twitter
    For Quick Alerts
    ALLOW NOTIFICATIONS  
    For Daily Alerts

    ಪುಟ್ಟಣ್ಣ ಚಿತ್ರಮಂದಿರದ ಪ್ರಾಣತ್ಯಾಗ

    By Staff
    |
    • ದಟ್ಸ್‌ಕನ್ನಡ ಬ್ಯೂರೊ
    ಬೆಂಗಳೂರಿನ ಜಯನಗರ ಬಡಾವಣೆಯ ನಾಲ್ಕನೇ ಹಂತದಲ್ಲಿರುವ ಪುಟ್ಟಣ್ಣ ಚಿತ್ರಮಂದಿರ ಮಧ್ಯಮ ವರ್ಗದ ಮಂದಿಗೆ ಪ್ರೀತಿಯ ಚಿತ್ರಮಂದಿರವಾಗಿತ್ತು . ನಗರದಲ್ಲೇ ಅತ್ಯಂತ ಕಡಿಮೆ ಬಾಡಿಗೆಯ (ವಾರಕ್ಕೆ 65 ಸಾವಿರ) ಚಿತ್ರಮಂದಿರ ಎನ್ನುವ ಅಗ್ಗಳಿಕೆಯ ಪುಟ್ಟಣ್ಣ ಥಿಯೇಟರ್‌ ಕನ್ನಡ ಚಿತ್ರಗಳಿಗೆ ಮಾತ್ರ ಮೀಸಲಾಗಿತ್ತು . ಪ್ರಶಸ್ತಿ ವಿಜೇತ ಚಿತ್ರಗಳಿಗೆ ಆದ್ಯತೆ ನೀಡುತ್ತಿದ್ದ ಈ ಚಿತ್ರಮಂದಿರ ಪುಂಡುಪೋಕರಿಗಳ ಕಾಟದಿಂದಲೂ ಮುಕ್ತವಾಗಿತ್ತು . ಆ ಕಾರಣದಿಂದ ಮಹಿಳೆಯರು ಹಾಗೂ ಇಳಿವಯಸ್ಸಿನವರಿಗೆ ಪುಟ್ಟಣ್ಣ ಚಿತ್ರಮಂದಿರ ಅಚ್ಚುಮೆಚ್ಚಿನ ಚಿತ್ರಮಂದಿರವಾಗಿತ್ತು .

    ಕರ್ನಾಟಕ ಚಲನಚಿತ್ರ ಅಭಿವೃದ್ಧಿ ನಿಗಮದ ಆದೇಶದ ಮೇರೆಗೆ ಏ.30 ಶುಕ್ರವಾರದಿಂದ ಪುಟ್ಟಣ್ಣ ಚಿತ್ರಮಂದಿರವನ್ನು ಮುಚ್ಚಲಾಗಿದೆ. ಕಳೆದ ಎರಡು ವರ್ಷಗಳಿಂದ ಚಿತ್ರಮಂದಿರ ಅಸ್ವಸ್ಥವಾಗಿತ್ತು ಎಂದು ಕೆಎಫ್‌ಐಡಿಸಿ ಚಿತ್ರಮಂದಿರ ಮುಚ್ಚಲಿಕ್ಕೆ ಕಾರಣ ನೀಡಿದೆ. ಆದರೆ ನಿಜವಾಗಿಯೂ ಅಸ್ವಸ್ಥವಾಗಿದ್ದುದು ಕೆಎಫ್‌ಐಡಿಸಿ !

    ದಿವಾಳಿಯ ಅಂಚಿನಲ್ಲಿದ್ದ ಕೆಎಫ್‌ಐಡಿಸಿ ತನ್ನ ವೈಫಲ್ಯವನ್ನು ಚಿತ್ರಮಂದಿರದ ಮೇಲೆ ಹೇರಿದೆ. ಪುಟ್ಟಣ್ಣ ಚಿತ್ರಮಂದಿರದ ಮೇನೇಜರ್‌ ವೆಂಕಟೇಶ್‌ ಕುಮಾರ್‌ ಹೇಳುವಂತೆ ಚಿತ್ರಮಂದಿರ ನಷ್ಟ ಅನುಭವಿಸಿದ್ದೇ ಇಲ್ಲ . ಕಳೆದ ವರ್ಷ ಮೂರು ಲಕ್ಷ ರುಪಾಯಿ ಲಾಭ ಸಂಪಾದಿಸಿದ್ದ ಪುಟ್ಟಣ್ಣ ಚಿತ್ರಮಂದಿರ, ಪ್ರಸಕ್ತ ವರ್ಷ 37 ಲಕ್ಷ ರುಪಾಯಿ ಲಾಭ ಗಳಿಸುವ ಹಾದಿಯಲ್ಲಿತ್ತು ಎಂದು ವೆಂಕಟೇಶ್‌ ಹೇಳುತ್ತಾರೆ.

    ಪುಟ್ಟಣ್ಣ ಚಿತ್ರಮಂದಿರ ಇರುವ ಜಾಗದಲ್ಲಿ ಷಾಪಿಂಗ್‌ ಕಾಂಪ್ಲೆಕ್ಸ್‌ ಇದ್ದು , ಪುಟ್ಟಣ್ಣ ಥಿಯೇಟರ್‌ ಕೂಡ ಷಾಪಿಂಗ್‌ ಕಾಂಪ್ಲೆಕ್ಸ್‌ನ ಒಂದಂಗವಾಗುವ ಸಾಧ್ಯತೆಯಿದೆ.

    ಕನ್ನಡದ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲರ ಹೆಸರನ್ನು ಚಿರಸ್ಥಾಯಿಯಾಗಿಸುವ ಉದ್ದೇಶದಿಂದ 1985ರಲ್ಲಿ ಪುಟ್ಟಣ್ಣ ಚಿತ್ರಮಂದಿರ ಜನ್ಮ ತಾಳಿತು. ಈ ಚಿತ್ರಮಂದಿರದಲ್ಲಿ ತೆರೆಕಂಡ ಮೊದಲ ಚಿತ್ರ ಕಣಗಾಲರ ಮಸಣದ ಹೂವು. ಎಡಕಲ್ಲು ಗುಡ್ಡ ಚಂದ್ರಶೇಖರ್‌ ಅವರ ಪೂರ್ವಾಪರ, ಪುಟ್ಟಣ್ಣ ಥಿಯೇಟರ್‌ನಲ್ಲಿ ಪ್ರದರ್ಶನ ಕಂಡ ಕೊನೆಯ ಚಿತ್ರ.

    ಹೊಸ ಚಿತ್ರಮಂದಿರಗಳ ನಿರ್ಮಾಣವಂತೂ ಕನಸಿನ ಮಾತು. ಪರಿಸ್ಥಿತಿ ಹೀಗಿರುವಾಗ ಇರುವ ಚಿತ್ರಮಂದಿರಗಳನ್ನು ನಾಶ ಮಾಡಿದರೆ ಹೇಗೆ ? ಬೆಂಗಳೂರನ್ನು ಸಿಂಗಾಪುರ್‌ ಮಾಡುವುದು ಎಂದರೆ ಇದೇನಾ ಕೃಷ್ಣ ?

    Post your views

    ಇದನ್ನೂ ಓದಿ-
    ಸಭ್ಯರ ಜಯನಗರ ಬಡಾವಣೆ ಮತ್ತು ಬಣ್ಣಗೆಟ್ಟ ಪುಟ್ಟಣ್ಣ !

    ಮುಖಪುಟ / ಸ್ಯಾಂಡಲ್‌ವುಡ್‌

    Thursday, April 18, 2024, 7:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X