'ಭಾಗ 2' ಜಮಾನ: ಇದೇನಿದು ದಕ್ಷಿಣ ಭಾರತ ಸಿನಿಮಾ ರಂಗದ ಹೊಸ ವರಸೆ
ಯಾವುದೇ ಹಿಟ್ ಸಿನಿಮಾದ ಎರಡನೇ ಭಾಗ ತೆಗೆದರೆ ಆ ಸಿನಿಮಾ ಫ್ಲಾಪ್ ಆಗುವುದು ಪಕ್ಕಾ ಎಂಬ ಮಾತು ಬಹು ಸಮಯದಿಂದಲೂ ಚಾಲ್ತಿಯಲ್ಲಿದೆ. ಕನ್ನಡ ಸೇರಿದಂತೆ ಬಾಲಿವುಡ್‌ನಲ್ಲೂ ಇದಕ್ಕೆ ಸಾಕಷ್ಟು ಉದಾಹರಣೆಗಳು ನೋಡಲು ಸಿಗುತ್ತವೆ.
Recommended Video

ಕನ್ನಡದಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳ ಭಾಗ ಎರಡನ್ನು ತೆಗೆಯಲಾಗದೆ. ಆದರೆ ಎರಡನೇ ಭಾಗ ಮೊದಲ ಸಿನಿಮಾದಷ್ಟು ಹಿಟ್ ಅಗಿರುವ ಉದಾಹರಣೆ ಬಹಳ ಕಡಿಮೆ. ಹಿಂದಿಯಲ್ಲಿಯೂ ಹಲವು ಸಿನಿಮಾಗಳು ಹೀಗೆಯೇ ಆಗಿವೆ.
ಆದರೆ ಈಗೆ ಕೆಲವು ವರ್ಷಗಳಿಂದ ದಕ್ಷಿಣ ಭಾರತದಲ್ಲಿ ಬರುತ್ತಿರುವ 'ಭಾಗ 2' ಸಿನಿಮಾಗಳಿಗೂ ಈ ಮುಂಚೆ ಬಂದಿದ್ದ 'ಭಾಗ 2' ಸಿನಿಮಾಗಳಿಗೂ ಸಾಕಷ್ಟು ಅಂತರವಿದೆ. ಮೊದಲೆಲ್ಲ ಮೊದಲ ಸಿನಿಮಾದಲ್ಲಿದ್ದ ಪಾತ್ರ ಎರಡನೇ ಸಿನಿಮಾದಲ್ಲಿ ಬೇರೆಯದೇ ಕತೆಯ ಭಾಗವಾಗುತ್ತಿತ್ತು, ಮೊದಲ ಸಿನಿಮಾ ಎಲ್ಲಿಗೆ ಅಂತ್ಯವಾಗಿತ್ತೊ ಅಲ್ಲಿಂದಲೇ ಎರಡನೇ ಭಾಗವನ್ನು ಆರಂಭ ಮಾಡುವ ಪರಿಪಾಠ ಬಹಳ ಅಪರೂಪ. ಆದರೆ ಈಗ ತಂತ್ರ ಬದಲಾಗಿದೆ, ಮೊದಲ ಭಾಗ ಎಲ್ಲಿಗೆ ಅಂತ್ಯವಾಗಿತ್ತೊ ಎರಡನೇ ಭಾಗವನ್ನು ಅಲ್ಲಿಂದಲೇ ಪ್ರಾರಂಭಿಸುವ ಟ್ರೆಂಡ್ ಶುರುವಾಗಿದ್ದು, ಬಹುಮಟ್ಟಿಗೆ ಈ ಟ್ರೆಂಡ್ ಯಶಸ್ಸು ಗಳಿಸುತ್ತಿದೆ.

ಟ್ರೆಂಡ್ ಆರಂಭಿಸಿದ್ದು 'ಬಾಹುಬಲಿ'
ಮೊದಲಿಗೆ ಈ ಟ್ರೆಂಡ್ ಆರಂಭವಾಗಿದ್ದು 'ಬಾಹುಬಲಿ' ಸಿನಿಮಾದ ಮೂಲಕ. ಅಸಲಿಗೆ ನೋಡಿದರೆ 'ಬಾಹುಬಲಿ' ಸಿನಿಮಾದ ಮೊದಲ ಭಾಗದಲ್ಲಿ ಹೆಚ್ಚಿಗೇನು ಕತೆಯಿಲ್ಲ, ನಿಜವಾದ ಕತೆಯಿರುವುದು ಎರಡನೇ ಭಾಗದಲ್ಲಿ. ಆದರೆ ಮೊದಲ ಬಾಹುಬಲಿಯಲ್ಲಿ ರಾಜಮೌಳಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದು, ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಬಾಹುಬಲಿಯನ್ನು ಕಟ್ಟಪ್ಪ ಕೊಂದ ಎಂದು ರಿವೀಲ್ ಮಾಡುವ ಮೂಲಕ. ಅದರಿಂದಾಗಿ, 'ಬಾಹುಬಲಿ 2' ಸಿನಿಮಾ ಬಿಡುಗಡೆ ಆಗುವವರೆಗೆ ಜನ 'ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ' ಎಂಬುದರ ಬಗ್ಗೆಯೇ ಯೋಚಿಸುತ್ತಿದ್ದರು. ಇದು ಭಾರಿ ದೊಡ್ಡ ಕುತೂಹಲ ಹುಟ್ಟಿಸಿತ್ತು. 'ಬಾಹುಬಲಿ 2' ಬಿಡುಗಡೆ ಆದ ಮೇಲೆ ಚಿತ್ರಮಂದಿರಕ್ಕೆ ಬರದವರೆಲ್ಲ ಬಂದು ಕುತೂಹಲ ತಣಿಸಿಕೊಂಡು ಹೋದರು.

ಮೊದಲ ಭಾಗದಲ್ಲಿ ಶಕ್ತಿ, ಯುಕ್ತಿಯ ಪ್ರದರ್ಶನ
ಇದೇ ತಂತ್ರವನ್ನು 'ಪುಷ್ಪ', 'ಕೆಜಿಎಫ್ 2' ಹಾಗೂ ಮಲಯಾಳಂನ 'ದೃಶ್ಯ' ಸಹ ಬಳಸಿವೆ. ಮೊದಲ ಭಾಗದಲ್ಲಿ ನಾಯಕನ ಶಕ್ತಿ, ಸಾಮರ್ಥ್ಯ ಯುಕ್ತಿಗಳ ಪ್ರದರ್ಶನ ಮಾಡಲಾಗುತ್ತದೆ. ಆ ಬಳಿಕ ಅವನನ್ನು ಇನ್ನೂ ದೊಡ್ಡ ವಿಲನ್ ಅನ್ನು ಎದುರಿಸಲು ಎರಡನೇ ಭಾಗದಲ್ಲಿ ಬಿಡಲಾಗುತ್ತದೆ. 'ಬಾಹುಬಲಿ' ಮೊದಲ ಭಾಗದಲ್ಲಿ ಬಲ್ಲಾಳದೇವನ ಜೊತೆ ಫೈಟ್ ಇಲ್ಲ, ಇರುವುದು ಎರಡನೇ ಭಾಗದಲ್ಲಿ ನೆನಪಿರಲಿ. 'ಕೆಜಿಎಫ್' ಸಿನಿಮಾದಲ್ಲಿ ರಾಕಿ ಭಾಯ್ ಗರುಡನಂಥಹಾ ದೊಡ್ಡ ವಿಲನ್ ಅನ್ನು ಕೊಲ್ಲುತ್ತಾನೆ. ನಂತರ ಅವನು ಮುಂದಿನ ಭಾಗದಲ್ಲಿ ರಾಕ್ಷಸ ಮಾದರಿಯ ಅಧೀರ, ದೇಶದ ಪ್ರಧಾನಿ ಹಾಗೂ ದುಬೈನಲ್ಲಿ ಕುಳಿತಿರುವ ಡಾನ್ ಇನಾಯತ್ ಖಲೀಲ್ ಅನ್ನು ಎದುರಿಸಬೇಕಿದೆ ಎಂದು ಅಂತ್ಯದಲ್ಲಿ ತೋರಿಸಲಾಗುತ್ತದೆ.

ಯಶಸ್ಸು ಅಡಗಿರುವುದು ಭಾಗ 1ರ ಕ್ಲೈಮ್ಯಾಕ್ಸ್‌ನಲ್ಲಿ
'ಭಾಗ 2' ಮಾದರಿಯ ಸಿನಿಮಾಗಳ ಯಶಸ್ಸು ಇರುವುದು ಭಾಗ 1ರ ಕ್ಲೈಮ್ಯಾಕ್ಸ್‌ನಲ್ಲಿ. ಪ್ರೇಕ್ಷಕನಿಗೆ ಗೊತ್ತಿರುತ್ತದೆ ಕತೆಯಲ್ಲಿ ನಾಯಕ ಮುಂದೆ ಬಹಳ ದೊಡ್ಡ ಸವಾಲನ್ನು ಎದುರಿಸಬೇಕಿದೆ ಎಂದು. 'ಕೆಜಿಎಫ್', 'ಪುಷ್ಪ', 'ದೃಶ್ಯ' ಸಿನಿಮಾದಲ್ಲಿ ಇದು ಸ್ಪಷ್ಟವಾಗಿದೆ. ಹಾಗಿದ್ದಾಗ ಪ್ರೇಕ್ಷಕನಿಗೂ ಕುತೂಹಲ ಇಮ್ಮಡಿಯಾಗುತ್ತದೆ. ಪ್ರೇಕ್ಷಕನಿಗೆ ನಾಯಕ ಗೆಲ್ಲಬೇಕು, ಆದರೆ ಅವನ ಎದುರು ಇಷ್ಟು ದೊಡ್ಡ ಸವಾಲು ಇದ್ದಾಗ ಅದನ್ನು ಆತ ಹೇಗೆ ದಾಟುತ್ತಾನೆ ಎಂಬುದನ್ನು ಪ್ರೇಕ್ಷಕ ನೋಡಲು ಹೆಚ್ಚು ಉತ್ಸುಕನಾಗುತ್ತಾನೆ. ಹಾಗಾಗಿಯೇ ಈ ಮಾದರಿಯ ಸಿನಿಮಾಗಳಲ್ಲಿ ಮೊದಲ ಭಾಗಕ್ಕಿಂತಲೂ ಎರಡನೇ ಭಾಗ ಹೆಚ್ಚು ಯಶಸ್ಸಾಗುತ್ತದೆ. 'ಬಾಹುಬಲಿ', 'ಕೆಜಿಎಫ್' ಸಿನಿಮಾಗಳಿಗೆ ಆಗಿದ್ದಿದೆ.

ಹಾಲಿವುಡ್‌ನಲ್ಲಿ ಉದಾಹರಣೆಗಳು ಹೆಚ್ಚಿವೆ
ಕತೆ ಎಲ್ಲಿಗೆ ಅಂತ್ಯವಾಗಿತ್ತೊ ಅಲ್ಲಿಂದಲೇ ಪ್ರಾರಂಭವಾಗುವ ಸೀಕ್ವೆಲ್‌ಗಳು ಗೆದ್ದ ಉದಾಹರಣೆಗಳು ಹಾಲಿವುಡ್‌ನಲ್ಲಿ ಹೆಚ್ಚಿವೆ. 'ಲಾರ್ಡ್ ಆಫ್ ದಿ ರಿಂಗ್ಸ್' ಇದಕ್ಕೊಂದು ಒಳ್ಳೆಯ ಉದಾಹರಣೆ. ವೆಬ್ ಸರಣಿಗಳಂತೂ ಕತೆ ಎಲ್ಲಿಗೆ ಅಂತ್ಯವಾಗಿರುತ್ತದೆಯೇ ಅಲ್ಲಿಂದಲೇ ಮುಂದಿನ ಸೀಸನ್ ಪ್ರಾರಂಭಿಸುತ್ತಾರೆ. 'ಗೇಮ್ ಆಫ್ ಥ್ರೋನ್ಸ್' ಸತತ ಎಂಟು ಸೀಸನ್ ಅನ್ನು ಒಂದೇ ಕತೆಯನ್ನು ಇಟ್ಟುಕೊಂಡು ಮಾಡಿ ದೊಡ್ಡ ಯಶಸ್ಸು ಗಳಿಸಿದ್ದು ಕಣ್ಣ ಮುಂದೆಯೇ ಇದೆ. 'ಬ್ರೇಕಿಂಗ್ ಬ್ಯಾಡ್', 'ಡಾರ್ಕ್' ಹೀಗೆ ಇನ್ನೂ ಹಲವು ಹೆಸರುಗಳನ್ನು ಇದರ ಜೊತೆ ಸೇರಿಸಬಹುದು.

ಕನ್ನಡದ ಕೆಲವು ಉದಾಹರಣೆಗಳನ್ನು ನೋಡಿ
ಈಗ ಯೋಗರಾಜ್ ಭಟ್, 'ಗಾಳಿಪಟ 2' ಸಿನಿಮಾ ಮಾಡುತ್ತಿದ್ದಾರೆ. ಆದರೆ ಇದು ಬೇರೆ ಮಾದರಿಯ ಸಿನಿಮಾ. ಮೊದಲ ಗಾಳಿಪಟದ ಕತೆಗೂ ಪಾತ್ರಗಳಿಗೂ ಸಂಬಂಧವಿಲ್ಲ. ಕೇವಲ ಹೆಸರನ್ನಷ್ಟೆ ಎತ್ತಿಕೊಳ್ಳಲಾಗಿದೆ. 'ಕೆಂಪೆಗೌಡ' ಸಿನಿಮಾ ಹಿಟ್ ಆದ ಬೆನ್ನಲ್ಲೆ 'ಕೆಂಪೇಗೌಡ 2' ಮಾಡಲಾಯ್ತು. ಅಲ್ಲಿ ಕತೆಯೂ ಬೇರೆ ಪಾತ್ರವೂ ಬೇರೆ, ನಾಯಕ ಪೊಲೀಸ್ ಎಂಬುದೊಂದೆ ಸಾಮಾನ್ಯ ಅಂಶ. 'ಮುಂಗಾರು ಮಳೆ 2' ಕತೆಯೂ ಇದೆ. ಅಲ್ಲಿಯೂ ಹೆಸರಷ್ಟೆ ಕಾಮನ್. ಈಗ 'ಕಿರಾತಕ 2' ಬರುತ್ತಿದೆ. ಅದರಲ್ಲಿ ಕತೆ, ಪಾತ್ರವರ್ಗ ಎಲ್ಲ ಬದಲು. ಉಪೇಂದ್ರ ನಟನೆಯ 'ಕಬ್ಜ' ಸಿನಿಮಾವನ್ನು ಎರಡು ಭಾಗಗಳಲ್ಲಿ ಮಾಡುವುದಾಗಿ ಆರ್.ಚಂದ್ರು ಹೇಳಿದ್ದಾರೆ. ಅದರ ಕತೆ ಏನಿರಲಿದೆಯೋ ಎಂಬ ಕುತೂಹಲವಂತೂ ಇದೆ. ಒಂದು ಸಿನಿಮಾದ ಕತೆಯನ್ನು ಕುತೂಹಲಕಾರಿಯಾಗಿ ಅಂತ್ಯಗೊಳಿಸಿದ ಮೇಲೆ ಆ ಕತೆಯನ್ನು, ಪ್ರೇಕ್ಷಕನಿಗೆ ಈಗಾಗಲೇ ಪರಿಚಿತವಾಗಿರುವ ಆ ಕತೆಯ ಪಾತ್ರಗಳನ್ನು ನಿರ್ದೇಶಕ ಹೇಗೆ ದುಡಿಸಿಕೊಳ್ಳುತ್ತಾನೆ, ನಮ್ಮ ಊಹಿಗೆ ಮೀರಿದ್ದು ನಮಗೆ ಏನೆ ಕೊಡಬಲ್ಲ ಎಂಬ ನಿರೀಕ್ಷೆ ಪ್ರೇಕ್ಷಕನಲ್ಲಿರುತ್ತದೆ, ಅದಕ್ಕೆ ತಕ್ಕಂತೆ ನಿರ್ದೇಶಕ ಕತೆಯನ್ನು ಬಿಲ್ಡ್ ಮಾಡಬೇಕಾಗಿರುತ್ತದೆ ಆಗಷ್ಟೆ ಭಾಗ 2 ಸಿನಿಮಾಗಳು ಯಶಸ್ವಿಯಾಗುತ್ತಿವೆ.


Click it and Unblock the Notifications











