"ರಕ್ಷಣಾತ್ಮಕ ಆಟ ಅಲ್ಲ.. ನುಗ್ಗಿ ಹೊಡೆಯೋದ್ರಲ್ಲೇ ನನಗೆ ನಂಬಿಕೆ"- ಯಶ್ ಹೇಳಿಕೆ ವೈರಲ್
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಹಾಗೂ 'ರಾಮಾಯಣ' ಸಿನಿಮಾಗಳು ಈ ವರ್ಷ ತೆರೆಗೆ ಬರ್ತಿದೆ. ಈದ್ ಸಂಭ್ರಮದಲ್ಲಿ ಬಿಡುಗಡೆ ಆಗುತ್ತಿರುವ 'ಟಾಕ್ಸಿಕ್' ಚಿತ್ರಕ್ಕೆ ಬಾಲಿವುಡ್ 'ಧುರಂಧರ್- 2' ಸವಾಲು ಹಾಕ್ತಿದೆ. ಬಾಕ್ಸಾಫೀಸ್‌ನಲ್ಲಿ ಎರಡು ಸಿನಿಮಾಗಳ ನಡುವೆ ಭಾರೀ ಕ್ಲ್ಯಾಶ್ ನಡೆಯಲಿದೆ.
ಮಾರ್ಚ್ 19ರಂದು ಎರಡೂ ಸಿನಿಮಾಗಳು ಬಿಡುಗಡೆ ಆಗುವುದು ಖಚಿತವಾಗಿದೆ. ಈದ್ ವೀಕೆಂಡ್ ಅವಕಾಶ ಮಿಸ್ ಮಾಡಿಕೊಳ್ಳಲು ಯಾರೊಬ್ಬರು ಸಿದ್ಧರಿಲ್ಲ. ತೆಲುಗಿನ 'ಡಾಕೂಟ್: ಎ ಲವ್ ಸ್ಟೋರಿ' ಸಿನಿಮಾ ಕೂಡ ಅದೇ ದಿನ ಬಿಡುಗಡೆ ಆಗಲಿದೆ. 'ಧುರಂಧರ್- 2' ಎದುರು 'ಟಾಕ್ಸಿಕ್' ರಿಲೀಸ್ ತಪ್ಪು ನಿರ್ಧಾರ ಎನ್ನುವ ಚರ್ಚೆ ಶುರುವಾಗಿದೆ. ಖ್ಯಾತ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಸೇರಿ ಕೆಲವರು ಇದೇ ರೀತಿ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಯಶ್ ಯಾವುದಕ್ಕೂ ಹೆದರುವವರಲ್ಲ ಎಂದು ಅಭಿಮಾನಿಗಳು ತಿರುಗೇಟು ನೀಡುತ್ತಿದ್ದಾರೆ.

ಬಾಕ್ಸಾಫೀಸ್ ಕ್ಲ್ಯಾಶ್ ಬಗ್ಗೆ ಈ ಹಿಂದೆ ನಟ ಯಶ್ ನೀಡಿದ್ದ ಹೇಳಿಕೆಗಳು ವೈರಲ್ ಆಗ್ತಿದೆ. "ಕರ್ನಾಟಕದಲ್ಲಿ ನನ್ನ ಸಿನಿಮಾ ಬಿಡುಗಡೆ ಆಗುವಾಗ ಬೇರೆ ಯಾವುದೇ ಸಿನಿಮಾ ಬಂದ್ರು ನಾನು ತಲೆಕೆಡಿಸಿಕೊಳ್ಳಲ್ಲ. ಅದು ನನ್ನ ಸಿನಿಮಾ ನಾನು ರಿಲೀಸ್ ಮಾಡ್ತೀನಿ, ಉಳಿದವರು ಆ ಬಗ್ಗೆ ಯೋಚಿಸಬೇಕು" ಎಂದು ಯಶ್ ಹೇಳಿದ್ದ ವೀಡಿಯೋವನ್ನು ಅಭಿಮಾನಿಗಳು ತೇಲಿ ಬಿಟ್ಟಿದ್ದಾರೆ.
ಮತ್ತೊಂದು ಸಂದರ್ಶನದಲ್ಲಿ ಕೂಡ ನಟ ಯಶ್ ಬಾಕ್ಸಾಫೀಸ್ ಕ್ಲ್ಯಾಶ್ ಬಗ್ಗೆ ಮಾತನಾಡಿದ್ದರು. "ರಕ್ಷಣಾತ್ಮಕ ಆಟದಲ್ಲಿ ನನಗೆ ನಂಬಿಕೆ ಇಲ್ಲ. ಬೇರೆ ಸಿನಿಮಾಗಳು ಬರ್ತಿವೆ ಅಂತ ಹೆದರೋದಲ್ಲ. ಬೇರೆ ಭಾಷೆಯವರು ಇಲ್ಲಿ ಬಂದು ಸಿನಿಮಾ ರಿಲೀಸ್ ಮಾಡಲಿ ಹೆದರಬೇಕು. ಅದೇ ರೀತಿ ಬೇರೆ ಭಾಷೆಗೆ ನಮ್ಮ ಸಿನಿಮಾ ಬಿಟ್ರು ಧೈರ್ಯವಾಗಿ ನಮ್ಮ ಸಿನಿಮಾ ಅಂತ ಎದೆ ತಟ್ಟಿಕೊಂಡು ಹೇಳುವಂತಾಗಬೇಕು. ನನಗೆ ನುಗ್ಗಿ ಹೊಡೆಯೋದ್ರಲ್ಲಿ ನಂಬಿಕೆ ಜಾಸ್ತಿ" ಎಂದು ಯಶ್ ಹೇಳಿದ್ದರು.
'ಧುರಂಧರ್- 2' ಚಿತ್ರಕ್ಕೆ 'ಟಾಕ್ಸಿಕ್' ಚಿತ್ರತಂಡ ಹೆದರುವ ಮಾತೇಯಿಲ್ಲ. ಈ ಹಿಂದೆ ಸಿನಿಮಾ ರಿಲೀಸ್ ಡೇಟ್ ಪೋಸ್ಟ್‌ಪೋನ್ ಆಗುತ್ತದೆ ಎಂದಾಗಲೂ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಸ್ಪಷ್ಟನೆ ನೀಡಿತ್ತು. ಇತ್ತೀಚೆಗೆ ಚಿತ್ರದಲ್ಲಿ ಕಿಯಾರಾ ಅದ್ವಾನಿ, ನಯನತಾರಾ, ಹುಮಾ ಖುರೇಷಿ ಪಾತ್ರಗಳ ಪರಿಚಯ ಮಾಡಿ ಪೋಸ್ಟರ್ ರಿವೀಲ್ ಮಾಡಿದ್ದರು. ಅದರಲ್ಲಿ ಕೂಡ ಮಾರ್ಚ್ 19ಕ್ಕೆ ಸಿನಿಮಾ ರಿಲೀಸ್ ಎಂದು ಚಿತ್ರತಂಡ ಖಚಿತಪಡಿಸಿದೆ. ಮುಂದಿನ ವಾರ (ಜನವರಿ 8) ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಹೊಸ ಟೀಸರ್ ಬಿಡುಗಡೆಗೆ ಸಿದ್ಧತೆ ನಡೀತಿದೆ.
ಬಹುಕೋಟಿ ವೆಚ್ಚದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಟಾಕ್ಸಿಕ್' ಸಿನಿಮಾ ನಿರ್ಮಾಣ ಆಗ್ತಿದೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ರವಿ ಬಸ್ರೂರು ಸಂಗೀತ, ರಾಜೀವ್ ರವಿ ಛಾಯಾಗ್ರಹಣ ಚಿತ್ರಕ್ಕಿದೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಚಿತ್ರಕ್ಕೆ ಹಣ ಹೂಡಿದ್ದಾರೆ.
ಈದ್ ಸಂಭ್ರಮದಲ್ಲಿ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಮಾಡುವುದಾಗಿ ಬಹಳ ಹಿಂದೆ ಘೋಷಿಸಲಾಗಿತ್ತು. ಆ ಸಮಯಕ್ಕೆ ಯಾವುದೇ ದೊಡ್ಡ ಸಿನಿಮಾ ಬರಲ್ಲ ಎಂದು ಭಾವಿಸಲಾಗಿತ್ತು. 'ಲವ್ & ವಾರ್' ಹಾಗೂ 'ಬ್ಯಾಟಲ್ ಆಫ್ ಗಲ್ವಾರ್' ಚಿತ್ರಗಳು ಬಿಡುಗಡೆ ಆಗುತ್ತದೆ ಎಂದು ಹೇಳಲಾಗಿತ್ತು. ಬಳಿಕ ಅದು ಸುಳ್ಳು ಎನ್ನುವುದು ಖಚಿತವಾಗಿತ್ತು. ಆದರೆ ದಿಢೀರನೆ 'ಧುರಂಧರ್- 2' ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿತ್ತು.
ಆದಿತ್ಯಧರ್ ನಿರ್ದೇಶನದಲ್ಲಿ ರಣ್ವೀರ್ ಸಿಂಗ್, ಅಕ್ಷಯ್ ಖನ್ನಾ ನಟನೆಯ 'ಧುರಂಧರ್' ಚಿತ್ರ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. 25 ದಿನಗಳಲ್ಲಿ 1000 ಕೋಟಿ ರೂ. ಕಲೆಕ್ಷನ್ ಮಾಡಿ ಹುಬ್ಬೇರಿಸಿದೆ. ಸೀಕ್ವೆಲ್ ಅದಕ್ಕಿಂತ ದೊಡ್ಡದಾಗಿ ಸದ್ದು ಮಾಡುವ ನಿರೀಕ್ಷೆಯಿದೆ. ಅದೇ ಕಾರಣಕ್ಕೆ ಎರಡೂ ಸಿನಿಮಾಗಳ ನಡುವೆ 'ಟಾಕ್ಸಿಕ್' ಹಾಗೂ 'ಧುರಂಧರ್'-2 ಬಾಕ್ಸಾಫೀಸ್ ಕ್ಲ್ಯಾಶ್ ಬಗ್ಗೆ ಕೆಲವರು ಮಾತನಾಡುತ್ತಿದ್ದಾರೆ. ಆದರೆ ಯಶ್ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಂಡಂತೆ ಕಾಣ್ತಿಲ್ಲ. ತಮ್ಮ ಸಿನಿಮಾ ಮೇಲೆ ನಂಬಿಕೆ ಇರುವಾಗ ಭಯ ಯಾಕೆ?


Click it and Unblock the Notifications











