ಡಾ. ರಾಜ್ ಜೊತೆ ನಟಿಸೋಕೆ ರಜನಿಕಾಂತ್ ಒಲ್ಲೆ ಎಂದಿದ್ದೇಕೆ? ಆ ಸಿನಿಮಾ ಯಾವುದು?
ರಜನಿಕಾಂತ್ ಇವತ್ತು ದೊಡ್ಡ ಸೂಪರ್ ಸ್ಟಾರ್. ಆದರೆ ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ಸಾಕಷ್ಟು ಅವಮಾನ ಅಪಮಾನ ಎದುರಿಸಿದ್ದರು. ಅವಕಾಶಗಳಿಗಾಗಿ ಅಲೆದಾಡಿದ್ದರು. 'ಗಿರಿಕನ್ಯೆ' ಚಿತ್ರದಲ್ಲಿ ಡಾ. ರಾಜ್‌ಕುಮಾರ್ ಎದುರು ನಟಿಸೋ ಅವಕಾಶ ಸಿಕ್ಕಿತ್ತು. ಆದರೆ ಕಾರಣಾಂತರಗಳಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿತ್ತು.
ಶಿವಾಜಿ ರಾವ್ ಕನ್ನಡದಲ್ಲಿ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದರು. ತಮಿಳಿನಲ್ಲಿ ಯಶಸ್ಸು ಸಿಕ್ಕಮೇಲೆ ಮತ್ತೆ ಸ್ಯಾಂಡಲ್‌ವುಡ್ ಕಡೆ ಮುಖ ಮಾಡಿಲಿಲ್ಲ. ಆದರೆ ಕನ್ನಡ ಚಿತ್ರದಲ್ಲಿ ನಟಿಸೋ ಆಸೆ ಇವತ್ತಿಗೂ ಇದೆ. ಅಣ್ಣಾವ್ರ ದೊಡ್ಡ ಅಭಿಮಾನಿ ರಜನಿಕಾಂತ್. ಬೆಂಗಳೂರಿನಲ್ಲಿ ಇದ್ದಾಗ ಡಾ. ರಾಜ್ ಸಿನಿಮಾಗಳನ್ನು ನೋಡಿ ಎಂಜಾಯ್ ಮಾಡುತ್ತಿದ್ದರು. ಎಲ್ಲಾ ಅಭಿಮಾನಿಗಳ ರೀತಿ ನಟಸಾರ್ವಭೌಮನನ್ನು ನೋಡಬೇಕು, ಮಾತನಾಡಿಸಬೇಕು ಎಂದು ಆಸೆ ಪಟ್ಟಿದ್ದರು.

ನಿಮಗೆ ಗೊತ್ತಾ ಸ್ವತಃ ಡಾ. ರಾಜ್‌ಕುಮಾರ್ ತನ್ನೊಟ್ಟಿಗೆ ಸಿನಿಮಾದಲ್ಲಿ ನಟಿಸುವಂತೆ ತಲೈವಾಗೆ ಆಹ್ವಾನ ನೀಡಿದ್ದರು. ಬಹಳ ತೂಕ ಇರುವ ತನ್ನ ಸಹೋದರನ ಪಾತ್ರದಲ್ಲಿ ನಟಿಸುವಂತೆ ಕೇಳಿದ್ದರು. ಆದರೆ ರಜನಿಕಾಂತ್ ಅದಕ್ಕೆ ನಿರಾಕರಿಸಿದ್ದರು. ಬೇಕಿದ್ದರೆ ನೀವು ಕನ್ನಡದಲ್ಲಿ ಸಿನಿಮಾ ಮಾಡಿ ಬಳಿಕ ನಾನು ತಮಿಳಿಗೆ ರೀಮೆಕ್ ಮಾಡುತ್ತೀನಿ ಎಂದಿದ್ದರು. ಆದರೆ ಆ ಸಿನಿಮಾ ತೆರೆಗೆ ಬರಲೇಯಿಲ್ಲ.
ದೊಡ್ಮನೆ ಜೊತೆ ರಜನಿಕಾಂತ್ ಅವರಿಗೆ ಆತ್ಮೀಯ ಒಡನಾಟ ಇತ್ತು. ಇವತ್ತಿಗೂ ಅದು ಮುಂದುವರೆದಿದೆ. ಅಣ್ಣಾವ್ರ ಜೊತೆ ತಲೈವಾ ನಟಿಸಲಿಲ್ಲ. ಆದರೆ 'ಜೈಲರ್' ಚಿತ್ರದ ಒಂದೇ ಒಂದು ಸನ್ನಿವೇಶದಲ್ಲಿ ಸೂಪರ್ ಸ್ಟಾರ್ ಜೊತೆ ಶಿವಣ್ಣ ತೆರೆಹಂಚಿಕೊಂಡಿದ್ದರು. ಅಂದಹಾಗೆ ಅಣ್ಣಾವ್ರು ತನ್ನೊಟ್ಟಿಗೆ ರಜನಿಕಾಂತ್ ಅವರನ್ನು ನಟಿಸೋಕೆ ಕೇಳಿದ್ದ ಸಿನಿಮಾ 'ಭಕ್ತ ಅಂಬರೀಶ'. ಇದು ಡಾ. ರಾಜ್ ಬಹಳ ಇಷ್ಟಪಟ್ಟು ನಟಿಸೋಕೆ ಒಪ್ಪಿದ್ದ ಸಿನಿಮಾ. ಆದರೆ ಅದು ಕೈಗೂಡಲಿಲ್ಲ.

'ಭಕ್ತ ಅಂಬರೀಶ' ಚಿತ್ರ ನಿರ್ಮಾಣಕ್ಕೆ ಎಲ್ಲಾ ಸಿದ್ಧತೆಗಳು ನಡೆದಿತ್ತು. ಸಾಂಗ್ ರೆಕಾರ್ಡಿಂಗ್ ಸಹ ಮುಗಿದಿತ್ತು. ವಿಜಯ ರೆಡ್ಡಿ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರಬೇಕಿತ್ತು. ಹಂಸಲೇಖ ಸಂಗೀತ ನಿರ್ದೇಶಕರಾಗಿ ಆಯ್ಕೆ ಆಗಿದ್ದರು. ಅಷ್ಟರಲ್ಲಿ ಅಣ್ಣಾವ್ರ ಅಪಹರಣ ಆಗಿ ಸಿನಿಮಾ ಅಲ್ಲಿಗೆ ನಿಂತೇ ಹೋಯಿತು. ಚಿತ್ರದಲ್ಲಿ ಅಂಬರೀಶ ಹಾಗೂ ಸಹೋದರ ರಮಾಕಾಂತ್ ಆಗಿ ದ್ವಿಪಾತ್ರದಲ್ಲಿ ಡಾ. ರಾಜ್ ನಟಿಸಬೇಕಿತ್ತು.
ಮುತ್ತುರಾಜ್ ಚಿತ್ರರಂಗಕ್ಕೆ ಬರುವ ಮುನ್ನ ರಂಗಭೂಮಿಯಲ್ಲಿ ಗುರ್ತಿಸಿಕೊಂಡಿದ್ದರು. ಆ ಸಮಯದಲ್ಲಿ 'ಭಕ್ತ ಅಂಬರೀಶ' ನಾಟಕದಲ್ಲಿ ನಟಿಸುತ್ತಿದ್ದರು. ಆಗ ಅಂಬರೀಶ ಪಾತ್ರವನ್ನು ಸುಬ್ಬಯ್ಯನಾಯ್ಡು ಮಾಡುತ್ತಿದ್ದರು. ಆತನ ಸಹೋದರ ರಮಾಕಾಂತ್ ಪಾತ್ರವನ್ನು ಮುತ್ತುರಾಜ್ ನಿಭಾಯಿಸುತ್ತಿದ್ದರು.
'ಭಕ್ತ ಅಂಬರೀಶ' ಸಿನಿಮಾ ಮಾತುಕತೆ ನಡೆಯುತ್ತಿದ್ದಾಗ ರಜನಿಕಾಂತ್ ಒಮ್ಮೆ ಬೆಂಗಳೂರಿಗೆ ಬಂದಿದ್ದರು. ಆಗ ಅಣ್ಣಾವ್ರ ಮನೆಗೆ ಭೇಟಿ ನೀಡಿ ಮಾತನಾಡಿದ್ದರು. ಆ ಸಮಯದಲ್ಲಿ ಚಿತ್ರದ ಕಥೆ ಬಗ್ಗೆ ಚರ್ಚೆ ಆಗಿತ್ತು. ಕಥೆ ಕೇಳಿ ಖುಷಿಪಟ್ಟಿದ್ದ ತಲೈವಾ ಮರುದಿನ ಹೋಗಿ ತಮ್ಮದೇ ಶೈಲಿಯಲ್ಲಿ ಹೊಸ ರೂಪ ಕೊಟ್ಟು ಹೊಸ ಸ್ಕ್ರೀನ್‌ಪ್ಲೇ ಹೇಳಿದ್ದರು. ಅದರಲ್ಲೂ ನೆಗೆಟಿವ್ ಶೇಡ್ ಇರುವ ರಮಾಕಾಂತ್ ಪಾತ್ರವನ್ನು ತಾವೇ ಜೀವಿಸುವಂತೆ ರಜನಿಕಾಂತ್ ಬಣ್ಣಿಸಿದ್ದರು. ಅದನ್ನು ಕೇಳಿ ಅಣ್ಣಾವ್ರು ಫಿದಾ ಆಗಿದ್ದರು.
ರಜನಿ ಕಥೆ ಹೇಳಿದ್ದು ಕೇಳಿ ಖುಷಿಯಾಗಿದ್ದ ಡಾ. ರಾಜ್ ನೀವೇ ರಮಾಕಾಂತ್ ಪಾತ್ರ ಮಾಡಿ, ನಾನು ಅಂಬರೀಶ ಪಾತ್ರ ಮಾಡ್ತೀನಿ ಎಂದುಬಿಟ್ಟರಂತೆ. ಆದರೆ ಅದಕ್ಕೆ ರಜನಿಕಾಂತ್ ಒಪ್ಪಲಿಲ್ಲವಂತೆ. ಅಣ್ಣಾ ನಿಮ್ಮನ್ನು ಮನಸ್ಸಿನಲ್ಲಿಟ್ಟುಕೊಂಡು ನಾನು ಕಥೆಯನ್ನು ಈ ರೀತಿ ಹೇಳಿದೆ. ನಾನು ಮಾಡುವುದಿಲ್ಲ. ದ್ವಿಪಾತ್ರದಲ್ಲಿ ಎರಡೂ ಪಾತ್ರ ನೀವೇ ಮಾಡಿ ಎಂದರು. ಕೊನೆಗೆ ತಮಿಳಿನಲ್ಲಿ ನೀವು ಮಾಡಿ ಎಂದಾಗ ಅದಕ್ಕೆ ರಜನಿಕಾಂತ್ ಒಪ್ಪಿದ್ದರಂತೆ. ಸರಿ ನೀವು ಕನ್ನಡದಲ್ಲಿ ಮೊದಲು ಮಾಡಿ ಎಂದು ಹೇಳಿದ್ದರಂತೆ.
ಹೀಗೆ ಮೂರ್ನಾಲ್ಕು ದಿನ 'ಭಕ್ತ ಅಂಬರೀಶ' ಸಿನಿಮಾ ಕಥೆಯ ಚರ್ಚೆಯಲ್ಲಿ ರಜನಿಕಾಂತ್ ಇದ್ದರು. ಆ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಪ್ರಕಾಶ್ ರಾಜ್ ಮೇಹು ಕೆಲಸ ಮಾಡಬೇಕಿತ್ತು. ಅಂದು ಡಾ. ರಾಜ್- ರಜನಿ ಮಾತುಕತೆಗೆ ಸಾಕ್ಷಿ ಆಗಿದ್ದ ಪ್ರಕಾಶ್ ತಮ್ಮ 'ಅಂತರಂಗದ ಅಣ್ಣ' ಪುಸ್ತಕದಲ್ಲಿ ಈ ಸ್ವಾರಸ್ಯಕರ ಸಂಗತಿಯನ್ನು ದಾಖಲಿಸಿದ್ದಾರೆ.


Click it and Unblock the Notifications











