ಅಪರಾಧಿ ನಾನಲ್ಲ ಎಂದ ಮಾರಿಯಾ ಸುಸೈರಾಜ್

"ನಾನು ತಪ್ಪು ಮಾಡಿಲ್ಲ ಎಂದು ನನಗೆ ಗೊತ್ತು, ನನ್ನ ದೇವರಿಗೂ ಗೊತ್ತು" ಎಂದು ಕಿಕ್ಕಿರಿದು ತುಂಬಿದ್ದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಮಾರಿಯಾ, ತಪ್ಪಿತಸ್ಥೆ ಎಂದು ತೀರ್ಪಿತ್ತ ನ್ಯಾಯಾಲಯದ ಆಜ್ಞೆಯ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದರು. "ನಾನು ಜೈಲಿನಿಂದ ಹೊರಬರಲು ನನ್ನ ದೇವರೇ ಕಾರಣ" ಎಂದು ಭಾವುಕರಾಗಿ ನುಡಿದರು.
ವಕೀಲರಾದ ಶರೀಫ್ ಶೇಖ್ ಅವರೊಂದಿಗೆ ಬಂದಿದ್ದ ಮಾರಿಯಾ ಆರಂಭದಲ್ಲಿ ಮಾತನಾಡುವುದಿಲ್ಲ ಎಂದಿದ್ದರೂ ನಂತರ ತಮ್ಮ ಮನದಾಳದ ಮಾತುಗಳನ್ನು ಹರಿಯಬಿಟ್ಟರು. ತಪ್ಪಿತಸ್ಥೆ ಎಂದು ತೀರ್ಪು ಬಂದಿರುವುದು ತನ್ನ ವ್ಯಕ್ತಿತ್ವಕ್ಕೆ ಅಂಟಿದ ಕಳಂಕ ಎಂದು ನುಡಿದರು. ಗ್ರೋವರ್ ಕುಟುಂಬಕ್ಕೆ ತಮ್ಮ ಸಹಾನುಭೂತಿಯನ್ನು ವ್ಯಕ್ತಪಡಿಸಿದರು. ಆದರೆ, ಕೊಲೆ ಪ್ರಕರಣ ಮತ್ತು ನೀರಜ್ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಪ್ರಕರಣದ ವಿವರ ಬಿಚ್ಚಿಟ್ಟ ವಕೀಲ ಶರೀಫ್, ಗ್ರೋವರನ್ನು 300 ತುಂಡನ್ನಾಗಿ ಮಾಡಿದ್ದು ಬರೀ ಕಟ್ಟುಕಥೆ ಎಂದು ಹೇಳಿ ಕೆಲ ಛಾಯಾಚಿತ್ರಗಳನ್ನು ಪತ್ರಕರ್ತರಿಗೆ ತೋರಿಸಿದರು. ಇದನ್ನು ಕೇಳುತ್ತಿದ್ದಂತೆ ಪತ್ರಿಕಾಗೋಷ್ಠಿಗೆ ಆಗಮಿಸಿದ್ದ ಗ್ರೋವರ್ ಸ್ನೇಹಿತರು ಮತ್ತು ಬಂಧುಗಳು ಮಾರಿಯಾ ವಿರುದ್ಧ ಘೋಷಣೆಗಳನ್ನು ಕೂಗಲು ಆರಂಭಿಸಿದರು.
ಇದರಿಂದ ಕೆಲಕಾಲ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿತ್ತು. ಮಾರಿಯಾ ಪಾತಕಿ ಎಂಬಿತ್ಯಾದಿ ಭಿತ್ತಿಚಿತ್ರಗಳನ್ನು ಹಿಡಿದುಬಂದಿದ್ದ ಗ್ರೋವರ್ ಸ್ನೇಹಿತರು ಮಾರಿಯಾರನ್ನು ವಾಚಾಮಗೋಚರವಾಗಿ ತೆಗಳಲು ಪ್ರಾರಂಭಿಸಿದರು. ಪರಿಸ್ಥಿತಿ ವಿಪರೀತಕ್ಕೆ ಹೋಗುತ್ತಿದ್ದುದನ್ನು ಗಮನಿಸಿದ ಪೊಲೀಸರು ಕೆಲವರನ್ನು ಬಂಧಿಸಿದರು.


Click it and Unblock the Notifications











