»   » ಅಮಿತಾಬ್‌ ಬಚ್ಚನ್‌ಗೆ ಬೆಂಗಳೂರು ಪೊಲೀಸರ ಧಮ್‌ಕಿ !

ಅಮಿತಾಬ್‌ ಬಚ್ಚನ್‌ಗೆ ಬೆಂಗಳೂರು ಪೊಲೀಸರ ಧಮ್‌ಕಿ !

Subscribe to Filmibeat Kannada

ತನ್ನದೊಂದು ಝಲಕ್ಕಿಗೇ ಲಕ್ಷ ಲಕ್ಷ ಗಿಟ್ಟಿಸಿಕೊಳ್ಳಬಲ್ಲ ಛಾತಿಯಿದ್ದ ಅಮಿತಾಬ್‌ ಬಚ್ಚನ್‌ ಆಮೇಲೆ ಎಬಿಸಿಎಲ್‌ ಕಟ್ಟಿ, ಸಾಲದಲ್ಲಿ ಮುಳುಗಿಹೋದದ್ದು ಹಳೆಯ ಕತೆ. ‘ಕೌನ್‌ ಬನೇಗಾ ಕರೋಡ್‌ಪತಿ’ ಕೊಟ್ಟ ಮರು ಉಸಿರಿನಿಂದ ಈಗ ಅಮಿತಾಬ್‌ ಪ್ರತಿಶತ 99 ಸಾಲ ಮುಕ್ತ. ಅದಕ್ಕೇ ಅವರು ಬೆಂಗಳೂರು ಪೊಲೀಸರಿಗೂ ಮಾಡ ಹೊರಟಿದ್ದಾರೆ ಹಳೆಯ ಬಾಕಿ ಚುಕ್ತಾ !

1996ರಲ್ಲಿ ಪ್ರತಿಭಟನೆಯ ನಡುವೆಯೂ ಬೆಂಗಳೂರಲ್ಲಿ ಜೋರಾಗಿ ಮಿಸ್‌ ವರ್ಲ್ಡ್‌ ಸ್ಪರ್ಧೆ ನಡೆಯಿತು. ಈ ಕಾರ್ಯಕ್ರಮದ ಆಯೋಜನೆಯ ಮುಂಚೂಣಿಯಲ್ಲಿ ಎಬಿಸಿಎಲ್‌ ಇತ್ತು. ಇದಕ್ಕಾಗಿ ಅಮಿತಾಬ್‌ ಬಚ್ಚನ್‌ ಹಗಲು ರಾತ್ರಿ ಬೆವರು ಹರಿಸಿದ್ದರು. ಆಗ ರಾತ್ರಿ ಎರಡು ಗಂಟೆಗೆ ನಿಂತಲ್ಲೇ 2.5 ಕೋಟಿ ರುಪಾಯಿ ಡೆಪಾಸಿಟ್‌ ಕಟ್ಟುವಂತೆ ಬೆಂಗಳೂರು ಪೊಲೀಸ್‌ ಕಮಿಷನರ್‌ ಪಟ್ಟು ಹಿಡಿದರಂತೆ. ಇಲ್ಲವಾದರೆ ಸ್ಪರ್ಧೆಗೆ ಭದ್ರತೆ ಕೊಡುವುದಿಲ್ಲ ಎಂದರಂತೆ. ಆ ಅಪರಾತ್ರಿಯಲ್ಲಿ ಅಷ್ಟೊಂದು ದೊಡ್ಡ ಮೊತ್ತವನ್ನು ಅಮಿತಾಬ್‌ ಹೊಂದಿಸಿಕೊಂಡು ಬಂದು, ಕಮಿಷನರ್‌ ಕೈಗಿತ್ತರಂತೆ. ಆ ದುಡ್ಡನ್ನು ಹೇಗೆ ಹೊಂದಿಸಿದೆ ಅಂತ ನನಗೆ ಮಾತ್ರ ಗೊತ್ತು ಅಂತ ಬಚ್ಚನ್‌ ನಿಡುಸುಯ್ಯುತ್ತಾರೆ.

ಅದು ಹಳೆಯ ವಿಷಯ. ಆರು ವರ್ಷ ಉರುಳಿವೆ. ಬಚ್ಚನ್‌ ಕೂಡ ಅದನ್ನು ಜಗತ್ತಿಗೆ ಸಾರದೆ ಸುಮ್ಮನಾಗಿದ್ದರು. ಈಗ ಬೆಂಗಳೂರು ಪೊಲೀಸರು ಮತ್ತೆ 2 ಕೋಟಿ ರುಪಾಯಿ ಡಿಮ್ಯಾಂಡ್‌ ಮಾಡುತ್ತಿದ್ದಾರಂತೆ. ಅದಕ್ಕೇ ಬಚ್ಚನ್‌ ಜೈಸಲ್ಮೇರ್‌ನಲ್ಲಿ ಸುದ್ದಿಗಾರರ ಮುಂದೆ ತಮ್ಮ ಹಳೆಯ ದುಃಖವನ್ನು ತೋಡಿಕೊಂಡರು. ಆದರೆ, ಈಗಿನ ಪೊಲೀಸ್‌ ಕಮಿಷನರ್‌ ಎಂ.ಡಿ.ಸಿಂಗ್‌ಗೆ ಈ ವಿಷಯವೇ ಗೊತ್ತಿಲ್ಲವಂತೆ. ಈ ಆರೋಪವನ್ನು ಪರಿಶೀಲಿಸಿ ಉತ್ತರ ಕೊಡುತ್ತೇನೆ ಎನ್ನುತ್ತಾರವರು.

ಅಂದಹಾಗೆ, ಅಮಿತಾಬ್‌ ಪೂರ್ತಿ ಸಾಲ ಮುಕ್ತನಾಗುವ ದಿನ ಹತ್ತಿರವಿರುವುದರಿಂದ ತಾಚೊಂಡಿರುವ ಎಬಿಸಿಎಲ್‌ ಕಂಪನಿ ಮತ್ತೆ ಎದೆ ಸೆಟೆದು ನಿಲ್ಲಲಿದೆ.

(ಪಿಟಿಐ)

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...