»   » ರಮ್ಯಾ ಮತ್ತು ಬಾಬು ನಡುವೆ ಬ್ಯಾಂಗ್ ಬ್ಯಾಂಗ್!

ರಮ್ಯಾ ಮತ್ತು ಬಾಬು ನಡುವೆ ಬ್ಯಾಂಗ್ ಬ್ಯಾಂಗ್!

Subscribe to Filmibeat Kannada

ಯಾಕೋ ಇತ್ತೀಚೆಗೆ ಕನ್ನಡ ಚಿತ್ರರಂಗ ಉತ್ತಮ ಚಿತ್ರಗಳನ್ನು ನೀಡುವುದರ ಜೊತೆಗೆ ಹಳೆಯ ಮತ್ತು ಹೊಸ ತಲೆಗಳ ನಡುವಿನ ಒಣ ಪ್ರತಿಷ್ಠೆಯ ರಣರಂಗವಾಗಿ ಪರಿವರ್ತಿತವಾಗುತ್ತಿದೆ. ಯಾರನ್ನೂ ಬೊಟ್ಟು ಮಾಡಿ ತೋರಿಸುವಂತಿಲ್ಲ. ಯಾರನ್ನೂ ವಹಿಸಿಕೊಂಡು ಮಾತನಾಡುವಂತಿಲ್ಲ. ಎಲ್ಲರ ಬಳಿಯೂ ಉತ್ತರದ ಬತ್ತಳಿಕೆ ಸಿದ್ಧವಾಗಿಯೇ ಇರುತ್ತದೆ. ಒಣ ಪ್ರತಿಷ್ಠೆಯ ಮೇಲಾಟವೋ, ವೃತ್ತಿಪರತೆಯ ಕೊರತೆಯೋ. ಎಲ್ಲವೂ ಅಯೋಮಯ.

ದಟ್ಸ್ ಕನ್ನಡ ಸಿನಿ ತಂಡ

ಕಲಾಸಾಮ್ರಾಟ್ ಎಸ್. ನಾರಾಯಣ್ ಮತ್ತು ನವನಟ 'ದುನಿಯಾ' ವಿಜಯ್ ತಿಕ್ಕಾಟ ತಣ್ಣಗಾಗಿ ಎಲ್ಲ ಸರಿಯಾಗಿದೆ ಎನ್ನುವಷ್ಟರಲ್ಲಿ ಪ್ರತಿಭಾನ್ವಿತ ನಟಿ ರಮ್ಯಾ ಮತ್ತು ಹಿರಿನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ ಬಾಬು ನಡುವೆ ಬ್ಯಾಂಗ್ ಬ್ಯಾಂಗ್ ಶುರುವಾಗಿದೆ.

ಕೊಟ್ಟ ಕಾಲ್ ಶೀಟನ್ನು ಹಿಂದಕ್ಕೆ ಪಡೆಯುವುದು, ನಖರಾಗಳಿಂದಾಗಿ ನಿರ್ದೇಶಕರಿಂದಲೇ ಎತ್ತಂಗಡಿಯಾಗುವುದು ರಮ್ಯಾಗೆ ಹೊಸದೇನಲ್ಲ. ಈಗ ಬಾಬು ಜೊತೆ 'ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್' ಚಿತ್ರಕ್ಕೆ ಸಂಬಂಧಿಸಿದಂತೆ ವಾಗ್ದಾಳಿಗಳು, ಕೆಸರೆರಚಾಟ, ಅರಚಾಟ, ದೂರುದುಮ್ಮಾನಗಳೆಲ್ಲಾ ಶುರುವಾಗಿವೆ. ರಮ್ಯಾ ಚಿತ್ರೀಕರಣಕ್ಕೆ ಸರಿಯಾಗಿ ಬರ್ತಾಯಿಲ್ಲ. ಸಂಭಾವನೆ ಎಲ್ಲಾ ತೊಗೊಂಡು ಚಿತ್ರದಲ್ಲಿನ ಮಹತ್ವದ ಹಾಡಿನ ಚಿತ್ರೀಕರಣಕ್ಕೆ ಬರದೆ ಕೈಕೊಟ್ಟಳು. ಹೀಗೆ ಮಾಡಿದರೆ ನಾನು ಸುಮ್ಮನಿರುತ್ತೀನಾ? ಸಾಲದ್ದಕ್ಕೆ ಕಾರು ಕಳುಹಿಸಿದರೆ ಡ್ರೈವರ್ ಬಳಿ ಕೆಟ್ಟದಾಗಿ ಮಾತನಾಡುತ್ತಾಳೆ. ಅದಕ್ಕೆ ಚೇಂಬರ್‌ಗೆ ದೂರು ಕೊಟ್ಟಿದ್ದೇನೆ ಎನ್ನುತ್ತಾರೆ ಹಳೆ ತಲೆಮಾರಿನ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು.

ಬಾಬು ಎಸೆದ ಬಾಂಬಿನಿಂದ ಗರಮ್ಮಾಗಿರುವ ರಮ್ಯಾ, ಹತ್ತು ತಿಂಗಳು ಆ ಚಿತ್ರಕ್ಕಾಗಿ ಕೆಲಸ ಮಾಡಿದ್ದೇನೆ. ಅಷ್ಟು ದಿನ ಒಂದೇ ಒಂದು ಕಿರಿಕ್ ಮಾಡಿಲ್ಲ. ಅಂತಾದ್ದರಲ್ಲಿ ಬರೀ ಎರಡು ಗಂಟೆ ಶೂಟಿಂಗ್‌ಗೆ ಬರಲು ಕಿರಿಕ್ ಮಾಡ್ತೀನಾ? ಸಾಲದಕ್ಕೆ ಅದು ಮಾಮೂಲಿ ಹಾಡಲ್ಲ. ಸಾಹಸ ಸಿಂಹ ವಿಷ್ಣುವರ್ಧನ್,ರೆಬಲ್ ಸ್ಟಾರ್ ಅಂಬರೀಷ್, ಪ್ರಣಯ ರಾಜ ಶ್ರೀನಾಥ್ ಸೇರಿದಂತೆ ಹಿರಿಕಿರಿಯ ಕಲಾವಿದರೆಲ್ಲಾ ನಟಿಸುತ್ತಿದ್ದಾರೆ. ಅಂಥ ಹಿರಿಯರ ಜೊತೆ ಕುಣಿಯುವುದೇ ಹೆಮ್ಮೆಯ ವಿಷಯ. ಕಾರಣವಿಲ್ಲದೆ ಯಾರಾದರೂ ತಪ್ಪಿಸುತ್ತಾರಾ? ಎಂದು ಪ್ರತಿದಾಳಿ ನಡೆಸಿದ್ದಾರೆ.

ರಮ್ಯಾ ಹೇಳಿದ ಕಾರಣ ಹೀಗಿದೆ. ಈ ಹಾಡಿನ ಚಿತ್ರೀಕರಣಕ್ಕಾಗಿ ನಾನು ಸಕಲೇಶಪುರದಿಂದ ಬಂದಿದ್ದೆ. ಆ ದಿನ ನನ್ನ ಆರೋಗ್ಯ ಕೆಟ್ಟಿತ್ತು. ಆಗಾಗ ನನಗೆ ಈ ರೀತಿ ಆಗುತ್ತದೆ. ಆ ಸಮಯದಲ್ಲಿ ನನಗೆ ಸದ್ದು , ಗದ್ದಲ ಕೇಳಿದರೆ ಆಗುವುದಿಲ್ಲ. ಅದೊಂದು ವಿಚಿತ್ರ ಅನಾರೋಗ್ಯ. ಇದನ್ನೇ ನಾನು ಬಾಬು ಸಾರ್‌ಗೆ ಹೇಳಿ, ಬರಲು ಆಗುವುದಿಲ್ಲ ಸಾರಿ ಎಂದು ಮೆಸೇಜ್ ಕಳಿಸಿದೆ. ಅವರ ಡ್ರೈವರ್ ಬಂದಾಗ ಮರ್ಯಾದೆಯಿಂದಲೇ ನಡೆದುಕೊಂಡೆ. ಬೇಕಾದರೆ ಆ ಡ್ರೈವರ್‌ನನ್ನು ನೀವು ವಿಚಾರಿಸಬಹುದು. ಆದರೆ ಈಗ ನೋಡಿದರೆ ಚಿತ್ರೀಕರಣಕ್ಕೆ ಬರುತ್ತಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಹೀಗಾದರೆ ಜನ ನನ್ನನ್ನು ಏನೆಂದು ತಿಳಿದುಕೊಳ್ಳಬೇಕು? ನನ್ನ ವ್ಯಕ್ತಿತ್ವದ ಬಗ್ಗೆ ಉದ್ಯಮದಲ್ಲಿ ವಿನಾ ಕಾರಣ ಗಾಸಿಪ್ ಹರಡುವುದಿಲ್ಲವೆ? ಬಹುಶಃ ಪುಕ್ಕಟೆ ಪ್ರಚಾರಕ್ಕಾಗಿ ಬಾಬು ಹೀಗೆ ಸುದ್ದಿ ಹಬ್ಬಿಸಿರಬಹುದು. ನನಗಂತೂ ತುಂಬಾ ಬೇಸರವಾಗಿದೆ. ನಾನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ. ಚೇಂಬರ್ ನನಗೆ ಉತ್ತರಿಸುವಂತೆ ನೋಟಿಸ್ ಕಳಿಸಿದೆ.

ಯಾರು ಸರಿ? ಯಾರು ತಪ್ಪು? ಕಾರಣವಿಲ್ಲದೇ ರಮ್ಯಾನೂ ಶೂಟಿಂಗ್ ತಪ್ಪಿಸಿರುವುದಿಲ್ಲ. ಕಾರಣವಿಲ್ಲದೇ ಬಾಬೂನೂ ರಮ್ಯಾಳ ತಲೆ ಮೇಲೆ ಗೂಬೆ ಕೂಡಿಸಿರುವುದಿಲ್ಲ. ಬೆಂಕಿಯಿಲ್ಲದೇ ಹೊಗೆ ಆಡುವುದಿಲ್ಲ ಅಲ್ಲವೆ?

ಕೆಲ ದಿನಗಳ ಹಿಂದೆ ಒಂದಾನೊಂದು ಕಾಲದ ನಟನನ್ನು ಹೋಲುವ ಯುವನಟರೊಬ್ಬರು ಬರುವಾಗ ಸೈಡ್ ಕಲಾವಿದನೊಬ್ಬ ಬದಿಗೆ ಸರಿಯಲಿಲ್ಲವೆಂದು 'ಹೀರೊ ಬರುವಾಗ ಮರ್ಯಾದೆ ಕೊಡಬೇಕೆಂದು ಗೊತ್ತಿಲ್ವಾ?' ಅಂತ ಯಕ್ಕಾಮಕ್ಕಾ ಬೈದಿದ್ದರು. ಐವತ್ತು ವರ್ಷಗಳ ಕಾಲ ಕನ್ನಡ ಚಿತ್ರರಂಗವನ್ನಾಳಿದ್ದ ರಾಜಕುಮಾರ್, ನಲವತ್ತು ವರ್ಷಗಳಿಂದ ಘರ್ಜಿಸುತ್ತಿರುವ ಸಾಹಸ ಸಿಂಹ ವಿಷ್ಣುವರ್ಧನ್ ಕಿರಿಯರೊಂದಿಗೆ ಅಥವಾ ಹಿರಿಯರೊಂದಿಗೆ ಕೀಳಾಗಿ ನಡೆದುಕೊಂಡ ಘಟನೆಗಳು ಹುಡುಕಿದರೂ ಸಿಗುವುದಿಲ್ಲ. ಅಂಥದ್ದರಲ್ಲಿ ಎರಡು ಚಿತ್ರ 25 ವಾರ ಓಡುವುದು ಓತ್ತಟ್ಟಿಗಿರಲಿ ಬಿಡುಗಡೆಯಾದರೇ ಸ್ಟಾರ್ ಥರ ಆಡುವ ಈ ನಟನಟಿಯರು ಕಲಿಯುವುದು ಸಾಕಷ್ಟಿದೆ.

Please Wait while comments are loading...