twitter
    For Quick Alerts
    ALLOW NOTIFICATIONS  
    For Daily Alerts

    2021 ವಿಶೇಷ: ಸಿನಿಮಾಗಳಲ್ಲಿ ನೀಲಿ ಕ್ರಾಂತಿ, ದಮನಿತರ ದನಿಯಾದ ಸಿನಿಮಾಗಳು

    |

    ದಕ್ಷಿಣ ಭಾರತ ಸಿನಿಮಾ ರಂಗ ಈ ವರ್ಷ ಕಂಟೆಂಟ್ ವಿಚಾರದಲ್ಲಿ ಹೆಚ್ಚಿನ ಪ್ರಯೋಗಗಳಿಗೆ ತನ್ನನ್ನು ಒಡ್ಡಿಕೊಂಡಿತು. ಕೆಲವು ಅತ್ಯುತ್ತಮ ಎನ್ನಬಹುದಾದ ಸಿನಿಮಾಗಳು ಈ ವರ್ಷ ತೆರೆಗೆ ಬಂದವು ದೊಡ್ಡ ಮಟ್ಟದಲ್ಲಿ ಗಮನ ಸೆಳೆದವು.

    ಕಳೆದ ವರ್ಷ (2020) ಹಾಗೂ ಈ ವರ್ಷ ದಕ್ಷಿಣ ಭಾರತದ ಸಿನಿಮಾಗಳು ಸಮಾಜದ ಕಳೆವರ್ಗದ ದನಿಯಾಗುವ ಪ್ರಯತ್ನ ಮಾಡಿತು. ದಮನಿತರ ಬವಣೆಗಳಿಗೆ ಕನ್ನಡಿ ಹಿಡಿವ ಯತ್ನಗಳಾದವು. ವಿಶೇಷವಾಗಿ ಜಾತಿ, ಅಸ್ಪೃಶ್ಯತೆಯ ವಿಚಾರ ಸಿನಿಮಾ ಮಾಧ್ಯಮದ ಮೂಲಕ ದೊಡ್ಡ ಮಟ್ಟದಲ್ಲಿ ಟೀಕಿಸಲಾಯಿತು, ಪ್ರಶ್ನಿಸಲಾಯಿತು.

    ಕೆಲವು ದಶಕಗಳಿಂದಲೂ ಅಸ್ಪೃಶ್ಯತೆ ವಿಷಯದ ಬಗ್ಗೆ ಸಿನಿಮಾಗಳು ಆಗುತ್ತಲೇ ಬರುತ್ತಿವೆಯಾದರೂ ಅವಕ್ಕೆ 'ಕಲಾತ್ಮಕ' ಹಣೆಪಟ್ಟಿ ಅಂಟಿಸಿ ದೊಡ್ಡ ಸಂಖ್ಯೆಯ ಪ್ರೇಕ್ಷಕರಿಂದ ದೂರವೇ ಇಡಲಾಗಿತ್ತು. ಆದರೆ ಕಳೆದ ಕೆಳ ವರ್ಷಗಳಲ್ಲಿ ದಲಿತ ಪರ ಸಿನಿಮಾಗಳನ್ನು ದೊಡ್ಡ ಕ್ಯಾನ್ವಾಸ್‌ನಲ್ಲಿ ದೊಡ್ಡ ಮಟ್ಟದ ಪ್ರೇಕ್ಷಕರಿಗೆ ತಲುಪಿಸಲಾಗುತ್ತದೆ. ಆ ಕಾರ್ಯ 2021 ರಲ್ಲಿ ದಕ್ಷಿಣ ಭಾರತ ಸಿನಿಮಾರಂಗದಲ್ಲಿ ದೊಡ್ಡದಾಗಿಯೇ ಆಗಿದೆ.

    ಕಹಳೆ ಊದಿದ ತಮಿಳಿನ 'ಕರ್ಣನ್'

    ಕಹಳೆ ಊದಿದ ತಮಿಳಿನ 'ಕರ್ಣನ್'

    ಧನುಶ್ ನಟಿಸಿದ 'ಕರ್ಣನ್' ಸಿನಿಮಾ ತೆರೆ ಕಂಡಿದ್ದು 2021 ಏಪ್ರಿಲ್ 09ರಂದು. 'ಕರ್ಣನ್' ಸಿನಿಮಾವನ್ನು ದೃಶ್ಯ ಕಾವ್ಯಕ್ಕೆ ಹೋಲಿಸಲಾಯಿತು. ಸಿನಿಮಾದಲ್ಲಿ ನಿರ್ದೇಶಕ ಮಾರಿ ಸೆಲ್ವರಾಜ್ ಬಳಸಿ ಉಪಮೆಗಳು ಅದೆಷ್ಟು ಗಟ್ಟಿಯೂ, ಸುಂದರವಾಗಿಯೂ ಇದ್ದುವೆಂದರೆ ಅವುಗಳ ಬಗ್ಗೆಯೇ ವಿಶೇಷ ಲೇಖಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡವು. ಧನುಶ್ ಅಂಥಹಾ 'ಎಸ್ಟಾಬ್ಲಿಶ್ಡ್ ಸ್ಟಾರ್' ನಟ ದಮನಿತರ ಕತೆಯೊಂದನ್ನು ಆರಿಸಿಕೊಂಡು ಅದಕ್ಕೆ ನ್ಯಾಯ ಒದಗಿಸಿದ್ದು ಹಲವು ನಟರು, ನಿರ್ದೇಶಕರು ದಮನಿತರ ಕತೆಗಳಿಗೆ ಸಿನಿಮಾಗಳ ಮೂಲಕ ದನಿಯಾಗುವ ಧೈರ್ಯ ನೀಡಿತು. 'ಕರ್ಣನ್' ಸಿನಿಮಾ ಈ ವರ್ಷ ಬಿಡುಗಡೆ ಆದ ಅತ್ಯುತ್ತಮ ಸಿನಿಮಾದಲ್ಲಿ ಒಂದೆನಿಸಿಕೊಂಡಿದೆ.

    ಪ್ರೀತಿ-ಜಾತಿ ಮತ್ತು ಕುಟುಂಬ 'ಮರ್ಯಾದೆ'ಯ 'ಉಪ್ಪೆನ'

    ಪ್ರೀತಿ-ಜಾತಿ ಮತ್ತು ಕುಟುಂಬ 'ಮರ್ಯಾದೆ'ಯ 'ಉಪ್ಪೆನ'

    ತೆಲುಗಿನ 'ಉಪ್ಪೆನ' ಸಿನಿಮಾ ಸಹ ಜಾತಿ-ಪ್ರೀತಿ ಮತ್ತು ಕುಟುಂಬ ಮರ್ಯಾದೆಯ ವಿಷಯದ ಮೇಲೆ ಬೆಳಕು ಚೆಲ್ಲಿದ್ದ ಸಿನಿಮಾ. ಸಿನಿಮಾದ ನಾಯಕ ದಲಿತ, ನಾಯಕಿ ಮೇಲ್ಜಾತಿಯಾಕೆ. ನಾಯಕಿಯ ಅಪ್ಪನಿಗೆ ಮಗಳು ಕೀಳು ಜಾತಿಯವನ ವಿವಾಹವಾಗುವುದು ಇಷ್ಟವಿರುವುದಿಲ್ಲ. ಕೊನೆಗೆ ಮಗಳನ್ನು ಪ್ರೀತಿಸಿದ ಯುವಕನ ಮರ್ಮಾಂಗವನ್ನೇ ಕಡಿಸಿಬಿಡುತ್ತಾನೆ ಅಪ್ಪ ಆದರೆ ಗಂಡಸುತನ ಅಥವಾ ಮನುಷ್ಯತ್ವ ಯಾವುದೇ ಅಂಗಕ್ಕೆ ಸೀಮಿತವಾದುದಲ್ಲ ಎಂದು ಹೇಳಿ ಕೊನೆಗೆ ನಾಯಕಿ ಮತ್ತೆ ನಾಯಕನನ್ನು ಸೇರಿಕೊಳ್ಳುತ್ತಾಳೆ. ದಲಿತ ಪಾತ್ರ ಪ್ರಧಾನವಾಗಿದ್ದ ಈ ಸಿನಿಮಾ ವರ್ಷದ ಆರಂಭದಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಹಿಟ್ ಆಯಿತು.

    ತಮಿಳಿನ 'ಸರ್ಪಟ್ಟ ಪರಂಬರೈ'

    ತಮಿಳಿನ 'ಸರ್ಪಟ್ಟ ಪರಂಬರೈ'

    ಪಾ ರಂಜಿತ್ ನಿರ್ದೇಶನದ 'ಸರ್ಪಟ್ಟ ಪರಂಬರೈ' ಸಹ ದಲಿತ ಅಸ್ಮಿತೆಯ ಹೋರಾಟ ಕತೆಯನ್ನೇ ಹೊಂದಿದೆ. ದಲಿತ ನಾಯಕ ತಮ್ಮ ಹಾಗೂ ಸಮುದಾಯದ ಗೌರವಕ್ಕಾಗಿ ಬಾಕ್ಸಿಂಗ್ ಮಾಡಿ ಗೆಲ್ಲುವ ಕತೆಯನ್ನು 'ಸರ್ಪಟ್ಟ ಪರಂಬರೈ' ಹೊಂದಿದೆ. ಈ ಸಿನಿಮಾವನ್ನು ನೋಡಲೇಬೇಕಾದ 100 ಒಟಿಟಿ ಸಿನಿಮಾಗಳ ಪಟ್ಟಿಗೆ ಸೇರಿಸಿದೆ ನ್ಯೂ ಯಾರ್ಕ್‌ ಟೈಮ್ಸ್.

    ತೆಲುಗಿನ 'ಲವ್ ಸ್ಟೋರಿ'

    ತೆಲುಗಿನ 'ಲವ್ ಸ್ಟೋರಿ'

    ಸುಂದರವಾದ 'ಫೀಲ್ ಗುಡ್' ಮಾದರಿ ಸಿನಿಮಾಗಳನ್ನು ನಿರ್ದೇಶಿಸುತ್ತಿದ್ದ ತೆಲುಗಿನ ಶೇಖರ್ ಕಮ್ಮುಲ ಜಾತಿ ವಿಷಯವನ್ನು ಪ್ರಧಾನವಾಗಿರಿಸಿಕೊಂಡು ಮಾಡಿದ ಸಿನಿಮಾ 'ಲವ್ ಸ್ಟೋರಿ'. ಹೊಸ ತಲೆಮಾರಿನ, ವಿದ್ಯಾವಂತ ದಲಿತನೂ ಸಹ ಹೇಗೆ ಅಸ್ಪೃಶ್ಯತೆ ಈಡಾಗುತ್ತಾನೆ, ಸಮಸ್ಯೆಗೆ, ಮಾಸಿಕ ಹಿಂಸೆಗೆ ಗುರಿಯಾಗುತ್ತಾನೆ ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಸಿನಿಮಾದಲ್ಲಿ ಪ್ರೇಮಕತೆಗೆ ಹೆಚ್ಚು ಒತ್ತು ನೀಡಿರುವ ಕಾರಣ ಜಾತಿಯ ವಿಷಯ ತುಸು ಗೌಣವಾಗಿದೆಯಾದರೂ ಇದೊಂದು ಗಟ್ಟಿ ಪ್ರಯತ್ನವೆಂದೇ ಹೇಳಬಹುದು. ನಾಗ ಚೈತನ್ಯ-ಸಾಯಿ ಪಲ್ಲವಿ ನಟಿಸಿದ್ದ ಈ ಸಿನಿಮಾ ಸೆಪ್ಟೆಂಬರ್ 24 ರಂದು ಬಿಡುಗಡೆ ಆಗಿತ್ತು.

    ಅಜೀಬ್ ದಾಸ್ತಾ: ಗೀಲಿ ಪುಚ್ಚಿ

    ಅಜೀಬ್ ದಾಸ್ತಾ: ಗೀಲಿ ಪುಚ್ಚಿ

    'ಅಜೀಬ್ ದಾಸ್ತಾ' ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆದ ಅಂತಾಲಜಿ ಸಿನಿಮಾ. ಈ ಸಿನಿಮಾದ ನಾಲ್ಕು ಉಪಕತೆಗಳಲ್ಲಿ ಒಂದು 'ಗೀಲಿ ಪುಚ್ಚಿ'. ಈ ಕಿರು ಸಿನಿಮಾವು ದಲಿತ ಮಹಿಳೆಯೊಬ್ಬಳ ತೊಳಲಾಟ. ನಗರ ಜೀವನದಲ್ಲಿ ತಮ್ಮ ಜಾತಿ ವಿಷಯವನ್ನು ಬಚ್ಚಿಡಬೇಕಾದ ಪರಿಸ್ಥಿತಿ, ಅನಿವಾರ್ಯತೆ. ನಗರದ ಕಾರ್ಪೊರೇಟ್‌ ಕಚೇರಿಗಳಲ್ಲಿಯೂ ದಲಿತರ ಬಗೆಗಿನ ನಿಲವು ಇನ್ನಿತರೆ ವಿಚಾರಗಳನ್ನು ಚರ್ಚಿಸುತ್ತದೆ. ಸಿನಿಮಾದ ಮುಖ್ಯ ಪಾತ್ರದಲ್ಲಿ ಕೊಂಕಣಾ ಸೇನ್ ಶರ್ಮಾ ಮತ್ತು ಅದಿತಿ ರಾವ್ ಹೈದಿರಿ ನಟಿಸಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಸಿನಿಮಾವು ಇದೇ ವರ್ಷ ಏಪ್ರಿಲ್‌ನಲ್ಲಿ ಬಿಡುಗಡೆ ಆಗಿತ್ತು.

    ಹಾಲಿವುಡ್ ಸಿನಿಮಾಗಳ ಹಿಂದಿಕ್ಕಿದ 'ಜೈ ಭೀಮ್'

    ಹಾಲಿವುಡ್ ಸಿನಿಮಾಗಳ ಹಿಂದಿಕ್ಕಿದ 'ಜೈ ಭೀಮ್'

    ಈ ವರ್ಷ ಅತಿ ಹೆಚ್ಚು ಚರ್ಚಿತವಾದ ಸಿನಿಮಾಗಳಲ್ಲಿ ಒಂದು 'ಜೈ ಭೀಮ್'. ಸೂರ್ಯ ನಟಿಸಿ ನಿರ್ಮಾಣ ಮಾಡಿದ್ದ ಈ ಸಿನಿಮಾ ದಲಿತರ ಮೇಲೆ ಪೊಲೀಸರು ಹಾಗೂ ಮೇಲ್ಜಾತಿಯವರು ಮಾಡುವ ದಬ್ಬಾಳಿಕೆ ಮೇಲೆ ಬೆಳಕು ಚೆಲ್ಲುತ್ತದೆ. ನಿಜವಾದ ಘಟನೆ ಆಧರಿಸಿದ ಸಿನಿಮಾ ಇದಾಗಿದ್ದು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿ ದೊಡ್ಡ ಮಟ್ಟದ ಪ್ರೇಕ್ಷಕ ವರ್ಗವನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. 'ಜೈ ಭೀಮ್' ಸಿನಿಮಾವು ಹಾಲಿವುಡ್‌ನ ಕಲ್ಟ್ ಕ್ಲಾಸಿಕ್‌ಗಳಾದ 'ಷಾಶಂಕ್ ರಿಡಂಪ್ಷನ್', 'ದಿ ಗಾಡ್‌ಫಾದರ್‌'ಗಳನ್ನೇ ಐಎಂಬಿಡಿ ರೇಟಿಂಗ್‌ನಲ್ಲಿ ಹಿಂದಿಕ್ಕಿತು. ಸಿನಿಮಾವನ್ನು ಟಿಜೆ ಜ್ಞಾನವೇಲು ನಿರ್ದೇಶನ ಮಾಡಿದ್ದರು. ಸಿನಿಮಾದ ವಿರುದ್ಧ ವನ್ನಿಯಾರ್ ಸಮುದಾಯವರು ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದರು.

    ದಲಿತನ ಬಂಡಾಯದ ಕತೆ 'ನಾರಪ್ಪ'

    ದಲಿತನ ಬಂಡಾಯದ ಕತೆ 'ನಾರಪ್ಪ'

    ಸ್ಟಾರ್ ನಟ ವೆಂಕಟೇಶ್ ನಟಿಸಿರುವ 'ನಾರಪ್ಪ' ಸಿನಿಮಾವು ಇದೇ ವರ್ಷ ಜುಲೈ ತಿಂಗಳಲ್ಲಿ ನೇರವಾಗಿ ಒಟಿಟಿಗೆ ಬಿಡುಗಡೆ ಆಯ್ತು. ಸಿನಿಮಾದಲ್ಲಿ ಗ್ರಾಮೀಣ ಪ್ರದೇಶದಲ್ಲಿ ದಲಿತರ ಮೇಲೆ ಮೇಲ್ವರ್ಗದವರು ಮಾಡುವ ದಬ್ಬಾಳಿಕೆಯ ಚಿತ್ರಣಗಳಿವೆ. ಮೇಲ್ವರ್ಗದ ಮೇಲೆ ತಿರುಗಿ ಬೀಳುವ ದಲಿತ ವ್ಯಕ್ತಿಯ ಸೇಡಿನ ಕತೆ ಇದೆ. ಈ ಸಿನಿಮಾವು ವೆಟ್ರಿಮಾರನ್ ನಿರ್ದೇಶನದ ತಮಿಳು ಸಿನಿಮಾ 'ಅಸುರನ್'ನ ರೀಮೇಕ್. 'ಅಸುರನ್' ಸಿನಿಮಾ 2019 ರಲ್ಲಿ ಬಿಡುಗಡೆ ಆಗಿತ್ತು, ಈ ಸಿನಿಮಾದಲ್ಲಿನ ಅತ್ಯುತ್ತಮ ನಟನೆಗೆ ಧನುಶ್‌ಗೆ ಎರಡನೇ ಬಾರಿ ರಾಷ್ಟ್ರ ಪ್ರಶಸ್ತಿ ದೊರಕಿತ್ತು.

    English summary
    Year End Special: 2021 seen some powerful movie that talks loudly about caste system and untouchability.
    Thursday, December 23, 2021, 16:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X