ದಶಕದ ಹಿಂದೆ ಸುನಿ ಸಿನಿಮ್ಯಾಟಿಕ್ ಯೂನಿವರ್ಸ್ ಪ್ಲ್ಯಾನ್ ಮಾಡಿದ್ರಾ? 'ಬಹುಪರಾಕ್' ಕಥೆಯಲ್ಲಿ ರಿಚ್ಚಿ ಬರೋದ್ಯಾಕೆ?
ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಉಳಿದವರು ಕಂಡಂತೆ' ಸಿನಿಮಾ ದಶಕದ ಸಂಭ್ರಮದಲ್ಲಿದೆ. 2014ರಲ್ಲಿ ತೆರೆಕಂಡಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಆದರೆ ಒಂದು ವರ್ಗದ ಪ್ರೇಕ್ಷಕರಿಗೆ ಸಿನಿಮಾ ಹಾಟ್ ಫೇವರಿಟ್ ಎನಿಸಿಕೊಂಡಿದೆ. ಇದೇ ಕಾರಣಕ್ಕೆ ಚಿತ್ರದ ಪ್ರೀಕ್ವೆಲ್ 'ರಿಚರ್ಡ್ ಆಂಟನಿ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ರಕ್ಷಿತ್ ಶೆಟ್ಟಿ 'ರಿಚರ್ಡ್ ಆಂಟನಿ' ಆಗಿ ಪ್ರೇಕ್ಷಕರನ್ನು ರಂಜಿಸುವ ಪ್ರಯತ್ನದಲ್ಲಿದ್ದಾರೆ. ಕಥೆ, ಚಿತ್ರಕಥೆ ಸಿದ್ಧಪಡಿಸುವ ಕೆಲಸಗಳದಲ್ಲಿ ಸಿಂಪಲ್ ಸ್ಟಾರ್ ಬ್ಯುಸಿಯಾಗಿದ್ದಾರೆ. 'ಉಳಿದವರು ಕಂಡಂತೆ' 10 ವರ್ಷ ಪೂರೈಸಿದ ಸಮಯದಲ್ಲೇ ಪ್ರೀಕ್ವೆಲ್ ಬಗ್ಗೆ ಅಪ್‌ಡೇಟ್ ಸಿಗುತ್ತಾ? ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಅದನ್ನು ಪಕ್ಕಕ್ಕಿಟ್ಟರೆ 'ರಿಚರ್ಡ್ ಆಂಟನಿ' ಅಲಿಯಾಸ್ ರಿಚ್ಚಿ ಪಾತ್ರ ಸಾಕಷ್ಟು ಜನರನ್ನು ಕಾಡಿರುವುದು ಸುಳ್ಳಲ್ಲ.

ರಿಚ್ಚಿ ಬಹಳ ಅಪರೂಪದ ಪಾತ್ರ. ಕನ್ನಡ ಸಿನಿಮಾಗಳಲ್ಲಿ ಇಂತಹ ಪಾತ್ರಗಳನ್ನು ಸೃಷ್ಟಿಸಿರುವುದು, ನಿಭಾಯಿಸಿರುವುದು ಬಹಳ ಕಡಿಮೆ. ಬಹಳ ನಿಷ್ಠೆ, ದ್ವೇಷ, ಆಕ್ರೋಶ, ಉಡಾಫೆ, ಸ್ನೇಹ ಎಲ್ಲವನ್ನು ಅಡಗಿಸಿಟ್ಟುಕೊಂಡ ಪಾತ್ರ ಅದು. ಇದೇ ಕಾರಣಕ್ಕೆ ಕನ್ನಡದಲ್ಲಿ 'ಉಳಿದವರು ಕಂಡಂತೆ' ಸೋತರು, ಪರಭಾಷಿಕರು ಒಪ್ಪಿ ರೀಮೆಕ್ ಮಾಡಿದ್ದರು.
ಮಾರ್ಚ್ 28, 2014ರಲ್ಲಿ 'ಉಳಿದವರು ಕಂಡಂತೆ' ಸಿನಿಮಾ ತೆರೆಕಂಡಿತ್ತು. ಬಳಿಕ ಬಂದ 'ಬಹುಪರಾಕ್' ಚಿತ್ರದಲ್ಲಿ ರಿಚ್ಚಿ ಆಗಿ ರಕ್ಷಿತ್ ಶೆಟ್ಟಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದರು. ಅಂಡರ್‌ವರ್ಲ್ಡ್ ಡಾನ್ ಮಣಿ ಜೊತೆ ರಿಚ್ಚಿ ಒಂದು ಟೆಂಡರ್ ಬಗ್ಗೆ ಮಾತನಾಡುವ ಸನ್ನಿವೇಶ ಅದು. ಸಿಂಪಲ್ ಸುನಿ ನಿರ್ದೇಶನದ 'ಬಹುಪರಾಕ್' ಕೂಡ ಬಹಳ ವಿಭಿನ್ನ ಪ್ರಯತ್ನ. ಅವತ್ತಿನ ಕಾಲಕ್ಕೆ ಪ್ರೇಕ್ಷಕರಿಗೆ ಈ ಕಥೆ ಕೂಡ ಗೊಂದಲ ಮೂಡಿಸಿತ್ತು. ಮಾನಸ್, ಮೌನಿ ಹಾಗೂ ಮಣಿ ಹೀಗೆ 3 ಪಾತ್ರಗಳು ಪ್ಯಾರಲಲ್ ಆಗಿ ಸಾಗುವಂತೆ ಸುನಿ ಕಟ್ಟಿಕೊಟ್ಟಿದ್ದರು.
ಶ್ರೀನಗರ ಕಿಟ್ಟಿ ಮೂರು ಶೇಡ್‌ಗಳಿರುವ ಪಾತ್ರದಲ್ಲಿ ನಟಿಸಿದ್ದರು. ಅವತ್ತಿನ ಕಾಲಕ್ಕೆ ಇದು ಕನ್ನಡ ಚಿತ್ರರಂಗದಲ್ಲಿ ಹೊಸ ಬಗೆಯ ಸಿನಿಮಾ ಆಗಿತ್ತು. ಸುನಿ ಕಥೆ, ಚಿತ್ರಕಥೆ, ಸಂಭಾಷಣೆ, ಕೆಲ ಹಾಡುಗಳಿಗೆ ಸಾಹಿತ್ಯ ಬರೆದು ಸಿನಿಮಾ ಕಟ್ಟಿಕೊಟ್ಟಿದ್ದರು. ವಿಶೇಷ ಅಂದ್ರೆ ಚಿತ್ರದಲ್ಲಿ ರಿಚ್ಚಿ ಆಗಿ ರಕ್ಷಿತ್ ಶೆಟ್ಟಿ ಕೆಲವೊತ್ತು ಅಚ್ಚರಿ ಮೂಡಿಸಿದ್ದರು.

ಸದ್ಯ ಭಾರತೀಯ ಚಿತ್ರರಂಗದಲ್ಲಿ ಸಿನಿಮ್ಯಾಟಿಕ್ ಯೂನಿವರ್ಸ್ ಕಾನ್ಸೆಪ್ಟ್ ಶುರುವಾಗಿದೆ. ಬಾಲಿವುಡ್‌ನಲ್ಲಿ YRF ಸ್ಪೈ ಯೂನಿವರ್ಸ್, ತಮಿಳಿನಲ್ಲಿ ಲೋಕೇಶ್ ಕನಕರಾಜ್, ತೆಲುಗಿನ ಪ್ರಶಾಂತ್ ವರ್ಮಾ ಇಂತಹ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅಂದರೆ ಬೇರೆ ಬೇರೆ ಸಿನಿಮಾ ಕಥೆಗಳಲ್ಲಿರುವ ಪಾತ್ರಗಳನ್ನು ಮತ್ತೊಂದು ಸಿನಮಾ ಕಥೆಗೆ ಎಳೆದುತರುವ ಪ್ರಯತ್ನ ಅದು. ಬಳಿಕ ಆ ಪಾತ್ರಗಳನ್ನೆಲ್ಲಾ ಒಂದೆಡೆ ಸೇರಿಸಿ ಮತ್ತೊಂದು ಕಥೆ ಕಟ್ಟುವ ಐಡಿಯಾ. ಹಾಲಿವುಡ್‌ನಲ್ಲಿ ಜನಪ್ರಿಯವಾಗಿರುವ ಈ ತಂತ್ರವನ್ನು ನಮ್ಮಲ್ಲಿ ಕೆಲವರು ಅಳವಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
'ಬಹುಪರಾಕ್' ಚಿತ್ರದ ಕಥೆಯಲ್ಲಿ 'ಉಳಿದವರು ಕಂಡಂತೆ' ರಿಚ್ಚಿ ಬಂದಿದ್ದು ಯಾಕೆ? ಎಂದು ಕೆಲವರು ಆಗ ತಲೆಕೆಡಿಸಿಕೊಂಡಿದ್ದರು. ನಿರ್ದೇಶಕ ಸುನಿ 10 ವರ್ಷಗಳ ಹಿಂದೆಯೇ ಸಿನಿಮ್ಯಾಟಿಕ್ ಯೂನಿವರ್ಸ್ ಪ್ಲ್ಯಾನ್ ಮಾಡಿದ್ರಾ? ಎನ್ನುವ ಪ್ರಶ್ನೆಯೂ ಕಾಡುತ್ತದೆ. 'ರಿಚರ್ಡ್ ಆಂಟನಿ' ಸಿನಿಮಾ ಬಗ್ಗೆ ಚರ್ಚೆ ನಡೆಯುತ್ತಿರುವಾಗ 'ಬಹುಪರಾಕ್' ಚಿತ್ರದ ರಿಚ್ಚಿ ನೆನಪಾಗುತ್ತಿದ್ದಾನೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಸಿನಿಮ್ಯಾಟಿಕ್ ಯೂನಿವರ್ಸ್ ಐಡಿಯಾ ಏನಾದರೂ ಇತ್ತಾ? ಎಂದು ನಿರ್ದೇಶಕ ಸುನಿ ಅವರನ್ನು ಕೇಳಿದರೆ ಇಲ್ಲ ಎನ್ನುತ್ತಾರೆ. 'ಬಹುಪರಾಕ್' ಚಿತ್ರದಲ್ಲಿ ರಿಚ್ಚಿ ಪಾತ್ರವನ್ನು ಸುಮ್ಮನೆ ತಂದಿದ್ದು ಅಷ್ಟೆ. 'ಉಳಿದವರು ಕಂಡಂತೆ' ಚಿತ್ರಕ್ಕೂ 'ಬಹುಪರಾಕ್' ಕಥೆಗೂ ಸಂಬಂಧವಿಲ್ಲ. ಎರಡೂ ಕಥೆಗಳು ನಡೆಯುವ ಕಾಲಘಟ್ಟ ಬೇರೆ ಬೇರೆ. ಹಾಗಾಗಿ ಆ ರಿಚರ್ಡ್ ಆಂಟನಿಗೂ ಈ ರಿಚ್ಚಿಗೂ ಯಾವುದೇ ಲಿಂಕ್ ಇಲ್ಲ ಎಂದು ಹೇಳಿದ್ದಾರೆ.


Click it and Unblock the Notifications











