ಫಾರ್ಮ್‌ಹೌಸ್ ಹೊಂದಿರುವ ಕನ್ನಡ ತಾರೆಯರು; ಎಲ್ಲೆಲ್ಲಿದೆ ? ಎಷ್ಟೆಷ್ಟು ಎಕರೆ ಇದೆ ಗೊತ್ತಾ?
ಚಿನ್ನ ಹಾಗೂ ಭೂಮಿ ಮೇಲೆ ಹೂಡಿಕೆ ಮಾಡಿದರೆ ಮೋಸ ಆಗಲ್ಲ, ಇದರ ಬೆಲೆ ಕಮ್ಮಿ ಆಗಲ್ಲ. ಅದೇ ಕಾರಣಕ್ಕೆ ಬಹುತೇಕರು ಇವೆರಡರ ಮೇಲೆ ಹೆಚ್ಚು ಹೆಚ್ಚು ಹಣ ಹೂಡಿಕೆ ಮಾಡುತ್ತಾರೆ. ಇನ್ನು ಚಿತ್ರವೊಂದಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುವ ಕಲಾವಿದರು ಕೂಡ ಎಕರೆಗಟ್ಟಲೆ ಭೂಮಿ ಖರೀದಿಸುತ್ತಾರೆ.
ರಿಯಲ್ ಎಸ್ಟೇಟ್ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಭೂಮಿಗೆ ಈಗ ಚಿನ್ನದ ಬೆಲೆ. ಹಳ್ಳಿ ಭಾಗಗಳಲ್ಲಿ ರೈತರು ಜಮೀನು ಮಾರಾಟ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ 4 ಎಕರೆ ಭೂಮಿ ಇದ್ದವರೇ ನಿಜವಾದ ಶ್ರೀಮಂತರು ಎಂದು ನಟ ಚಿಕ್ಕಣ್ಣ ಹಿಂದೆ ಹೇಳಿದ್ದರು. ಅದು ನಿಜ ಕೂಡ. ಸ್ಟಾರ್ ನಟ-ನಟಿಯರು ಕೂಡ ಸಾಕಷ್ಟು ಭೂಮಿ ಖರೀದಿಸುತ್ತಿದ್ದಾರೆ.

ಶ್ರೀಮಂತರು ಫಾರ್ಮ್‌ಹೌಸ್‌ಗಳನ್ನು ನಿರ್ಮಿಸಿಕೊಳ್ಳುವುದು ಹೊಸದೇನು ಅಲ್ಲ. ಬಿಡುವು ಸಿಕ್ಕ ಕೂಡಲೇ ನಗರದ ಜಂಜಾಟ ಬಿಟ್ಟು ದೂರದ ಫಾರ್ಮ್‌ಹೌಸ್‌ಗಳಲ್ಲಿ ಪ್ರಕೃತಿ ಮಡಿಲಲ್ಲಿ ಕಾಲ ಕಳೆಯಲು ಬಯಸುತ್ತಾರೆ. ಕನ್ನಡದ ಕೆಲ ಕಲಾವಿದರು ಫಾರ್ಮ್‌ಹೌಸ್‌ಗಳನ್ನು ಹೊಂದಿದ್ದಾರೆ. ಅಲ್ಲಿ ವಿವಿಧ ಬಗೆಯ ಮರ, ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. ಮನೆ ಕಟ್ಟಿ ಬಿಡುವಿನ ಸಮಯವನ್ನು ಫ್ಯಾಮಿಲಿ ಜೊತೆ ಅಲ್ಲಿ ಕಾಲ ಕಳೆಯುತ್ತಾರೆ.
ನಟ ಶಿವರಾಜ್‌ಕುಮಾರ್ ಇತ್ತೀಚೆಗೆ ಕನಕಪುರದ ತಮ್ಮ ಕೃಷಿ ಭೂಮಿಯಲ್ಲಿ ಒಂದು ಮನೆ ಕಟ್ಟಿಸಿ ಗೃಹಪ್ರವೇಶ ಮಾಡಿದ್ದಾರೆ. 10 ಸಾವಿರ ಚದರ ವಿಸ್ತೀರ್ಣದಲ್ಲಿ ಈ ಮನೆ ನಿರ್ಮಾಣವಾಗಿದೆ. ಶಿವಣ್ಣ ದಂಪತಿ ಹೆಸರಿನಲ್ಲಿ ಅಲ್ಲಿ ಐದೂವರೆ ಎಕರೆ ಜಮೀನಿದೆ. ಇನ್ನು ನಟರಾದ ದರ್ಶನ್, ಯಶ್ ಸೇರಿದಂತೆ ಕೆಲ ನಟ-ನಟಿಯರು ಫಾರ್ಮ್‌ಹೌಸ್ ಹೊಂದಿದ್ದಾರೆ. ಇವತ್ತು ಅವು ಕೋಟಿ ಕೋಟಿ ಬೆಲೆ ಬಾಳುತ್ತವೆ.

1. ತೂಗುದೀಪ ಫಾರ್ಮ್‌ಹೌಸ್
ಇತ್ತೀಚೆಗೆ ನಟ ದರ್ಶನ್ ಜಾಮೀನು ಅರ್ಜಿಯಲ್ಲಿ ಆಸ್ತಿ ವಿವರ ಬಹಿರಂಗವಾಗಿತ್ತು. 'ಶಾಸ್ತ್ರಿ' ಚಿತ್ರದಿಂದ ಬಂದ ಹಣದಲ್ಲಿ ನಟ ದರ್ಶನ್ ಮೈಸೂರಿನ ಟೀ. ನರಸಿಪುರ ರಸ್ತೆಯಲ್ಲಿ ಐದಾರು ಎಕರೆ ಜಮೀನು ಖರೀದಿಸಿದ್ದರು. ಅಲ್ಲಿ ಕುದುರೆ, ಹಸು ಸೇರಿದಂತೆ ಸಾಕಷ್ಟು ಪ್ರಾಣಿ, ಪಕ್ಷಿಗಳನ್ನು ಸಾಕುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ತಮ್ಮ ಸ್ನೇಹಿತರ ಜೊತೆ ದರ್ಶನ್ ಅಲ್ಲಿ ಕಾಲ ಕಳೆಯುತ್ತಾರೆ. 45 ಲಕ್ಷ ರೂಪಾಯಿಗೆ ಖರೀದಿಸಿದ ಆ ಜಾಗ ಈಗ ಕೋಟಿ ಕೋಟಿ ಬೆಲೆ ಬಾಳುತ್ತದೆ ಎಂದು ಸ್ವತಃ ದರ್ಶನ್ ಸಂದರ್ಶನವೊಂದರಲ್ಲಿ ಹೇಳಿದ್ದರು.
2. ಉಪ್ಪಿ ರೆಸಾರ್ಟ್
ನಟ ಉಪೇಂದ್ರ ಕೂಡ ಬಹಳ ಹಿಂದೆಯೇ ಬೆಂಗಳೂರು ಹೊರ ವಲಯದಲ್ಲಿ ಬೈಲಾಲು ಗ್ರಾಮದಲ್ಲಿ 17 ಎಕರೆ ಜಮೀನು ಖರೀದಿಸಿದ್ದರು. ಅಲ್ಲಿ ರೆಸಾರ್ಟ್ ನಿರ್ಮಾಣ ಮಾಡಿದ್ದಾರೆ. ರುಪ್ಪೀಸ್ ರೆಸಾರ್ಟ್‌ನಲ್ಲಿ ಕೆಲ ಸಿನಿಮಾಗಳ ಚಿತ್ರೀಕರಣ ಕೂಡ ನಡೆದಿದೆ. ಸದ್ಯಕ್ಕೆ ಅದನ್ನು ಬೇರೆಯವರಿಗೆ ಲೀಜ್‌ಗೆ ಕೊಟ್ಟಿದ್ದಾರೆ ಎನ್ನಲಾಗ್ತಿದೆ.
4. ಹುಟ್ಟೂರಲ್ಲಿ ಯಶ್ ತೋಟ
ಐದು ವರ್ಷಗಳ ಹಿಂದೆ ನಟ ಯಶ್ ತಮ್ಮ ಹುಟ್ಟೂರಲ್ಲಿ 50 ಎಕರೆಗೂ ಅಧಿಕ ಜಾಗ ಖರೀದಿಸಿದ್ದರು. ಹಾಸನದ ತಿಮ್ಲಾಪುರ ಬಳಿ ಈ ಜಾಗ ಇದೆ. ಅಲ್ಲಿ ವ್ಯವಸಾಯ ಮಾಡಿ ಅರಿವು ಮೂಡಿಸಲು ಯಶ್ ಮುಂದಾಗಿದ್ದಾರೆ. ಸದ್ಯ ಯಶ್ ತಂದೆ, ತಾಯಿ ಅಲ್ಲೇ ನೆಲೆಸಿದ್ದು ವಿವಿಧ ಬಗೆಯ ಮರ, ಗಿಡಗಳನ್ನು ಬೆಳೆಸುತ್ತಿದ್ದಾರೆ.
5. ಶಿವಣ್ಣ ಕನಕಪುರ ಫಾರ್ಮ್‌ಹೌಸ್
ನಟ ಶಿವರಾಜ್‌ಕುಮಾರ್ ಕೆಲ ವರ್ಷಗಳ ಹಿಂದೆ ಕನಕಪುರ ಬಳಿಕ ಐದೂವರೆ ಎಕರೆ ಜಾಗ ಖರೀದಿಸಿದ್ದರು. ಅಲ್ಲಿ ಈಗ ಮನೆ ನಿರ್ಮಾಣ ಮಾಡಿ ಗೃಹ ಪ್ರವೇಶ ಮಾಡಿದ್ದಾರೆ. ಆ ಜಾಗದ ದರ 3 ಕೋಟಿ ಎಂದು ಗೀತಾ ಶಿವರಾಜ್‌ಕುಮಾರ್ ಇತ್ತೀಚೆಗೆ ನಾಮಪತ್ರ ಸಲ್ಲಿಕೆ ವೇಳೆ ಅಫಿಡವಿಟ್‌ನಲ್ಲಿ ತಿಳಿಸಿದ್ದರು.
6. ಪುನೀತ್ ಫಾರ್ಮ್‌ಹೌಸ್
ಬಹಳ ಹಿಂದೆ ನಟ ಪುನೀತ್ ರಾಜ್‌ಕುಮಾರ್ ರಾಮನಗರದ ಬಿಡದಿ ಹೋಬಳಿಯ ಮಂಚನಾಯಕನಹಳ್ಳಿ ಬಳಿ ಸುಮಾರು 16 ಎಕರೆ ಜಮೀನು ಖರೀದಿಸಿದ್ದರು. ಅಲ್ಲಿ ಫಾರ್ಮ್‌ಹೌಸ್ ನಿರ್ಮಾಣ ಮಾಡಬೇಕು ಎನ್ನುವುದು ಅವರ ಕನಸಾಗಿತ್ತು. ಬೆಂಗಳೂರು- ಮೈಸೂರು ಹೆದ್ದಾರಿ ನಿರ್ಮಾಣಕ್ಕಾಗಿ ಆ ಜಾಗದಲ್ಲಿ ಕೊಂಚ ಭೂಮಿ ಹೋಗಿತ್ತು. ಹೆದ್ದಾರಿ ನಿರ್ಮಾಣ ಸಂಪೂರ್ಣವಾದ ಬಳಿಕ ಅಪ್ಪು ಅಲ್ಲಿ ಫಾರ್ಮ್‌ಹೌಸ್ ನಿರ್ಮಾಣಕ್ಕೆ ಮನಸ್ಸು ಮಾಡಿದ್ದರು. ಆ ಆಸೆ ಈಡೇರಲೇ ಇಲ್ಲ ಎನ್ನಲಾಗುತ್ತದೆ.
7. ಧ್ರುವ ಸರ್ಜಾ ಬೃಂದಾವನ
ಕನಕಪುರ ರಸ್ತೆಯ ನೆಲಗುಳಿ ಗ್ರಾಮದಲ್ಲಿ ಧ್ರುವ ಸರ್ಜಾ ಫಾರ್ಮ್‌ಹೌಸ್ ಇದೆ. ಅದಕ್ಕೆ ಬೃಂದಾವನ ಎಂದು ಹೆಸರಿಟ್ಟಿದ್ದಾರೆ. ಸಹೋದರ ಚಿರಂಜೀವಿ ಸರ್ಜಾ ಪಾರ್ಥೀವ ಶರೀರದ ಅಂತ್ಯಕ್ರಿಯೆ ಅಲ್ಲೇ ನೆರವೇರಿಸಿ ಸ್ಮಾರಕವನ್ನು ಕಟ್ಟಿಸಿದ್ದಾರೆ. ತಮ್ಮ ಬಿಡುವಿನ ಸಮಯವನ್ನು ಧ್ರುವ ಅಲ್ಲೇ ಕಳೆಯುತ್ತಾರೆ.
ನಟ ಕಿಶೋರ್ ಕನಕಪುರ ಬಳಿಯ ಕರಿಯಪ್ಪನ ದೊಡ್ಡಿ ಗ್ರಾಮದಲ್ಲಿ ಕೃಷಿ ಭೂಮಿ ಹೊಂದಿದ್ದಾರೆ. ಅಲ್ಲಿ ಸಾವಯವ ಕೃಷಿ ಮಾಡುತ್ತಾ ಬಿಡುವಿನ ಸಮಯ ಕಳೆಯುತ್ತಾರೆ. ಕನಕಪುರ ಬಳಿಯೇ ದುನಿಯಾ ವಿಜಯ್ ಒಡೆತನದ ಫಾರ್ಮ್‌ಹೌಸ್ ಕೂಡ ಇದೆ ಎನ್ನಲಾಗುತ್ತದೆ. ಇನ್ನು ನಟಿ ಶೃತಿ ಕೂಡ ಕೃಷಿ ಭೂಮಿ ಹೊಂದಿದ್ದಾರೆ. ಫ್ಯಾಮಿಲಿ ಜೊತೆ ಆಗಾಗ್ಗೆ ಅಲ್ಲಿ ವ್ಯವಸಾಯ ಮಾಡುತ್ತಾ ಸಮಯ ಕಳೆಯುತ್ತಾರೆ.
ಇನ್ನುಳಿದಂತೆ ನಟರಾದ ಕುಮಾರ್ ಗೋವಿಂದ್, ಆರ್ಮುಗ ರವಿಶಂಕರ್, ಚರಣ್ ರಾಜ್, ನಿರ್ದೇಶಕ- ನಿರ್ಮಾಪಕ ಆರ್. ಚಂದ್ರು, ನಿರ್ಮಾಪಕ ಕರಿಸುಬ್ಬು ಸೇರಿದಂತೆ ಹಲವರು ಫಾರ್ಮ್‌ಹೌಸ್ ಹೊಂದಿದ್ದಾರೆ. ನಟ ಚಿಕ್ಕಣ್ಣ ಮೈಸೂರಿನ ಆರ್‌ಟಿ ನಗರದ ಬಳಿ ದೊಡ್ಡ ಕುರಿ ಹಾಗೂ ಮೇಕೆ ಫಾರಂ ಹೊಂದಿದ್ದಾರೆ.


Click it and Unblock the Notifications











