»   » ಕನ್ನಡಿಗರಿಗೆದುರು ಕ್ಷಮೆ ಕೇಳೇ ಇಲ್ಲ : ರಜನಿಕಾಂತ್

ಕನ್ನಡಿಗರಿಗೆದುರು ಕ್ಷಮೆ ಕೇಳೇ ಇಲ್ಲ : ರಜನಿಕಾಂತ್

Subscribe to Filmibeat Kannada

ಚೆನ್ನೈ, ಆ. 2 : "ನನ್ನದು ತಪ್ಪಾಗಿದೆ, ಇನ್ನೆಂದೂ ಇಂಥ ತಪ್ಪಾಗುವುದಿಲ್ಲ, ಕನ್ನಡಿಗರಿಂದ ಅಪಾರವಾಗಿ ಕಲಿತಿದ್ದೇನೆ, ಕನ್ನಡಿಗರಿಗೆ ನೋವು ಮಾಡುವ ಉದ್ದೇಶವಿರಲಿಲ್ಲ" ಮುಂತಾಗಿ ಗೋಗರೆದಿದ್ದ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಹೊಗೇನಕಲ್ ವಿವಾದಕ್ಕೆ ಸಂಬಂಧಿಸಿದಂತೆ ಕನ್ನಡಿಗರಿಗಾಗಲಿ, ಯಾವುದೇ ಸಂಘಟನೆಗಾಗಲಿ ಕ್ಷಮೆ ಕೇಳೇ ಇಲ್ಲ, ಮಾಧ್ಯಮಗಳು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿವೆ ಎಂದು ಹೇಳಿಕೆ ನೀಡಿ ತಣ್ಣಗಾಗಿದ್ದ ಬೆಂಕಿಗೆ ಕಿಡಿ ಹೊತ್ತಿಸಿ ತುಪ್ಪ ಸುರಿದಿದ್ದಾರೆ.

ಹೌದು, ಕನ್ನಡಿಗರನ್ನು ಒದೆಯಿರಿ ಎಂಬ ಹೇಳಿಕೆಗೆ ಪ್ರತಿಯಾಗಿ "ನನ್ನನ್ನು ದಯವಿಟ್ಟು ಕ್ಷಮಿಸಿ" ಎಂದು ಕನ್ನಡಿಗರನ್ನು ಮುಕ್ತವಾಗಿ ಕೇಳಿಕೊಂಡಿರದಿದ್ದರೂ, ಆ ಘಟನೆಯಿಂದ ತಮಗೆ ಜ್ಞಾನೋದಯವಾಗಿದೆ, ತಮ್ಮಿಂದ ತಪ್ಪಾಗಿದೆ ಎಂಬಂತೆ ಮಾತನಾಡಿ ಕನ್ನಡಿಗರ ಅನುಕಂಪಕ್ಕೆ ಪಾತ್ರವಾಗಿದ್ದ ಸ್ಟೈಲ್ ಕಿಂಗ್ ರಜನಿ ನೀಡಿರುವ ಈಗಿನ ಹೇಳಿಕೆ ಕನ್ನಡಿಗರಿಗೆ ಬರಸಿಡಿಲಿನಂತೆ ಎರಗಿದರೆ ಆಶ್ಚರ್ಯವಿಲ್ಲ. ರಜನಿ ಪರೋಕ್ಷವಾಗಿಯಾದರೂ ಕ್ಷಮೆ ಕೇಳಿದ್ದಾರೆಂದು ಉದಾರ ಮನಸ್ಸಿನಿಂದ ಕನ್ನಡಿಗರು ಕುಸೇಲನ್ ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಟ್ಟಿದ್ದರು ಮತ್ತು ಭಾಷೆಯನ್ನು ಮೀರಿ ರಜನಿ ಚಿತ್ರವನ್ನು ಸ್ವಾಗತಿಸಿದ್ದರು.

ನಾನು ರಾಜಕಾರಣಿಯಲ್ಲ, ಅಂಥ ಸಭೆಗಳಲ್ಲಿ ನನಗೆ ಮಾತನಾಡಲು ಬರುವುದಿಲ್ಲ, ಇನ್ನು ಮುಂದೆ ವಿಚಾರಮಾಡಿ ಮಾತನಾಡುತ್ತೇನೆ ಎಂದೆಲ್ಲ ಹೇಳಿದ್ದ ರಜನಿಕಾಂತ್, ತಮಿಳುನಾಡಿನಲ್ಲಿ ಉದ್ಭವಿಸಿರುವ ಪರಿಸ್ಥಿತಿಯನ್ನು ನಿಭಾಯಿಸಲು 'ವಿಚಾರ' ಮಾಡಿಯೇ ಮಾತನಾಡಿದ್ದಾರೆ. ಕೆಲ ಹಿರಿಯರು ಕ್ಷಮೆ ಕೇಳಿದ್ದರಲ್ಲಿ ತಪ್ಪೇನಿಲ್ಲ, ದೊಡ್ಡವನಾಗಿದ್ದೀಯ ಎಂದು ಬೆನ್ನು ತಟ್ಟಿದ್ದರೆ, ಇನ್ನು ಕೆಲ ಕಟ್ಟಾ ತಮಿಳು ನಾಯಕರ ಹೇಳಿಕೆ ಕಣ್ಣು ಕೆಂಪೇರುವಂತೆ ಮಾಡಿತ್ತು ರಜನಿ ಸ್ಪಷ್ಟನೆ. ಕುಸೇಲನ್ ಬಿಡುಗಡೆಯಾದ ಅನೇಕ ಚಿತ್ರಮಂದಿರಗಳೆದಿರು 'ಕ್ಷಮೆ' ಕೇಳಿದ್ದಕ್ಕೆ ಪ್ರತಿಯಾಗಿ ಕಟೌಟು, ಬ್ಯಾನರುಗಳನ್ನು ಹರಿದು ತಮ್ಮ 'ಪ್ರೀತಿ'ಯನ್ನು ವ್ಯಕ್ತಪಡಿಸಿದ್ದರು ಅಭಿಮಾನಿಗಳು.

ಪರಿಸ್ಥಿತಿ ತಮಿಳುನಾಡಿನಲ್ಲಿಯೂ ಮೀರುತ್ತಿದೆ ಎನ್ನುವುದನ್ನು ಮನಗಂಡ ರಜನಿ ಕನ್ನಡಗರನ್ನು ಉದ್ದೇಶಿಸಿ ಮಾತನಾಡಿದ ಹೇಳಿಕೆಗೆ ಈಗ ಮತ್ತೆ ಸ್ಪಷ್ಟೀಕರಣ ಕೊಟ್ಟಿದ್ದಾರೆ. "ನಾನು ಕ್ಷಮೆ ಕೇಳಿದ್ದೇನೆಂದು ಕೆಲವರು ಜನರ ದಾರಿ ತಪ್ಪಿಸುತ್ತಿದ್ದಾರೆ. ಅದು ಸಂಪೂರ್ಣ ಸುಳ್ಳು. ಉಪವಾಸ ಸತ್ಯಾಗ್ರಹದಲ್ಲಿ ಹೇಳಿದ ಹೇಳಿಕೆಗೆ ಸ್ಪಷ್ಟೀಕರಣ ಕೊಟ್ಟಿರುವೆನಷ್ಟೇ. ಆ ಘಟನೆಯಿಂದ ಕಲಿತಿದ್ದೇನೆ. ಅಂಥ ಸಂದರ್ಭದಲ್ಲಿ ಹೇಗೆ ಮಾತನಾಡಬೇಕೆಂದು ಕಲಿತಿದ್ದೇನೆ" ಎಂದು ರಜನಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಈ ಸ್ಪಷ್ಟೀಕರಣಕ್ಕೆ ಪ್ರತಿಯಾಗಿ ಕನ್ನಡಿಗರಿಗೆ ಏನು ಪ್ರತಿಸ್ಪಷ್ಟೀಕರಣ ಕೊಡುತ್ತಾರೊ ನೋಡೋಣ.

ರಜನಿ ಮಾತನಾಡುವುದನ್ನು ಕಲಿತಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ! ಕುಸೇಲನ ಕುಚೋದ್ಯ ಅಂದ್ರೆ ಇದೇನಾ? ಇದಕ್ಕೆ ಕನ್ನಡಪರ ಸಂಘಟನೆಗಳು ಏನು ಹೇಳುತ್ತವೆ?

(ದಟ್ಸ್ ಸಿನಿ ವಾರ್ತೆ)

ಪೂರಕ ಓದಿಗೆ
ಕನ್ನಡಿಗರ ಪರೋಕ್ಷ ಕ್ಷಮೆ ಯಾಚಿಸಿದ ರಜನಿಕಾಂತ್
ಓದುಗರ ಪತ್ರ : ಕುಸೇಲನ್ ಬಿಡುಗಡೆ ನಾಚಿಕೆಗೇಡು
ಕನ್ನಡದಲ್ಲಿ 'ಸಾಹೇಬ'ರಿಗೆ 'ಕುಸೇಲನ್' ಬರೆದ ಪತ್ರ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada