For Quick Alerts
  ALLOW NOTIFICATIONS  
  For Daily Alerts

  ಕನ್ನಡ ಸಿನಿಮಾರಂಗಕ್ಕೆ ಲಾಂಗು-ಮಚ್ಚು ಚಿತ್ರಗಳು ಅನಿವಾರ್ಯವೇ?

  By ರವೀಂದ್ರ ಕೊಟಕಿ
  |

  ಅದೊಂದು ಮಧ್ಯಾಹ್ನ ಒಂದು ಗಂಟೆಯ ಸಮಯದಲ್ಲಿ ಒಂದು ಕರೆ ಬರುತ್ತದೆ. "ಸರ್ ಯಾವುದಾದರೂ ಒಂದು ಒಳ್ಳೆ ಕಥೆ ಇದ್ದರೆ ಹೇಳಿ. ನಮ್ಮ ಕಡೆ ಪ್ರೊಡ್ಯೂಸರ್ ಒಬ್ಬರಿದ್ದಾರೆ. ಸಿನಿಮಾ ಇಂಡಸ್ಟ್ರಿಗೆ ಹೊಸಬರು, ಅವರ ಮಗನಿಗೊಂದು ಸಿನಿಮಾ ಮಾಡಬೇಕಂತೆ, ಆ ಹುಡುಗನಿಗೆ 18 ವರ್ಷ ವಯಸ್ಸು. ಅವನ ವಯಸ್ಸಿಗೆ ಸೂಟ್ ಆಗೋ ತರ ಇರೋ ಇದ್ದರೆ ನೋಡಿ ಸರ್."

  "ಅವರ ಅಭಿರುಚಿ ಹೇಗಿದೆ? ಲವ್ ಸ್ಟೋರಿ ನಾ, rom-com, ಎಕ್ಸ್ಪರಿಮೆಂಟ್ ಲ್ ಮೂವಿನಾ...

  ಯಾವ ತರದ ಸಿನಿಮಾ ಮಾಡೋದಕ್ಕೆ ಅವರು ಇಂಟರೆಸ್ಟ್ ತೋರಿಸುತ್ತಿದ್ದಾರೆ?"

  "ಅಯ್ಯೋ! ಇದೆಲ್ಲ ಯಾವುದು ಬೇಡ ಸರ್. ಅವರಿಗೆ ಮಾಸ್ ಸಿನಿಮಾ ಬೇಕಂತೆ. ಯಾವುದಾದರೂ ಒಂದು ಒಳ್ಳೆಯ ರೌಡಿಸಂ ಕಥೆ ಇದ್ದರೆ ಹೇಳಿ.ಅವರ ಮಗನ್ನ ಮಾಸ್ ಹೀರೋ ಮಾಡಬೇಕಂತೆ ಅವರು" ಹೀಗೊಂದು ಸಂಭಾಷಣೆ ಕೆಲವು ದಿನಗಳ ಹಿಂದೆ ನಡೆದಿತ್ತು.

  ಆದರೆ ನಿಜವಾದ ವಿಷಯ ಇಲ್ಲಿಂದಲೇ ಮೊದಲಾಯಿತು. 18 ವರ್ಷದ ಹುಡುಗನ ತಂದೆ ಆಲೋಚನೆ, ಮಗನ ಕೈಗೊಂದು ಮಚ್ಚು ಕೊಟ್ಟು ಸಿನಿಮಾರಂಗಕ್ಕೆ ಇಂಟ್ರೊಡ್ಯೂಸ್ ಮಾಡುವುದು! ಅದೇ, ಗಾಂಧಿನಗರದ ಸಿದ್ಧಸೂತ್ರ. ಹೀರೋ ಕೈಯಲ್ಲಿ ಮಚ್ಚು ಹಿಡಿದರೆ ಮಾತ್ರ ಮಾಸ್ ಸಿನಿಮಾ ಅನ್ನೋ ನಿಲುವಿಗೆ ಆ ಹೊಸ ನಿರ್ಮಾಪಕರು ಕೂಡ ಅಂಟಿಕೊಂಡಂತೆ ಕಾಣುತ್ತದೆ.

  ಕನ್ನಡ ಸಿನಿಮಾರಂಗದ ಮಾಸ್ ಚಿತ್ರಗಳನ್ನು ಒಂದು ಸಾರಿ ಅವಲೋಕಿಸಿದರೆ, ಚಿತ್ರದ ಬಜೆಟ್ ದೊಡ್ಡ ಮಟ್ಟದಲ್ಲಿದ್ದರೆ ಕಥಾವಸ್ತು ನೇರವಾಗಿ ನ್ಯಾಷನಲ್ ಅಥವಾ ಇಂಟರ್ನ್ಯಾಷನಲ್ ಅಂಡರ್ವರ್ಲ್ಡ್ ಜೊತೆ ಡೀಲ್ ಮಾಡುತ್ತದೆ. ಇನ್ನು ಸಣ್ಣ ಬಜೆಟ್ ಸಿನಿಮಾ ಅಂದರೆ ಸಾಧಾರಣವಾಗಿ ಸಿನಿಮಾದ ನಾಯಕ ಮುಗ್ಧ, ಬದುಕು ಅರಸಿ ಹಳ್ಳಿಯಿಂದ ಬೆಂಗಳೂರಿಗೆ ಬರುತ್ತಾನೆ. ಕೈಗೆ ಅನಿವಾರ್ಯವಾಗಿ ಮಚ್ಚು ಹಿಡಿಯುತ್ತಾನೆ ಕೊನೆಗೆ ಭೂಗತಜಗತ್ತಿನ ದೊರೆ ಆಗುತ್ತಾನೆ. ಒಟ್ಟಿನಲ್ಲಿ ಕನ್ನಡ ಸಿನಿಮಾದ ಬಹುತೇಕ ಹೀರೋಗಳು ಕೈಯಲ್ಲಿ ಮಚ್ಚು ಹಿಡಿಯುತ್ತಾರೆ ಮತ್ತು ಹೆವಿ ಬಿಲ್ಡಪ್ ಮತ್ತು ಡೈಲಾಗ್ ಗಳ ಮೂಲಕ ರೌಡಿಸಂ ಅನ್ನು ವೈಭವೀಕರಿಸುತ್ತಾರೆ. ಅದರಲ್ಲೂ ಇತ್ತೀಚಿನ ಕನ್ನಡ ಸಿನಿಮಾಗಳಲ್ಲಿ ರೌಡಿಸಂ ವೈಭವಿಕರಣವಂತೂ ಎಲ್ಲೆ ಮೀರಿದೆ.

  ಕನ್ನಡದ ಮಟ್ಟಿಗೆ ಇದೊಂದು ದುರಂತದ ವಿಷಯವೇ ಸರಿ. ಇಲ್ಲಿ ಹೀರೋಗಳು ಕೈಯಲ್ಲಿ ಮಚ್ಚು ಹಿಡಿಯುವುದೇ ದೊಡ್ಡಸ್ತಿಕೆ ಆಗಿದೆ. ಹಾಗೆ ಮಚ್ಚು ಹಿಡಿದರೆ ಮಾತ್ರ ಆತ ಮಾಸ್ ಹೀರೋ ಎನಿಸಿಕೊಳ್ಳಲು ಸಾಧ್ಯವೆಂಬ ಭ್ರಮೆ ಇಲ್ಲಿ ಮನೆಮಾಡಿದೆ. ಹೀಗಾಗಿ ಹೊಸದಾಗಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡುವವರ ಮನಸಲ್ಲಿ ಮಾಸ್ ಹೀರೋ ಅಂತ ಕರೆಸಿಕೋಬೇಕಾದರೆ ಲಾಂಗು-ಮಚ್ಚು ಹಿಡಿಯಲೇಬೇಕು ಎಂಬ ಭಾವನೆ ಮನೆಮಾಡಿದೆ. ಹೀಗಾಗಿಯೇ

  ಹಾದಿಬೀದಿಗಳಲ್ಲಿ ಹೆಣವಾದವರ ಕಥೆಗಳು ಕೂಡ ಇಲ್ಲಿ ಸಂಚಲನಗಳನ್ನು ಉಂಟುಮಾಡುತ್ತದೆ. ರೌಡಿಸಂ ನಾ ಅತಿಯಾದ ವೈಭವೀಕರಣ, ಕೇಳಲಿಕ್ಕೆ ಹಿಂಸೆ ಆಗುವಂತಹ ಸಂಭಾಷಣೆಗಳು,ಇದೆಲ್ಲವೂ ಕೂಡ ಖಂಡಿತವಾಗಿಯೂ ಪರೋಕ್ಷವಾಗಿ ರೌಡಿಸಂ ಅನ್ನು ಮೇಲ್ಮಟ್ಟದಲ್ಲಿ ಇಟ್ಟು ತೋರಿಸುವ ಆಲೋಚನೆಗಳಿಗೆ ಪ್ರೇರಣಾದಾಯಕ ವಾಗುತ್ತಿದೆ.

  ಕನ್ನಡದಲ್ಲೇ ಅತಿ ಹೆಚ್ಚು ರೌಡಿಸಂ ಸಿನಿಮಾಗಳು ಬರುವುದು!

  ಕನ್ನಡದಲ್ಲೇ ಅತಿ ಹೆಚ್ಚು ರೌಡಿಸಂ ಸಿನಿಮಾಗಳು ಬರುವುದು!

  ಕನ್ನಡದಲ್ಲಿ ನಿರ್ಮಾಣವಾಗುವಷ್ಟು ರೌಡಿಸಂ ಸಿನಿಮಾಗಳು ಬೇರೆ ಯಾವ ಭಾಷೆಯಲ್ಲೂ ತಯಾರಾಗುವುದಿಲ್ಲ.ಇತರ ಸಿನಿಮಾರಂಗಗಳ ಕಡೆಗೆ ದೃಷ್ಟಿ ಹಾಯಿಸಿದಾಗ ಅಲ್ಲಿ ಕೂಡ ಮಾಸ್ ಚಿತ್ರಗಳು ಬರುತ್ತವೆ. ಅಂಡರ್ ವರ್ಲ್ಡ್ ಗೆ ಸಂಬಂಧಿಸಿದ ಸಿನಿಮಾಗಳು ಕೂಡ ಹೆಚ್ಚಾಗಿ ತಯಾರಾಗುತ್ತವೆ, ಆದರೆ ಹೀರೋಗಳು ರೌಡಿಸಂ ಹಿನ್ನೆಲೆಯಲ್ಲಿ ಮಿಂಚುವುದು ತೀರಾ ಕಡಿಮೆ. ದುರಂತವೆಂದರೆ ಕನ್ನಡದಲ್ಲಿ ಮಾತ್ರವೇ ಹೆಚ್ಚಾಗಿ ಪ್ರೇಕ್ಷಕರು ಹೀರೋಗಳು ಕೈಯಲ್ಲಿ ಲಾಂಗು ಮಚ್ಚು ಹಿಡಿದು ರೌಡಿಸಂ ಮಾಡುವಂತಹ ಸಿನಿಮಾಗಳನ್ನು ಮುಗಿದು ಬಿದ್ದು ನೋಡುತ್ತಾರೆ. ಹೀಗಾಗಿಯೇ

  ರೌಡಿಸಂ ಹಿನ್ನೆಲೆಯ ಚಿತ್ರಗಳು ಗಾಂಧಿನಗರದ ದೃಷ್ಟಿಯಲ್ಲಿ ಮಿನಿಮಮ್ ಗ್ಯಾರಂಟಿ. ದುರಂತವೆಂದರೆ ಅದು ಸತ್ಯ ಕೂಡ ಇಂದಿಗೂ ಕೂಡ ಹೆಚ್ಚಿನ ಓಪನಿಂಗ್ ತೆಗೆದುಕೊಳ್ಳುವುದು ಕೂಡ ಇಂತಹ ಚಿತ್ರಗಳೇ.

  ಸದಭಿರುಚಿಯ ಚಿತ್ರಗಳಿಗೆ ಪ್ರೇಕ್ಷಕರ ಕೊರತೆ?

  ಸದಭಿರುಚಿಯ ಚಿತ್ರಗಳಿಗೆ ಪ್ರೇಕ್ಷಕರ ಕೊರತೆ?

  ಕನ್ನಡದ ಪ್ರೇಕ್ಷಕ ಪ್ರಭುಗಳು ಲಾಂಗು-ಮಚ್ಚು ಸಿನಿಮಾಗಳಿಗೆ ಅತಿಯಾದ ಮನ್ನಣೆ ನೀಡುತ್ತಿರುವಾಗ ಸಿನಿಮಾ ಮೇಕರ್ ಗಳು ಕೂಡ ಇಂತಹ ಸಿನಿಮಾಗಳನ್ನೇ ಮಾಡಲು ಹೆಚ್ಚಿಗೆ ಉತ್ಸಾಹ ತೋರಿಸುತ್ತಾರೆ . ಕನ್ನಡದಲ್ಲಿ ಸದಭಿರುಚಿಯ ಚಿತ್ರಗಳು ಬರುವುದಿಲ್ಲ ಅಂತ ಸೋಶಿಯಲ್ ಮೀಡಿಯಾ ಗಳಲ್ಲಿ ಬೊಬ್ಬೆ ಹೊಡೆಯುವರು ಕೂಡ ಸದಭಿರುಚಿಯ ಚಿತ್ರಗಳು ಬಂದಂತಹ ಸಮಯದಲ್ಲಿ ಅಂತಹ ಸಿನಿಮಾಗಳನ್ನು ನೋಡಲು ಖಂಡಿತವಾಗಿಯೂ ಹೆಚ್ಚಿನ ಪ್ರಮಾಣದಲ್ಲಿ ಚಿತ್ರಮಂದಿರಗಳಿಗೆ ಬಂದು ನೋಡುವ ಉತ್ಸಾಹವನ್ನು ತೋರಿಸುವುದಿಲ್ಲ.ಇದಕ್ಕೊಂದು ತಾಜಾ ಉದಾಹರಣೆ ಎಂದರೆ ಇತ್ತೀಚೆಗೆ ಬಿಡುಗಡೆಯಾದ ನಟ ಸಂಚಾರಿ ವಿಜಯ್ ಅವರ ಅಭಿನಯದ 'ಪುಕ್ಸಟ್ಟೆ ಲೈಫ್'. ಗಾಂಧಿನಗರದ ಎಲ್ಲ ಸಿದ್ಧಸೂತ್ರಗಳನ್ನು ಪಕ್ಕಕ್ಕಿಟ್ಟು ಒಂದು ಉತ್ತಮ ಪ್ರಯೋಗಾತ್ಮಕ ಚಿತ್ರವಾಗಿ ಚಿತ್ರಮಂದಿರಗಳಿಗೆ ಬಂದಾಗ ಅದಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ನೀರಸವಾಗಿತ್ತು. ಅನೇಕರು ಆ ಚಿತ್ರಕ್ಕೆ ಬೆಂಬಲ ನೀಡಿ ಥಿಯೇಟರ್ ಕಡೆಗೆ ಬರುವಂತೆ ಜನರಿಗೆ ಕೇಳಿಕೊಂಡರೂ ಕೂಡ ಕನ್ನಡ ಪ್ರೇಕ್ಷಕರು ಈ ಚಿತ್ರವನ್ನು ನೋಡಲು ಹೆಚ್ಚಿನ ಆಸಕ್ತಿಯನ್ನೇ ತೋರಿಸಲಿಲ್ಲ.

  ಕನ್ನಡದಲ್ಲೇ ಯಾಕೆ ಹೆಚ್ಚು ಲಾಂಗು ಮಚ್ಚುಗಳು ಆರ್ಭಟಿಸುತ್ತದೆ?

  ಕನ್ನಡದಲ್ಲೇ ಯಾಕೆ ಹೆಚ್ಚು ಲಾಂಗು ಮಚ್ಚುಗಳು ಆರ್ಭಟಿಸುತ್ತದೆ?

  ಇತರ ಭಾಷಾ ಸಿನಿಮಾಗಳಿಗೆ ಹೋಲಿಸಿದರೆ ಕನ್ನಡ ಸಿನಿಮಾರಂಗದಲ್ಲಿ ಲಾಂಗು ಮಚ್ಚುಗಳ ಆರ್ಭಟ ತುಸು ಹೆಚ್ಚಾಗಿದೆ.ಇಂತಹ ಸಿನಿಮಾಗಳನ್ನು ಕನ್ನಡದ ಪ್ರೇಕ್ಷಕ ಕೂಡ ಹೆಚ್ಚು ಹೆಚ್ಚು ಸ್ವೀಕರಿಸುತ್ತಲೇ ಬರುತ್ತಿದ್ದಾನೆ. ಈಗಂತೂ ದ್ವಂದ್ವಾರ್ಥದ ಪದಗಳು ಬಿಟ್ಟುಬಿಡಿ, ಅದಕ್ಕಿಂತ ಹೆಚ್ಚಾಗಿ ಹೊಲಸು ಭಾಷೆಯ ಸಂಭಾಷಣೆಗಳು ಈ ಲಾಂಗು-ಮಚ್ಚು ಚಿತ್ರಗಳ ಮೂಲಕ ವಿಜೃಂಭಿಸುತ್ತಿದೆ. ಇಷ್ಟರ ಮಟ್ಟಿಗೆ ಈ ರೌಡಿಸಂ ಚಿತ್ರಗಳು ಕನ್ನಡ ಸಿನಿಮಾರಂಗದ ಭಾಗ ವಾಗುವುದರ ಹಿಂದೆ ಒಂದು ಆಸಕ್ತಿದಾಯಕ ಸಂಗತಿಯೂ ಕೆಲಸ ಮಾಡಿದೆ.

  1990ರ ನಂತರ ಕನ್ನಡ ಪತ್ರಿಕೋದ್ಯಮದಲ್ಲಿ ಆದ ಬದಲಾವಣೆ. ಅಲ್ಲಿಂದ ಆರಂಭವಾದ 'ಬ್ಲಾಕ್ ಅಂಡ್ ವೈಟ್' ವಾರಪತ್ರಿಕೆಗಳು ನೈತಿಕ ಮೌಲ್ಯಗಳನ್ನು ಮೀರಿ ಹಸಿಬಿಸಿ ವಿಷಯಗಳು,ಅಕ್ರಮ ಸಂಬಂಧಗಳು,ಮರ್ಡರ್ ಮಿಸ್ಟರಿಗಳು ಇದೆಲ್ಲದಕ್ಕಿಂತ ಮಿಗಿಲಾಗಿ ಅಂಡರ್ ವರ್ಲ್ಡ್ ಕಥೆಗಳು,ಕಡೆಗೆ ಸತ್ತುಹೋದ ರೌಡಿಗಳ ಹಿನ್ನೆಲೆಗಳ ಬಗ್ಗೆ ಅವರ ರೌಡಿಸಂ ಹಿನ್ನಲೆಯನ್ನು ವೈಭವಿಕರಿಸಿ ಬರೆದಂತ ಲೇಖನಗಳೆಲ್ಲವೂ ಖಾಲಿ ದೋಸೆಯಂತೆ ಬಿಕರಿಯಾಗಿವೆ.

  ಇದರ ನಂತರ ಧಾರಾವಾಹಿಯ ರೂಪದಲ್ಲಿ 'ಕ್ರೈಂ ಸ್ಟೋರಿ'ಗಳು ಜನಸಾಮಾನ್ಯರನ್ನು ಅಟ್ರಾಕ್ಟ್ ಮಾಡಿದ ಪರಿಣಾಮ ಅವುಗಳ ಟಿಆರ್ ಪಿ ರೇಟಿಂಗ್ ಕೂಡ ಆ ಸಮಯದಲ್ಲಿ ಬಹು ಎತ್ತರದಲ್ಲಿತ್ತು. ಒಂದು ಕಡೆ ಪ್ರಸಾರವಾಗುತ್ತಿದ್ದ 'ಕ್ರೈಂ ಸ್ಟೋರಿ'ಗಳು ಇನ್ನೊಂದು ಕಡೆ 'ಬ್ಲಾಕ್ ಅಂಡ್ ವೈಟ್' ವಾರಪತ್ರಿಕೆಗಳಲ್ಲಿ ರಂಗುರಂಗಾಗಿ ಕಾಣುತ್ತಿದ್ದ ರೌಡಿಸಂ ದುನಿಯಾ ಕೊನೆಗೆ ರೌಡಿಸಂ ನಲ್ಲಿ ಹೀರೋಯಿಸಂ ಕೂಡ ಇದೆ ಎಂಬ ಸ್ಥಿತಿಗೆ ಓದುಗರನ್ನು ತಂದು ನಿಲ್ಲಿಸಿತ್ತು.

  ನಾಟಿ ಕೋಳಿ ಬಿರಿಯಾನಿ ಸೂಪರ್ ಹಿಟ್ ಆಗುತ್ತೆ

  ನಾಟಿ ಕೋಳಿ ಬಿರಿಯಾನಿ ಸೂಪರ್ ಹಿಟ್ ಆಗುತ್ತೆ

  ಯಾವ ಜನ 'ಬ್ಲಾಕ್ ಅಂಡ್ ವೈಟ್' ವಾರ ಪತ್ರಿಕೆಗಳನ್ನು ಮುಗಿದು ಬಿದ್ದು ಓದುತ್ತಿದ್ದರು ಅವರೇ ಸಿನಿಮಾಗಳನ್ನು ಕೂಡ ರೆಗುಲರ್ ಆಗಿ ನೋಡುತ್ತಿದ್ದವರು. ಹೀಗಾಗಿಯೇ ಪೇಪರ್ ಗಳಲ್ಲಿದ್ದ ಪಾತ್ರಗಳು ಜೀವತುಂಬಿಕೊಂಡು ತೆರೆಯ ಮೇಲೆ ಬರಲು ಹೆಚ್ಚು ಸಮಯ ಹಿಡಿಯಲಿಲ್ಲ. ವಾರಪತ್ರಿಕೆಗಳ ಈ ರೌಡಿಸಂ ವೈಭವೀಕರಣಕ್ಕೆ, ಸಿನಿಮಾರಂಗ ಕೂಡ ಒಳ್ಳೆ ಮಸಾಲೆ ಅರೆದು ನಾಟಿ ಕೋಳಿ ಬಿರಿಯಾನಿ ಮಾಡಿ ಪ್ರೇಕ್ಷಕರಿಗೆ ಉಣಬಡಿಸಿತು. ಆ ಬಿರಿಯಾನಿಯ ಘಮಲು ಪ್ರೇಕ್ಷಕರನ್ನು ಬಿಟ್ಟು ಹೋಗುತ್ತಿಲ್ಲ. ಲಾಂಗ್ ಮಚ್ಚುಗಳಿಂದ ತಯಾರಾದ ಬಿರಿಯಾನಿಗಾಗಿ ಗಿರಾಕಿಗಳು ಮುಗಿದು ಬೀಳುತ್ತಿರುವಾಗ, ಯಾರಾದರೂ ಅಷ್ಟೇ ಕುರಿ ಕೋಳಿನ ಕೊಯ್ದು ಬಿರಿಯಾನಿ ಮಾಡಲು ಇಷ್ಟಪಡುತ್ತಾರೆ ಅಲ್ಲವೇ? ಅದನ್ನೇ ಇಲ್ಲಿನ ತಯಾರಕರು ಮಾಡುತ್ತಿರುವುದು.

  ನಮಗೆ ಪಕ್ಕದಮನೆಯ ಸಾಂಬಾರ್ ರುಚಿಯೇ ಇಷ್ಟ!

  ನಮಗೆ ಪಕ್ಕದಮನೆಯ ಸಾಂಬಾರ್ ರುಚಿಯೇ ಇಷ್ಟ!

  ಪಕ್ಕದ ಮನೆಯಲ್ಲಿನ ಸಾಂಬಾರ್ ರುಚಿ ನೋಡಿ ನಮ್ಮಲ್ಲಿ ಇಂತಹ ಅಡುಗೆ ಮಾಡುವುದಿಲ್ಲ ಎಂದು ತಕರಾರು ತೆಗೆಯುತ್ತಾರೆ. ಆದರೆ ಅದಕ್ಕಿಂತ ಒಳ್ಳೆ ಸಾಂಬಾರ್ ನಮ್ಮವರೇ ತಯಾರಿಸಿ ಉಣಬಡಿಸಲು ಮುಂದಾದರೆ

  ರುಚಿ ನೋಡಲು ಯಾರೂ ಕೂಡ ಮುಂದೆ ಬರುವುದಿಲ್ಲ. ಇದು ಕನ್ನಡ ಸಿನಿಮಾರಂಗದ ದುರಂತ. ಬೇರೆ ಸಿನಿಮಾ ರಂಗಗಳಲ್ಲಿ ಮಾಡುವ ಪ್ರಯೋಗಾತ್ಮಕ ಚಿತ್ರಗಳನ್ನು ನೋಡಿ ಅಪಾರವಾಗಿ ಮೆಚ್ಚಿಕೊಳ್ಳುವ ನಾವು ನಮ್ಮದೇ ಸಿನಿಮಾರಂಗದ ಕಲಾವಿದರು ಮಾಡುವ ಪ್ರಯೋಗಗಳ ಕಡೆಗೆ ಮುಖಮಾಡಿ ಕೂಡ ನೋಡುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ಯಾವ ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಪ್ರಯೋಗಗಳನ್ನು ಮಾಡಲು ಮುಂದೆ ಬರುತ್ತಾರೆ?

  ಪ್ರಯೋಗಾತ್ಮಕ ಚಿತ್ರಗಳು ಮಾಡಿದರೆ ಕೈ ಸುಟ್ಟುಕೊಳ್ಳುವುದು ಖಚಿತ

  ಪ್ರಯೋಗಾತ್ಮಕ ಚಿತ್ರಗಳು ಮಾಡಿದರೆ ಕೈ ಸುಟ್ಟುಕೊಳ್ಳುವುದು ಖಚಿತ

  ಕನ್ನಡದ ಮಟ್ಟಿಗೆ ಇದೊಂದು ಒಂದು ದುರಂತದ ಸಂಗತಿಯೇ ಸರಿ. ಇಲ್ಲಿ ಹೊಸತನ ಅಥವಾ ಪ್ರಯೋಗಾತ್ಮಕ ಅಥವಾ ಸದಾಭಿರುಚಿಯ ಚಿತ್ರಗಳನ್ನು ಮಾಡಿದ ಬಹುತೇಕ ಸಂದರ್ಭದಲ್ಲೂ ಕೂಡ ನಿರ್ಮಾಪಕರು ಕೈ ಸುಟ್ಟುಕೊಂಡಿದ್ದಾರೆ. ಸಿನಿಮಾ ಮೂಲಭೂತವಾಗಿ ಒಂದು ವ್ಯಾಪಾರ. ಇಲ್ಲಿ ನಿರ್ಮಾಪಕನಿಗೆ ಬಂಡವಾಳ ಹೂಡುವ ಪ್ರತಿ ಪೈಸೆ ಕೂಡ ವಾಪಸ್ ಪಡೆಯಬೇಕೆಂಬ ಆಸೆ ಇರುವುದು ಸಹಜ. ನಿರ್ದೇಶಕರುಗಳಿಗೆ, ಹೀರೋಗಳಿಗೆ ,ಇತರ ಕಲಾವಿದರಿಗೂ ಕೂಡ ಸಿನಿಮಾಗಳು ಗೆದ್ದರೆ ಮಾತ್ರವೇ ಭವಿಷ್ಯ. ಶಿವರಾಜ್ ಕುಮಾರ್ (ದೊರೆ, ಚಿಗುರಿದ ಕನಸು) ದರ್ಶನ್ (ನಮ್ಮ ಪ್ರೀತಿಯ ರಾಮು), ವಿಷ್ಣುವರ್ಧನ್ ಅವರ ಅಭಿನಯದ (ಮಾತಾಡ್ ಮಾತಾಡ್ ಮಲ್ಲಿಗೆ,ಮುತ್ತಿನ ಹಾರ) ಸುದೀಪ್ (ಸ್ವಾತಿಮುತ್ತು) ಪುನೀತ್ ರಾಜಕುಮಾರ್ (ಮೈತ್ರಿ) ಇಂಥ ಹೊಸ ಮತ್ತು ವಿಭಿನ್ನ ಪ್ರಯತ್ನಗಳಿಗೆ ಕೈ ಹಾಕಿದಾಗ ಪ್ರೇಕ್ಷಕರು ಕೈಹಿಡಿಯಲಿಲ್ಲ. ಪರಿಸ್ಥಿತಿ ಹೀಗಿರುವಾಗ ಯಾವ ಧೈರ್ಯದ ಮೇಲೆ ನಿರ್ಮಾಪಕರು, ಪ್ರಯೋಗಾತ್ಮಕ ಚಿತ್ರಗಳ ಮೇಲೆ ಹಣ ಹೂಡಬಹುದು, ಯೋಚಿಸಬೇಕಾದ ಸಂಗತಿ ಅಲ್ಲವೇ?

  ಅವರ ಬಯೋಪಿಕ್ ಗಳು ವರ್ಸಸ್ ನಮ್ಮ ಬಯೋಪಿಕ್ ಗಳು

  ಅವರ ಬಯೋಪಿಕ್ ಗಳು ವರ್ಸಸ್ ನಮ್ಮ ಬಯೋಪಿಕ್ ಗಳು

  ಪ್ರಸ್ತುತ ಭಾರತದಲ್ಲಿ ಬಯೋಪಿಕ್ ಚಿತ್ರಗಳ ಹವಾ ಜೋರಾಗಿದೆ. ಕನ್ನಡಕ್ಕೆ ಹೋಲಿಸಿದರೆ ಇತರ ಚಿತ್ರರಂಗಗಳ ಪರಿಸ್ಥಿತಿ ತುಸು ವಿಭಿನ್ನವಾಗಿದೆ. ಅಲ್ಲಿ ಪ್ರಯೋಗಾತ್ಮಕ ಚಿತ್ರಗಳು ವಿಶೇಷವಾಗಿ ಬಯೋಪಿಕ್ ಗಳಿಗೆ ಪ್ರೇಕ್ಷಕರು ಪದೇಪದೇ ಬೆಂಬಲಿಸುತ್ತಲೇ ಬಂದಿದ್ದಾರೆ. ಹಿಂದಿಯಲ್ಲಿ 'ವಿಕಿ ಕೌಶಲ್' ಅಭಿನಯದ ಜಲಿಯನ್ ವಾಲಾಬಾಗ್ ದುರಂತದ ಘಟನಾವಳಿಗಳ ಸುತ್ತಲೂ ಹೆಣೆಯಲಾದ 'ಸರ್ದಾರ್ ಉಧಮ್ ಸಿಂಗ್' ಅಕ್ಟೋಬರ್ 16ರಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿದ್ದು ದೇಶದಾದ್ಯಂತ ಜನಸಾಮಾನ್ಯರಿಂದ ಉತ್ತಮ ಪ್ರತಿಕ್ರಿಯೆಯನ್ನು ಕಾಣುತ್ತಿದೆ. 'ಸರ್ದಾರ್ ಉಧಮ್ ಸಿಂಗ್' ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ, ಜಲಿಯನ್ ವಾಲ್ ಬಾಗ್ ಪೈಶಾಚಿಕ ಕೃತ್ಯಕ್ಕೆ ಕಾರಣನಾದ 'ಮೈಕೆಲ್ ಓ'ಡಾಯರ್' ಲಂಡನ್ ನಲ್ಲಿ ಹತ್ಯೆ ಮಾಡುವ ಮೂಲಕ ಭಾರತೀಯರ ಪ್ರತೀಕಾರದ ತಾಕತ್ತನ್ನು ಜಗತ್ತಿಗೆ ಪರಿಚಯಿಸಿದ ವೀರ ಹೋರಾಟಗಾರ. ಇಂತಹ ವೀರ ಹೋರಾಟಗಾರರ ಹಿನ್ನಲೆಯ ಯಾವುದಾದರೂ ಬಯೋಪಿಕ್ ಕನ್ನಡದಲ್ಲಿ ಬರುತ್ತಿದೆಯೇ?

  ನಮ್ಮವರ ಬಯೋಪಿಕ್ ಗಳು ಪರಭಾಷೆ ಅವರ ಕೈಯಲ್ಲಿ!

  ನಮ್ಮವರ ಬಯೋಪಿಕ್ ಗಳು ಪರಭಾಷೆ ಅವರ ಕೈಯಲ್ಲಿ!

  ಕಳೆದ ವರ್ಷ ನಮ್ಮ ಕನ್ನಡಿಗರಾದ 'ಕ್ಯಾಪ್ಟನ್ ಜಿ.ಆರ್. ಗೋಪಿನಾಥ್' ಅವರ ಜೀವನಾಧಾರಿತ ಬಯೋಪಿಕ್ ತಮಿಳಿನಲ್ಲಿ ತೆರೆಕಂಡಿದೆ. ಏರ್ ಡೆಕ್ಕನ್ ಸಂಸ್ಥಾಪಕರಾದ ಗೋಪಿನಾಥ್ ಅವರು ಮಧ್ಯಮವರ್ಗ ಮತ್ತು ಬಡವರು ಕೂಡ ತಮ್ಮ ಬಜೆಟ್ ನಲ್ಲಿಯೇ ವಿಮಾನಯಾನ ಮಾಡುವ ಸಾಧ್ಯತೆಗಳನ್ನು ಸಾಧ್ಯವಾಗಿಸಿದ ಸಾಧಕರು.

  ಇವರ ಜೀವನಾಧಾರಿತ ಚಿತ್ರ 'ಸೂರರೈ ಪೊಟ್ರು' ಚಿತ್ರವನ್ನು ತಮಿಳಿನ ಮಹಿಳಾ ನಿರ್ದೇಶಕಿ ಸುಧಾ ಕೊಂಗರ ನಿರ್ದೇಶಿಸಿದರೆ, ಖ್ಯಾತ ನಟ ಸೂರ್ಯ, ಕ್ಯಾಪ್ಟನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಮರ್ಶಕರಿಂದ ಅತ್ಯುತ್ತಮವಾದ ವಿಮರ್ಶೆಯನ್ನು ಪಡೆದ ಈ ಚಿತ್ರ ಬಾಕ್ಸಾಫೀಸ್ ದೃಷ್ಟಿಯಿಂದ ದೊಡ್ಡ ಯಶಸ್ಸನ್ನು ಕಂಡಿದೆ.

  ಇನ್ನು ಮುಂಬರುವ ತಿಂಗಳುಗಳಲ್ಲಿ ಕನ್ನಡಿಗರೇ ಆದ 'ಮೇಜರ್ ಸಂದೀಪ್ ಉನ್ನಿಕೃಷ್ಣನ್ 'ಅವರ ಜೀವನಾಧಾರಿತ 'ಮೇಜರ್' ಚಿತ್ರ ತೆಲುಗಿನಲ್ಲಿ ತೆರೆಗೆ ಬರುತ್ತಿದೆ. ಮುಂಬೈ ತಾಜ್ ಹೋಟೆಲ್ ಮೇಲೆ ಭಯೋತ್ಪಾದಕರ ದಾಳಿಯ ಸಂದರ್ಭದಲ್ಲಿ ತಮ್ಮ ವೀರ ಹೋರಾಟದ ಮೂಲಕ ಅನೇಕರ ಪ್ರಾಣಗಳನ್ನು ಉಳಿಸಿದ ಹುತಾತ್ಮ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನ ಚರಿತ್ರೆ 'ಮೇಜರ್' ಸಿನಿಮಾದ ಮೇಲೆ ಬಂಡವಾಳ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಬಂಡವಾಳ ಹೂಡಿದ್ದಾರೆ. ಇನ್ನು ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪಾತ್ರದಲ್ಲಿ ನಟ ಅಡಿವಿ ಶೇಷ ಅಭಿನಯಿಸಿದ್ದಾರೆ. ನಮ್ಮದೇ ಕ್ಯಾಪ್ಟನ್ ಗೋಪಿನಾಥ್, ನಮ್ಮದೇ ಮೇಜರ್ ಸಂದೀಪ್ ಉನ್ನಿಕೃಷ್ಣನ್, ನಮ್ಮ ಕನ್ನಡ ಸಿನಿಮಾರಂಗದ ಕಣ್ಣಿಗೆ ಯಾಕೆ ಬೀಳಲಿಲ್ಲ? ಇತರ ಭಾಷೆಯವರು ಬಂದು ನಮ್ಮ ನಾಡಿನ ಸಾಧಕರ ಯಶೋಗಾಥೆಗಳನ್ನು ಬಯೋಪಿಕ್ ಗಳಾಗಿ ಮಾಡಿ ಗೆಲ್ಲುತ್ತಿರುವಾಗ ನಾವು ಕನ್ನಡ ಸಿನಿಮಾ ರಂಗದವರು ಯಾರ ಬಯೋಪಿಕ್ ಗಳನ್ನು ತೆರೆಗೆ ತರುತ್ತಿದ್ದೇವೆ? ದುರಂತವೆಂದರೆ ವಾಸ್ತವದಲ್ಲಿ ಇದು ಮಾತ್ರ ಸತ್ಯ, ನಮ್ಮವರಿಗೆ ಬಯೋಪಿಕ್ ಗಳೆಂದರೆ ರೌಡಿಸಂ ನಲ್ಲಿ ಮಿಂಚಿದವರು, ಮಚ್ಚು ಹಿಡಿದು ಮೆರೆದವರು ಮಾತ್ರವೇ. ಇದರ ಆಚೆಗೆ ಖಂಡಿತವಾಗಿಯೂ ಕನ್ನಡದಲ್ಲಿ ಬಯೋಪಿಕ್ ಗಳ ಅರ್ಥಪೂರ್ಣವಾದ ನಿರ್ಮಾಣ ನಡೆದಿಲ್ಲ,ನಡೆಯುವುದೂ ಇಲ್ಲ.

  ಬಯೋಪಿಕ್ ಮಾಡಲು ಬೇಕಾದ ರಿಸರ್ಚ್, ನಂತರ ಅದನ್ನು ತೆರೆಗೆ ತರುವುದರಲ್ಲಿ ಎದುರಾಗುವ ಸಂಕಷ್ಟಗಳು ಇದೆಲ್ಲವನ್ನು ನಿಭಾಯಿಸಿಕೊಂಡು ಹೋಗಬಲ್ಲ ಕ್ರಾಫ್ಟ್ ಮೆನ್ಸ್ ಗಳ ಕೊರತೆ ಖಂಡಿತವಾಗಿಯೂ ಕನ್ನಡ ಸಿನಿಮಾರಂಗದಲ್ಲಿ ಇದೆ.

  ಸಿನಿಮಾಗಳಿಗೆ ಸಾಮಾಜಿಕ ಜವಾಬ್ದಾರಿ ಮತ್ತು ಕಳಕಳಿ ಇರಬೇಕು

  ಸಿನಿಮಾಗಳಿಗೆ ಸಾಮಾಜಿಕ ಜವಾಬ್ದಾರಿ ಮತ್ತು ಕಳಕಳಿ ಇರಬೇಕು

  ಇತರ ಸಿನಿಮಾ ರಂಗಗಳಲ್ಲಿ ನಡೆಯುತ್ತಿರುವ ಬಯೋಪಿಕ್ ಗಳು, ವಾರ್ ಡ್ರಾಮಾ, ಸೈನ್ಸ್ ಫಿಕ್ಷನ್ ಗಳ ಮೇಲೆ ನಮ್ಮ ಸಿನಿಮಾರಂಗ ಕಣ್ಣೆತ್ತಿ ಕೂಡ ನೋಡುತ್ತಿಲ್ಲ. ಇತರ ಸಿನಿಮಾ ರಂಗಗಳಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ನಾವು ತೆರೆದುಕೊಳ್ಳುತ್ತಿಲ್ಲ. ಬಯೋಪಿಕ್, ವಾರ್ ಡ್ರಾಮಾ ಸೈನ್ಸ್ ಫಿಕ್ಷನ್ ಇಂತಹ ಚಿತ್ರಗಳನ್ನು ಪಕ್ಕಕ್ಕೆ ಸರಿಸಿ ನೋಡಿದರೂ ಸಾಮಾಜಿಕ ಜವಾಬ್ದಾರಿ ಮತ್ತು ಕಳಕಳಿಯೊಂದಿಗೆ ಸಿನಿಮಾಗಳನ್ನು ಮಾಡುವ ಪ್ರಯತ್ನಗಳು ಕೂಡ ಹೆಚ್ಚಾಗಿ ನಡೆಯುತ್ತಿಲ್ಲ. ಇತ್ತೀಚೆಗೆ ತೆಲುಗಿನಲ್ಲಿ ಬಿಡುಗಡೆಯಾದ 'ರಿಪಬ್ಲಿಕ್', ತಮಿಳಿನಲ್ಲಿ ಬಿಡುಗಡೆಗೆ ಸಿದ್ಧವಾಗಿರುವ

  ನಟ ಸೂರ್ಯ ಅವರ 'ಜೈ ಭೀಮ್' ರಾಜಕೀಯ ಸಾಮಾಜಿಕ, ಆಯಾಮಗಳ ಮೇಲೆ ಬೆಳಕು ಚೆಲ್ಲುವ ಚಿತ್ರಗಳಾಗಿ ಗಮನಸೆಳೆಯುತ್ತಿವೆ. ನಮ್ಮಲ್ಲಿ ಪ್ರಯತ್ನಗಳು ಫಲ ಕೊಟ್ಟಾಗ ಅದನ್ನು ಮತ್ತೊಂದು ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳುವ ವರ್ಗವೊಂದು ಇಲ್ಲಿ ಸೃಷ್ಟಿಯಾಗಿ ಬಿಡುತ್ತದೆ. ಇದಕ್ಕೊಂದು ಒಳ್ಳೆಯ ಉದಾಹರಣೆ

  ನಮ್ಮಲ್ಲಿ 'ತಿಥಿ' ಚಿತ್ರ ಬಂದಾಗ ಅದು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಯಿತು. ಹೊಸ ಆಯಾಮದ ಕನ್ನಡ ಚಲನಚಿತ್ರವೊಂದರ ಬಹುಪರಾಕ್ ನಡೆಯಿತು. ಜನಸಾಮಾನ್ಯರು ಕೂಡ ಮೆಚ್ಚಿಕೊಂಡರು. ಆದರೆ ದುರಂತವೆಂದರೆ ಅದೇ 'ತಿಥಿ' ಚಿತ್ರದ ನಂತರ ಆ ಚಿತ್ರದ ಮೂಲಕ ರಾತ್ರೋರಾತ್ರಿ ಸ್ಟಾರ್ ಗಳಾದ ಸಂಚಾರಿ ಗೌಡ, ಗಡ್ಡಪ್ಪ ಅವರನ್ನು ಬಳಸಿಕೊಂಡು ಅಶ್ಲೀಲ ಸಂಭಾಷಣೆಯ ದ್ವಂದ್ವಾರ್ಥ ಗಳ ಸಾಲುಸಾಲು ಸಿನಿಮಾಗಳ ಮೂಲಕ ಚಿತ್ರರಂಗವನ್ನೇ ತಿಥಿ ಮಾಡಿಬಿಟ್ಟರು ಗಾಂಧಿನಗರದ ಕೆಲವು ನಿರ್ದೇಶಕರು.

  ಕನ್ನಡದಲ್ಲಿ ಹೊಸ ಆಯಾಮದ ಪ್ರತಿಭಾವಂತ ನಿರ್ದೇಶಕರಿಗೆ ಕೊರತೆಯಿಲ್ಲ

  ಕನ್ನಡದಲ್ಲಿ ಹೊಸ ಆಯಾಮದ ಪ್ರತಿಭಾವಂತ ನಿರ್ದೇಶಕರಿಗೆ ಕೊರತೆಯಿಲ್ಲ

  ಕಲಾತ್ಮಕ ಆಯಾಮದ ಚಿತ್ರಗಳು ಜನಸಾಮಾನ್ಯರಿಂದ ದೂರಸರಿದು ದಶಕಗಳೇ ಸಂದಿದೆ. ಇಂದು ಬೇಕಿರುವುದು ಕಲಾತ್ಮಕತೆಯ ಕಲೆಯೊಂದಿಗೆ ಸೃಜನಾತ್ಮಕವಾದ ಸಂವೇದನಾಶೀಲ ಕಥೆಗಳನ್ನು ಜನಸಾಮಾನ್ಯರಿಗೆ ಜನಸಾಮಾನ್ಯರ ಭಾಷೆಯಲ್ಲಿ ಹೇಳುವಂತಹ ಕಸುಬುದಾರರು. ಕನ್ನಡದಲ್ಲಿ ಪ್ರತಿಭಾವಂತ ಯುವ ನಿರ್ದೇಶಕರಿಗೆ ಏನೂ ಕೊರತೆಯಿಲ್ಲ. ಕಮರ್ಷಿಯಲ್ ಆಯಾಮದಲ್ಲಿ ಕೂಡ ಹೊಸತನದ, ಹೊಸ ಸಾಧ್ಯತೆಗಳನ್ನು ತೆರೆದಿಡುವ ಉತ್ಸಾಹಿ ನಿರ್ದೇಶಕರು ಅನೇಕರು ನಮ್ಮಲ್ಲಿದ್ದಾರೆ. ಆದರೆ ಅವರಿಗೆ ಬೇಕಿರುವುದು ಅವರ ಹೊಸತನದ ಭಿನ್ನ ಆಯಾಮದ ಕಥಾವಸ್ತುಗಳ ಮೇಲೆ ನಂಬಿಕೆ ಇಡುವ ನಿರ್ಮಾಪಕರು ಮತ್ತು ನಾಯಕನಟರು. ಹಾಗಂತ ಅವರೇನು ದೊಡ್ಡ ಪ್ರಮಾಣದ ಹಣವನ್ನು ಬಂಡವಾಳವಾಗಿ ನಿರ್ಮಾಪಕರಿಂದ ನಿರೀಕ್ಷಿಸುವುದಿಲ್ಲ. ತಕ್ಕಮಟ್ಟಿಗೆ ಒಂದು ಮಾಡ್ ರೇಟ್ ಬಜೆಟ್. ಜೊತೆಗೆ, ಇಂಥ ಪ್ರಯೋಗಾತ್ಮಕ ಚಿತ್ರಗಳಲ್ಲಿ ನಟಿಸಲು ಮನಸ್ಸು ಮಾಡುವ ನಟರು. ಎರಡು ಸಾಧ್ಯತೆಗಳು ಒಟ್ಟಿಗೆ ಕೂಡಿದರೆ ಇಲ್ಲಿರುವ ಯುವಪೀಳಿಗೆಯ ನಿರ್ದೇಶಕರು ಕೂಡ ಇತರ ಭಾಷೆಗಳಲ್ಲಿ ಆಗುತ್ತಿರುವ ಹೊಸ ಪ್ರಯೋಗಗಳಿಗೆ ಉತ್ತರಿಸಬಲ್ಲ ಚಿತ್ರಗಳನ್ನು ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ ಬರೀ ಲಾಂಗು-ಮಚ್ಚುಗಳ ಆರ್ಭಟದಲ್ಲಿ ಕಳೆದುಹೋಗುತ್ತಿರುವ ಸಿನಿಮಾರಂಗಕ್ಕೆ ಪ್ರತಿಭಾವಂತ ಕನ್ನಡದ ಯುವಪೀಳಿಗೆಯ ನಿರ್ದೇಶಕರು ಮತ್ತು ಕಥೆಗಾರರು ಕಾಣುತ್ತಾರೆ?

  English summary
  Sandalwood producing more rowdyism movies than any other movie industry. Why Sandalwood need rowdyism movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X