ಬಾಲಿವುಡ್ ನಲ್ಲಿ ಈ ವರ್ಷ ಸದ್ದು ಮಾಡಿದವರು-ಸುದ್ದಿ ಮಾಡಿದವರು
ಬಾಲಿವುಡ್ ಮತ್ತು ವಿವಾದಗಳ ನಡುವಿನ ನಂಟು ಬಹು ಹಳೆಯದ್ದು. ಆದರೆ ಈ ವರ್ಷವಂತೂ ಬಾಲಿವುಡ್ ನಷ್ಟು ವಿವಾದಗಳ ಸುಳಿಗೆ ಇನ್ನಾವ ಉದ್ಯಮವೂ ಸಿಲುಕಿಲ್ಲ.
ವರ್ಷಾರಂಭ ಚೆನ್ನಾಗಿಯೇ ಆಗಿದ್ದ ಬಾಲಿವುಡ್‌ಗೆ ಕೊರೊನಾ ತಡೆ ತಂದಿಟ್ಟಿತು. ಅದರ ನಡುವೆಯೇ ಆದ ಸುಶಾಂತ್ ಸಿಂಗ್ ಸಾವು ಭರಸಿಡಿಲಿನಂತೆ ಅಪ್ಪಳಿಸಿತು. ಸುಶಾಂತ್ ಸಾವಿನ ಬಳಿಕ ಬಾಲಿವುಡ್‌ನ ದಿಶೆಯೇ ಬದಲಾಯಿತು. ಸುಶಾಂತ್ ಸಾವಿನಿಂದ ಎದ್ದ ಅಲೆ ಇನ್ನೂ ತಣ್ಣಗಾಗಿಲ್ಲ.
ಸುಶಾಂತ್ ಸಾವು, ಕೊರೊನಾ ತಲ್ಲಣ, ಅನಾರೋಗ್ಯ, ಪರಸ್ಪರ ತೇಜೋವಧೆ, ಮದುವೆ, ಜಗಳ, ಲೈಂಗಿಕ ದೌರ್ಜನ್ಯ ಆರೋಪ, ಪ್ರತ್ಯಾರೋಪ ಇವೆಲ್ಲವುಗಳಿಂದ ಬಾಲಿವುಡ್ ಸಾಕಷ್ಟು ಬಡವಾಯ್ತು ಈ ವರ್ಷ.

ಕೊರೊನಾ ಕಾರಣಕ್ಕೆ ಸುದ್ದಿಯಾದ ಕನ್ನಿಕಾ ಕಪೂರ್
ಸುಶಾಂತ್ ಸಿಂಗ್ ಸಾವಿಗೆ ಮುನ್ನಾ ಸುದ್ದಿ ಮಾಡಿದ್ದು ಗಾಯಕಿ ಕನ್ನಿಕಾ ಕಪೂರ್. ಕೊರೊನಾ ಆರಂಭದ ಸಮಯದಲ್ಲಿ ವಿದೇಶದಿಂದ ಭಾರತಕ್ಕೆ ಬಂದ ಕನ್ನಿಕಾ ಕಪೂರ್ ತಮ್ಮ ಪ್ರಯಾಣದ ಶೆಡ್ಯೂಲ್ ಅನ್ನು ಮುಚ್ಚಿಟ್ಟು, ರಾಜಕಾರಣಿಗಳೊಂದಿಗೆ ಪಾರ್ಟಿಗಳಲ್ಲಿ ಭಾಗವಹಿಸಿದ್ದರು. ನಂತರ ಅವರಿಗೆ ಕೊರೊನಾ ಪಾಸಿಟಿವ್ ಆಯಿತು. ಕನ್ನಿಕಾ ಇಂದಾಗಿ ವಸುಂಧರಾ ರಾಜೆ ಸೇರಿ ಹಲವು ರಾಜಕಾರಣಿಗಳು ಕ್ವಾರಂಟೈನ್ ಆಗಬೇಕಾಯಿತು. ಕೊರೊನಾ ಚಿಕಿತ್ಸಾ ಕೇಂದ್ರದಲ್ಲಿಯೂ ತಮ್ಮ ಅಹಂಕಾರಿ ನಡವಳಿಕೆಯಿಂದ ಸುದ್ದಿಯಲ್ಲಿದ್ದರು ಕನ್ನಿಕಾ ಕಪೂರ್.

ಸುಶಾಂತ್ ಸಿಂಗ್ ಸಾವು
ಬಾಲಿವುಡ್‌ನಲ್ಲಿ ಈ ವರ್ಷ ಅತಿ ಹೆಚ್ಚು ಸುದ್ದಿಯಲ್ಲಿದ್ದಿದ್ದು ನಟ ಸುಶಾಂತ್ ಸಿಂಗ್ ರಜಪೂತ್. ನಟ ಸುಶಾಂತ್ ಸಿಂಗ್ ಜೂನ್ 14 ರಂದು ತಮ್ಮ ಮನೆಯಲ್ಲಿ ನೇಣು ಬಿಗಿದ ಅವಸ್ಥೆಯಲ್ಲಿ ಪತ್ತೆಯಾದರು. ಅಂದಿನಿಂದ ಇಂದಿನವರೆಗೆ ಸುಶಾಂತ್ ಸುದ್ದಿಯಲ್ಲೇ ಇದ್ದಾರೆ. ಗೂಗಲ್ ಬಿಡುಗಡೆ ಮಾಡಿರುವ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳ ಪಟ್ಟಿಯಲ್ಲೂ ಸುಶಾಂತ್ ಹೆಸರಿದೆ. ಕಾರಣ ತಿಳಿಸದೆ ಪರಲೋಕಕ್ಕೆ ಹೊರಟ ಸುಶಾಂತ್, ಇಲ್ಲಿದ್ದವರ ಹಲವರ ಜೀವನವನ್ನು ಬದಲಾಯಿಸಿಬಿಟ್ಟರು.

ರಿಯಾ ಚಕ್ರವರ್ತಿ ಮೇಲೆ ಮುಗಿಬಿದ್ದ ಮಾಧ್ಯಮ
ಸುಶಾಂತ್ ಸಿಂಗ್ ಸಾವಿನಿಂದಾಗಿ ದೇಶದ ಗಮನವೆಲ್ಲಾ ಸುಶಾಂತ್ ಪ್ರೇಯಸಿ ಆಗಿದ್ದ ರಿಯಾ ಚಕ್ರವರ್ತಿ ಕಡೆಗೆ ಹೊರಳಿತು. ಸುಶಾಂತ್ ಸಾವಿಗೆ ರಿಯಾ ಚಕ್ರವರ್ತಿ ಕಾರಣ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಲಾಯಿತು. ಸುದ್ದಿ ವಾಹಿನಿಗಳಲ್ಲಿ ಸಹ ರಿಯಾ ರನ್ನು ವಿಲನ್ ನಂತೆ ಚಿತ್ರಿಸಲಾಯಿತು. ಸುಶಾಂತ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾ ವಿರುದ್ಧ ಎಫ್‌ಐಆರ್ ದಾಖಲಾಯಿತು. ಕೊನೆಗೆ ಡ್ರಗ್ಸ್ ಮಂಜೂರಾಯಿತು.

ವರ್ಷಪೂರ್ತಿ ಸುದ್ದಿಯಲ್ಲಿದ್ದ ಕಂಗನಾ ರಣೌತ್
ಕಂಗನಾ ರಣೌತ್ ಈ ವರ್ಷವೆಲ್ಲಾ ಸುದ್ದಿಯಲ್ಲಿದ್ದ ಮತ್ತೊಬ್ಬ ಬಾಲಿವುಡ್ ಸೆಲೆಬ್ರಿಟಿ. ಸುಶಾಂತ್ ಸಾವಿನ ನಂತರ ಸಿಡಿದೆದ್ದ ಕಂಗನಾ, ಕರಣ್ ಜೋಹರ್, ಮಹೇಶ್ ಭಟ್, ರಿಯಾ ಚಕ್ರವರ್ತಿ, ಸಲ್ಮಾನ್ ಖಾನ್, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಸಚಿವ ಆದಿತ್ಯ ಠಾಕ್ರೆ, ಶಿವಸೇನಾ ಮುಖ್ಯಸ್ಥ ಸಂಜಯ್ ರಾವತ್ ಇನ್ನೂ ಹಲವರ ವಿರುದ್ಧ ಹರಿಹಾಯ್ದರು, ವಿವಿಧ ಆರೋಪಗಳನ್ನು ಮಾಡಿದರು. ಜೂನ್ ತಿಂಗಳಿನಿಂದ ಇಲ್ಲಿಯ ವರೆಗೆ ಬಾಲಿವುಡ್ಡಿಗರ ವಿರುದ್ಧ ಅವಕಾಶ ಸಿಕ್ಕಾಗೆಲ್ಲಾ ಟ್ವೀಟ್ ಬಾಣ ಬಿಡುತ್ತಲೇ ಇದ್ದಾರೆ ಕಂಗನಾ. ಇದರ ಜೊತೆಗೆ ಮುಂಬೈ ಅನ್ನು 'ಪಾಕ್ ಆಕ್ರಮಿತ ಕಾಶ್ಮೀರ'ಕ್ಕೆ ಹೋಲಿಸಿ ದೊಡ್ಡ ವಿವಾದವನ್ನೇ ಎಬ್ಬಿಸಿದರು. ಇದಕ್ಕೆ ಪ್ರತಿಯಾಗಿ ಬಿಎಂಸಿಯು ಕಂಗನಾ ರ ಮುಂಬೈ ಕಚೇರಿಯನ್ನೇ ಒಡೆದು ಹಾಕಿತು. ಆಗಲೂ ಸಹ ಭಾರಿ ಹೈಡ್ರಾಮಾಗಳೇ ನಡೆದು, ಶಿವಸೇನಾ ಪಕ್ಷಕ್ಕೆ ಸವಾಲು ಹಾಕಿ, ಹಿಮಾಚಲ ಪ್ರದೇಶದಿಂದ ಬಿಗಿ ಭದ್ರತೆ ನಡುವೆ ಮುಂಬೈ ಗೆ ಬಂದರು ಕಂಗನಾ. ನಂತರ ದ್ವೇಷಕಾರುವ ಟ್ವೀಟ್ ಮಾಡಿದ್ದಾರೆಂಬ ಆರೋಪದ ಮೇಲೆ ಕಂಗನಾ ಹಾಗೂ ಅವರ ಸಹೋದರಿ ವಿರುದ್ಧ ಎಫ್‌ಐಆರ್ ದಾಖಲಾಗಿವೆ. ಪ್ರಸ್ತುತ ಹಿಮಾಚಲ ಪ್ರದೇಶದಲ್ಲಿದ್ದಾರೆ ನಟಿ ಕಂಗನಾ.

ಒಳ್ಳೆಯ ಕೆಲಸದಿಂದ ಸುದ್ದಿಯಾದ ನಟ ಸೋನು ಸೂದ್
ಬಾಲಿವುಡ್ ವಿವಾದಗಳಲ್ಲಿಯೇ ಸಿಲುಕಿದ್ದರೆ, ನಟ ಸೋನು ಸೂದ್ ಮಾತ್ರ ಒಳ್ಳೆಯ ಕಾರ್ಯಕ್ಕೆ ಸುದ್ದಿಯಾದರು. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಸಾವಿರಾರು ಜನ ಕಾರ್ಮಿಕರು ತಮ್ಮ ಸ್ವಗ್ರಾಮಗಳಿಗೆ ತೆರಳಲು ನೆರವಾದರು ಸೋನು ಸೂದ್. ನೆರವು ಕೇಳಿದವರಿಗೆಲ್ಲಾ ಅಗತ್ಯ ನೆರವು ನೀಡಿದರು. ಸೋನು ಸೂದ್ ಮಾಡಿದ ಕಾರ್ಯವನ್ನು ಮಹಾರಾಷ್ಟ್ರ ಸರ್ಕಾರ ಗುಣಗಾನ ಮಾಡಿತು. ಈಗಲೂ ಸಹ ತಮ್ಮ ಸಮಾಜ ಸೇವಾ ಕಾರ್ಯವನ್ನು ಮುಂದುವರೆಸಿದ್ದಾರೆ ನಟ ಸೋನು ಸೂದ್.

ಡ್ರಗ್ಸ್ ಪ್ರಕರಣದಲ್ಲಿ ನಟಿ ದೀಪಿಕಾ ಪಡುಕೋಣೆ
ನಟಿ ದೀಪಿಕಾ ಪಡುಕೋಣೆ ಈ ವರ್ಷ ತಮ್ಮ ಸಿನಿಮಾಗಳಿಗೆ ಬದಲಾಗಿ, ಡ್ರಗ್ಸ್ ನಿಂದಾಗಿ ಸುದ್ದಿಯಲ್ಲಿದ್ದರು. ಸುಶಾಂತ್ ಪ್ರಕರಣದಿಂದ ಹೊರಬಿದ್ದ ಬಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿ ದೀಪಿಕಾ ಪಡುಕೋಣೆ ಹೆಸರೂ ಸಹ ಕೇಳಿಬಂತು. ಎನ್‌ಸಿಬಿ ನೊಟೀಸ್ ನಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಿದರು ದೀಪಿಕಾ ಪಡುಕೋಣೆ.

ಸುಶಾಂತ್ ಪ್ರಕರಣದಿಂದ ಸುದ್ದಿಗೆ ಬಂದ ಮಹೇಶ್ ಭಟ್
ಹಿರಿಯ ನಿರ್ದೇಶಕ, ನಿರ್ಮಾಪಕ ಮಹೇಶ್ ಭಟ್ ಸಹ ಸಾಕಷ್ಟು ಸುದ್ದಿಯಲ್ಲಿದ್ದರು. ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಜೊತೆ ಮಹೇಶ್ ಭಟ್ ಆಪ್ತವಾಗಿರುವ ಹಲವು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಮಹೇಶ್ ಭಟ್-ರಿಯಾ ಗೆ ಸಂಬಂಧವಿದೆಯೆಂದು, ಸುಶಾಂತ್ ಸಾವಿಗೆ ಮಹೇಶ್ ಭಟ್ ಪರೋಕ್ಷ ಕಾರಣ ಎಂಬ ಸುದ್ದಿಗಳು ಹರಿದಾಡಿದವು. ಮುಂಬೈ ಪೊಲೀಸರು ಮಹೇಶ್ ಭಟ್ ವಿಚಾರಣೆಯನ್ನೂ ನಡೆಸಿದರು.

ಕರಣ್ ಜೋಹರ್ ವಿರುದ್ಧ ಆರೋಪಗಳ ಸುರಿಮಳೆ
ಸುಶಾಂತ್ ಸಾವಿನಿಂದಾಗಿ ಕರಣ್ ಜೋಹರ್ ಸುದ್ದಿಗೆ ಬಂದರು. ಸುಶಾಂತ್ ಸಾವಿಗೆ ಸ್ವಜನಪಕ್ಷಪಾತವೇ ಕಾರಣ ಎಂದು ಆರೋಪಿಸಿ, ಕೇವಲ ಸ್ಟಾರ್ ಮಕ್ಕಳಿಗೆ ಮಾತ್ರವೇ ಸಿನಿಮಾದಲ್ಲಿ ಅವಕಾಶ ನೀಡುವ ಕರಣ್ ಜೋಹರ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಯಿತು. ಕರಣ್ ಜೋಹರ್ ಮನೆಯಿಂದ ಹೊರಗೆ ಬರುವುದನ್ನೇ ನಿಲ್ಲಿಸಿಬಿಟ್ಟರು. ಟ್ವಿಟ್ಟರ್‌ನಲ್ಲಿ ಸಹ ಎಲ್ಲರನ್ನೂ ಅನ್‌ಫಾಲೊ ಮಾಡಿದರು ಕರಣ್. ವರ್ಷದ ಅಂತ್ಯದಲ್ಲಿ ನಿರ್ದೇಶಕ ಮಧುರ್ ಬಂಡಾರ್ಕರ್ ರಿಯಾಲಿಟಿ ಶೋ ನ ಹೆಸರಿಗೆ ಸಂಬಂಧಿಸಿದಂತೆ ಸಹ ವಿವಾದ ಮಾಡಿಕೊಂಡರು ಕರಣ್. ಆ ವಿವಾದ ಹೆಚ್ಚು ಸದ್ದಿಲ್ಲದೆ ಮುಗಿಯಿತು.

ಕ್ಯಾನ್ಸರ್ ಗೆದ್ದು ಬಂದ ಸಂಜಯ್ ದತ್
ನಟ ಸಂಜಯ್ ದತ್ ಸಹ ಈ ವರ್ಷ ಸಾಕಷ್ಟು ಸುದ್ದಿಯಲ್ಲಿದ್ದರು. ಸಂಜಯ್ ದತ್ ಗೆ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಂಡಿತು. ಸತತ ಚಿಕಿತ್ಸೆ ಬಳಿಕ ಕ್ಯಾನ್ಸರ್ ನಿಂದ ಗುಣವಾದರು ಸಂಜಯ್. ಸದ್ಯಕ್ಕೆ ಕೆಜಿಎಫ್ 2 ಸಿನಿಮಾದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ ಸಂಜಯ್ ದತ್.

ಅಮಿತಾಬ್ ಬಚ್ಚನ್ ಗೆ ಕೊರೊನಾ ಪಾಸಿಟಿವ್
ನಟ ಅಮಿತಾಬ್ ಬಚ್ಚನ್ ಹಾಗೂ ಕುಟುಂಬ ಸದಸ್ಯರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಇದು ಭಾರಿ ಸುದ್ದಿಯಾಗಿತ್ತು. ಕೋಟ್ಯಂತರ ಜನ ಅಮಿತಾಬ್ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದರು. ಕೊರೊನಾ ಕಾರಣದಿಂದಲೇ ಅಮಿತಾಬ್ ಬಚ್ಚನ್, ವಿಶ್ವದಲ್ಲೇ ಅತಿ ಹೆಚ್ಚು ಹುಡುಕಲ್ಪಟ್ಟ ನಟರಲ್ಲಿ ಒಬ್ಬರಾಗಿದ್ದಾರೆ ಈ ವರ್ಷ! ಅಮಿತಾಬ್, ಅಭಿಷೇಕ್, ಐಶ್ವರ್ಯಾ ರೈ, ಆರಾಧ್ಯಗೆ ಕೊರೊನಾ ಆಗಿತ್ತು. ಎಲ್ಲರೂ ಗುಣವಾದರು.

ಗೋವಾ ಕಡಲ ಕಿನಾರೆಯಲ್ಲಿ ಪೂನಂ ಪಾಂಡೆ
ನಟಿ ಪೂನಂ ಪಾಂಡೆ ಈ ವರ್ಷ ಮದುವೆಯಾದರು. ಆದರೆ ಮದುವೆಯಾದ ಮಾರನೇಯ ದಿನವೇ ಗಂಡನ ವಿರುದ್ಧ ಗೊವಾ ಪೊಲೀಸರಲ್ಲಿ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದರು. ನಂತರ, ರಾಜಿಯಾಗಿ ಇಬ್ಬರೂ ಮತ್ತೆ ಒಂದಾಗಿ ಜೀವನ ಆರಂಭಿಸಿದರಾದರೂ ಮತ್ತೆ ಪೂನಂ ಪಾಂಡೆ ಸುದ್ದಿಗೆ ಬಂದರು. ನಿಷೇಧಿತ ಸ್ಥಳದಲ್ಲಿ ಪೂನಂ ಪಾಂಡೆ, ಅರೆಬೆತ್ತಲೆ ಫೊಟೊ ಶೂಟ್ ಹಾಗೂ ವಿಡಿಯೋ ಮಾಡಿದ್ದು ಭಾರಿ ಸುದ್ದಿಯಾಗಿತ್ತು, ಗೋವಾ ವಿಧಾನಸಭೆಯಲ್ಲೂ ಈ ಬಗ್ಗೆ ಚರ್ಚೆಗಳಾಯಿತು. ಕೊನೆಗೆ ಗೋವಾ ಪೊಲೀಸರು ಪೂನಂ ಪಾಂಡೆ ಹಾಗೂ ಆಕೆಯ ಪತಿಯನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು.

ಬೆತ್ತಲೆ ಓಡಿ ಸುದ್ದಿಯಾದ ನಟ ಮಿಲಿಂದ್ ಸುಮನ್
ನಟ ಮಿಲಿಂದ್ ಸೊಮನ್ ತನ್ನ ಹುಟ್ಟುಹಬ್ಬದ ದಿನ ಗೋವಾ ಸಮುದ್ರ ಕಿನಾರೆಯಲ್ಲಿ ಬೆತ್ತಲೆ ಓಡಿದ್ದರು. ಮಿಲಿಂದ್, ಬೆತ್ತಲೆ ಓಡುತ್ತಿರುವ ಚಿತ್ರವನ್ನು ಸೆರೆ ಹಿಡಿದಿದ್ದ ಪತ್ನಿ ಅಂಕಿತಾ ಕೊನ್ವಾರ್, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದು ವಿವಾದ ಎಬ್ಬಿಸಿತ್ತು. ಮಿಲಿಂದ್ ವಿರುದ್ಧ ಸಹ ದೂರು ದಾಖಲಾಯಿತು ಆದರೆ ಅವರನ್ನು ಬಂಧಿಸಲಿಲ್ಲ.

ಲೈಂಗಿಕ ಕಿರುಕುಳ ಆರೋಪಕ್ಕೆ ತುತ್ತಾದ ವಿಜಯ್ ರಾಝ್
ವರ್ಷಾಂತ್ಯದ ವೇಳೆಗೆ ನಟ ವಿಜಯ್ ರಾಝ್ ಸಹ ಸುದ್ದಿಗೆ ಬಂದರು. ವಿಜಯ್ ರಾಝ್ ವಿರುದ್ಧ ನಟಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿ, ದೂರು ನೀಡಿದ್ದರು. ವಿಜಯ್ ರಾಝ್ ಅನ್ನು ಬಂಧಿಸಿದ್ದ ಪೊಲೀಸರು, ಠಾಣೆ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು. ಅವರನ್ನು ಸಿನಿಮಾದಿಂದಲೂ ತೆಗೆದು ಹಾಕಲಾಯಿತು. ತಮ್ಮ ಮೇಲಿನ ಆರೋಪಗಳನ್ನು ವಿಜಯ್ ರಾಝ್ ತಳ್ಳಿಹಾಕಿದರು. ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಕರೀನಾ ಕಪೂರ್-ಅನುಷ್ಕಾ ಶರ್ಮಾ
ನಟಿ ಅನುಷ್ಕಾ ಶರ್ಮಾ ಈ ವರ್ಷ ಗರ್ಭಿಣಿ ಆದರು. ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ನು ನಟಿ ಕರೀನಾ ಕಪೂರ್ ಸಹ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಶ್ರದ್ಧಾ ಕಪೂರ್-ಸಾರಾ ಅಲಿ ಖಾನ್-ರಾಕುಲ್ ಪ್ರೀತ್ ಸಿಂಗ್
ಡ್ರಗ್ಸ್ ಪ್ರಕರಣದಲ್ಲಿ ನಟಿ ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ಹಾಗೂ ರಾಕುಲ್ ಪ್ರೀತ್ ಸಿಂಗ್ ಹೆಸರೂ ಸಹ ಕೇಳಿಬಂದಿತ್ತು. ದೀಪಿಕಾ ಪಡುಕೋಣೆ ಸೇರಿದಂತೆ ಈ ಮೂವರೂ ಸಹ ಎನ್‌ಸಿಬಿ ವಿಚಾರಣೆ ಎದುರಿಸಿದರು. ಇದರ ಜೊತೆಗೆ ನಟ ಅರ್ಜುನ್ ರಾಂಪಾಲ್ ಪತ್ನಿ ಹೆಸರೂ ಸಹ ಪ್ರಕರಣದಲ್ಲಿ ಕೇಳಿಬಂತು.


Click it and Unblock the Notifications










