ರಮ್ಯಾ ಆಡಿಷನ್ ಕೊಟ್ಟರೂ 'ಅಪ್ಪು' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಲಿಲ್ಲ ಯಾಕೆ?
ಯಾವುದೇ ಅವಕಾಶ ಅಷ್ಟು ಸುಲಭವಾಗಿ ಎಲ್ಲರಿಗೂ ಧಕ್ಕುವುದಿಲ್ಲ. ಯಾರಿಗೆ ಅದು ಸಿಗಬೇಕೋ ಅವರಿಗೆ ಸಿಗುತ್ತದೆ. ಗೆದ್ದಾಗ ಅದ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಸೋತರೆ ಸುಮ್ಮನಾಗಿಬಿಡುತ್ತಾರೆ. ಪುನೀತ್ ರಾಜ್‌ಕುಮಾರ್ ನಟನೆಯ 'ಅಪ್ಪು' ಸಿನಿಮಾ ಇದೇ ಮಾರ್ಚ್ 14ಕ್ಕೆ ರೀ-ರಿಲೀಸ್ ಆಗುತ್ತಿದೆ.
'ಅಪ್ಪು' ಚಿತ್ರದಲ್ಲಿ ರಕ್ಷಿತಾ ನಾಯಕಿಯಾಗಿ ನಟಿಸಿ ಗೆದ್ದಿದ್ದು ಗೊತ್ತೇಯಿದೆ. ಆದರೆ ರಮ್ಯಾ ಕೂಡ ಈ ಚಿತ್ರಕ್ಕಾಗಿ ಆಡಿಷನ್ ಕೊಟ್ಟಿದ್ದರು. ಆದರೆ ಅವಕಾಶ ಮಾತ್ರ ರಕ್ಷಿತಾ ಪಾಲಾಗಿತ್ತು. ಪೂರಿ ಜಗನ್ನಾಥ್ ನಿರ್ದೇಶನದ ರೊಮ್ಯಾಂಟಿಕ್ ಆಕ್ಷನ್ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಅಪ್ಪು ಹಾಗೂ ಸುಚಿತ್ರಾ(ರಕ್ಷಿತಾ) ಜೋಡಿ ಮೋಡಿ ಮಾಡಿತ್ತು. ಗುರುಕಿರಣ್ ಸಂಗೀತ ಸಾಂಗ್ಸ್ ಹಿಟ್ ಆಗಿ ಚಿತ್ರಕ್ಕೆ ಶಕ್ತಿ ತುಂಬಿತ್ತು.

ಖ್ಯಾತ ಛಾಯಾಗ್ರಾಹಕ ಬಿ. ಸಿ ಗೌರಿಶಂಕರ್ ಮಗಳು ರಕ್ಷಿತಾ. ಅವರ ಅಮ್ಮ ಮಮತಾ ರಾವ್ ಕೂಡ 'ಹೊಸ ಬೆಳಕು' ಚಿತ್ರದಲ್ಲಿ ಅಣ್ಣಾವ್ರ ಜೊತೆ ನಟಿಸಿದ್ದರು. ವಜೇಶ್ವರಿ ಸಂಸ್ಥೆಯ ಖಾಯಂ ಛಾಯಾಗ್ರಾಹಕ ಎನ್ನುವಂತೆ ಇದ್ದವರು ಗೌರಿಶಂಕರ್. 'ಆನಂದ್', 'ಓಂ', 'ಜನುಮದ ಜೋಡಿ', 'ಹೃದಯ ಹೃದಯ' ಹೀಗೆ ಆ ಸಂಸ್ಥೆಯ ಹಲವು ಹಿಟ್ ಸಿನಿಮಾಗಳಿನ್ನು ಅವರು ಸೆರೆ ಹಿಡಿದಿದ್ದರು. ಹಾಗಾಗಿ ರಕ್ಷಿತಾ ಅವರನ್ನು ಪಾರ್ವತಮ್ಮ ಚಿಕ್ಕಂದಿನಿಂದಲೇ ನೋಡಿದ್ದರು.
'ಅಪ್ಪು' ಚಿತ್ರಕ್ಕೆ ರಕ್ಷಿತಾ ನಾಯಕಿ ಎಂದು ಪಾರ್ವತಮ್ಮ ಫಿಕ್ಸ್ ಆಗಿಬಿಟ್ಟಿದ್ದರು. ಚಿಕ್ಕಂದಿನಿಂದ ಪುನೀತ್ ರಾಜ್‌ಕುಮಾರ್ ಅವರಿಗೂ ರಕ್ಷಿತಾ ಅವರ ಪರಿಚಯ ಇತ್ತು. ಇಬ್ಬರೂ ಡ್ಯಾನ್ಸ್ ಕ್ಲಾಸ್‌ಗೆ ಸಹ ಹೋಗುತ್ತಿದ್ದರು. ನಿರ್ದೇಶಕ ಮಹೇಶ್ ಬಾಬು ಈ ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು.

ಮಹೇಶ್ ಬಾಬು 'ಕನ್ನಡ ಪಿಕ್ಚರ್' ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ 'ಅಪ್ಪು' ಸಿನಿಮಾ ಮೇಕಿಂಗ್ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ. "ರಕ್ಷಿತಾ ಅವರು ಚಿತ್ರಕ್ಕೆ ಆಯ್ಕೆ ಆಗಿದ್ದು ಮಿರಾಕಲ್. ಪಾರ್ವತಮ್ಮ ಅವರಿಗೆ ರಕ್ಷಿತಾ ಅವರನ್ನೇ ನಾಯಕಿ ಆಗಿ ಆಯ್ಕೆ ಮಾಡಬೇಕು ಎಂದು ತುಂಬಾ ಆಸೆ ಇತ್ತು. ಗೌರಿಶಂಕರ್ ಮಗಳು ಎನ್ನುವ ಅಭಿಮಾನ. ಪಾರ್ವತಮ್ಮ ಅವ್ರು ಒಂದು ಹುಡುಗಿಯನ್ನು ನೋಡಿದರೆ ತಕ್ಷಣ ಹೇಳ್ತಾರೆ. ಇವಳೇ ಹೀರೊಯಿನ್ ಅಂತ. ಅದು ನಿಜ ಆಗುತ್ತದೆ. ಬಳಿಕ ರಮ್ಯಾ ಬಂದು ಆಡಿಷನ್ ಕೊಟ್ಟು ಹೋಗಿದ್ದರು. ಆದರೆ ರಕ್ಷಿತಾ ಕೊಡುತ್ತಿದ್ದ ಎಕ್ಸ್‌ಪ್ರೆಷನ್, ಡೈಲಾಗ್ ಡೆಲಿವರಿ ಇವತ್ತಿನ ಪಡ್ಡೆ ಹುಡುಗರಿಗೆ ಇಷ್ಟವಾಗುತ್ತದೆ ಎನಿಸಿತ್ತು. ನಾನು ನಿರ್ದೇಶಕರಿಗೆ ಇದನ್ನು ಹೇಳಿದ್ದೆ. ಕೊನೆಗೆ ರಕ್ಷಿತಾ ಆಯ್ಕೆ ಆಗಿದ್ದರು" ಎಂದಿದ್ದಾರೆ.
'ಅಪ್ಪು' ಸಿನಿಮಾ ಅವಕಾಶ ಮಿಸ್ ಆದ ಬಳಿಕ 'ಅಭಿ' ಸಿನಿಮಾ ವೇಳೆಗೆ ರಮ್ಯಾ ಮೇಕ್ ಓವರ್ ಆಗಿದ್ದರು. 'ಅಭಿ' ಚಿತ್ರಕ್ಕೆ ನಾಯಕಿ ಹುಡುಕಾಟ ನಡೆಯುತ್ತಿದ್ದಾರೆ ನೇರವಾಗಿ ವಜ್ರೇಶ್ವರಿ ಸಂಸ್ಥೆ ಕಛೇರಿಗೆ ಹೋಗಿದ್ದ ರಮ್ಯಾ ನಂಗೆ ಈಗ ಛಾನ್ಸ್ ಕೊಡ್ತೀರಾ ಎಂದು ರಾಘಣ್ಣನ ಬಳಿ ಕೇಳಿದ್ದರಂತೆ. ಈ ವಿಚಾರವನ್ನು ನಿರ್ದೇಶಕ ಮಹೇಶ್ ಬಾಬು ಮತ್ತೊಂದು ಸಂದರ್ಶನದಲ್ಲಿ ಹೇಳಿದ್ದರು. ಹೀಗೆ ಪುನೀತ್ ಮೊದಲ ಚಿತ್ರದಲ್ಲಿ ಅಲ್ಲದೇ ಇದ್ದರೂ 2ನೇ ಚಿತ್ರದಲ್ಲಿ ರಮ್ಯಾ ನಾಯಕಿಯಾಗಿ ಆಯ್ಕೆ ಆಗಿ ಗೆದ್ದಿದ್ದರು.
ಪುನೀತ್ ರಾಜ್‌ಕುಮಾರ್ 50ನೇ ವರ್ಷದ ಹುಟ್ಟುಹಬ್ಬದ ವಿಶೇಷವಾಗಿ 'ಅಪ್ಪು' ಸಿನಿಮಾ ಮತ್ತೆ ತೆರೆಗೆ ಬರ್ತಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆ ತಯಾರಿ ನಡೀತಿದೆ. ಮಾರ್ಚ್ 14ರಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ. ಅದೇ ದಿನ ಚಿತ್ರಮಂದಿರಗಳಲ್ಲಿ 'ಅಪ್ಪು' ದರ್ಬಾರ್ ಶುರುವಾಗಲಿದೆ. ಅಭಿಮಾನಿಗಳು ಕೂಡ ದೊಡ್ಡಮಟ್ಟದಲ್ಲಿ ಸಿನಿಮಾ ಸ್ವಾಗತಿಸಲು ಕಾಯುತ್ತಿದ್ದಾರೆ. ಮಾರ್ಚ್ 17ಕ್ಕೆ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ಕಳೆಕಟ್ಟಲಿದೆ.


Click it and Unblock the Notifications











