ಕಂಚಿನ ಕಂಠದ ಯಕ್ಷಗಾನ ಭಾಗವತ ಪ್ರಸಾದ್ ಬಲಪ ವಿಧಿವಶ: ಮೇರು ಪ್ರತಿಭೆಗೊಂದು ನುಡಿನಮನ

By ಎಂ.ಶಾಂತರಾಮ ಕುಡ್ವ

ಯಕ್ಷಗಾನದ ಖ್ಯಾತ ಭಾಗವತ‌ ಬಲಿಪ ಪ್ರಸಾದ್ (45) ನಿಧನರಾಗಿದ್ದಾರೆ. ಯಕ್ಷಗಾನದ ಏರು ಪದ್ಯದಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದ್ದ ಬಲಿಪ ಪ್ರಸಾದ್ ಭಾಗವತರು ಕಳೆದ ಒಂದು ವರ್ಷಗಳಿಂದ ಗಂಟಲಿನ ಕ್ಯಾನ್ಸರ್ ಗೆ ಒಳಗಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ನಿಧನರಾಗಿದ್ದಾರೆ.

ಮೂಡಬಿದಿರೆ ತಾಲೂಕಿನ ಮಾರೂರು ನಿವಾಸಿಯಾಗಿರುವ ಬಲಿಪ ಭಾಗವತರು ಕಟೀಲು ಮೇಳದ ಹಿರಿಯ ಭಾಗವತರಾಗಿದ್ದರು. ಯಕ್ಷಗಾನ ಬಲಿಪ ಭಾಗವತ ಪರಂಪರೆಯ ಮೇರು ಶಿಖರವಾಗಬೇಕಿದ್ದ ಪ್ರಸಾದ್ ಬಲಿಪರ ಅಗಲಿಕೆ ಇಡೀ ಯಕ್ಷ ಪ್ರೇಮಿಗಳಲ್ಲಿ ಧಿಗ್ಭ್ರಮೆ ಮೂಡಿಸಿದ್ದು, ಪ್ರಸಾದ್ ಬಲಿಪರ ಬಗ್ಗೆ ಯಕ್ಷಗಾನ ಸಂಘಟಕ ಶಾಂತರಾಮ ಕುಡ್ವ ನುಡಿ ನಮನ ಬರೆದಿದ್ದಾರೆ.

"ಸುಪ್ರಸಿದ್ಧ ಭಾಗವತರಾದ ಬಲಿಪ ಪ್ರಸಾದ್ ಭಟ್ ನಿದನರಾದ ಆಘಾತಕಾರಿ ವರದಿ ಆವರ ಹಾಗೂ ಯಕ್ಷಗಾನದ ಅಭಿಮಾನಿಗಳಲ್ಲಿ ಶೋಕ ತಂದಿದೆ. ಅಲ್ಪ ಕಾಲದ ಅಸೌಖ್ಯದಿಂದಾಗಿ, ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ, ನಿನ್ನೆ (ಮಾರ್ಚ್ 11) ಸಂಜೆ ನಿಧನರಾದ ವರದಿ, ಅವರ ಕುಟುಂಬಸ್ಥರಿಗೆ ಹಾಗೂ ಅಭಿಮಾನಿಗಳಿಗೆ ತೀವ್ರ ಶೋಕವನ್ನು ತಂದಿದೆ.

Yakshaghana Bhagawata Prasad Balapa Passed Away, Shantharam Kudva Article About Him

1976 ರಲ್ಲಿ ತೆಂಕುತಿಟ್ಟಿನ ಸುಪ್ರಸಿದ್ಧ ಭಾಗವತರಾದ ಬಲಿಪ ನಾರಾಯಣ ಭಾಗವತರು ಹಾಗೂ ಜಯಲಕ್ಷ್ಮಿ ದಂಪತಿಗಳ ನಾಲ್ಕನೇ ಸುಪುತ್ರರಾಗಿ ಜನಿಸಿದ ಪ್ರಸಾದರು, ತಮ್ಮ ತಂದೆಯವರಿಂದಲೇ ಭಾಗವತಿಕೆ ಕಲಿತರು . ತಮ್ಮ ತಂದೆಯ "ಬಲಿಪ ಶೈಲಿ" ಯನ್ನು ಕರಗತ ಮಾಡಿ, ರಾಗ, ತಾಲ ಹಾಗೂ ಲಯದ ಸೂಕ್ಷ್ಮತೆಯನ್ನು ಕರಗತ ಮಾಡಿಕೊಂಡರು. 1996 ರಲ್ಲಿ ತಮ್ಮ 20ನೇ ವಯಸ್ಸಿನಲ್ಲೇ ಕಟೀಲು ಮೇಳ ಸೇರಿ, ಮುಂದೆ ಕಟೀಲು ಎರಡನೇ ಮೇಳದ ಪ್ರಧಾನ ಭಾಗವತರಾದರು.‌ ಶ್ರೀದೇವಿ ಮಹಾತ್ಮೆ, ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ, ಲಲಿತೋಪಖ್ಯಾನ ಸಹಿತ ಹೆಚ್ಚಿನ ಎಲ್ಲಾ ಪೌರಾಣಿಕ ಪ್ರಸಂಗಗಳಲ್ಲಿ, ತಮ್ಮ ತಂದೆಯವರಂತೆಯೇ, ಹಿಡಿತ ಸಾಧಿಸಿ ಕಂಠಪಾಟದಿಂದಲೇ ಭಾಗವತಿಕೆ ಮಾಡುವ ಕೌಶಲ್ಯ ಸಾಧಿಸಿದ್ದರು. ಶ್ರಂಗಾರ, ಕರುಣ, ವೀರ, ಶಾಂತ ರಸಗಳ ಬಳಕೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಪ್ರಸಂಗಗಳ ಯಶಸ್ಸಿಗೆ ಕಾರಣರಾಗಿದ್ದರು.

ಕಂಚಿನ ಕಂಠ ಎಂದೇ ಹೇಳಬಹುದಾದ ಪ್ರಸಾದ್ ಬಲಿಪರು ಹಾಡುವ ಏರು ಸ್ವರದ ಪದ್ಯಗಳು ಶ್ರೋತೃಗಳ ಕಿವಿಗಳಲ್ಲಿ ಇನ್ನೂ ಅನುರುಣಿಸುತ್ತಿದೆ ಎಂದರೆ ಅದು ಉತ್ಪ್ರೇಕ್ಷೆಯ ಮಾತಾಗಲಾರದು. ಕಪ್ಪು ಮೂರು ಅಥವಾ ಬಿಳಿ ನಾಲ್ಕರ ಶ್ರುತಿಯಲ್ಲಿ ಹಾಡುವ ಪ್ರಸಾದರ ಭಾಗವತಿಕೆ ಆಸ್ವಾದಿಸುವುದೆಂದರೆ ಕರ್ಣಾನಂದಕರ. ಪೌರಾಣಿಕ ಕಥೆ, ಪ್ರಸಂಗದ ನಡೆ, ರಂಗ ಪ್ರಯೋಗಗಳ ಬಗ್ಗೆ ಅಪಾರ ಜ್ಞಾನ ಹೊಂದಿ, ಸಹ ಕಲಾವಿದರ ಮೆಚ್ಚುಗೆಗೆ ಪಾತ್ರರಾಗಿದ್ದರು. ಸರಳ, ಸಜ್ಜನಿಕೆಯ ವ್ಯಕ್ತಿತ್ವದ ಪ್ರಸಾದರು, ಅಜಾತ ಶತ್ರು ಎಂದೇ ಗುರುತಿಸಿಕೊಂಡಿದ್ದರು. ಮಳೆಗಾಲದ ಯಕ್ಷಗಾನ ಪ್ರದರ್ಶನ, ನಾಟ್ಯ ವೈಭವಗಳ ಪ್ರದರ್ಶನಗಳಿಗೆ ಅತೀ ಬೇಡಿಕೆಯ ಭಾಗವತರಾಗಿದ್ದರು. ಯಕ್ಷಗಾನದ ಹಾಡುಗಳಿಗೆ ಛಂದಸ್ಸೇ ಪ್ರಧಾನ ಎಂಬ ಮನೋಭಾವದ ಪ್ರಸಾದರು, ತಮ್ಮ ತಂದೆಯಂತೆಯೇ, ಪ್ರಸಂಗದ ಹಾಡುಗಳ ಪದ ಛೇದ ಮಾಡದೇ, ಛಂದೋಬದ್ಧವಾಗಿಯೇ ಹಾಡಬೇಕು ಎಂದು ಸಾಧಿಸಿ ತೋರಿಸಿದ ಅಪ್ರತಿಮ ಭಾಗವತೋತ್ತಮರು. ಪರಂಪರೆಯ ಭಾಗವತಿಕೆ ಎಂದರೆ, ಅದೊಂದು ತಪಸ್ಸು, ಸಾಧನೆ ಎಂದು ನಿಷ್ಠವಾಗಿ ಅಳವಡಿಸಿದ ಸಾಧಕರು‌. ಯಕ್ಷಗಾನದ ಹೆಸರಿನಲ್ಲಿ ಆಧುನಿಕ ಎಂದು ಹೆಸರಿಸಬಹುದಾದ ಪ್ರಕ್ರಿಯೆಗಳಿಗೆ ತಲೆ ಬಾಗದ ಶ್ರೇಷ್ಠ ಭಾಗವತರು.

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಮಂಗಳೂರಿನ ಪುರಭವನದಲ್ಲಿ ಮುಂಜಾವದ ಕಾಲದಲ್ಲಿ "ಕರ್ಣಾರ್ಜುನ ಕಾಳಗ" ಪ್ರಸಂಗದ ಪ್ರದರ್ಶನ ಇತ್ತು. ಪ್ರಸಾದ್ ಬಲಿಪರು ಭಾಗವತಿಕೆಗೆ ಕುಳಿತು "ಇತ್ತಲಾ ಕರ್ಣಾರ್ಜುನರಿಗೆ ಹತ್ತಿತು ಕಾಳಗ" ಎಂಬ ಪದ್ಯ ಹಾಡಿದಾಗ, ನನಗೆ, ಪುರಭವನವೇ ಬಿರಿಯಿತೋ ಎಂಬ ಭಾಸವಾಗಿತ್ತು. ಅಂತಹ ಏರುಕಂಠ ಪ್ರಸಾದ್ ಬಲಿಪರದ್ದಾಗಿತ್ತು.

25 ವರ್ಷಗಳ ಕಾಲ ಕಟೀಲು ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದ ಪ್ರಸಾದ್ ಬಲಿಪರು ಕಳೆದ ವರ್ಷದ ತಿರುಗಾಟದ ನಂತರ ವಿಧಿಯ ಕ್ರೂರ ದೃಷ್ಟಿಯಿಂದಾಗಿ ಅಸೌಖ್ಯಕ್ಕೆ ಒಳಗಾಗಿ, ಈ ವರ್ಷದ ತಿರುಗಾಟ ಮಾಡಿರಲಿಲ್ಲ. ಆದರೂ, ಕಟೀಲಿನಲ್ಲಿ ಕಳೆದ ಅಷ್ಟಮಿಯ ಯಕ್ಷಗಾನದ ಪ್ರದರ್ಶನಕ್ಕೆ ಸ್ವಲ್ಪ ಭಾಗವತಿಕೆ ಹಾಗೂ ಮೊನ್ನೆಯ ದಸರಾ ಸಂದರ್ಭದಲ್ಲಿ ಮೂಡಬಿದಿರೆಯ ಶ್ರೀ ಮಹಾಮ್ಮಾಯೀ ದೇವಸ್ಥಾನದಲ್ಲಿ ಮೂರ್ನಾಲ್ಕು ಭಜನೆಗಳನ್ನು ಹಾಡಿ, ಚೇತರಿಸುವ ಲಕ್ಷಣ ತೋರಿದ್ದುದು ಅವರ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿತ್ತು. ದೇಶ ವಿದೇಶಗಳಲ್ಲೂ ತಮ್ಮ ಭಾಗವತಿಕೆಯ ಕಂಪನ್ನು ಹರಡಿಸಿದ ಪ್ರಸಾದ್ ಬಲಿಪರು ನೂರಾರು ಸನ್ಮಾನಗಳನ್ನು ಪಡೆದಿದ್ದರು .

ಕೊರೋನಾದಿಂದಾಗಿ ಕಳೆದ ಎರಡು ವರ್ಷಗಳಿಂದ ನಮ್ಮ ಮೂಡುಬಿದಿರೆಯ ಯಕ್ಷಸಂಗಮದ ಸಂಮಾನ - ಕೂಟ ನಡೆದಿರಲಿಲ್ಲ. ಆದರೂ, ಈ ವರ್ಷ ನಾವು ಕೂಟ ನೆರವೇರಿಸದಿದ್ದರೂ, ಯಕ್ಷಸಂಗಮದ ವತಿಯಿಂದ ಬಲಿಪ ಪ್ರಸಾದ್ ಬಲಿಪರಿಗೆ ಅವರ ಸ್ವಗೃಹದಲ್ಲೇ, ತಂದೆಯವರೊಂದಿಗೆಯೇ ಅವರಿಗೆ ಸನ್ಮಾನ ಮಾಡಿದ್ದೆವು. ಆಗ ತುಂಬಾ ಉತ್ಸಾಹದಿಂದ ನಮ್ಮನ್ನು ಸ್ವಾಗತಿಸಿ, ಆದರಿಸಿ, ಸತ್ಕರಿಸಿದ ಪ್ರಸಾದರು, ತಾವೇ ಹಲವಾರು ಫೋಟೋಗಳನ್ನು ಕ್ಲಿಕ್ಕಿಸಿ, ತಮ್ಮ ಮನೆಯಲ್ಲಿ ನೆಟ್ವರ್ಕ್ ಸಮಸ್ಯೆಯಿದ್ದ ಕಾರಣ, ಮನೆಯ ಹತ್ತಿರದ ಎತ್ತರದ ಪ್ರದೇಶಕ್ಕೆ ಹೋಗಿ, ಆ ಫೋಟೋಗಳನ್ನು ನನಗೆ ವಾಟ್ಸಾಪ್ ಮೂಲಕ ಕೂಡಲೇ ಹಂಚಿ ಸಂಭ್ರಮಿಸಿದ ಆ ಕ್ಷಣಗಳು ಈಗಲೂ ನನ್ನ ಮನಸ್ಸಿನಿಂದ ಮರೆಯಾಗಿಲ್ಲ. ಆ ಸಂದರ್ಭ ಈಗಲೂ ನನ್ನ ಸ್ಮ್ರತಿಪಟಲದಲ್ಲಿ ಸ್ಥಾಯಿಯಾಗಿದೆ. ಸರಳ ವ್ಯಕ್ತಿತ್ವದ ಪ್ರಸಾದರು ನಮ್ಮನ್ನು ಅಗಲಿದ್ದಾರೆ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಲೂ ಇಲ್ಲ. ತಮ್ಮ ತಂದೆ 85 ವರ್ಷದ ಯಕ್ಷರಂಗದ ದಂತಕಥೆ, ಯಕ್ಷರಂಗದ. ಅಪೂರ್ವ ಸಂಪನ್ಮೂಲ ವ್ಯಕ್ತಿ ಎನಿಸಿದ ಬಲಿಪ ನಾರಾಯಣ ಭಾಗವತರು, ತಮ್ಮ ಧರ್ಮಪತ್ನಿ, ಮೂವರು ಹೆಣ್ಣು ಮಕ್ಕಳು, ಮಾಧವ ಬಲಿಪ, ಶಿವಶಂಕರ ಬಲಿಪ ( ಇವರೂ ಭಾಗವತರು), ಶಶಿಧರ ಬಲಿಪ ಮೂವರು ಸಹೋದರರು ಸಹಿತ ಬಂಧು ಬಳಗ ಹಾಗೂ ಸಾವಿರಾರು ಅಭಿಮಾನಿಗಳನ್ನು ಅಗಲಿರುವ ಪ್ರಸಾದ್ ಬಲಿಪರಿಗೆ ದಿವ್ಯ ಸಾಯುಜ್ಯ ದೊರಕಲಿ ಹಾಗೂ ಅವರ ಕುಟುಂಬಸ್ಥರಿಗೆ ಹಾಗೂ ಅಭಿಮಾನಿಗಳಿಗೆ ಈ ವಿಷಾದದ ಸುದ್ದಿಯ ಶೋಕವನ್ನು ಭರಿಸುವ ಶಕ್ತಿ ನೀಡಲಿ ಎಂದು ಯಕ್ಷಸಂಗಮ ಮೂಡುಬಿದಿರೆ ಹಾಗೂ ಸರ್ವ ಕಲಾಭಿಮಾನಿಗಳ ಪರವಾಗಿ ಕಲಾಮಾತೆ ಹಾಗೂ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ .

ಯಕ್ಷಗಾನ ಪ್ರೇಮಿ,ಯಕ್ಷಗಾನ ಸಂಘಟಕ ಎಂ.ಶಾಂತರಾಮ ಕುಡ್ವ ಮೂಡುಬಿದಿರೆ ನುಡಿನಮನ ಬರೆದಿದ್ದಾರೆ.

More from Filmibeat

English summary
Yakshaghana Bhagawata Prasad Balapa passed away yesterday. He was one of the best Bhagawatha. Here is a article about him by Shantharam Kudva.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X