ಅಣ್ಣಾವ್ರು- ಜಯಲಲಿತಾ ನಟಿಸಬೇಕಿದ್ದ ಚಿತ್ರ ನಿಂತಿದ್ದೇಕೆ? 3 ದಿನಗಳ ಚಿತ್ರೀಕರಣ ಬಳಿಕ ಏನಾಯ್ತು?
ಡಾ. ರಾಜ್‌ಕುಮಾರ್ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಬಾಂಡ್ ಹೀಗೆ ಭಿನ್ನ ವಿಭಿನ್ನ ಸಿನಿಮಾಗಳಲ್ಲಿ ಅಣ್ಣಾವ್ರ ಬಣ್ಣ ಹಚ್ಚಿದ್ದರು. ರಾಜ್‌ಕುಮಾರ್ ನಟಿಸಬೇಕಿದ್ದ ಸಾಕಷ್ಟು ಸಿನಿಮಾಗಳು ಕಾರಣಾಂತರಗಳಿಂದ ನಿಂತು ಹೋಗಿದ್ದವು.
ಅಣ್ಣಾವ್ರ ಕೆಲ ಚಿತ್ರಗಳು ಚಿತ್ರೀಕರಣ ಆರಂಭಿಸಿದ ಬಳಿಕ ನಿಂತಿರುವ ಉದಾಹರಣೆಗಳಿವೆ. ಅದೇ ರೀತಿ ರಾಜ್‌ಕುಮಾರ್ ಜೊತೆ ಜಯಲಲಿತಾ ನಾಯಕಿಯಾಗಿ ನಟಿಸಬೇಕಿದ್ದ ಚಿತ್ರಕ್ಕೆ ವಿಘ್ನ ಎದುರಾಗಿತ್ತು. 3 ದಿನಗಳ ಶೂಟಿಂಗ್ ಬಳಿಕ ಅನಿವಾರ್ಯವಾಗಿ ಚಿತ್ರವನ್ನು ಕೈಬಿಡಬೇಕಾಯಿತು. ಜಯಲಲಿತಾ ಈ ಚಿತ್ರದಲ್ಲಿ ನಟಿಸಬೇಕು ಅಂದರೆ ಆಕೆ ಕನ್ನಡಿಗರ ಕ್ಷಮೆ ಕೇಳಬೇಕು ಎನ್ನುವ ಆಗ್ರಹ ವ್ಯಕ್ತವಾಗಿತ್ತು.

'ಚೆಲ್ಲಿದ ರಕ್ತ' ಎಂಬ ಚಿತ್ರದಲ್ಲಿ ರಾಜ್‌ಕುಮಾರ್ ಹಾಗೂ ಜಯಲಲಿತಾ ಒಟ್ಟಿಗೆ ನಟಿಸಬೇಕಿತ್ತು. ಸಿದ್ದಲಿಂಗಯ್ಯ ಚಿತ್ರವನ್ನು ನಿರ್ದೇಶನ ಮಾಡುವುದು ಖಚಿತವಾಗಿತ್ತು. ಅದು ಸೈನಿಕನೊಬ್ಬನ ಕಥೆ ಆಧರಿಸಿದ ಚಿತ್ರವಾಗಿತ್ತು. ಚಿತ್ರದಲ್ಲಿ ಅಣ್ಣಾವ್ರು, ಜಯಲಲಿತಾ ಒಟ್ಟಿಗೆ ನಟಿಸುತ್ತಾರೆ ಎನ್ನುವ ಸುದ್ದಿ ಪ್ರಕಟವಾದಾಗ ವಿರೋಧ ವ್ಯಕ್ತವಾಗಿತ್ತು. ಜಯಲಲಿತಾ ನಾನು ಕನ್ನಡತಿ ಅಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಆಕೆ ಕ್ಷಮೆ ಕೇಳಿದರೆ ಮಾತ್ರ ಚಿತ್ರದಲ್ಲಿ ನಟಿಸಬೇಕು ಎಂದು ಕೆಲವರು ಆಗ್ರಹಿಸಿದ್ದರು. ಅಣ್ಣಾವ್ರ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿದ್ದ ಹಾಲು ಜೇನು ರಾಮ್‌ಕುಮಾರ್ ಈ ವಿಚಾರವನ್ನು ಟೋಟಲ್ ಕನ್ನಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ವಿವರಿಸಿದ್ದರು.
ಜಯಲಲಿತಾ ಕ್ಷಮೇ ಕೇಳಲು ಒಪ್ಪದೇ ಇದ್ದಾಗ ಸಿನಿಮಾ ನಿಂತಿತ್ತು. ಬಳಿಕ ಆಕೆಯನ್ನು ಚಿತ್ರತಂಡ ಒಪ್ಪಿಸಿತ್ತು. ಆದರೆ ನಿರ್ದೇಶನದ ಜವಾಬ್ದಾರಿ ವೈ. ಆರ್ ಸ್ವಾಮಿ ಹೆಗಲೇರಿತ್ತು. 'ಚೆಲ್ಲಿದ ರಕ್ತ' ಚಿತ್ರದ ಕಥೆಯನ್ನು ಕೊಂಚ ಬದಲಿಸೋಣ, 'ಪೈಲೆಟ್' ಎಂದು ಹೆಸರಿಡಲು ಎಲ್ಲರನ್ನು ಒಪ್ಪಿಸಿದ್ದರು. ರಾಜ್‌ಕುಮಾರ್ ತಂದೆ ಪಾತ್ರದಲ್ಲಿ ಶಕ್ತಿಪ್ರಸಾದ್, ತಾಯಿ ಪಾತ್ರದಲ್ಲಿ ಪಂಡರಿ ಬಾಯಿ ನಟಿಸಬೇಕಿತ್ತು. ಅಭಿಮಾನ್ ಸ್ಟುಡಿಯೋದಲ್ಲಿ 3 ದಿನಗಳ ಕಾಲ ಚಿತ್ರೀಕರಣ ಕೂಡ ನಡೀತು.
ಮೊದಲ ದಿನ ರಾಜ್‌ಕುಮಾರ್, ಶಕ್ತಿಪ್ರಸಾದ್ ಹಾಗೂ ಪಂಡರಿಬಾಯಿ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. 3 ದಿನಗಳ ಕಾಲ ಒಂದಷ್ಟು ದೃಶ್ಯಗಳನ್ನು ಸೆರೆ ಹಿಡಿಯಲಾಯಿತು. 4ನೇ ದಿನ ಜಯಲಲಿತಾ ಚಿತ್ರೀಕರಣಕ್ಕೆ ಬರಬೇಕಿತ್ತು. ಆಕೆ ಕಾಲ್‌ಶೀಟ್ ಕೊಟ್ಟಿದ್ದರು. ಆದರೆ ಬರಲಿಲ್ಲ. ಐದಾರು ದಿನ ಕಾದರೂ ಪ್ರಯೋಜನವಾಗಿರಲಿಲ್ಲ. ಟ್ರಂಕ್ ಕಾಲ್ ಮೂಲಕ ಆಕೆಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಜಯಲಲಿತಾ ಕ್ಷಮೆ ಕೇಳಲು ಇಷ್ಟವಿಲ್ಲದೇ ಶೂಟಿಂಗ್‌ಗೆ ಬರಲಿಲ್ಲ ಎನ್ನುವ ಮಾತುಗಳು ಕೇಳಿಬಂದಿತ್ತು. ಜನರನ್ನು ಎದುರು ಹಾಕಿಕೊಂಡು ಸಿನಿಮಾ ಮಾಡುವುದು ಬೇಡ ಎಂದು ಅಣ್ಣಾವ್ರು ಹೇಳಿದ್ದರು. ಹಾಗಾಗಿ 'ಪೈಲೆಟ್' ಸಿನಿಮಾ ನಿಂತಿತ್ತು ಎಂದು ರಾಮ್‌ಕುಮಾರ್ ತಿಳಿಸಿದ್ದರು.
'ಪೈಲೆಟ್' ಸಿನಿಮಾ ನಿಂತ ಬಳಿಕ ವೈ. ಆರ್ ಸ್ವಾಮಿ ನಿರ್ದೇಶನದ 'ಬಿಡುಗಡೆ' ಚಿತ್ರದಲ್ಲಿ ಅಣ್ಣಾವ್ರು ನಟಿಸಿದ್ದರು. 70ರ ದಶಕದ ಆರಂಭದಲ್ಲೇ 'ಪೈಲೆಟ್' ಸಿನಿಮಾ ತೆರೆಗೆ ಬರಬೇಕಿತ್ತು. ಕರ್ನಾಟಕದ ಮೇಲುಕೋಟೆಯಲ್ಲಿ ತಮಿಳು ಅಯ್ಯಂಗಾರ್ ಬ್ರಾಹ್ಮಣರ ಕುಟುಂಬದಲ್ಲಿ ಹುಟ್ಟಿ ಬೆಳೆದ ಜಯಲಲಿತಾ ಬಳಿಕ ಮದ್ರಾಸ್‌ಗೆ ಹೋಗಿ ನೆಲೆಸಿದ್ದರು. ಕನ್ನಡದ 'ಶ್ರೀ ಶೈಲ ಮಹಾತ್ಮೆ' ಚಿತ್ರದಲ್ಲಿ ಆಕೆ ಬಾಲನಟಿಯಾಗಿ ಮೊದಲು ನಟಿಸಿದ್ದರು.
'ಚಿನ್ನದ ಗೊಂಬೆ', 'ನನ್ನ ಕರ್ತವ್ಯ', 'ಬದುಕುವ ದಾರಿ' ಕನ್ನಡ ಚಿತ್ರಗಳಲ್ಲಿ ಮಾತ್ರ ಜಯಲಲಿತಾ ನಟಿಸಿದ್ದರು. ಬಳಿಕ ಚಂದನವನದಿಂದ ದೂರಾಗಿಬಿಟ್ಟರು. ಅಲ್ಲಿಂದ ಮುಂದೆ ಯಾವುದೇ ಕನ್ನಡ ಚಿತ್ರದಲ್ಲಿ ಆಕೆ ನಟಿಸಲಿಲ್ಲ. ತಮಿಳು ಸಿನಿಮಾಗಳಲ್ಲಿ ನಟಿಸಿ ನೇಮು ಫೇಮು ಗಳಿಸಿದರು. ಮುಂದೆ ರಾಜಕೀಯರಂಗಕ್ಕೂ ಧುಮುಕಿ ತಮಿಳುನಾಡು ಮುಖ್ಯಮಂತ್ರಿಯಾಗಿ ಆಯ್ಕೆ ಆಗಿದ್ದರು. ತಮಿಳರ ಪಾಲಿನ ಅಮ್ಮ ಎಂದೇ ಖ್ಯಾತರಾಗಿದ್ದರು.


Click it and Unblock the Notifications











