International Women's Day 2023: ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ ಮಹಿಳಾ ನಿರ್ದೇಶಕಿಯರು
ನಟನೆ ಬಿಟ್ಟರೆ ಚಿತ್ರರಂಗದಲ್ಲಿ ನಿರ್ದೇಶನಕ್ಕೆ ಹೆಚ್ಚಿನ ಮಹತ್ವ ಇದೆ. ಸಿನಿಮಾ ಕ್ಯಾಪ್ಟನ್ ಡೈರೆಕ್ಟರ್. ಒಂದು ಕಥೆಯನ್ನು ಕಟ್ಟಿ ಅದನ್ನು ತನ್ನದೇ ಕಲ್ಪನೆಯಲ್ಲಿ ಮೊದಲು ಸಿನಿಮಾ ಆಗಿ ಕಂಡು ನಂತರ ಅದನ್ನು ದೃಶ್ಯರೂಪಕ್ಕೆ ಇಳಿಸುವುದು ತಮಾಷೆಯ ಮಾತಲ್ಲ. 24 ಕ್ರಾಫ್ಟ್ ಒಟ್ಟಿಗೆ ಸೇರಿಸಿ ಒಂದು ಸಿನಿಮಾ ಮಾಡೋದು ದೊಡ್ಡ ಸವಾಲು. ಪುರುಷ ಪ್ರಧಾನ ಚಿತ್ರರಂಗದಲ್ಲಿ ಕೆಲ ಮಹಿಳಾ ನಿರ್ದೇಶಕಿಯರು ತಮ್ಮದೇ ಛಾಪು ಮೂಡಿಸಿದ್ದಾರೆ.
ದಶಕಗಳಿಂದ ಕನ್ನಡ ಸಿನಿಇಂಡಸ್ಟ್ರಿಯಲ್ಲಿ ಮಹಿಳೆಯರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾ ಬರ್ತಿದ್ದಾರೆ. ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ನಮಗೆ ತೆರೆಮೇಲೆ ಕಾಣಿಸಿಕೊಳ್ಳುವ ನಟಿಯರು ಮಾತ್ರ ಪರಿಚಿತರಾಗಿದ್ದಾರೆ. ಒಂದಷ್ಟು ಮಹಿಳಾ ನಿರ್ದೇಶಕಿಯರು ಅದ್ಭುತ ಸಿನಿಮಾಗಳನ್ನು ಕಟ್ಟಿಕೊಟ್ಟು ಗೆದ್ದಿದ್ದಾರೆ. ಮಹಿಳಾ ದಿನಾಚರಣೆ ವಿಶೇಷವಾಗಿ ಸ್ಯಾಂಡಲ್‌ವುಡ್ ಮಹಿಳಾ ನಿರ್ದೇಶಕಿಯರ ಪರಿಚಯ ಮಾಡಿಕೊಳ್ಳಲೇಬೇಕು.

ಪ್ರೇಮಾ ಕಾರಂತ್: ಕನ್ನಡ ಚಿತ್ರರಂಗದ ಮೊದಲ ಮಹಿಳಾ ನಿರ್ದೇಶಕಿ ಪ್ರೇಮಾ ಕಾರಂತ್. 1983ರಲ್ಲಿ 'ಫಣಿಯಮ್ಮ' ಎನ್ನುವ ಸಿನಿಮಾವನ್ನು ಅವರು ನಿರ್ಮಿಸಿ ನಿರ್ದೇಶಿಸಿದ್ದರು. ರಂಗಭೂಮಿಯಿಂದ ಬಂದ ಪ್ರೇಮಾ ಅವರು ಕಾಸ್ಟ್ಯೂಮ್ ಡಿಸೈನರ್ ಆಗಿ ಸಿನಿಮಾಗಳಲ್ಲಿ ಕೆಲಸ ಆರಂಭಿಸಿದರು. ನಂತರ ಆರ್ಟ್ ಡೈರೆಕ್ಟರ್ ಆಗಿ ಕೊನೆಗೆ 'ಫಣಿಯಮ್ಮ' ಸಿನಿಮಾ ಮೂಲಕ ನಿರ್ದೇಶಕಿಯಾದರು. ಸಮಾಜದಲ್ಲಿ ವಿಧವೆಯರು ಎದುರಿಸುವ ಸಮಸ್ಯೆಗಳ ಕುರಿತು ಎಂ. ಕೆ ಇಂದಿರಾ ಬರೆದ ಕಾದಂಬರಿ ಆಧರಿಸಿ ಸಿನಿಮಾ ಮಾಡಿದ್ದರು.

ಕವಿತಾ ಲಂಕೇಶ್: ಕನ್ನಡದ ಜನಪ್ರಿಯ ಮಹಿಳಾ ನಿರ್ದೇಶಕಿ ಕವಿತಾ ಲಂಕೇಶ್ 9 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಅದರಲ್ಲಿ ಕೆಲ ಸಿನಿಮಾಗಳಿಗೆ ಪ್ರಶಸ್ತಿಗಳು ಬಂದಿವೆ. ಡಾಕ್ಯುಮೆಂಟರಿ ಸಿನಿಮಾಗಳನ್ನು ಕಟ್ಟಿಕೊಡುವ ದೃಶ್ಯ ಮಾಧ್ಯಮಕ್ಕೆ ಬಂದ ಕವಿತಾ ಲಂಕೇಶ್ ನಿರ್ದೇಶಿಸಿದ ಮೊದಲ ಸಿನಿಮಾ 'ದೇವೀರಿ'. 1999ರಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು. ಮುಂದೆ 'ಅಲೆಮಾರಿ', 'ಬಿಂಬ', 'ಪ್ರೀತಿ' 'ಪ್ರೇಮ ಪ್ರಣಯ', 'ತನನಂ ತನನಂ', 'ಅವ್ವ' ಹೀಗೆ ಸಾಲು ಸಾಲು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದರು.

ಸುಮನಾ ಕಿತ್ತೂರು: 'ಸ್ಲಂ ಬಾಲ', 'ಕಳ್ಳರ ಸಂತೆ', 'ಎದೆಗಾರಿಕೆ', 'ಕಿರಗೂರಿನ ಗಯ್ಯಾಳಿಗಳು' ರೀತಿಯ ಸದಭಿರುಚಿ ಸಿನಿಮಾಗಳನ್ನು ನಿರ್ದೇಶಿಸಿ ಸುಮನಾ ಕಿತ್ತೂರು ಇತ್ತೀಚಿನ ವರ್ಷಗಳಲ್ಲಿ ಗುರ್ತಿಸಿಕೊಂಡರು. ನಿರ್ದೇಶನ ಮಾತ್ರವಲ್ಲದೇ ಬರವಣಿಗೆಯಿಂದಲೂ ಸುಮನಾ ಗಮನ ಸೆಳೆದಿದ್ದಾರೆ. ಚಿತ್ರಕ್ಕೆ ಹಾಡುಗಳನ್ನು ಕೂಡ ಬರೆಯುತ್ತಾರೆ.

ವಿಜಯಲಕ್ಷ್ಮಿ ಸಿಂಗ್: ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ್ದ ವಿಜಯಲಕ್ಷ್ಮಿ ಸಿಂಗ್ 'ಈ ಬಂಧನ' ಸಿನಿಮಾ ಮೂಲಕ ನಿರ್ದೇಶಕಿಯಾದರು. ಮೊದಲ ಚಿತ್ರದಲ್ಲೇ ಸಾಹಸಸಿಂಹ ವಿಷ್ಣುವರ್ಧನ್, ಜಯಪ್ರದಾರಂತಹ ಅದ್ಭುತ ಕಲಾವಿದರಿಗೆ ಆಕ್ಷನ್ ಕಟ್ ಹೇಳಿದರು. ಖ್ಯಾತ ನಿರ್ಮಾಪಕ, ನಿರ್ದೇಶಕ ಶಂಕರ್ ಸಿಂಗ್ ಮಗಳಾದ ವಿಜಯಲಕ್ಷ್ಮಿ ಮುಂದೆ 'ಮಳೆಬರಲಿ ಮಂಜು ಇರಲಿ', 'ಸ್ವೀಟಿ', 'ಯಾನ', 'ವಾರೆವ್ಹಾ' ಸಿನಿಮಾಗಳನ್ನು ಕಟ್ಟಿಕೊಟ್ಟರು.

ರೂಪ ಅಯ್ಯರ್: ನಟಿ, ನಿರ್ದೇಶಕಿ, ರೂಪದರ್ಶಿ, ಡ್ಯಾನ್ಸರ್, ಉದ್ಯಮಿ ಹೀಗೆ ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ರೂಪ ಅಯ್ಯರ್. 'ಮುಖಪುಟ' ಸಿನಿಮಾ ಮೂಲಕ ರೂಪ ಅಯ್ಯರ್ ಡೈರೆಕ್ಟರ್ ಕ್ಯಾಪ್ ತೊಟ್ಟರು. ಕನ್ನಡ ಹಾಗೂ ತಮಿಳಿನಲ್ಲಿ 'ಚಂದ್ರ' ಎನ್ನುವ ರೊಮ್ಯಾಂಟಿಕ್ ಚಿತ್ರವನ್ನು ತೆರೆಗೆ ತಂದಿದ್ದರು. ಚಿತ್ರದಲ್ಲಿ ಶ್ರೀಯಾ ಶರಣ್ ನಾಯಕಿಯಾಗಿ ಮಿಂಚಿದ್ದರು. ಇದೀಗ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿರುವ ರೂಪ, 'ನೀರಾ ಆರ್ಯ' ಚಿತ್ರವನ್ನು ನಿರ್ದೇಶಿಸಿ ನಟಿಸ್ತಿದ್ದಾರೆ. ನೇತಾಜಿ ಸುಭಾಷ್‌ಚಂದ್ರ ಬೋಸ್ ಕಟ್ಟಿದ ಮೊದಲ ಮಹಿಳಾ ಆರ್ಮಿ ಕಥೆಯನ್ನು ಈ ಚಿತ್ರದಲ್ಲಿ ಹೇಳ್ತಿದ್ದಾರೆ.

ರಿಷಿಕಾ ಶರ್ಮಾ: ಇತ್ತೀಚೆಗೆ ವಿಜಯಾನಂದ ಸಿನಿಮಾ ಕಟ್ಟಿಕೊಟ್ಟು ಗಮನ ಸೆಳೆದ ನಿರ್ದೇಶಕಿ ರಿಷಿಕಾ ಶರ್ಮಾ. ಖ್ಯಾತ ಉದ್ಯಮಿ ವಿಜಯ ಸಂಕೇಶ್ವರ ಜೀವನಾಧರಿತ ಈ ಚಿತ್ರವನ್ನು 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ತರಲಾಗಿತ್ತು. 4 ವರ್ಷಗಳ ಹಿಂದೆ 'ಟ್ರಂಕ್' ಎನ್ನುವ ಮತ್ತೊಂದು ಚಿತ್ರಕ್ಕೂ ರಿಷಿಕಾ ಆಕ್ಷನ್ ಕಟ್ ಹೇಳಿದ್ದರು. ಕನ್ನಡ ಚಿತ್ರರಂಗದ ಭೀಷ್ಮ ಎನಿಸಿಕೊಂಡ ಜಿ. ವಿ ಅಯ್ಯರ್ ಮೊಮ್ಮಗಳು ರಿಷಿಕಾ ಶರ್ಮಾ.


Click it and Unblock the Notifications











