ನಮ್ಮಪ್ಪ 35 ವರ್ಷ ಹಿಂದೆ ಸಿನ್ಮಾ ಬಿಟ್ಟಿದ್ರೆ ನಮ್ಮ ಬಳಿ ಎಷ್ಟು ಕೋಟಿ ಆಸ್ತಿ ಇರ್ತಿತ್ತು ಗೊತ್ತಾ?
ಖ್ಯಾತ ನಟ, ನಿರ್ದೇಶಕ, ದ್ವಾರಕೀಶ್ ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಅಪಾರ. ವಿಷ್ಣು-ದ್ವಾರ್ಕಿ ಕಾಂಬಿನೇಷನ್ ಸೂಪರ್ ಹಿಟ್ ಆಗಿತ್ತು. ಆತ್ಮೀಯ ಸ್ನೇಹಿತರಾಗಿದ್ದ ಇವರಿಬ್ಬರು ಬಳಿಕ ದೂರ ದೂರ ಆಗಿದ್ದರು. ಮತ್ತೆ ಮತ್ತೆ ಒಂದಾಗುತ್ತಿದ್ದರು. 'ಆಪ್ತಮಿತ್ರ' ಈ ಜೋಡಿಯ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು.
70-80ರ ದಶಕದಲ್ಲಿ ದ್ವಾರಕೀಶ್ ಬಹಳ ಜನಪ್ರಿಯರಾಗಿದ್ದರು. ನಟನಾಗಿ ಮಾತ್ರವಲ್ಲದೇ ನಿರ್ದೇಶಕ, ನಿರ್ಮಾಪಕರಾಗಿಯೂ ಅದು ಸುವರ್ಣ ಕಾಲ. ಸಾಕಷ್ಟು ಅದ್ಭುತ ಪ್ರಯೋಗಗಳನ್ನು ಮಾಡಿ ಗೆದ್ದಿದ್ದರು. ಆದರೆ ವಿಷ್ಣವರ್ಧನ್‌ರಿಂದ ದೂರಾದ ಬಳಿಕ 80ರ ದಶಕದಲ್ಲಿ ಸತತವಾಗಿ ಸೋಲುಂಡರು. ಪದೇ ಪದೆ ಸಿನಿಮಾಗಳನ್ನು ಮಾಡಿ ಕೈಸುಟ್ಟುಕೊಂಡರು. ಆ ಸಮಯದಲ್ಲೇ ನಾನು ಸಿನಿಮಾ ಮಾಡೋದು ಬಿಟ್ಟಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದು ದ್ವಾರಕೀಶ್ ಸಾಕಷ್ಟು ಬಾರಿ ಹೇಳಿದ್ದಾರೆ.

ಸದಾ ಸಿನಿಮಾ ಬಗ್ಗೆಯೇ ಆಲೋಚಿಸುತ್ತಿದ್ದ ದ್ವಾರಕೀಶ್ ಇಲ್ಲಿ ಕಳೆದುಕೊಂಡಿದ್ದನ್ನು ಇಲ್ಲೇ ಪಡೆಯಬೇಕು ಎನ್ನುವ ಹಠಕ್ಕೆ ಬಿದ್ದರು. ಎಷ್ಟೇ ಸೋಲುಂಡರೂ ಎದ್ದು ಬರುವ ಪ್ರಯತ್ನ ಬಿಡಲಿಲ್ಲ. ಇದ್ದ ಮನೆ ಮಠ ಎಲ್ಲಾ ಮಾರಿಕೊಂಡು ಬಾಡಿಗೆ ಮನೆಗೆ ಬಂದರೂ ಸಿನಿಮಾ ವ್ಯಾಮೋಹ ಕಮ್ಮಿ ಆಗಲಿಲ್ಲ. ಐದಾರು ಮನೆ, ಸೈಟ್‌ಗಳನ್ನು ಮಾರಿಕೊಂಡರು. ಸಿನಿಮಾ ಮಾಡುವುದು ನಿಲ್ಲಿಸಿ ಆ ಮನೆ, ಸೈಟ್ ಉಳಿಸಿಕೊಂಡಿದ್ದರು ಮಕ್ಕಳಿಗೆ ಆಧಾರವಾಗುತ್ತಿತ್ತು ಎಂದು ಸ್ವತಃ ದ್ವಾರಕೀಶ್ ನೆನಪು ಮಾಡಿಕೊಳ್ಳುತ್ತಿದ್ದಾರೆ.
ಕೆಲವೇ ವರ್ಷಗಳ ಹಿಂದೆ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿದ್ದ ಮನೆಯನ್ನು ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಮಾರುವಂತಾಯಿತು. ತಮ್ಮ ತಂದೆಯ ಸಿನಿಮಾ ಪ್ರೀತಿ ಬಗ್ಗೆ ಪುತ್ರ ಯೋಗೇಶ್ ದ್ವಾರಕೀಶ್ ಮಾತನಾಡಿದ್ದಾರೆ. 'ಸುದ್ದಿಮನೆ' ಯೂಟ್ಯೂಬ್ ವಾಹಿನಿ ಸಂದರ್ಶನದಲ್ಲಿ ಸಾಕಷ್ಟು ಸಂಗತಿ ಬಿಚ್ಚಿಟ್ಟಿದ್ದಾರೆ. ವಿಷ್ಣು-ರಮೇಶ್ ಕಾಂಬಿನೇಷನ್‌ನಲ್ಲಿ 'ಆಪ್ತಮಿತ್ರ' ಸಿನಿಮಾ ಮಾಡೋದು ಬೇಡ ಎಂದು ತಮ್ಮ ತಂದೆ ಹೇಳಿದ್ಧಾಗಿಯೂ ನೆನಪಿಸಿಕೊಂಡಿದ್ದಾರೆ.
ವಿಷ್ಣು-ದ್ವಾರ್ಕಿ ನಡುವೆ ಆಗಾಗ್ಗೆ ಮನಸ್ತಾಪ ಮೂಡುತ್ತಿತ್ತು. 90ರ ದಶಕದಲ್ಲಿ ಏಳೆಂಟು ವರ್ಷ ಮಾತು ಬಿಟ್ಟು ದೂರಾಗಿದ್ದರು. ಕೊನೆಗೆ 'ಆಪ್ತಮಿತ್ರ' ಸಿನಿಮಾದಲ್ಲಿ ಜೊತೆಯಾಗಿದ್ದರು. ಆ ಸಿನಿಮಾ ಮಾಡಲು ಮುಂದಾದಾಗ ಯಾರು ಯಾರು ನಟಿಸಬೇಕು ಎನ್ನುವ ಚರ್ಚೆ ಶುರುವಾಯಿತು. ವಿಷ್ಣುವರ್ಧನ್-ರಮೇಶ್ ಅರವಿಂದ್ ಅಂದಾಗ ಅಪ್ಪಾಜಿ ಬೇಡ ಎಂದರು. ಕಾರಣ ಅದಕ್ಕೂ ಹಿಂದೆ ಅವರಿಬ್ಬರು ಒಟ್ಟಿಗೆ ನಟಿಸಿದ್ದ ಸಿನಿಮಾ ಫ್ಲಾಪ್ ಆಗಿತ್ತು ಎಂದು ಚರ್ಚೆ ಮಾಡಿದ್ದಾಗಿ ಯೋಗಿ ಹೇಳಿದ್ದಾರೆ.

ವಿಷ್ಣು- ಪ್ರೇಮಾ ಜೋಡಿಯ ಹಿಂದಿನ ಸಿನಿಮಾ ಕೂಡ ಸೋತಿತ್ತು. ಸೌಂದರ್ಯ ನಟಿಸಿದ ಯಾವುದೇ ಕನ್ನಡ ಸಿನಿಮಾ ದೊಡ್ಡದಾಗಿ ಹಿಟ್ ಆಗಿಲ್ಲ ಎಂದು ಅಪ್ಪ ಹೇಳಿದ್ದರು. ಆಗ ನಾನು ಹೇಳಿದ್ದೆ ನಮ್ಮ ದ್ವಾರಕೀಶ್ ಚಿತ್ರ 18 ವರ್ಷದಿಂದ ಯಾವುದೇ ಹಿಟ್ ಕೊಟ್ಟಿಲ್ಲ. ನಾವು ಲತ್ತೆನೇ ಅಲ್ವಾ? ಎಂದು ತಂದೆಗೆ ಹೇಳಿದ್ದೆ. ಯಾವುದೇ ಲತ್ತೆ ಇಲ್ಲಿ ಮುಖ್ಯ ಆಗಲ್ಲ. ಒಳ್ಳೆ ಸಿನಿಮಾ ಆಗಬೇಕು, ಜನ ಕೈ ಹಿಡಿಯಬೇಕು. 'ಆಪ್ತಮಿತ್ರ' ಬಳಿಕ ಆ ಮಟ್ಟಗಿನ ಅನಿರೀಕ್ಷಿತ ಹಿಟ್ ಅಂದ್ರೆ 'ಕಾಂತಾರ' ಎಂದು ಯೋಗಿ ಬಣ್ಣಿಸಿದ್ದಾರೆ.
'ಶ್ರುತಿ' ಸಿನಿಮಾ ಮಾಡಲು ಎನ್.ಆರ್ ಕಾಲೋನಿ ಮನೆ ಮಾರಿದ್ದೆವು. ಅದಕ್ಕೂ ಮುನ್ನ ಮದ್ರಾಸ್ ಟಿ. ನಗರ್ ಮನೆ ಮಾರಾಟ ಮಾಡುವಂತಾಯಿತು. 1884ರಲ್ಲಿ ಅಪ್ಪ ಸಿನಿಮಾ ಮಾಡುವುದು ಬಿಟ್ಟಿದ್ದರೆ 2002ರ ವೇಳೆಗೆ ನಮ್ಮ ಬಳಿ 200 ಕೋಟಿ ರೂ. ಮೌಲ್ಯದ ಆಸ್ತಿ ಇರುತ್ತಿತ್ತು. ಈ ಬಗ್ಗೆ ಅಪ್ಪ ನನ್ನೊಟ್ಟಿಗೆ ಚರ್ಚಿಸಿದ್ದರು. ಯಾಕಂದರೆ ಟಿ. ನಗರ್ ಮನೆ ಬಹಳ ದೊಡ್ಡದು. ಮನೆ ಮುಂದೆ ಟೆನ್ನಿಸ್ ಕೋರ್ಟ್ ಇತ್ತು. ಭಾರೀ ಬೆಲೆ ಬಾಳುವ ಆಸ್ತಿ. ಅದೇ ರೀತಿ ಎಲ್ಲಾ ಆಸ್ತಿಯ ಮೌಲ್ಯ ದೊಡ್ಡದಿತ್ತು.
20 ವರ್ಷಗಳ ಹಿಂದೆ ಅಪ್ಪ ತಮ್ಮ ತಪ್ಪಿನ ಬಗ್ಗೆ ಮಾಡುತ್ತಿದ್ದರು. ಏನ್ರೋ ನಿಮಗೆ ಏನು ಮಾಡೋಕೆ ಆಗಲಿಲ್ಲ. ಎಲ್ಲಾ ಕಳೆದುಕೊಂಡೆ ಎಂದಿದ್ದರು. ಆಗ ನಾನು ಹೇಳಿದ್ದೆ ನೀವು 1985ರಲ್ಲೇ ಸಿನಿಮಾ ಮಾಡುವುದು ಬಿಟ್ಟಿದ್ದರೆ ನೀವು ಸಾಮಾನ್ಯ ನಿರ್ಮಾಪಕರಾಗಿರುತ್ತಿದ್ದಿರಿ. ದ್ವಾರಕೀಶ್ ಆಗಿ ಇರುತ್ತಿರಲಿಲ್ಲ. ನಮ್ಮಪ್ಪ 200 ರೂ. ತೆಗೆದುಕೊಂಡು ಬಂದವರು. ಮುಂದೆ ಗಳಿಸಿದ್ದನ್ನೆಲ್ಲಾ ಚಿತ್ರರಂಗಕ್ಕೆ ವಾಪಸ್ ಕೊಟ್ಟರು ಎಂದು ಯೋಗೇಶ್ ವಿವರಿಸಿದ್ದಾರೆ.
80ರ ದಶಕದಲ್ಲಿ ನಮ್ಮ ಹಾಗೂ ಅಣ್ಣಾವ್ರ ಫ್ಯಾಮಿಲಿ ನಡುವೆ ವೃತ್ತಿಪರವಾಗಿ ಪೈಪೋಟಿ ಇತ್ತು. ನಮ್ಮ ಎರಡೂ ಕುಟುಂಬಗಳ ನಡುವೆ ಒಳ್ಳೆ ಬಾಂಧವ್ಯ ಇತ್ತು. ಆದರೆ ಅಭಿಮಾನಿಗಳ ನಡುವೆ ಇರಲಿಲ್ಲ. ಅಭಿಮಾನಿಗಳು ಬಹಳ ಎಮೋಷನಲ್ ಪೀಪಲ್ ಏನೂ ಹೇಳೋಕೆ ಆಗುವುದಿಲ್ಲ. ಒಮ್ಮೆ ನಮ್ಮ ಮನೆಗೆ ಕಲ್ಲು ಹೊಡೆದರು. ಅದಾಗಿ ಒಂದು ವಾರಕ್ಕೆ ನಾವು ಮದ್ರಾಸ್‌ಗೆ ಶಿಫ್ಟ್ ಆಗಿದ್ದು ಎಂದು ಯೋಗೀಶ್ ಹೇಳಿದ್ದಾರೆ.


Click it and Unblock the Notifications











