ಡ್ರೈವರ್ ಆಗಿ ಯಶ್ ತಂದೆ ಮೊದಲ ಸಂಬಳ ಎಷ್ಟಿತ್ತು? ಕೊನೆಗೆ ಎಷ್ಟಾಗಿತ್ತು?
ಯಾವುದೇ ಸಿನಿಮಾ ಹಿನ್ನಲೆ ಇಲ್ಲದೇ ಬಂದು ಗೆದ್ದವರು ನಟ ಯಶ್. ತಮ್ಮದೇ ಪರಿಶ್ರಮದಿಂದ ಯಶ್ ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ನಮ್ಮ ಎದುರು ನಿಂತಿದ್ದಾರೆ. ಸಾಧಾರಣ ಬಸ್ ಡ್ರೈವರ್ ಮಗ ಭಾರತೀಯ ಚಿತ್ರರಂಗಕ್ಕೆ ಸ್ಯಾಂಡಲ್‌ವುಡ್ ಕಡೆ ತಿರುಗಿ ನೋಡುವಂತೆ ಮಾಡಿಬಿಟ್ಟರು.
ಯಶ್ ತಂದೆ ಅರುಣ್ ಕುಮಾರ್ ಕೆಎಸ್ಆರ್‌ಟಿಸಿ ಬಸ್ ಡ್ರೈವರ್ ಆಗಿ ಸೇವೆ ಸಲ್ಲಿಸಿದವರು. ತಾಯಿ ಪುಷ್ಪಾ ಗೃಹಿಣಿ. ಯಶ್ 'KGF' ಸಿನಿಮಾ ಮಾಡಿ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದರೂ ತಂದೆ ಅರುಣ್ ಕುಮಾರ್ ತಮ್ಮ ಡ್ರೈವಿಂಗ್ ಕೆಲಸ ಬಿಡಲಿಲ್ಲ. ಸ್ವಯಂ ನಿವೃತ್ತಿ ಪಡೆಯದೇ ತಮ್ಮ ಸೇವೆ ಪೂರ್ಣಗೊಳಿಸಿದ್ದರು. ಈ ಬಗ್ಗೆ ಅಕ್ಕ ಪಕ್ಕ ಇಂಡಸ್ಟ್ರಿಯಲ್ಲಿ ಕೂಡ ಚರ್ಚೆ ಆಗಿತ್ತು.

ಮಧ್ಯಮ ವರ್ಗದ ಕುಟುಂಬದಿಂದ ಬಂದವರು ಯಶ್. ಆದರೆ ಮಕ್ಕಳಿಗೆ ಯಾವುದರಲ್ಲಿ ಕೂಡ ಪೋಷಕರು ಕಮ್ಮಿ ಮಾಡಲಿಲ್ಲ. ಈ ವಿಚಾರವನ್ನು ಸಾಕಷ್ಟು ವೇದಿಕೆಗಳಲ್ಲಿ ಸ್ವತಃ ಯಶ್ ಹೇಳಿಕೊಂಡಿದ್ದಾರೆ. ಹಾಸನದಲ್ಲಿ ಹುಟ್ಟಿದ ಯಶ್ ಓದಿ ಬೆಳೆದಿದ್ದು ಮೈಸೂರಿನಲ್ಲಿ. ಬಳಿಕ ಬೆಂಗಳೂರಿಗೆ ಬಂದು ಬೆನಕ ತಂಡ ಸೇರಿಕೊಂಡಿದ್ದರು. ಬಹಳ ಶಿಸ್ತಿನಿಂದ ಮಗನನ್ನು ಅರುಣ್ ಕುಮಾರ್ ಬೆಳೆಸಿದ್ದರು. ತಪ್ಪು ಮಾಡಿದಾಗ ಅಪ್ಪನ ಬಳಿ ಯಶ್ ಒದೆ ತಿಂದಿದ್ದು ಇದೆ. ಒಮ್ಮೆ ಪೊಲೀಸ್ ಲಾಟಿಯಲ್ಲಿ ಕೂಡ ಒದೆ ಬಿದ್ದಿತ್ತು.
ಯಶ್ ತಂದೆ ಅರುಣ್ ಕುಮಾರ್ ಬಗ್ಗೆ ಪತ್ನಿ ಪುಷ್ಪಾ 'ನ್ಯೂಸೋ ನ್ಯೂಸು' ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. "ನಮ್ಮ ಯಜಮಾನರು ಕೆಎಸ್‌ಆರ್‌ಟಿಸಿ ಬಸ್ ಡ್ರೈವರ್ ಆಗಿ ಕೆಲಸಕ್ಕೆ ಸೇರಿದಾಗ 1, 750 ರೂಪಾಯಿ ಸಂಬಳ. ಬಳಿಕ ಮೂರುವರೆ ಸಾವಿರ ಆಗಿತ್ತು. ಮುಂದೆ ಹೆಚ್ಚುತ್ತಾ ಹೋಯಿತು. ಆರಂಭದಲ್ಲಿ 16 ರೂಪಾಯಿ ಬಾಟ ಕೊಡುತ್ತಿದ್ದರು" ಎಂದು ಪುಷ್ಪಾ ನೆನಪಿಸಿಕೊಂಡಿದ್ದಾರೆ.

1, 750 ರೂಪಾಯಿಯಿಂದ ಶುರುವಾಗಿ ನಾಲ್ಕೈದು ವರ್ಷಗಳ ಹಿಂದೆ ನಿವೃತ್ತಿ ಆಗುವ ವೇಳೆಗೆ 40 ಸಾವಿರ ರೂಪಾಯಿ ಸಂಬಳ ಬರುತ್ತಿತ್ತು. ನಿಮ್ಮ ಪೆನ್ಷನ್ ಹಣದಲ್ಲಿ ಮೊಮ್ಮೊಕ್ಕಳಿಗೆ ಚಾಕಲೇಟ್ ಕೊಡಿಸಲು ಆಗಲ್ಲ ಎಂದು ನಾನು ತಮಾಷೆ ಮಾಡುತ್ತಿರುತ್ತೀನಿ. ಯಶ್ ಮಕ್ಕಳಲ್ಲ ನಂದಿನಿ ಮಗನಿಗೆ ಮಾಲ್‌ಗಳಲ್ಲಿ ಚಾಕಲೇಟ್ ಕೇಳಿದರೂ ತಾತನ ಪೆನ್ಷನ್ ಹಣ ಖಾಲಿ ಆಗಿಬಿಡುತ್ತದೆ ಎಂದು ರೇಗಿಸುತ್ತೇನೆ" ಎಂದು ನಕ್ಕಿದ್ದಾರೆ.
ಯಶ್‌ಗೆ ಚಿಕ್ಕಂದಿನಿಂದ ಮಾವಿನ ಹಣ್ಣು ಅಂದರೆ ಬಹಳ ಇಷ್ಟ. ಅವರಪ್ಪ ಅದನ್ನೇ ಬಹಳ ತಂದು ಕೊಡುತ್ತಿದ್ದರು. ಯಶ್ ಸೂಪರ್ ಸ್ಟಾರ್ ಆದರೂ ನಮ್ಮ ಲೈಫ್ ಬದಲಾಗಿಲ್ಲ. ನಾವು ನಮ್ಮ ಹಳೇ ಜೀವನವನ್ನೇ ಸಾಗಿಸುತ್ತಿದ್ದೇವೆ. ಇವತ್ತಿಗಿಂತ ಮೊದಲೇ ಚೆನ್ನಾಗಿದ್ವಿ, ನೆಮ್ಮದಿ ಇತ್ತು. ಹಣ ಇದ್ದರೆ ಎಲ್ಲರೂ ನೆಮ್ಮದಿಯಿಂದ ಇರ್ತಾರೆ ಎಂದುಕೊಳ್ಳುವುದು ತಪ್ಪಾಗುತ್ತದೆ. ಈಗಲೂ ಅದೇ ಊಟ, ಬಟ್ಟೆ. ಜನ ನಮ್ಮನ್ನು ಗುರ್ತಿಸುತ್ತಾರೆ ಎನ್ನುವುದು ಬಿಟ್ಟರೆ ಬೇರೇನು ಬದಲಾಗಿಲ್ಲ ಎಂದು ಪುಷ್ಪಾ ಹೇಳಿದ್ದಾರೆ.
ಇವತ್ತಿಗೂ ನಾವು ತೋಟ ಮಾಡಿಕೊಂಡು ಇದ್ದೀವಿ. ಹೆಚ್ಚು ಏನು ಬೆಳೆಯುತ್ತಿಲ್ಲ. ಆದರೆ ನಮ್ಮ ಖುಷಿಗೆ ನಾವು ತೋಟದಲ್ಲಿ ಇದ್ದೀವಿ. ಆ ಪರಿಸರದಲ್ಲಿ ಪ್ರಾಣಿ, ಪಕ್ಷಿಗಳ ನಡುವೆ ಇರುವ ಖುಷಿಯೇ ಬೇರೆ. ಅದರಲ್ಲೇ ಖುಷಿ. ಸಿಟಿಯಲ್ಲಿ ಇರುವುದಕ್ಕಿಂತ ಇದೇ ಇಷ್ಟ, ಖುಷಿ. ಯಾರು ಎಲ್ಲೇ ಇದ್ದರೂ ರೈತರು, ವ್ಯವಸಾಯವನ್ನು ಮರೆಯಬಾರದು ಎಂದು ಯಶ್ ತಾಯಿ ವಿವರಿಸಿದ್ದಾರೆ.


Click it and Unblock the Notifications











