2024ರ ವರ್ಷಕ್ಕಿಂತ 2025ರಲ್ಲಿ ಸ್ಯಾಂಡಲ್‌ವುಡ್ ಸಕ್ಸಸ್ ರೇಟ್ ಚೆನ್ನಾಗಿ ಇರುತ್ತಾ?
ಸೋಲನ್ನು ಒಪ್ಪಿಕೊಳ್ಳಬೇಕು. ಗೆದ್ದು ಮುಂದೆ ಸಾಗಬೇಕು. ಚಿತ್ರರಂಗದಲ್ಲಿ ಸೋಲು ಗೆಲುವು ಸರ್ವೇ ಸಾಮಾನ್ಯ. ಸೋತಾಗಲೆಲ್ಲಾ ಗೆದ್ದು ಬಂದವರು ಇಲ್ಲಿ ಇದ್ದಾರೆ. ಈ ವರ್ಷ ಕನ್ನಡ ಚಿತ್ರರಂಗದ ಸಾಧನೆ ನಿಧಾನವಾಗಿ ಸುಧಾರಿಸಿದೆ. ಮೊದಲ 6 ತಿಂಗಳ ಚಿತ್ರಮಂದಿರಗಳು ಪ್ರೇಕ್ಷಕರ ಬರ ಎದುರಿಸಿದ್ದವು. ಬಳಿಕ ಸಿನಿಮಾಗಳು ಗೆದ್ದು ಬೀಗಿದ್ದವು.
ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿದ 'ಭೀಮ' ಬಿಡುಗಡೆ ಆಗುವವರೆಗೂ ಪ್ರೇಕ್ಷಕರು ದೊಡ್ಡದಾಗಿ ಚಿತ್ರಮಂದಿರಗಳಿಗೆ ಬರಲಿಲ್ಲ. ಬಳಿಕ ಒಂದರ ಹಿಂದೆ ಒಂದರಂತೆ ಚಿತ್ರಗಳು ಹಿಟ್ ಆದವು. ನಡುವೆ ಭಾರೀ ನಿರೀಕ್ಷೆ ಮೂಡಿಸಿದ್ದ 'ಮಾರ್ಟಿನ್' ಸಿನಿಮಾ ನಿರಾಸೆ ಮೂಡಿಸಿತು. ವರ್ಷದ ಕೊನೆಗೆ 'ಮ್ಯಾಕ್ಸ್' ಹಾಗೂ 'ಯುಐ' ದರ್ಬಾರ್ ಜೋರಾಗಿದೆ. ಇದೆಲ್ಲದರ ನಡುವೆ ಮುಂದಿನ ವರ್ಷ ಚಿತ್ರರಂಗದ ಸಾಧನೆ ಹೇಗಿರಲಿದೆ ಎನ್ನುವ ಚರ್ಚೆ ಶುರುವಾಗಿದೆ.

2 ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾಗಳು ಸಿದ್ಧವಾಗುತ್ತಿವೆ. ಹಾಗಾಗಿ ಮುಂದಿನ ವರ್ಷ ಸ್ಯಾಂಡಲ್‌ವುಡ್‌ನಲ್ಲಿ ಭರ್ಜರಿ ಬೆಳೆಯಾಗುವ ನಿರೀಕ್ಷೆಯಿದೆ. ಆದರೂ ಕೆಲ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆಗುವುದು ಅನುಮಾನ ಎನ್ನುವಂಯತಾಗಿದೆ. ಆದರೆ ಯಶ್ ಹಾಗೂ ರಿಷಬ್ ಶೆಟ್ಟಿ ಬಿಗ್ ಟಿಕೆಟ್ ಸಿನಿಮಾಗಳ ಜೊತೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಹಾಗೂ ರಿಷಬ್ ಶೆಟ್ಟಿ ಪ್ರೇಕ್ಷಕರ ಮುಂದೆ ಬಂದು ಎರಡು ವರ್ಷ ಕಳೆದಿದೆ. ರಿಷಬ್ ನಿರ್ದೇಶಿಸಿ ನಟಿಸುತ್ತಿರುವ 'ಕಾಂತಾರ'-1 ಸಿನಿಮಾ ಬಿಡುಗಡೆಗೆ ಇನ್ನು ಒಂದು ವರ್ಷ ಕಾಯಬೇಕಿದೆ. 'ಟಾಕ್ಸಿಕ್' ರಿಲೀಸ್ ಡೇಟ್ ಅನೌನ್ಸ್ ಆಗಿಲ್ಲ. ಏಪ್ರಿಲ್ 10ಕ್ಕೆ ಬರಬೇಕಿದ್ದ ಸಿನಿಕಾ ಕಾರಣಾಂತರಗಳಿಂದ ಮುಂದೆ ಹೋಗಿದೆ. 2025ರಲ್ಲೇ 'ಟಾಕ್ಸಿಕ್' ಸಿನಿಮಾ ತೆರೆಗೆ ಬರುತ್ತಾ ಕಾದು ನೋಡಬೇಕಿದೆ.

ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ದರ್ಶನ್ ಚೇತರಿಸಿಕೊಳ್ಳಬೇಕಿದೆ. 'ಡೆವಿಲ್' ಸಿನಿಮಾ ಮುಂದಿನ ವರ್ಷವೇ ಚಿತ್ರೀಕರಣ ಮುಗಿಸಿ ತೆರೆಗೆ ಬರುತ್ತಾ ಕಾದು ನೋಡಬೇಕಿದೆ. ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಸದ್ಯ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಹೊಸದಾಗಿ ಯಾವುದೇ ಸಿನಿಮಾ ಶುರು ಮಾಡಿಲ್ಲ. 'ಬಿಲ್ಲ ರಂಗ ಬಾಷ' ಚಿತ್ರ ಸೆಟ್ಟೇರುವ ನಿರೀಕ್ಷೆಯಿದೆ. ಅದು ದೊಡ್ಡ ಸಿನಿಮಾ ಆಗಿರುವುದರಿಂದ ಮುಂದಿನ ವರ್ಷವೇ ತೆರೆಮೇಲೆ ನೋಡುವುದು ಕಷ್ಟ.
ಈ ವರ್ಷ 'ಬಘೀರ' ಸಿನಿಮಾ ಮಾಡಿ ಶ್ರೀಮುರಳಿ ಸಕ್ಸಸ್ ಕಂಡಿದ್ದಾರೆ. ಮುಂದಿನ ವರ್ಷ ಮತ್ತೊಂದು ಸಿನಿಮಾ ಬರುತ್ತಾ ಗೊತ್ತಿಲ್ಲ. ಇನ್ನುಳಿದಂತೆ ಪ್ರಜ್ವಲ್ ದೇವರಾಜ್ ನಟನೆಯ 'ಕರಾವಳಿ' ಕೊಂಚ ನಿರೀಕ್ಷೆ ಹುಟ್ಟಾಕ್ಕಿದೆ. ಜಡೇಶ್ ಹಂಪಿ ನಿರ್ದೇಶನದಲ್ಲಿ ದುನಿಯಾ ವಿಜಯ್ ನಟನೆಯ ಸಿನಿಮಾ ತೆರೆಗೆ ಬರುವ ಸಾಧ್ಯೆಯಿದೆ. ಜೊತೆಗೆ ವಿಜಯ್ ನಿರ್ದೇಶನದ ಸಿನಿಮಾವೊಂದು ಪ್ರೇಕ್ಷಕರ ಮುಂದೆ ಬರಬೇಕಿದೆ. ಅರ್ಧ ಚಿತ್ರೀಕರಣ ಮುಗಿಸಿರುವ 'ಉತ್ತರಕಾಂಡ' ತೆರೆಗೆ ಬರುತ್ತಾ ಕಾದು ನೋಡಬೇಕು.
ರಮೇಶ್ ಅರವಿಂದ್ ಹಾಗೂ ಗಣೇಶ್ 'Your's sincerely ರಾಮ್' ಸಿನಿಮಾ ಬಿಡುಗಡೆ ಆಗಲಿದೆ. ಸದ್ಯದ ಮಟ್ಟಿಗೆ 'ಕಾಂತಾರ'-1 ಸಿನಿಮಾ ಬಗ್ಗೆ ಮಾತ್ರ ಭಾರೀ ನಿರೀಕ್ಷೆಯಿದೆ. ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಟಾಕ್ಸಿಕ್' ಟೀಸರ್ ಬರುವ ಸಾಧ್ಯತೆಯಿದೆ. ಅದರಲ್ಲಿ ರಿಲೀಸ್ ಡೇಟ್ ಘೋಷಣೆ ಆದರೂ ಅಚ್ಚರಿಪಡಬೇಕಿಲ್ಲ. ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆಯ '45' ಸಿನಿಮಾ ಕುತೂಹಲ ಮೂಡಿಸಿದೆ. ಯುವ ರಾಜ್‌ಕುಮಾರ್ 2ನೇ ಸಿನಿಮಾ 'ಎಕ್ಕ' ಮೇಲೆ ಭರವಸೆಯಿದೆ.
ಉಪೇಂದ್ರ ನಟನೆಯ 'ಬುದ್ಧಿವಂತ'-2 ಶೀಘ್ರದಲ್ಲೇ ಬರಲಿದೆ. ಇನ್ನುಳಿದಂತೆ ರಕ್ಷಿತ್ ಶೆಟ್ಟಿ ಹೊಸ ಸಿನಿಮಾ ಸದ್ಯಕ್ಕೆ ಬರುವಂತೆ ಕಾಣುತ್ತಿಲ್ಲ. ಧ್ರುವ ಸರ್ಜಾ ನಟನೆಯ 'ಕೆಡಿ' ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ಅಣಿಯಾಗುತ್ತಿದೆ. ಒಟ್ಟಾರೆ ಈ ವರ್ಷ ಬಂದ ಚಿತ್ರಗಳಿಗಿಂತ ಹೆಚ್ಚು ಸಾಮರ್ಥ್ಯ ಇರುವ ಚಿತ್ರಗಳು ಮುಂದಿನ ವರ್ಷ ತೆರೆಗೆ ಬರಲಿವೆ. ಹಾಗಾಗಿ ಸಕ್ಸಸ್ ರೇಟ್ ಚೆನ್ನಾಗಿ ಇರುತ್ತದೆ ಎನ್ನುವ ನಿರೀಕ್ಷೆಯಿದೆ.


Click it and Unblock the Notifications











