Women's Day 2025; ಚಿತ್ರರಂಗದಲ್ಲಿ ಮಹಿಳೆಯರ ಸ್ಥಿತಿಗತಿ; ಕನ್ನಡ ನಟಿಯರು ಏನಂತಾರೆ?
ಪ್ರತಿವರ್ಷ ಪ್ರಪಂಚದಾದ್ಯಂತ ಮಾರ್ಚ್ 8 ರಂದು ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯುವುದು ಜೊತೆ ಜೊತೆಗೆ ಮಹಿಳಾ ಸಬಲೀಕರಣ, ಮಹಿಳೆಯರ ಹಕ್ಕುಗಳ ರಕ್ಷಣೆ, ಲಿಂಗ ಸಮಾನತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಅಂತರಾಷ್ಟೀಯ ಮಹಿಳಾ ದಿನಾಚರಣೆ ಮಹತ್ವ ಪಡೆದುಕೊಂಡಿದೆ.
ರಂಗಭೂಮಿ ಜೊತೆ ಜೊತೆಗೆ ಸಿನಿಮಾ ಹುಟ್ಟಿಕೊಂಡಿತು. ಮಹಿಳೆಯರು ನಾಟಕಗಳಲ್ಲಿ ನಟಿಸೋಕೆ ಹೋಗುತ್ತಾರೆ ಎಂದರೆ ವಾರೆಗಣ್ಣಿನಲ್ಲಿ ನೋಡುವ ಕಾಲ ಇತ್ತು. ಅದು ಚಿತ್ರರಂಗದಲ್ಲಿ ಕೂಡ ಮುಂದುವರೆಯಿತು. ಅದನ್ನೆಲ್ಲಾ ಮೀರಿ ದಶಕಗಳಿಂದ ಮಹಿಳೆಯರು ಚಿತ್ರರಂಗದಲ್ಲಿ ದುಡಿಯುತ್ತಾ ಬರುತ್ತಿದ್ದಾರೆ. ಕೆಲ ನಟಿಯರು ಹಾಗೂ ಮಹಿಳಾ ತಂತ್ರಜ್ಞರು ಅದ್ಭುತ ಸಾಧನೆಗಳನ್ನು ಮಾಡಿದ್ದಾರೆ. ನಾವು ಪುರುಷರಿಗಿಂತ ಕಮ್ಮಿ ಇಲ್ಲ ಎಂದು ಸಾಬೀತು ಮಾಡುತ್ತಿದ್ದಾರೆ. ಆದಾಗ್ಯೂ ಚಿತ್ರರಂಗ ಎನ್ನುವುದು ಇಂದಿಗೂ ಪುರುಷ ಪ್ರಧಾನ ಉದ್ಯಮವೇ ಆಗಿದೆ.

ಕನ್ನಡ ಚಿತ್ರರಂಗದಲ್ಲಿ ಕೂಡ ಸಾಕಷ್ಟು ಮಹಿಳೆಯರು ಕೆಲಸ ಮಾಡುತ್ತಾ ಬರ್ತಿದ್ದಾರೆ. ನಟಿಯರಾಗಿ ಮಾತ್ರವಲ್ಲದೇ ವಿವಿಧ ವಿಭಾಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ಇರುವಂತೆಯೇ ಚಿತ್ರರಂಗದಲ್ಲಿ ಕೂಡ ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತಮ್ಮ ಕುಟುಂಬವನ್ನು ನಿಭಾಯಿಸುವುದರ ಜೊತೆ ಜೊತೆಗೆ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಸಿನಿಮಾ ಕ್ಷೇತ್ರದಲ್ಲಿ ಕೂಡ ಮಹಿಳೆಯರು ಕೆಲಸ ಮಾಡಲು ಉತ್ತಮ ವಾತಾವರಣ ನಿರ್ಮಾಣವಾಗುತ್ತಿದೆ.
ಮಹಿಳಾ ದಿನಾಚರಣೆ ಹಿನ್ನಲೆಯಲ್ಲಿ ಚಿತ್ರರಂಗದಲ್ಲಿ ನಿಜಕ್ಕೂ ಮಹಿಳೆಯರ ಸ್ಥಿತಿ ಗತಿ ಏನು? ಅವರು ಎದುರಿಸುತ್ತಿರುವ ನೈಜ ಸಮಸ್ಯೆಗಳು ಯಾವುವು? ಎನ್ನುವ ಬಗ್ಗೆ ಕನ್ನಡ ಸಿನಿಮಾ ನಟಿಯರೇ ಮಾತನಾಡಿದ್ದಾರೆ. ನಟಿಯರಾದ ಶ್ರುತಿ ಹರಿಹರನ್, ರಾಧಿಕಾ ಚೇತನ್, ನಿಧಿ ಸುಬ್ಬಯ್ಯ ಹಾಗೂ ಸಂಯುಕ್ತಾ ಹೊರನಾಡ್ ಫಿಲ್ಮಿಬೀಟ್ ಕನ್ನಡ ಜೊತೆ ತಮ್ಮ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಸಂಯುಕ್ತಾ ಹೊರನಾಡ್
"ಕನ್ನಡ ಸಿನಿಮಾಗಳು ಪ್ರೇಕ್ಷಕರ ಬರ ಎದುರಿಸುತ್ತಿವೆ. ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆಯುವ ಸಿನಿಮಾಗಳು ಕಮ್ಮಿ ಆಗಿದೆ. ಮಹಿಳೆಯರಿಗೆ ಒಳ್ಳೆ ಒಳ್ಳೆ ಪಾತ್ರಗಳನ್ನು ಬರೆಯಬೇಕು, ಆಗ ಮಹಿಳಾ ಪ್ರೇಕ್ಷಕರು ಸಿನಿಮಾ ನೋಡಲು ಬರುತ್ತಾರೆ. ನಟಿಯರ ಸುತ್ತಾಮುತ್ತಾ ಕೆಲ ಮಹಿಳೆಯರು ಕೆಲಸ ಮಾಡುತ್ತಾರೆ. ನಟ-ನಟಿಯರಿಗೆ ಸಿಗುವ ಭದ್ರತೆ, ಸೌಲಭ್ಯಗಳು ಅಂತಹವರಿಗೆ ಸಿಗುವುದಿಲ್ಲ. ಸಿನಿಮಾಗಳಲ್ಲಿ ಕೆಲಸ ಮಾಡುವ ಮಹಿಳೆಯರ ಸಂಖ್ಯೆ ಬಹಳ ಕಮ್ಮಿ ಇದೆ. 350 ಜನ ಸೆಟ್‌ನಲ್ಲಿ ಕೆಲಸ ಮಾಡುತ್ತಿದ್ದರೆ ಮೂರ್ನಾಲ್ಕು ಜನ ಮಹಿಳೆಯರು ಇರ್ತಾರೆ" ಎಂದು ನಟಿ ಸಂಯುಕ್ತಾ ಹೊರನಾಡ್ ಹೇಳಿದ್ದಾರೆ.
"ಮಹಿಳೆಯರು ಚಿತ್ರೀಕರಣದ ಜಾಗಕ್ಕೆ ಬರುವುದು, ಬಂದು ಇಲ್ಲಿ ಕೆಲಸ ಮಾಡುವುದು, ಮೂಲ ಸೌಲಭ್ಯ ಸಿಗದೇ ಇರುವುದು ಎಲ್ಲವೂ ಸಮಸ್ಯೆ ಆಗುತ್ತದೆ. ಮಹಿಳೆಯರಿಗೆ ಸರಿಯಾದ ಸಂಭಾವನೆ ಕೂಡ ಸಿಗುವುದಿಲ್ಲ. 'ಆಚಾರ್ ಅಂಡ್ ಕೋ' ಎಂಬ ಸಿನಿಮಾ ಬಂದಿತ್ತು. ಬಹಳ ಒಳ್ಳೆಯ ಸಿನಿಮಾ. ನಿರ್ದೇಶಕಿ ಸಿಂಧೂ ಶ್ರೀನಿವಾಸ್ ಮೂರ್ತಿ ಮತ್ಯಾವುದೇ ಸಿನಿಮಾ ಮತ್ತೆ ಮಾಡಲಿಲ್ಲ. ಅದಕ್ಕೆ ಬೇಕಾದ ಬೆಂಬಲ ಆಕೆಗೆ ಸಿಗಲಿಲ್ಲ ಎನಿಸುತ್ತದೆ" ಎಂದು ಸಂಯುಕ್ತಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶ್ರುತಿ ಹರಿಹರನ್
"ಚಿತ್ರರಂಗದಲ್ಲಿ ಈಗ ಪರಿಸ್ಥಿತಿ ಸುಧಾರಿಸಿದೆ. ಮಹಿಳೆಯರು ಸುರಕ್ಷಿತವಾಗಿದ್ದಾರೆ. ಪುರುಷರು ಸೆನ್ಸಿಟಿವ್ ಆಗಿ ವರ್ತಿಸುತ್ತಿದ್ದಾರೆ. ಕ್ರಿಯೇಟಿವಿಟಿಯಾಗಿ ನೋಡಿದರೂ ಇತ್ತೀಚೆಗೆ ಒಳ್ಳೆ ಅವಕಾಶಗಳು ಸಿಗುತ್ತಿದೆ. ಪಾತ್ರಗಳು ಸಿಗುತ್ತಿದೆ. ಇದು ಬಹಳ ಖುಷಿಯ ವಿಷಯ. ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳೆಯರ ಸಂಖ್ಯೆ ಕಮ್ಮಿಯಿದೆ. ಅದು ಸಿನಿಮಾ, ಕಾರ್ಪೋರೇಟ್, ಪೊಲಿಟಿಕ್ಸ್ ಹೀಗೆ ಕ್ಷೇತ್ರಗಳಲ್ಲಿ ಕೂಡ ನೋಡುತ್ತೇವೆ. ನಿಧಾನವಾಗಿ ಈ ಸಂಖ್ಯೆ ಹೆಚ್ಚುತ್ತಿದೆ. ಸಿನಿಮಾರಂಗದಲ್ಲಿ ಕೂಡ ಕೆಲ ವಿಭಾಗಗಳಲ್ಲಿ ಮಹಿಳೆಯರು ತೊಡಗಿಸಿಕೊಂಡಿದ್ದಾರೆ" ಎಂದು ಶ್ರುತಿ ಹರಿಹರನ್ ತಿಳಿಸಿದ್ದಾರೆ.
"ಚಿತ್ರರಂಗಕ್ಕೆ ಬರುವವರಿಗೆ ಒಂದಷ್ಟು ಸ್ಕಿಲ್ಸ್ ಇರಬೇಕು. ಅದು ಪುರುಷರೇ ಆಗಿರಲಿ, ಮಹಿಳೆಯರೇ ಆಗಿರಲಿ. ಅದನ್ನು ಕಲಿತು ಕೆಲಸ ಮಾಡಲು ಧೈರ್ಯ ಮಾಡಬೇಕು, ಅದಕ್ಕೆ ಪೂರಕವಾದ ವೇದಿಕೆ ಸಿದ್ಧವಾಗಬೇಕು. ಮಹಿಳೆಯರು ಕನಸು ಕಾಣಲು ಬಿಡಬೇಕು. ಇದು ಸಾಧ್ಯವಾದರೆ ಎಲ್ಲಾ ಇಂಡಸ್ಟ್ರಿಯಲ್ಲಿ ಮಹಿಳೆಯರು ಮುಂದೆ ಬರುತ್ತಾರೆ. ಸಂಭಾವನೆ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ, ಅದು ಸುಲಭವಾಗಿ ಹೇಳಿ ಮುಗಿಸುವ ವಿಷಯವಲ್ಲ. ಮಹಿಳೆಯರಿಗೆ ಗಟ್ಟಿ ಪಾತ್ರಗಳನ್ನು ಬರೆಯಬೇಕು, ಈಗ ಓಟಿಟಿಗೆ ಬಂದು ಅದಕ್ಕೆ ಅವಕಾಶ ಹೆಚ್ಚಾಗಿದೆ. ನಿಧಾನವಾಗಿ ಅದು ಬದಲಾಗುತ್ತದೆ" ಎಂದು ನಟಿ ಶ್ರುತಿ ಹರಿಹರನ್ ಭರವಸೆ ವ್ಯಕ್ತಪಡಿಸಿದ್ದಾರೆ.

ನಿಧಿ ಸುಬ್ಬಯ್ಯ
"ಕನ್ನಡ ಚಿತ್ರರಂಗ ಅಂದ್ರೆ ನನಗೆ ಬಹಳ ಇಷ್ಟ. ಇಲ್ಲಿ ಕೆಲಸ ಮಾಡುವುದು ನಮ್ಮ ಕುಟುಂಬದ ಜೊತೆ ಕೆಲಸ ಮಾಡಿದಂತೆ ಇರುತ್ತದೆ. ಮೊದಲೆಲ್ಲಾ ತಂಡದಲ್ಲಿ ಮಹಿಳೆಯರು ಕಮ್ಮಿ ಇರುತ್ತಿದ್ದರು. ಈಗ ಹೆಚ್ಚಿಸಿದೆ. 'ಯುಐ' ಚಿತ್ರದಲ್ಲಿ ಒಬ್ಬರು ಮಹಿಳಾ ಛಾಯಾಗ್ರಾಹಕರು ಇದ್ದರು. ಅದನ್ನು ನೋಡಿ ಹೆಮ್ಮೆ ಎನಿಸಿತ್ತು. ಚಿತ್ರರಂಗದಲ್ಲಿ ಕೆಲಸ ಮಾಡಲು ವಾತಾವರಣ ಬಹಳ ಚೆನ್ನಾಗಿದೆ. ನಾನು ಚಿತ್ರರಂಗಕ್ಕೆ ಬಂದು 15 ವರ್ಷ ಆಯಿತು. ಅಂದಿಗೂ ಇಂದಿಗೂ ಸಾಕಷ್ಟು ಬದಲಾವಣೆ ಆಗಿದೆ" ಎಂದು ನಿಧಿ ಸುಬ್ಬಯ್ಯ ಹಂಚಿಕೊಂಡಿದ್ದಾರೆ.
"ಸಂಭಾವನೆ ವಿಚಾರದಲ್ಲಿ ಬದಲಾವಣೆ ಆಗಬೇಕು. ಇನ್ನುಳಿದಂತೆ ಎಲ್ಲವೂ ಚೆನ್ನಾಗಿದೆ. ಮಹಿಳೆಯರು ಕೆಲಸ ಮಾಡಲು ಕನ್ನಡ ಚಿತ್ರರಂಗ ಬಹಳ ಸುರಕ್ಷಿತವಾಗಿದೆ. ನಿಮ್ಮಲ್ಲಿ ಪ್ರತಿಭೆ ಇದ್ದರೆ ಅವಕಾಶಗಳು ಹುಡುಕಿಕೊಂಡು ಬರುತ್ತದೆ. ಮಹಿಳೆಯರಿಗೆ ಗಟ್ಟಿ ಪಾತ್ರಗಳನ್ನು ಬರೆಯಬೇಕು. ಬರೀ ಗ್ಲಾಮರ್‌ಗಾಗಿ ಬಳಸಿಕೊಳ್ಳುವುದಲ್ಲ, ಈ ಮಾತನ್ನು ಗಣೇಶ್ ಸರ್ ಇತ್ತೀಚೆಗೆ ಹೇಳುತ್ತಿದ್ದರು. 'ಪಂಚರಂಗಿ' ಚಿತ್ರದಲ್ಲಿ ನನಗೆ ಒಳ್ಳೆ ಪಾತ್ರ ಸಿಕ್ಕಿತ್ತು. ಬಳಿಕ ಅಂತಹ ಪಾತ್ರ ಸಿಗಲಿಲ್ಲ. ನಾನೇ ಒಂದು ಮಹಿಳಾ ಪ್ರಧಾನ ಚಿತ್ರಕ್ಕೆ ಕಥೆ ಬರೆಯುತ್ತಿದ್ದೇನೆ" ಎಂದು ನಿಧಿ ಸುಬ್ಬಯ್ಯ ಮಾಹಿತಿ ನೀಡಿದ್ದಾರೆ.
ರಾಧಿಕಾ ಚೇತನ್
"ನಾನು ಒಳ್ಳೆ ಒಳ್ಳೆ ತಂಡಗಳ ಜೊತೆ ಕೆಲಸ ಮಾಡಿದ್ದೇನೆ. ಮಹಿಳೆಯರಿಗೆ ಉತ್ತಮ ಶೌಚಾಲಯ ವ್ಯವಸ್ಥೆ ಇರಲ್ಲ. ಇದು ಎಲ್ಲಾ ಕಡೆ ಇರುವಂಥದ್ದು. ಚಿತ್ರರಂಗದಲ್ಲಿ ಸಹ ಇದೆ. ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಇದು ಮುಖ್ಯ. ಇದಕ್ಕೆ ಪುರುಷರು ಬೆಂಬಲವಾಗಿ ನಿಲ್ಲಬೇಕು. ಸಂಭಾವನೆ ತಾರತಮ್ಯ ಎನ್ನುವುದು ಚಿತ್ರರಂಗದಲ್ಲಿ ಇದ್ದಿದ್ದೆ. ಅದನ್ನು ಬದಲಾಯಿಸಲು ಅಷ್ಟು ಸುಲಭವಾಗಿ ಆಗುವುದಿಲ್ಲ. ಅದು ಬಿಟ್ಟು ಮೂಲಭೂತ ಸೌಲಭ್ಯ ಬಹಳ ಮುಖ್ಯವಾಗುತ್ತದೆ" ಎಂದು ನಟಿ ರಾಧಿಕಾ ಚೇತನ್ ಹೇಳುತ್ತಾರೆ.
ಮಾತು ಮುಂದುವರೆಸಿರುವ ರಾಧಿಕಾ "ಪಾತ್ರಗಳ ವಿಚಾರಕ್ಕೆ ಬಂದರೆ ಬೇಡಿಕೆಗೆ ತಕ್ಕಂತೆ ಪೂರೈಕೆ ಇರುತ್ತದೆ. ಮಹಿಳಾ ಪಾತ್ರಗಳನ್ನು ಜನ ಹೆಚ್ಚು ಬೆಂಬಲಿಸಿದಾಗ ಸಹಜವಾಗಿಯೇ ಅಂತಹ ಪಾತ್ರಗಳನ್ನು ಬರೆಯುತ್ತಾರೆ. ನಾನು ಇತ್ತೀಚೆಗೆ 'ವಾಟ್ ಗರ್ಲ್ಸ್ ವಾಂಟ್' ಎಂಬ ಸಿನಿಮಾ ನೋಡಿದ್ದೆ. ಅದನ್ನು ನಿರ್ದೇಶಿಸಿದ್ದು ಕೂಡ ಒಬ್ಬ ಮಹಿಳೆ. ಬಹಳ ಒಳ್ಳೆಯ ಸಿನಿಮಾ. ಅಂತಹ ಪ್ರಯತ್ನಗಳು ಆಗಬೇಕು. ಪ್ರೇಕ್ಷಕರು, ಕಲಾವಿದರು, ಫಿಲ್ಮ್ ಮೇಕರ್ಸ್ ಹೀಗೆ ಎಲ್ಲರ ಜವಾಬ್ದಾರಿ ಇದೆ. ಮಹಿಳಾ ಪ್ರಧಾನ ಸಿನಿಮಾ ಅಂತ್ಲೇ ಅಲ್ಲ, ಹೀರೊ ಓರಿಯಂಟೆಡ್ ಸಿನಿಮಾದಲ್ಲಿ ಕೂಡ ನಾಯಕಿಗೆ ಗಟ್ಟಿ ಪಾತ್ರ ಬರೆಯಬೇಕು. ನಾಯಕನ ಜೊತೆ ಸರಿಸಮನಾದ ಪಾತ್ರಗಳು ಬೇಕು" ಎಂದಿದ್ದಾರೆ.


Click it and Unblock the Notifications











