಬರೋಕೆ ಶುರುವಾಗಿತ್ತು. ಆಗ ಒಬ್ಬರು ಹಿರಿಯರು ನನ್ನನ್ನು ನೋಡಿದರು. ಅವರ ಹೆಸರು ಕಾಮತ್ ಎಂದು. ಅವರು ನನ್ನನ್ನು ಕರೆದುಕೊಂಡು ಅವೆನ್ಯೂ ರೋಡ್‌ಗೆ ಹೋದರು. ಅಲ್ಲಿ ಒಂದು ಅಂಗಡಿಗೆ ಕರೆದುಕೊಂಡು ಹೋಗಿ ಈತ ಹಿತ್ತಾಳೆ, ಬೆಳ್ಳೆ ಕೆಲಸ ಎಲ್ಲಾ ಮಾಡ್ತಾನೆ, ಆದ್ರೆ ಇವನಿಗೆ ಸಂಗೀತದ ಹುಚ್ಚು ಹಿಡಿದಿದೆ. ಅದಕ್ಕೆ ಕೆಲಸ ಮಾಡ್ತಿಲ್ಲ ಅಂತ ಒಬ್ಬ ವ್ಯಕ್ತಿ ಮುಂದೆ ಕೂರಿಸಿ ಹೇಳಿದರು"
"ನಾನು ಮೊದಲು 5 ರೂ. ಕೊಡಿ. ಏನಾದರೂ ತಿನ್ಕೊಂಡು ಬರ್ತೀನಿ. ಆಮೇಲೆ ನೀವು ಹೇಳಿದ್ದು ನನ್ನ ತಲೆಗೆ ಏರುತ್ತದೆ ಎಂದೆ. ಆಗ ಅವ್ರು ನನ್ನನ್ನು ನೋಡಿ ಎಂತಹ ವ್ಯಕ್ತಿನ ಕರ್ಕೊಂಡು ಬಂದು ಕೂರಿಸಿದ್ದೀರಾ. ಈತನನ್ನು ನೋಡಲು ಭೇಟಿ ಮಾಡಲು 5 ತಿಂಗಳು ಅಪಾಯಿಂಟ್‌ಮೆಂಟ್ ಬೇಕು. ಆ ರೀತಿ ಬೆಳೆಯುತ್ತಾರೆ. ಈತನನ್ನು ಹಿಡಿಯಲು ಸಾಧ್ಯವಿಲ್ಲ ಎಂದರು"
"ನಾನು ಜಾತಕ ನೋಡಿ ಈ ರೀತಿ ಹೇಳುವವರು ಬಹಳ ಸಿಗ್ತಾರೆ. ನನಗೆ ಮ್ಯೂಸಿಕ್ ಬೇಕು ಅಷ್ಟೆ ಎಂದೆ. ಆಗ ಆ ಮನುಷ್ಯ ನಿಮಗೆ ಏನು ಬೇಕು ಎಂದು ಕೇಳಿದರು. ನಾನು ಕೀಬೋರ್ಡ್ ತಗೋಬೇಕು, ದುಡ್ಡು ಕೊಡ್ತೀರಾ ನೀವು ಎಂದೆ. ಕೂಡಲೇ ಎಷ್ಟು ಬೇಕು ಎಂದು ಕೇಳಿದರು. ನಾನು 35 ಸಾವಿರ ಅಂದೆ. ಕೂಡಲೇ ಕೊಟ್ಟರು. ಅವ್ರು ಯಾರು ಅಂತಲೂ ನನಗೆ ಗೊತ್ತಿರಲಿಲ್ಲ. ನಾನು, ಕಾಮತ್ ಇಬ್ಬರೂ ಶಾಕ್ ಆಗಿದ್ದೆವು. ಈ ಹಣ ವಾಪಸ್ ಕೊಡುವುದು ಬೇಡ. ಕೀಬೋರ್ಡ್ ತಗೋ. ಈ 35 ಸಾವಿರಕ್ಕೆ ಕೆಲಸ ಕೊಡ್ತೀನಿ, ಕೆಲಸ ಮಾಡಿ ತೀರಿಸು ಅಂದ್ರು"
"ಆ ವ್ಯಕ್ತಿಯ ಹೆಸರು ರವಿ. ಅಂದಿನಿಂದ ನನ್ನ ಹೆಸರು ಡಿಲೀಟ್ ಮಾಡಿ ನಾನು ಅವರ ಹೆಸರನ್ನು ನನ್ನ ಹುಟ್ಟೂರಿನ ಹೆಸರಿನೊಂದಿಗೆ ಸೇರಿಸಿಕೊಂಡು ಇಟ್ಟುಕೊಂಡಿದ್ದೇನೆ. ನೀವು ನನ್ನನ್ನು ಹೇಗೆ ಕರೆದರು ಆ ಕ್ರೆಡಿಟ್ ಅವರಿಗೆ ಕೊಡಬೇಕು ಎಂದು ಹೆಸರು ಬದಲಿಸಿಕೊಂಡೆ ಎಂದಿದ್ದಾರೆ. ನಾನು ಇವತ್ತು ಏನೇ ಸಾಧಿಸಿದ್ದರು ಅದಕ್ಕೆ ಅವರು ಕಾರಣ ಎಂದು ವಿವರಿಸಿದ್ದಾರೆ. ಕೂಡಲೇ ಹಂಸಲೇಖ, ನಿಮ್ಮ ನಿಜವಾದ ಹೆಸರು ಏನು ಎಂದು ಕೇಳಿದ್ದಕ್ಕೆ ಕಿರಣ್ ಎಂದು ಹೇಳಿದ್ದಾರೆ. ರವಿ ಬಸ್ರೂರು ಜೀವನದ ಕಥೆ ಕೇಳಿ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ.


Click it and Unblock the Notifications











