ದ್ವಾರಕೀಶ್ ಕೂಗಾಟ; ಬೇಸರದಿಂದ ಸಂಭಾವನೆ ಪಡೆಯದೇ ಹೊರಟುಹೋಗಿದ್ದ ಎಸ್‌ಪಿಬಿ!
ನೂರಾರು ನಟ ತಂತ್ರಜ್ಞರು, ಹತ್ತಾರು ಜನ ಕಲಾವಿದರು, ನಿರ್ದೇಶಕರ ಶ್ರಮದ ಫಲ ಸಿನಿಮಾ. ಅನ್ನದಾತ ನಿರ್ಮಾಪಕನ ಬೆಂಬಲದಿಂದ ಒಂದು ಸಿನಿಮಾ ರೂಪ ತಳೆಯಲು ಸಾಧ್ಯ. ಪರಸ್ಪರ ಹೊಂದಾಣಿಕೆಯಿಂದ ಸಿನಿಮಾ ಕೆಲಸಗಳು ನಡೆಯಬೇಕು. ಆದರೆ ಕೆಲವೊಮ್ಮೆ ಸಣ್ಣ ಪುಟ್ಟ ಕಿರಿಕ್, ಕ್ಲ್ಯಾಶ್‌ಗಳು ನಡೆದುಬಿಡುತ್ತವೆ.
ಸ್ಟಾರ್ ನಟರ ನಡುವೆ, ನಟ-ನಟಿಯರ ಮಧ್ಯೆ, ನಿರ್ದೇಶಕ- ನಟ ಅಥವಾ ನಿರ್ದೇಶಕ- ನಿರ್ಮಾಪಕ ಅಥವಾ ನಿರ್ಮಾಪಕ- ನಟನ ನಡುವೆ ಭಿನ್ನಾಭಿಪ್ರಾಯ, ಮನಸ್ತಾಪ ಮೂಡುವುದು ಸಹಜ. ಇದೇ ಕಾರಣಕ್ಕೆ ಕೆಲವರು ಅರ್ಧಕ್ಕೆ ಸಿನಿಮಾ ಬಿಟ್ಟು ಬಿಟ್ಟಿರುವ ಉದಾಹರಣೆಗಳು ಇವೆ. ಒಂದು ಸಿನಿಮಾ ಗೆದ್ದಾಗ ಅಂತಹ ಸಣ್ಣ ಪುಟ್ಟ ಕ್ಲ್ಯಾಶ್‌ಗಳು ಕಣ್ಮರೆ ಆಗುಬಿಡುತ್ತದೆ.

ದ್ವಾರಕೀಶ್ ನಿರ್ಮಿಸಿ, ನಟಿಸಿದ ಸಿನಿಮಾ 'ಕಿಟ್ಟು ಪುಟ್ಟು'. 1977ರಲ್ಲಿ ಬಂದ ಈ ಕಾಮೆಡಿ ಎಂಟರ್‌ಟ್ರೈನರ್ ಚಿತ್ರದಲ್ಲಿ ವಿಷ್ಣುವರ್ಧನ್ ಕೂಡ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ರಾಜನ್-ನಾಗೇಂದ್ರ ಸಂಗೀತದ ಎಲ್ಲಾ ಹಾಡುಗಳು ಹಿಟ್ ಆಗಿತ್ತು. 'ನಿಲ್ಲೇ ಗೌರಮ್ಮ ಅಲ್ಲೇ ನಿಲ್ಲೇ ಗಂಗಮ್ಮ' ಅದರಲ್ಲಿ ಒಂದು. ಚಿ. ಉದಯ್ ಶಂಕರ್ ಸಾಹಿತ್ಯ ಬರೆದಿದ್ದ ಹಾಡನ್ನು ಜೇಸುದಾಸ್ ಹಾಗೂ ಎಸ್. ಬಿ ಬಾಲಸುಬ್ರಮಣ್ಯಂ ಹಾಡಿದ್ದರು.
ಜೇಸುದಾಸ್- ಬಾಲು ಒಬ್ಬರಿಗಿಂತ ಒಬ್ಬರು ಅದ್ಭುತ ಗಾಯಕರು. ಅದರಲ್ಲಿ ಯಾವುದೇ ಸಂದೇಹವಿಲ್ಲ. ಈ ಹಾಡು ಅಷ್ಟೇ ಸೊಗಸಾಗಿ ಮೂಡಿ ಬಂದಿತ್ತು. ಆದರೆ ಈ ಹಾಡಿನ ರೆಕಾರ್ಡಿಂಗ್ ವೇಳೆ ಸಣ್ಣ ಕ್ಲ್ಯಾಶ್ ಆಗಿತ್ತು. ಇದೇ ಕಾರಣಕ್ಕೆ ಹಾಡು ಹಾಡಿ ಹಣ ಪಡೆಯದೇ ಬಲು ಹೊರಟು ಹೋಗಿದ್ದರಂತೆ. ಈ ವಿಚಾರವನ್ನು ಕನ್ನಡದ ಹಲವು ಸಿನಿಮಾಗಳಿಗೆ ಪ್ರೊಡಕ್ಷನ್ ಎಕ್ಸಿಕ್ಯೂಟಿವ್ ಆಗಿದ್ದ ಸುದರ್ಶನ್ ನೆನಪಿಸಿಕೊಂಡಿದ್ದಾರೆ.
'ಕಿಟ್ಟು-ಪುಟ್ಟು' ಚಿತ್ರಕ್ಕೆ ಕೆಲಸ ಮಾಡದೇ ಇದ್ದರೂ ಅಂದು ಸಾಂಗ್ ರೆಕಾರ್ಡಿಂಗ್ ವೇಳೆ ಸುದರ್ಶನ್ ಅಲ್ಲೇ ಇದ್ದರಂತೆ. ಟೋಟಲ್ ಕನ್ನಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. "ಜೇಸುದಾಸ್ ಹಾಗೂ ಬಾಲು ಸರ್ ಹಾಡುವ ಡ್ಯುಯೆಟ್ ಸಾಂಗ್ ಅದು. ರಾಜನ್- ನಾಗೇಂದ್ರ ಸಂಗೀತ. ದ್ವಾರಕೀಶ್ ಅವರು ಅಲ್ಲಿದ್ದರು. ಗುರುಪಾದ ಎಂಬುವವರು, ಸಾಂಗ್ ರೆಕಾರ್ಡಿಂಗ್ ಜವಾಬ್ದಾರಿ ವಹಿಸಿದ್ದರು"

"ಜೇಸುದಾಸ್ ಹಾಗೂ ಬಾಲು ಅವರಿಗೆ ಹಾಡಲು ಕರೆದಿದ್ದರು. ಆದರೆ ಸಮಯ ಗೊತ್ತು ಮಾಡುವ ಸಮಯದಲ್ಲಿ ಕೊಂಚ ಗೊಂದಲವಾಗಿದೆ. ಅದನ್ನು ಎಸ್‌ಪಿಬಿಗೆ ಸರಿಯಾಗಿ ತಿಳಿಸಿರಲಿಲ್ಲ. ಜೇಸುದಾಸ್ ಬಂದು ಕಾದರೂ ಬಾಲು ಇನ್ನು ಬಂದಿರಲಿಲ್ಲ. ಆಗ ದ್ವಾರಕೀಶ್ ಗರಂ ಆಗಿ ಕೂಗಾಡಿದ್ದರು. ಜೇಸುದಾಸ್ ರೀತಿಯ ದೊಡ್ಡ ಗಾಯಕರು ಬಂದು ಕಾಯುತ್ತಿದ್ದರು ಬಾಲು ಬಂದಿಲ್ಲ ಎಂದು ದ್ವಾರಕೀಶ್ ಕೆಂಡಾಮಂಡಲವಾಗಿಬಿಟ್ಟಿದ್ದರು. ಸಂಗೀತ ನಿರ್ದೇಶಕರು ಸುಮ್ಮನಿದ್ದರು"
"ಅರ್ಧ ಗಂಟೆ ತಡವಾಗಿ ಬಾಲು ಸರ್ ಬಂದರು. ಅಷ್ಟರಲ್ಲಾಗಲೇ ದ್ವಾರಕೀಶ್ ಕೂಗಾಡಿ ಆವಾಚ್ಯ ಶಬ್ಧಗಳನ್ನು ಆಡಿದ್ದು ಎಸ್‌ಪಿಬಿ ಕಿವಿಗೆ ಬಿದ್ದಿತ್ತು. ಅವರು ಬಂದಾಗಲೇ ಮೂಡ್ ಸರಿ ಇರಲಿಲ್ಲ. ಒಪ್ಪಿಕೊಂಡಿದ್ದ ಕಾರಣಕ್ಕೆ ಬಂದರು. ಸಂಗೀತ ನಿರ್ದೇಶಕರಿಗೆ ವಂದಿಸಿ, ಹಾಡಿನ ಬಗ್ಗೆ ಮಾಹಿತಿ ಪಡೆದರು. ಒಂದೆರಡು ಟೇಕ್‌ನಲ್ಲಿ ಬಾಲು ಸರ್ ಹಾಗೂ ಜೇಸುದಾಸ್ ಇಬ್ಬರೂ ಅದ್ಭುತವಾಗಿ ಹಾಡಿದರು"
"ಸಾಂಗ್ ರೆಕಾರ್ಡಿಂಗ್ ಮುಗೀತು. ಎಲ್ಲರೂ ಖುಷಿಯಾದರು. ಕೊನೆಗೆ ಸಂಭಾವನೆ ವಿಚಾರ ಬಂತು. ಸಂಭಾವನೆಯ ಮೊತ್ತವನ್ನು ಗುರುಪಾದ, ವೋಚರ್ ಅನ್ನು ಬಾಲು ಸರ್‌ಗೆ ಕೊಟ್ಟ. ಕೂಡಲೇ ಆ ವೋಚರ್ ಹರಿದು ಬಿಸಾಕಿದ ಎಸ್‌ಪಿಬಿ, ನಾನು ಹಣಕ್ಕಾಗಿ ಬರಲಿಲ್ಲ. ನಾನು ತಡವಾಗುತ್ತೆ ಎಂದು ಹೇಳಿದ್ದೆ ಅಲ್ವಾ? ಆ ವಿಷಯ ಇಲ್ಲಿ ಯಾರಿಗೂ ಹೇಳದೇ, ದೊಡ್ಡ ಗಾಯಕರು ಬಂದಿದ್ದಾರೆ ಎಂದು ನಿರ್ಮಾಪಕರು ಹೀಗೆಲ್ಲಾ ಮಾತನಾಡಿದ್ದಾರೆ ಅದು ಸರೀನಾ? ಎಂದು ಬೇಸರದಿಂದ ಸಂಭಾವನೆ ಪಡೆಯದೇ ಹೊರಟು ಹೋದರು" ಎಂದು ಸುದರ್ಶನ್ ಆ ಘಟನೆ ವಿವರಿಸಿದ್ದಾರೆ.


Click it and Unblock the Notifications











