2023 Roundup: 2023 ರಲ್ಲಿ ಸ್ಯಾಂಡಲ್‌ವುಡ್ ಕಂಡ ಪ್ರಮುಖ ವಿವಾದಗಳತ್ತ ಒಂದು ಸುತ್ತು
ಈ ವರ್ಷದ ಕೊನೆಯಲ್ಲಿದ್ದೆವೆ... ಹೊಸ ವರ್ಷವನ್ನು ಸ್ವಾಗತಿಸುವ ಮುನ್ನ 2023 ರಲ್ಲಿ ಕನ್ನಡ ಸಿನಿಮಾರಂಗ ಕಂಡ ಕೆಲವು ವಿವಾದಗಳ ಪಟ್ಟಿ ಇಲ್ಲಿದೆ. ಸ್ಯಾಂಡಲ್‌ವುಡ್‌ನಲ್ಲಿ ಬೇರೆ ಇಂಡಸ್ಟ್ರಿಗೆ ಹೋಲಿಸಿದರೇ ವಿವಾದಗಳು ಕಡಿಮೆಯೇ ಆದರೂ ನಡೆದ ಕೆಲವು ಘಟನೆಗಳನ್ನು ಇಲ್ಲಿ ಮೆಲುಕು ಹಾಕೋಣ.
ರಚಿತಾ ರಾಮ್ ಮತ್ತು ಗಣರಾಜ್ಯೋತ್ಸವದ ವಿವಾದ
ದರ್ಶನ್ ಮತ್ತು ನಟಿ ರಚಿತಾ ರಾಮ್ ಅಭಿನಯದ ಕ್ರಾಂತಿ ಸಿನಿಮಾದ ಪ್ರಚಾರ ಹೊಸಪೇಟೆಯಲ್ಲಿ ನಡೆಯುತ್ತಿತ್ತು ಈ ವೇಳೆ ಕಿಡಿಗೇಡಿಯೊಬ್ಬ ನಟ ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ, "ಪ್ರತಿ ವರ್ಷ ನಾವು ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆ. ಆದರೆ ಈ ಬಾರಿ ಅದನ್ನು ಮರೆತು ಕ್ರಾಂತಿ ಹಬ್ಬವನ್ನು ಆಚರಿಸೋಣ" ಎಂದು ಗಣರಾಜ್ಯೋತ್ಸವದ ಬಗ್ಗೆ ನಟಿ ರಚಿತಾ ರಾಮ್ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿ ವಿವಾದಕ್ಕೆ ಸಿಲುಕಿಕೊಂಡಿದ್ದರು.

ದರ್ಶನ್ ಫಾರಂ ಹೌಸ್ ಮೇಲೆ ದಾಳಿ
ಇನ್ನು ಕರ್ನಾಟಕ ಅರಣ್ಯ ಇಲಾಖೆಯ ಬ್ರಾಂಡ್ ಅಂಬಾಸಿಡರ್ ಮತ್ತು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರಾಗಿದ್ದ ದರ್ಶನ್ ಅವರ ಫಾರಂ ಹೌಸ್ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದರು. ದರ್ಶನ್ ಕಾನೂನನ್ನು ಉಲ್ಲಂಘಿಸಿ ಕೆಲವು ಪಕ್ಷಿಗಳನ್ನು ಸಾಕಿದ್ದಾರೆ ಎಂದು ರೋಪಿಸಿ ಟಿ ನರಸೀಪುರ ಬಳಿಯ ತೋಟದ ಮನೆ ಮೇಲೆ ಅರಣ್ಯ ಇಲಾಖೆ ದಾಳಿ ನಡೆಸಿ ನಾಲ್ಕು ಪಕ್ಷಿಗಳನ್ನು (Bar-headed goose) ವಶಪಡಿಸಿಕೊಂಡಿದೆ.
ಉರಿಗೌಡ-ನಂಜೇಗೌಡ ಸಿನಿಮಾ
ಉರಿ ಗೌಡ ಮತ್ತು ನಂಜೇಗೌಡ ಎಂಬ ಕಾಲ್ಪನಿಕ ಪಾತ್ರಗಳ ಮೇಲಿನ ರಾಜಕೀಯದ ಬಳಿಕ ಈ ಬಗ್ಗೆ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು. ಮಾಜಿ ಮಂತ್ರಿ ಮತ್ತು ಚಿತ್ರರಂಗದ ಪ್ರಮುಖ ನಿರ್ಮಾಪಕ ಮುನಿರತ್ನ ಅವರು ಎರಡು ಪಾತ್ರಗಳನ್ನು ಆಧರಿಸಿ ತಮ್ಮ ವೃಷಭದ್ರಿ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಿಸಲಾಗುವುದು ಎಂದು ಘೋಷಿಸಿದರು. ಬಳಿಕ ಯೋಜನೆ ಕೈಬಿಟ್ಟಿರುವುದಾಗಿ ತಿಳಿಸಿದ್ದರು.
ಕಿಚ್ಚ ಸುದೀಪ್ ಮತ್ತು ಎಂಎನ್ ಕುಮಾರ್
ಕಿಚ್ಚ ಸುದೀಪ್ ಅಭಿನಯದ ಚಿತ್ರಗಳಿಗೆ ಫೈನಾನ್ಸ್ ಮಾಡುವುದರಲ್ಲಿ ಹೆಸರಾದ ಕನ್ನಡ ಚಲನಚಿತ್ರ ನಿರ್ಮಾಪಕ ಎಂಎನ್ ಕುಮಾರ್ ಅವರು ಸಂಭಾವನೆ ಪಡೆದು ಎಂಟು ವರ್ಷಗಳಾದರು ನಟ ಕಾಲ್‌ಶೀಟ್ ನನ್ನು ತಪ್ಪಿಸುತ್ತಿದ್ದಾರೆ ಎಂದು ಸಾರ್ವಜನಿಕವಾಗಿ ಆರೋಪಿಸಿದ್ದರು. ಸುದೀಪ್ ಎಂಎನ್ ಕುಮಾರ್ ಮತ್ತು ಎಂಎನ್ ಸುರೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇಬ್ಬರು ನಿರ್ಮಾಪಕರು ನಟ ಮತ್ತು ಅವರ ಕುಟುಂಬದ ವಿರುದ್ಧ ಯಾವುದೇ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ಬೆಂಗಳೂರಿನ ನ್ಯಾಯಾಲಯವು ಆದೇಶ ಹೊರಡಿಸಿದೆ.
ರಮ್ಯಾ Vs ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ವಿವಾದ
ನಟಿ, ರಾಜಕಾರಣಿ ರಮ್ಯಾ ಅವರು ಕನ್ನಡ ಚಲನಚಿತ್ರ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ನಿರ್ಮಾಪಕರನ್ನು ನ್ಯಾಯಾಲಯಕ್ಕೆ ಎಳೆದಿದ್ದರು. ತಮ್ಮ ವೀಡಿಯೊ ತುಣುಕುಗಳನ್ನು ಟ್ರೈಲರ್ ಮತ್ತು ಚಲನಚಿತ್ರ ಎರಡರಲ್ಲೂ ಬಳಸಿದ್ದಾರೆ ಎಂದು ರಮ್ಯ ಆರೋಪಿಸಿದ್ದಾರೆ.
ಆರಂಭದಲ್ಲಿ, ನ್ಯಾಯಾಲಯವು ಬಿಡುಗಡೆಗೆ ತಡೆಯಾಜ್ಞೆ ನೀಡಿತ್ತು. ಆದರೆ ನಂತರ ಚಿತ್ರದ ಬಿಡುಗಡೆಗೆ ಆದೇಶವನ್ನು ತೆರವು ಮಾಡಿತು.
ದರ್ಶನ್ ಮತ್ತು ಸಾಕು ನಾಯಿ ವಿವಾದ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಎರಡು ಸಾಕುನಾಯಿಗಳು ತನಗೆ ಕಚ್ಚಿವೆ ಎಂದು ಮಹಿಳೆಯೊಬ್ಬರು ದೂರು ದಾಖಲಿಸಿದ್ದರು. ದರ್ಶನ್ ಅವರನ್ನು ಬೆಂಗಳೂರು ಪೊಲೀಸರು ವಿಚಾರಣೆಗೆ ಕರೆದಿದ್ದರು.

ರಮ್ಯಾ ನಿಧನ ಸುದ್ದಿ!
ನಟಿ ರಮ್ಯಾ ಈ ಬಾರಿ ಅವರ ನಿಧನದ ಸುಳ್ಳು ಸುದ್ದಿಯಿಂದ ಕನ್ನಡಿಗರ ಆತಂಕಕ್ಕೆ ಕಾರಣವಾಗಿದ್ದರು. ರಮ್ಯಾ ಅವರಿಗೆ "ಸ್ಪಂದನಾ" ಎಂಬ ಹೆಸರಿದೆ. ತಮಿಳು ಚಲನಚಿತ್ರೋದ್ಯಮದ ಪಿಆರ್‌ಒ ಒಬ್ಬರು ಆಗಸ್ಟ್ 7 ರಂದು ಬ್ಯಾಂಕಾಕ್‌ನಲ್ಲಿ ನಿಧನರಾದ ವಿಜಯ್ ರಾಘವೇಂದ್ರ ಅವರ ಪತ್ನಿ ದಿವಂಗತ ಸ್ಪಂದನಾ ರಾಘವೇಂದ್ರ ಅವರ ಸಾವಿನ ಸುದ್ದಿಯೊಂದಿಗೆ ರಮ್ಯಾ 44 ನೇ ವಯಸ್ಸಿನಲ್ಲಿ ಹೃದಯಾಘಾತದಿಂತ ನಿಧನ ಎಂದು ಸುದ್ದಿ ಮಾಡಿ ಬಿಟ್ಟಿದ್ದರು.
ಉಪೇಂದ್ರ ಮೇಲೆ ಪ್ರಕರಣ
ಚಿತ್ರ ನಿರ್ಮಾಪಕ, ರಾಜಕಾರಣಿ ಉಪೇಂದ್ರ ಅವರು ಫೇಸ್‌ಬುಕ್ ಲೈವ್ ಕಾರ್ಯಕ್ರಮವೊಂದರಲ್ಲಿ ಮಾಡಿದ ವಿವಾದಾತ್ಮಕ ಜಾತಿವಾದಿ ಹೇಳಿಕೆಗಳ ನಂತರ ಸಂಕಷ್ಟಕ್ಕೆ ಸಿಲುಕಿದರು. ಅವರು ಕ್ಷಮೆಯಾಚಿಸಿದರೂ, ಈ ವಿಷಯದಲ್ಲಿ ಅವರ ವಿರುದ್ಧ ಹಲವಾರು ಎಫ್‌ಐಆರ್‌ಗಳು ದಾಖಲಾಗಿವೆ. ನಂತರ ಅವರು ಕರ್ನಾಟಕ ಹೈಕೋರ್ಟ್‌ಗೆ ಮೊರೆ ಹೋಗಿದ್ದು, ಈ ವಿಷಯದ ಎಲ್ಲಾ ಎಫ್‌ಐಆರ್‌ಗಳಿಗೆ ತಡೆ ನೀಡಿದೆ.
ಬಿಗ್ ಬಾಸ್ ಕನ್ನಡ ಮತ್ತು ಹುಲಿ ಉಗುರಿನ ವಿವಾದ
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಸ್ಪರ್ಧಿ ವರ್ತೂರು ಸಂತೋಷ್ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದಾರೆ ಎಂದು ಬಂಧಿಸಿದ ನಂತರ, ಚಿತ್ರರಂಗದ ಹಲವಾರು ಗಣ್ಯರಿಗೆ ಹುಲಿ ಉಗುರುಗಳ ಕುರಿತು ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರು. ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ ಮುಂತಾದ ನಟರಿಗೆ ವಿವರಣೆ ಕೇಳಲಾಯಿತು.
ಸ್ವಾತಿ ಮುತ್ತಿನ ಮಳೆ ಹನಿಯೇಗೆ ಅಡೆತಡೆ
ಸ್ವಾತಿ ಮುತ್ತಿನ ಮಳೆ ಹನಿಯೇ ಎಂಬ ತನ್ನ ಚೊಚ್ಚಲ ಸಿನಿಮಾ ಮೂಲಕ ನಿರ್ಮಾಪಕಿಯಾಗಿ ಹೊರಹೊಮ್ಮಿದ ನಟಿ ರಮ್ಯಾ ಅವರಿಗೆ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಚಿತ್ರದ ಶೀರ್ಷಿಕೆಯನ್ನು ಇಡದಂತೆ ಕಾನೂನು ತೊಡಕುಗಳನ್ನು ನೀಡಿದ್ದರು. ಆದರೆ, ಬೆಂಗಳೂರಿನ ನ್ಯಾಯಾಲಯ ರಮ್ಯಾ ಪರವಾಗಿ ತೀರ್ಪು ನೀಡಿದ್ದು, ಅಂತಿಮವಾಗಿ ಚಿತ್ರದ ಬಿಡುಗಡೆಗೆ ದಾರಿ ಮಾಡಿಕೊಟ್ಟಿತು.


Click it and Unblock the Notifications











