'ಪರವಶನಾದೆನು' ಹಾಡಿನಲ್ಲಿ ನಾಯಕಿ ತಬ್ಬಿಕೊಂಡಾಗ ಅಪ್ಪು ಭಯಗೊಂಡಿದ್ದೇಕೆ? ಭಟ್ರಿಗೆ ಫೋನ್ ಮಾಡಿದ್ಯಾರು?
ಜೊತೆಗಿರದ ಜೀವ ಎಂದಿಗೂ ಜೀವಂತ.. ಅಭಿಮಾನಿಗಳ ಪಾಲಿಗೆ ಪುನೀತ್ ರಾಜ್‌ಕುಮಾರ್ ನೆನಪಾಗದ ದಿನವೇ ಇಲ್ಲ ಅನಿಸುತ್ತಿದೆ. ಒಂದು ವೇಳೆ ಮರೆತರೂ ಹೋದಲ್ಲಿ ಬಂದಲ್ಲಿ ರಾರಾಜಿಸುವ ಅಪ್ಪು ಭಾವಚಿತ್ರಗಳು ಅವರ ನೆನಪನ್ನು ಶಾಶ್ವತವನ್ನಾಗಿಸುತ್ತಲೇ ಇದೆ. ಪಿಆರ್‌ಕೆ ಫ್ಯಾನಡಮ್ ಆ್ಯಪ್ ಈಗ ಅಪ್ಪು ಸಂಭ್ರಮಾಚರಣೆಗೆ ವೇದಿಕೆಯಾಗಿದೆ.
ಇತ್ತೀಚೆಗೆ ಪಿಆರ್‌ಕೆ ಫ್ಯಾನಡಮ್ ಆ್ಯಪ್ ಲಾಂಚ್ ಆಗಿತ್ತು. ಇದರಲ್ಲಿ ಪುನೀತ್ ರಾಜ್‌ಕುಮಾರ್ ಬಗ್ಗೆ ಸಾಕಷ್ಟು ಮಾಹಿತಿಗಳು ಲಭ್ಯವಿದೆ. ಹಲವು ಫೋಟೊಗಳು, ವೀಡಿಯೋಗಳು ಇಲ್ಲಿದೆ. ಇನ್ನು ಎಐ ಸಹಾಯದಿಂದ ಪುನೀತ್ ನೆನಪುಗಳನ್ನು ಮತ್ತಷ್ಟು ಜೀವಂತವಾಗಿಸುವ ಕೆಲಸ ನಡೀತಿದೆ. ಅದಕ್ಕಿಂತ ಮುಖ್ಯವಾಗಿ 'ನಾಕಂಡ ಅಪ್ಪು' ಹೆಸರಿನಲ್ಲಿ ಸ್ಪೆಷಲ್ ಪಾಡ್‌ಕಾಸ್ಟ್ ನಡೆಸಲಾಗುತ್ತದೆ.

ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವರು ನಗುವಿನ ಒಡೆಯ ಜೊತೆಗಿ ಒಡನಾಟವನ್ನು ಇಲ್ಲಿ ನೆನಪಿಸಿಕೊಳ್ಳುತ್ತಿದ್ದಾರೆ. ಅಶ್ವಿನಿ ತಮ್ಮ ಮದುವೆ, ಲವ್ ಸ್ಟೋರಿ ಎಲ್ಲದರ ಬಗ್ಗೆಯೂ ಮಾತನಾಡಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್ ಕೂಡ ತಮ್ಮ ಹಾಗೂ ಪುನೀತ್ ಜೊತೆಗಿನ ಒಡನಾಟ, ಅವರೊಟ್ಟಿಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕುತ್ತಿದ್ದಾರೆ. ಅಪ್ಪು ಅವರನ್ನು ಮೊದಲಿಗೆ ಭೇಟಿ ಮಾಡಿದ್ದು 'ಮುಂಗಾರುಮಳೆ' ಕಥೆ ಹೇಳಿದ್ದು ಎಲ್ಲವನ್ನು ವಿವರಿಸುತ್ತಿದ್ದಾರೆ.
ಅಪ್ಪು ಕುರಿತುಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ನಿರ್ದೇಶಕ ಯೋಗರಾಜ್ ಭಟ್ ತೆರೆದಿಡುತ್ತಿದ್ದಾರೆ. ಸದ್ಯ 'ಪರಮಾತ್ಮ' ಸಿನಿಮಾ ಮೇಕಿಂಗ್ ಬಗ್ಗೆ ಮಾತನಾಡಿದ್ದಾರೆ. 'ಮುಂಗಾರುಮಳೆ' ಕಥೆಯನ್ನು ಮೊದಲು ಅಪ್ಪುಗೆ ಹೇಳಿದ್ದು ಆ ಕಥೆಯನ್ನು ಹೊಸ ಕಲಾವಿದರ ಜೊತೆ ಮಾಡುವಂತೆ ಸಲಹೆ ಕೊಟ್ಟಿದ್ದು ಎಲ್ಲವ್ನು ಈಗಾಗಲೇ ಬೇರೆ ಸಂದರ್ಶನಗಳಲ್ಲಿ ಭಟ್ರು ಹೇಳಿದ್ದಾರೆ. 'ಲಗೋರಿ' ಎಂಬ ಸಿನಿಮಾ ಅಪ್ಪು ಸರ್ ಜೊತೆ ಮಾಡಬೇಕಿತ್ತು. 'ಕರಟಕ ದಮನಕ' ಬಳಿಕ ಶಿವಣ್ಣ ಹಾಗೂ ಅಪ್ಪು ಕಾಂಬಿನೇಷನ್ ಸಿನಿಮಾ ಪ್ಲ್ಯಾನ್ ಮಾಡಿದ್ದನ್ನು ವಿವರಿಸಿದ್ದಾರೆ.
ಸದ್ಯ 'ನಾ ಕಂಡ ಅಪ್ಪು' ಪಾಡ್‌ಕಾಸ್ಟ್‌ನಲ್ಲಿ 'ಪರಮಾತ್ಮ' ಚಿತ್ರದ ಬಗ್ಗೆ ಮಾತನಾಡುತ್ತಾ 'ಪರವಶನಾದೆನು' ಸಾಂಗ್ ಚಿತ್ರೀಕರಣದ ನೆನಪುಗಳನ್ನು ಯೋಗರಾಜ್ ಭಟ್ ಬಿಚ್ಚಿಟ್ಟಿದ್ದಾರೆ. ಈ ಹಾಡಿನ ಒಂದು ಶಾಟ್ ಸೆರೆಹಿಡಿದ ಬಳಿಕ ಅಪ್ಪು ಸರ್ ಒಂದು ಕ್ಷಣ ಅವಕ್ಕಾಗಿದ್ದರು. ಯಾಕೆ ಅಂತ ಗೊತ್ತಾಗಲಿಲ್ಲ. ಸಿನಿಮಾ ರಿಲೀಸ್ ದಿನ ಒಬ್ರು ಫೋನ್ ಮಾಡಿ ಬೈದ್ರು ಎಂದು ಯೋಗರಾಜ್ ಭಟ್ ಹೇಳಿ ನಕ್ಕಿದ್ದಾರೆ.
"ಸೋನು ನಿಗಮ್ ಹಾಡಿದ್ದ 'ಪರವಶನಾದೆನು' ಹಾಡು ಬಹಳ ಸೊಗಸಾಗಿತ್ತು. ಒಂದು ಶಾಟ್‌ನಲ್ಲಿ ಮೇಲಿಂದ ನೀರು ಬೀಳುತ್ತಿರುತ್ತೆ. ನಾಯಕಿ ಹಿಂದಿನಿಂದ ಬಂದು ತಬ್ಬಿಕೊಳ್ಳುತ್ತಾಳೆ. ಹಾಡು ತೀರ್ಥಹಳ್ಳಿಯಲ್ಲಿ ಶೂಟ್ ಮಾಡಿದ್ದು. ನಾನು ಅಪ್ಪು ಸರ್‌ಗೆ ಫೊಸಿಷನ್ ಕೊಟ್ಟಿದ್ದೆ. ಅಸಿಸ್ಟೆಂಟ್ ಡೈರೆಕ್ಟರ್ ಹಿಂದಿನಿಂದ ಬಂದು ತಬ್ಬಿಕೊಂಡ. ಆಗ ಏನು ಅನ್ನಿಸಲಿಲ್ಲ. ಬಳಿಕ ಶಾಟ್ ಟೇಕ್ ಅಂದಾಗ ಮೇಲಿನಿಂದ ನೀರು ಬೀಳ್ತಿತ್ತು, ಅಪ್ಪು ಸರ್‌ನ ನಾಯಕಿ ಬಂದು ತಬ್ಬಿಕೊಂಡ್ರು. ಹಾಟ್ ಆಗಿದೆ, ರೊಮ್ಯಾಂಟಿಕ್ ಆಗಿ ಕೂಡ ಇದೆ. ಅಪ್ಪು ಸರ್ ಬಂದು ಏನ್ ನಡೀತಿದೆ ಸರ್ ಎಂದು ಕೇಳಿದ್ರು" ಎಂದು ಆ ಘಟನೆಯನ್ನು ಯೋಗರಾಜ್ ಭಟ್ ನೆನಪಿಸಿಕೊಂಡಿದ್ದಾರೆ.
ಮಾತು ಮುಂದುವರೆಸಿರುವ ಭಟ್ರು ಬಳಿಕ ನಡೆದ ಅಸಲಿ ವಿಚಾರ ಹೇಳಿದ್ದಾರೆ. "ಸಂಜೆ ಪ್ಯಾಕಪ್ ಟೈಮಲ್ಲಿ ಕೇಳ್ದೆ. ಅಲ್ಲ ಸರ್, ಆ ಶಾಟ್ ಆದ್ಮೇಲೆ ಮಾನಿಟರ್ ನೋಡಿ ಆ ತರ ಹೇಳಿದ್ಯಾಕೆ ಅಂದೇ, ಏನು ಇಲ್ಲ ಎಂದು ಹೋದ್ರು. ಸಿನಿಮಾ ರಿಲೀಸ್ ದಿನ ಒಂದು ಫೋನ್ ಬಂತು. ಯಾರು ಫೋನ್ ಮಾಡಿದ್ರು, ಏನು ಹೇಳಿದ್ರು ಅನ್ನೋದನ್ನ ಹೇಳಲ್ಲ. ಅವರ ಕಾಲ್ ಕಟ್ ಮಾಡಿದ್ಮೇಲೆ ಅಪ್ಪು ಸರ್‌ಗೆ ಫೋನ್ ಮಾಡ್ದೆ. ಆಗ "ಅವತ್ತು ಮಾನಿಟರ್ ನೋಡಿ ನಿಮ್ಮ ಕಡೆ ನೋಡಿದ್ನಲ್ಲ ಇದಕ್ಕೆ ಅಂದ್ರು" ಅಂತ ಯೋಗರಾಜ್ ಭಟ್ ನಕ್ಕಿದ್ದಾರೆ.
ಅವತ್ತು ನಿಮಗೆ ಫೋನ್ ಮಾಡಿದ್ದು ಅಶ್ವಿನಿ ಮೇಡಂ, ಅದು ಯಾಕೆ ಎನ್ನುವುದು ನಮಗೆ ಗೊತ್ತು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಪಿಆರ್‌ಕೆ ಫ್ಯಾನಡಮ್ ಆ್ಯಪ್‌ನಲ್ಲಿ ಯೋಗರಾಜ್ ಭಟ್ರ ಸಂಪೂರ್ಣ ಸಂದರ್ಶನ ನೋಡಬಹುದು.


Click it and Unblock the Notifications











