ಶಂಕರ್ ಐಪಿಎಸ್ ನಿರ್ಮಾಪಕನಿಗೆ ರು.40 ಲಕ್ಷ ಲಾಸು
'ಶಂಕರ್ ಐಪಿಎಸ್' ಚಿತ್ರ ಪ್ರದರ್ಶನಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದ ಕಾರಣ ನಿರ್ಮಾಪಕರ ಕೆ ಮಂಜು ಅವರಿಗೆ ರು.40 ಲಕ್ಷ ನಷ್ಟವಾಗಿದೆ. ಕೋರ್ಟ್ ತಡೆಯಾಜ್ಞೆಯ ಕಾರಣ ಆಕ್ಷನ್ ಹೀರೋ ವಿಜಯ್ ಅಭಿನಯದ ಶಂಕರ್ ಐಪಿಎಸ್ ಮೂರು ದಿನ 60 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿಲ್ಲ. ಈ ಮೂರು ದಿನದಲ್ಲಿ ರು.40 ಲಕ್ಷ ಲುಕ್ಸಾನಾಗಿದೆ ಎನ್ನಲಾಗಿದೆ.
ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಮೊದಲ ವಾರದ ಬಾಕ್ಸಾಫೀಸ್ ರಿಪೋರ್ಟ್ ಸಹ ಚೆನ್ನಾಗಿತ್ತು ಎಂಬ ಮಾತುಗಲು ಕೇಳಿಬಂದಿವೆ. ಈ ಹಿಂದಿನ ಚಿತ್ರಗಳಲ್ಲಿ ಕಳೆದುಕೊಂಡಿದ್ದ ದುಡ್ಡಿನಲ್ಲಿ ಅಷ್ಟೋ ಇಷ್ಟೋ 'ಶಂಕರ್ ಐಪಿಎಸ್' ಮಂಜುಗೆ ತಂದುಕೊಡುವುದರಲ್ಲಿತ್ತು, ಅಷ್ಟರಲ್ಲಿ ಕೋರ್ಟ್ ನಿರ್ಬಂಧ ಹೇರಿತ್ತು.
ಶಂಕರ್ ಐಪಿಎಸ್ ಚಿತ್ರದಲ್ಲಿ ವಕೀಲರು ಹಾಗೂ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅವಹೇಳನಕಾರಿ ಸಂಭಾಷಣೆಗಳಿವೆ. ವಕೀಲರನ್ನು ದಲ್ಲಾಳಿಗಳು, ಬ್ರೋಕರ್ ಗಳು ಹಾಗೂ ನ್ಯಾಯಾಲಗಳನ್ನು ಮಾರುಕಟ್ಟೆಗಳು ಎಂದು ಅಗೌರವಯುತವಾಗಿ ಮಾತನಾಡಲಾಗಿದೆ ಎಂದು ಆರೋಪಿಸಿ ವಕೀಲರ ಸಂಘ ನ್ಯಾಯಾಲಯದಲ್ಲಿ ದಾವಾ ಹೂಡಲಾಗಿತ್ತು.
ಬಳಿಕ ಚಿತ್ರದ ನಿರ್ದೇಶಕ ಎಂ ಎಸ್ ರಮೇಶ್ ಮತ್ತು ನಿರ್ಮಾಪಕ ಕೆ ಮಂಜು ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಕ್ಷಮೆಯಾಚಿಸುವ ಮೂಲಕ ವಿವಾದಕ್ಕೆ ತೆರೆಬಿದ್ದಿದೆ. ಚಿತ್ರದಲ್ಲಿನ ಆಕ್ಷೇಪಾರ್ಹ ಸಂಭಾಷಣೆಯನ್ನು ಕೈಬಿಡುವುದಾಗಿ ನಿರ್ಮಾಪಕರು ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದರಿಂದ ಚಿತ್ರ ಪ್ರದರ್ಶನಕ್ಕೆ ಅನುಮತಿ ಕೊಡಲಾಗಿದೆ.


Click it and Unblock the Notifications











