»   » ಸತ್ಯ ಇನ್ ಲವ್ ಓಕೆ ತೆಲುಗಿನ ಜಲ್ಸಾ ಯಾಕೆ?

ಸತ್ಯ ಇನ್ ಲವ್ ಓಕೆ ತೆಲುಗಿನ ಜಲ್ಸಾ ಯಾಕೆ?

Posted By:
Subscribe to Filmibeat Kannada

ಬೆಂಗಳೂರು, ಏ.2: ಅನ್ಯಭಾಷಾ ಚಿತ್ರಗಳು ನಗರದ 13 ಹಾಗೂ ಜಿಲ್ಲಾದ್ಯಂತ 4 ಕೇಂದ್ರಗಳಲ್ಲಿ ಮಾತ್ರ ಬಿಡುಗಡೆಯಾಗಬೇಕು. ಆದರೆ ಈ ನಿಯಮವನ್ನು 'ಜಲ್ಸಾ' ತೆಲುಗು ಚಿತ್ರ ಉಲ್ಲಂಘಿಸಿ 30 ಕೇಂದ್ರಗಳಲ್ಲಿ ಬುಧವಾರ ಬಿಡುಗಡೆಯಾಗುತ್ತಿದೆ ಎಂದು ಆರೋಪಿಸಿ ''ಸತ್ಯ ಇನ್ ಲವ್'' ಚಿತ್ರ ತಂಡ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿತು.

ಶುಕ್ರವಾರ ಬಿಡುಗಡೆಯಾಗಬೇಕಿದ್ದ 'ಜಲ್ಸಾ' ಚಿತ್ರವನ್ನು ಬುಧವಾರವೇ ಬಿಡುಗಡೆ ಮಾಡಲಾಗುತ್ತಿದೆ. ರಾಜ್ಯದಲ್ಲೇ ಆಗಲೀ, ನಗರದಲ್ಲೇ ಆಗಲೀ ಹೊಸ ಚಿತ್ರ ಬಿಡುಗಡೆಯಾಗುವುದಾದರೆ ಶುಕ್ರವಾರ ಬಿಡುಗಡೆಯಾಗಬೇಕು. ಇದರಿಂದ ಸತ್ಯ ಇನ್ ಲವ್ ಸೇರಿದಂತೆ ಎಲ್ಲ ಕನ್ನಡ ಚಿತ್ರ ಪ್ರದರ್ಶನಗಳಿಗೆ ನಷ್ಟ ಉಂಟಾಗಲಿದೆ ಎಂದು ಸತ್ಯ ಇನ್ ಲವ್ ಚಿತ್ರ ನಿರ್ಮಾಪಕ ರಮೇಶ್ ದೂರಿದ್ದಾರೆ.

ಒಂದು ವೇಳೆ ತೆಲುಗಿನ ಸ್ಟಾರ್ ಚಿರಂಜೀವಿ ಅವರ ತಮ್ಮ ಪವನ್ ಕಲ್ಯಾಣ್ ನಟಿಸಿರುವ ಜಲ್ಸಾ ಚಿತ್ರ ಬುಧವಾರವೇ ಬಿಡುಗಡೆಯಾದರೆ ಕನ್ನಡ ಸಂಘಟನೆಗಳು, ಚಲನಚಿತ್ರ ನಿರ್ಮಾಪಕರ ಸಂಘ, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ, ಚಲನಚಿತ್ರ ವಾಣಿಜ್ಯ ಮಂಡಳಿಯ ಡಾ.ರಾಜ್‌ಕುಮಾರ್ ಪ್ರತಿಮೆ ಬಳಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರಮೇಶ್ ಎಚ್ಚರಿಸಿದ್ದಾರೆ.

ಈ ಸಂಬಂಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲಾಗಿದೆ. ನಿರ್ಮಾಪಕರ ಸಂಘ ತಮಗೆ ಬೆಂಬಲ ವ್ಯಕ್ತಪಡಿಸಿರುವುದಾಗಿ ರಮೇಶ್ ಹೇಳಿದರು. ಪ್ರತಿಭಟನೆಯಲ್ಲಿ ಸತ್ಯ ಇನ್ ಲವ್ ನಿರ್ದೇಶಕ ರಾಘವ ಲೋಕಿ, ಡಾ.ರಾಜ್‌ಕುಮಾರ್ ಸಂಘದ ಕಾರ್ಯಕರ್ತರು, ಶಿವರಾಜ್‌ಕುಮಾರ್ ಸಂಘದ ಕಾರ್ಯಕರ್ತರು, ನಿರ್ಮಾಪಕರ ಸಂಘ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.

(ದಟ್ಸ್‌ಕನ್ನಡಸಿನಿ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada