2025ರ ವರ್ಷ ಯಾವೆಲ್ಲಾ ಮಹತ್ತರ ವಿದ್ಯಮಾನಗಳಿಗೆ ಸಾಕ್ಷಿ ಆಗಲಿದೆ ಗೊತ್ತಾ?
2024ಕ್ಕೆ ಗುಡ್‌ಬೈ ಹೇಳಿ ಜನ 2025 ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಪ್ರತಿವರ್ಷ ಚಿತ್ರರಂಗದಲ್ಲಿ ಕೂಡ ಏಳುಬೀಳು ಕಾಮನ್. ಅದನ್ನೆಲ್ಲಾ ಮೀರಿ ಮುಂದೆ ಹೊಸ ಹೊಸ ಸಿನಿಮಾ ಕನಸುಗಳನ್ನು ಕಂಡು, ಅದನ್ನು ಈಡೇರಿಸಿಕೊಳ್ಳಲು ಫಿಲ್ಮ್ ಮೇಕರ್ಸ್ ಮನಸ್ಸು ಮಾಡುತ್ತಾರೆ. ಕನ್ನಡ ಚಿತ್ರರಂಗದ ಮಟ್ಟಿಗೆ ಕಳೆದ ವರ್ಷ ಕೊಂಚ ಸಿಹಿ, ಕೊಂಚ ಕಹಿ ಉಳಿಸಿತ್ತು.
ಈ ವರ್ಷ ಕನ್ನಡದ 'ಟಾಕ್ಸಿಕ್' ಹಾಗೂ 'ಕಾಂತಾರ-1' ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗುತ್ತಿವೆ. ಅಕ್ಕಪಕ್ಕದ ಇಂಡಸ್ಟ್ರಿಗಳಲ್ಲಿ ಕೂಡ ಬಿಗ್ ಪ್ರಾಜೆಕ್ಟ್‌ಗಳು ಸಿದ್ಧವಾಗುತ್ತಿವೆ. ಸಂಕಷ್ಟಕ್ಕೆ ಸಿಲುಕಿರುವ ಬಾಲಿವುಡ್ ಕೂಡ ಕಂಬ್ಯಾಕ್ ಮಾಡುವ ಲೆಕ್ಕಾಚಾರದಲ್ಲಿದೆ. ದೊಡ್ಡ ದೊಡ್ಡ ಸಿನಿಮಾಗಳ ನಿರ್ಮಾಣ ಮಾತ್ರವಲ್ಲ ಭಾರೀ ವಿದ್ಯಮಾನಗಳಿಗೆ 2025ರ ವರ್ಷ ಸಾಕ್ಷಿ ಆಗುವ ನಿರೀಕ್ಷೆಯಿದೆ.

ಕನ್ನಡ ಚಿತ್ರರಂಗದ ಮಟ್ಟಿಗೆ ಕೂಡ 2025 ಬಹಳ ಮಹತ್ವ ಎನ್ನುವಂತಾಗಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಸಿಲುಕಿಕೊಂಡಿದ್ದಾರೆ. ಸದ್ಯ ಜಾಮೀನು ಪಡೆದು ಜೈಲಿನಿಂದ ಹೊರಗಡೆ ಬಂದಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಮತ್ತೆ ಯಾವಾಗ ಬಣ್ಣ ಹಚ್ಚುತ್ತಾರೆ ಎಂದು ಅಭಿಮಾನಿಗಳು ಕಾಯುವಂತಾಗಿದೆ. ಇನ್ನು ಭಾರತೀಯ ಚಿತ್ರರಂಗದ ಮಟ್ಟಿಗೆ ಈ ವರ್ಷ ಯಾವೆಲ್ಲಾ ಮಹತ್ವದ ಬೆಳವಣಿಗೆ ಆಗಬಹುದು ಬನ್ನಿ ನೋಡೋಣ.
ಚಿತ್ರರಂಗಕ್ಕೆ ವಿಜಯ್ ಗುಡ್‌ಬೈ
ತಮಿಳು ನಟ ದಳಪತಿ ವಿಜಯ್ ಚಿತ್ರರಂಗದಿಂದ ದೂರಾಗುವ ಸಾಧ್ಯತೆಯಿದೆ. ಈಗಾಗಲೇ 'ತಮಿಳಗ ವೆಟ್ರಿ ಕಳಗಂ' ಎಂಬ ಪಕ್ಷ ಸ್ಥಾಪಿಸಿದ್ದಾರೆ. ಮುಂದಿನ ವರ್ಷ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ದಳಪತಿ ವಿಜಯ್ ಕಣಕ್ಕಿಳಿಸುತ್ತಿದ್ದಾರೆ. ಸದ್ಯ ಒಂದೇ ಒಂದು ಚಿತ್ರವನ್ನು ಕೊನೆಯದಾಗಿ ಒಪ್ಪಿಕೊಂಡಿದ್ದಾರೆ. ಕೆವಿಎನ್ ಬ್ಯಾನರ್‌ನಲ್ಲಿ ವಿನೋದ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ಬಳಿಕ ದಳಪತಿ ಸಕ್ರಿಯ ರಾಜಕೀಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಬಳಿಕ ಸಿನಿಮಾಗಳಲ್ಲಿ ನಟಿಸುವುದು ಅನುಮಾನ ಎನ್ನುವಂತಾಗಿದೆ.
ಮೌಳಿ- ಮಹೇಶ್ ಸಿನಿಮಾ
'RRR' ಬಳಿಕ ರಾಜಮೌಳಿ ಹೊಸ ಸಿನಿಮಾ ಘೋಷಿಸಿಲ್ಲ. ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡಲು ಮುಂದಾಗಿದ್ದಾರೆ. 1000 ಕೋಟಿ ರೂ. ಬಜೆಟ್‌ನಲ್ಲಿ 2 ಭಾಗಗಳಾಗಿ ಸಿನಿಮಾ ತೆರೆಗೆ ಬರುತ್ತೆ ಎಂದು ಹೇಳಲಾಗುತ್ತಿದೆ. ಇದು ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಸಿನಿಮಾ ಎಂದು ಚರ್ಚೆ ನಡೀತಿದೆ. ಹಾಲಿವುಡ್ ಸಿನಿಮಾಗಳ ರೇಂಜಿಗೆ ಚಿತ್ರ ಮಾಡಲು ಜಕ್ಕಣ್ಣ ತಯಾರಿ ನಡೆಸಿದ್ದಾರೆ. ಇದೇ ತಿಂಗಳು ಸಿನಿಮಾ ಸೆಟ್ಟೇರುವ ನಿರೀಕ್ಷೆಯಿದೆ. 1000 ಕೋಟಿ ರೂ. ಬಜೆಟ್ ಸಿನಿಮಾ ಎನ್ನುವುದು ನಿಜಕ್ಕೂ ಹುಬ್ಬೇರಿಸುವಂಥದ್ದು.

ಹೊಂಬಾಳೆ ವೆಬ್ ಸೀರಿಸ್
ಕನ್ನಡದಲ್ಲಿ ಓಟಿಟಿಗೆ ಕಂಟೆಂಟ್ ಕಮ್ಮಿ ಇದೆ. ದೊಡ್ಡ ಸಿನಿಮಾಗಳನ್ನು ಬಿಟ್ಟರೆ ಚಿಕ್ಕ ಸಿನಿಮಾ ಖರೀದಿಸಲು ಓಟಿಟಿ ಸಂಸ್ಥೆಗಳು ಮುಂದೆ ಬರುತ್ತಿಲ್ಲ. ಕನ್ನಡದಲ್ಲಿ ವೆಬ್ ಸೀರಿಸ್ ನಿರ್ಮಾಣವೇ ಆಗುತ್ತಿಲ್ಲ. ಹೊಂಬಾಳೆ ಸಂಸ್ಥೆ ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಿಸುತ್ತಿದೆ. ಮುಂದೆ ವೆಬ್ ಸೀರಿಸ್ ಕೈಗೆತ್ತಿಕೊಳ್ಳುವ ಬಗ್ಗೆಯೂ ವಿಜಯ್ ಕಿರಗಂದೂರ್ ಸುಳಿವು ಕೊಟ್ಟಿದ್ದಾರೆ. ಈ ಬಗ್ಗೆ ನೆಟ್‌ಫ್ಲಿಕ್ಸ್ ಜೊತೆ ಚರ್ಚಿಸುತ್ತಿರುವುದಾಗಿ ತಿಳಿಸಿದ್ದಾರೆ. ಇದೇ ವರ್ಷ ಹೊಂಬಾಳೆ ಸಂಸ್ಥೆ ವೆಬ್ ಸೀರಿಸ್ ನಿರ್ಮಾಣಕ್ಕೆ ಕೈ ಹಾಕುವ ಸಾಧ್ಯತೆ ದಟ್ಟವಾಗಿದೆ.
ಬಾಲಿವುಡ್‌ಗೆ ಯಶ್ ಲಗ್ಗೆ
ರಾಕಿಂಗ್ ಸ್ಟಾರ್ ಯಶ್ ಈಗ ನಿರ್ಮಾಪಕರು ಆಗಿದ್ದಾರೆ. 'ಟಾಕ್ಸಿಕ್' ಚಿತ್ರದಲ್ಲಿ ನಟಿಸುವುದರ ಜೊತೆಗೆ ನಿರ್ಮಾಣಕ್ಕೂ ಕೈ ಜೋಡಿಸಿದ್ದಾರೆ. ಬಾಲಿವುಡ್‌ನಲ್ಲಿ 'ರಾಮಾಯಣ' ಚಿತ್ರ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಅಷ್ಟೇ ಅಲ್ಲ, ರಾವಣನ ಪಾತ್ರದಲ್ಲಿ ಅಬ್ಬರಿಸಲು ಮುಂದಾಗಿದ್ದಾರೆ. ಎರಡು ಭಾಗಗಳಾಗಿ ಸಿನಿಮಾ ತೆರೆಗೆ ಬರಲಿದೆ. ಈಗಾಗಲೇ ಕನ್ನಡದ ಕೆಲ ಕಲಾವಿದರು ಹಿಂದಿ ಸಿನಿಮಾಗಳಲ್ಲಿ ನಟಿಸಿ ಬಂದಿದ್ದಾರೆ. ಆದರೆ ಯಶ್ ದೊಡ್ಡದಾಗಿಯೇ ಬಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಡಲಿದ್ದಾರೆ. ಇದೇ ವರ್ಷ ರಾವಣನಾಗಿ ಯಶ್ ಲುಕ್ ರಿವೀಲ್ ಆಗುವ ನಿರೀಕ್ಷೆಯಿದೆ. ಮುಂದಿನ ವರ್ಷ ದೀಪಾವಳಿಗೆ ಸಿನಿಮಾ ಮೊದಲ ಭಾಗ ತೆರೆಗೆ ಬರಲಿದೆ.


Click it and Unblock the Notifications











