ಅನಾರ್ಕಲಿ ಚಿತ್ರದಿಂದ ರಮ್ಯಾ ಬಾರ್ನಾಗೆ ಗೇಟ್‌ಪಾಸ್
ನಟ, ನಿರ್ದೇಶಕ, ಸಂಗೀತ ನಿರ್ದೇಶಕ ಹಾಗೂ ನಿರ್ಮಾಪಕ ಸಾಧು ಕೋಕಿಲರ ಮತ್ತೊಂದು ಚಿತ್ರ 'ಅನಾರ್ಕಲಿ'. ಈ ಚಿತ್ರಕ್ಕೆ ಆರಂಭದಿಂದಲೂ ಒಂದಿಲ್ಲೊಂದು ವಿಘ್ನಗಳು ಎದುರಾಗುತ್ತಲೆ ಇವೆ. ಈ ಹಿಂದೆ ಧೂದ್‌ಪೇಡ ದಿಗಂತ್‌ಗೆ ಚಿತ್ರದಿಂದ ಗೇಟ್ ಪಾಸ್ ನೀಡಿದ್ದರು ಸಾಧು. ಈಗ ರಮ್ಯಾ ಬಾರ್ನಾ ಸರದಿ.
ನಟ ದಿಗಂತ್ ಸ್ಥಾನಕ್ಕೆ ಶ್ರೀನಗರ ಕಿಟ್ಟಿಯನ್ನು ಫೈನಲೈಸ್ ಮಾಡಲಾಗಿದೆ. ಡೇಟ್ಸ್ ಹೊಂದಾಣಿಕೆ ಸಂಬಂಧ ದಿಗಂತ್ ಹಾಗೂ ಸಾಧು ನಡುವೆ ಮುಸುಕಿನ ಗುದ್ದಾಟ ನಡೆದಿತ್ತು. ಇದರ ಪರಿಣಾಮ ದಿಗಂತ್‌ರನ್ನು ಚಿತ್ರದಿಂದ ಕೈಬಿಡಲಾಗಿತ್ತು. ಈಗ ನಟಿ ರಮ್ಯಾ ಬಾರ್ನಾ ಕೂಡ ಚಿತ್ರದಿಂದ ಹೊರಬಿದ್ದಿದ್ದಾರೆ. ಕಾರಣ ಗೊತ್ತಿಲ್ಲ. ತೆರವಾಗಿರುವ ರಮ್ಯಾ ಸ್ಥಾನಕ್ಕೆ ಹರಿಪ್ರಿಯಾರನ್ನು ಕರೆತರುವ ತೆರೆಮರೆಯ ಕಸರತ್ತುಗಳು ಜೋರಾಗಿ ನಡೆಯುತ್ತಿವೆ.
ಹರಿಪ್ರಿಯಾ ಕೈಯಲ್ಲಿ ಕೆಲಸ ಇಲ್ಲದೆ ಏನೂ ಸುಮ್ಮನೆ ಕೂತಿಲ್ಲ. ತೆಲುಗು, ತಮಿಳು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಕ್ರೇಜಿಸ್ಟಾರ್ ಅಭಿನಯದ 'ಮಂಜಿನ ಹನಿ' ಚಿತ್ರವನ್ನೂ ಹರಿಪ್ರಿಯ ಮುಗಿಸಿದ್ದಾಗಿದೆ. ಇಷ್ಟೆಲ್ಲಾ ರಾದ್ಧಾಂತವಾದ ಮೇಲೂ 'ಅನಾರ್ಕಲಿ'ಗೆ ಹರಿಪ್ರಿಯಾ ಬಲಗಾಲಿಟ್ಟು ಬರುತ್ತಾರಾ ಎಂಬ ಪ್ರಶ್ನೆಯೂ ಉದ್ಭವಿಸಿದೆ.
ಇಂಟರೆಸ್ಟಿಂಗ್ ವಿಚಾರ ಎಂದರೆ ಅನಾರ್ಕಲಿ ಚಿತ್ರದ ಅಸಲಿ ಹೀರೋಯಿನ್ ಪ್ರಜ್ಞಾ. ಅನಾರ್ಕಲಿಯ ಅಸಲಿ ಚಿತ್ರೀಕರಣ ಇನ್ನೂ ಶುರುವಾಗಿಲ್ಲ. ಈಗಲೇ ಇಷ್ಟೆಲ್ಲಾ ಎಡವಟ್ಟುಗಳು ಸಂಭವಿಸುತ್ತಿರುವುದು ಆರಂಭದಲ್ಲೇ ಚಿತ್ರಕ್ಕೆ ಭಾರಿ ಸವಾಲುಗಳು ಎದುರಾದಂತಾಗಿದೆ. (ಒನ್‍ಇಂಡಿಯಾ ಕನ್ನಡ ಸಿನಿವಾರ್ತೆ)


Click it and Unblock the Notifications











