»   » ಲಗೋರಿಯನ್ನು ಕೈಬಿಟ್ಟ ಧೀರ ರಾಕ್ ಲೈನ್ ?

ಲಗೋರಿಯನ್ನು ಕೈಬಿಟ್ಟ ಧೀರ ರಾಕ್ ಲೈನ್ ?

Posted By:
Subscribe to Filmibeat Kannada
Why did Rockline put Lagori on hold?
ಕೋಟಿ ಕೋಟಿ ಬಜೆಟ್ಟಿನ ಚಿತ್ರಗಳು ಮಕಾಡೆ ಮಲಗುತ್ತಿರುವ ಹಿನ್ನೆಲೆಯಲ್ಲಿ ಘಟಾನು ಘಟಿ ನಿರ್ಮಾಪಕರೆಲ್ಲಾ ಹಿಂದೇಟು ಹಾಕುತ್ತಿದ್ದಾರೆ. ಈಗ ಅವರೆಲ್ಲಾ ಅಳೆದು ತೂಗಿ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿರುವ ಬಗ್ಗೆ ಯಾರೋ ಗಾಂಧಿನಗರದಲ್ಲಿ ಮಾತಾಡಿಕೊಳ್ಳುತ್ತಿದ್ದರು! ಇದಕ್ಕೆ ರಾಕ್ ಲೈನ್ ವೆಂಕಟೇಶ್ ರಂತಹ ಧೀರ ನಿರ್ಮಾಪಕರು ಸಹ ಹೊರತಾಗಿಲ್ಲ.ಆರ್ಥಿಕ ಬಿಕ್ಕಟ್ಟಿನ ಬಿಸಿ ಅವರಿಗೂ ತಾಕಿದೆ. ಚಿತ್ರಕಥೆ ಚೆನ್ನಾಗಿಲ್ಲ ಎಂಬ ಕಾರಣ ಕೊಟ್ಟು ಲಗೋರಿಯನ್ನು ತಿರಸ್ಕರಿಸಿದ್ದಾರೆ. ಹಾಗಾಗಿ ಯೋಗರಾಜ್ ಭಟ್ಟರ ಲಗೋರಿ ಚಿತ್ರಕ್ಕೆ ತಾತ್ಕಾಲಿಕವಾಗಿ ತೆರೆ ಬಿದ್ದಿದೆ.

''ಯಾಕೋ ಏನೋ ನಿರ್ದೇಶಕ ಯೋಗರಾಜ್ ಭಟ್ ರ ನಸೀಬು ಚೆನ್ನಾಗಿಲ್ಲ. ಯೋಗರಾಜ್ ಭಟ್ ರ ಮಹತ್ವಾಕಾಂಕ್ಷಿ ಯೋಜನೆ 'ಲಗೋರಿ'ಯನ್ನು ಕೈಬಿಡಲು ನಿರ್ಧರಿಸಿದ್ದಾರೆ.'' ಹಾಗಂತ ಗಾಂಧಿನಗರದಲ್ಲಿ ಪುಂಕಾನುಪುಂಖ ವದಂತಿಗಳು ಹುಟ್ಟಿಕೊಂಡಿವೆ.ಒಂದು ವೇಳೆ ಲಗೋರಿಯನ್ನು ಯೋಗರಾಜ್ ಭಟ್ಟರು ಕೈಬಿಟ್ಟಿದ್ದೇ ಆದರೆ ಪುನೀತ್ ಹಾಗೂ ಯೋಗರಾಜ್ ಭಟ್ಟರ ಅಪಾರ ಅಭಿಮಾನಿಗಳಿಗೆ ನಿರಾಶೆ ತಪ್ಪಿದ್ದಲ್ಲ.

ಲಗೋರಿ ಚಿತ್ರಕಥೆ ಸಿದ್ಧ ಪಡಿಸಿಕೊಳ್ಳಲು, ಅದಕ್ಕೆ ತಕ್ಕ ನಾಯಕ ನಟನನ್ನು ಹುಡುಕಲು ಯೋಗರಾಜ್ ಭಟ್ಟರಿಗೆ ದೊಡ್ಡ ಸಮಸ್ಯೆ ಎನ್ನಿಸಲಿಲ್ಲ. ಸಮಸ್ಯೆಯಲ್ಲಾ ಶುರುವಾಗಿದ್ದು ನಾಯಕಿಯನ್ನು ಹುಡುಕುವುದರಲ್ಲಿ. ಇನ್ನೇನು ಮೀರಾ ಜಾಸ್ಮಿನ್ ಒಪ್ಪಿಕೊಂಡರು ಎನ್ನುತ್ತಿರುವಾಗಲೇ ಆಕೆ ಮುಖ ತಿರುಗಿಸಿದಳು. ರಮ್ಯಾ, ತಮನ್ನಾ ಹಾಗೂ ಸ್ನೇಹಾ ಉಲ್ಲಾಳ್ ಸಹ ಮೀರಾ ಜಾಸ್ಮಿನ್ ಹಾದಿ ಹಿಡಿದರು. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಜಯಮಾಲಾ ಅವರ ಪುತ್ರಿ ಸೌಂದರ್ಯ ಆಯ್ಕೆಯಾದ ಸುದ್ದಿಯೂ ಸುಳ್ಳಾಯ್ತು. ಕಟ್ಟಕಡೆಗೆ ಪುನೀತ್ ಜೊತೆ ಲಗೋರಿ ಆಡಲಿರುವ ಪೋರಿ ತ್ರಿಶಾ ಎಂಬ ಸುದ್ದಿ ಗಾಂಧಿನಗರದಲ್ಲಿ ಮಿಂಚಿತು.

ಲಗೋರಿ ಚಿತ್ರಕ್ಕೆ ನಾಯಕಿ ಯಾರೆಂಬುದು ಇನ್ನೂ ತೀರ್ಮಾನವಾಗಿಲ್ಲ. ಹಾಗಾಗಿ ತ್ರಿಶಾ ನಟಿಸುವುದು ಅನುಮಾನವಾಗಿದೆ. ತಮ್ಮ ಚಿತ್ರಕ್ಕೆ ನಾಯಕಿ ಹುಡುಕುವುದರಲ್ಲಿ ಹೈರಾಣಾದ ಭಟ್ಟರು ಕಡೆಗೆ ಕೈಚೆಲ್ಲಿ ಕುಳಿತಿದ್ದಾರೆ ಎಂದು ಗಾಂಧಿನಗರರಲ್ಲಿ ಗುಸುಗುಸು ಶುರುವಾಗಿದೆ. ಕನ್ನಡ ಚಿತ್ರೋದ್ಯಮದ ಪಂಡಿತರ ಪ್ರಕಾರ, ಈ ಅದ್ದೂರಿ ಚಿತ್ರಕ್ಕೆ ಬಜೆಟ್ ಹೊಂದಿಸುವುದೇ ದೊಡ್ಡ ಸಮಸ್ಯೆ ಯಾಗಿದೆಯಂತೆ. ಹಾಗೆಯೇ ಚಿತ್ರದ ತಾರಾಗಣ ಹೊಂದಿಸುವುದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆಯಂತೆ. ಮುಖ್ಯವಾಗಿ 134 ದಿನಗಳಷ್ಟು ಸುದೀರ್ಘ ಚಿತ್ರೀಕರಣದ ಸಮಯ ಮತ್ತೊಂದು ತೊಡಕಾಗಿದೆ. ಈ ಎಲ್ಲಾ ಕಾರಣಗಳಿಗೆ ಲಗೋರಿ ಚಿತ್ರವನ್ನು ತಾತ್ಕಾಲಿಕವಾಗಿ ಕೈಬಿಡಲಾಗಿದೆ.

ಈ ಬಗ್ಗೆ ಪುನೀತ್ ರನ್ನು ಕೇಳಿದರೆ, ಲಗೋರಿಯನ್ನು ಕೈಬಿಡುತ್ತಿರುವ ಬಗ್ಗೆ ನನ್ನ ಬಳಿ ಯಾವುದೇ ಅಧಿಕೃತ ಮಾಹಿತಿ ಇಲ್ಲ.ಲಗೋರಿಯಂತಹ ದೊಡ್ಡ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕಾದರೆ ಸ್ವಲ್ಪ ಸಮಯ ಹಿಡಿಸುತ್ತದೆ, ಹಾಗಾಗಿ ಸ್ವಲ್ಪ ತಡವಾಗಬಹುದು ಎನ್ನುತ್ತಾರೆ. ಹಣಕಾಸು ಸಮಸ್ಯೆ ಏನಾದರೂ ಉಂಟಾ ಎಂದರೆ, ಆ ರೀತಿಯ ಯಾವುದೇ ಸಮಸ್ಯೆ ಇಲ್ಲ. ಪ್ರಸ್ತುತ ನಾವು ತಾರಾಗಣದ ಆಯ್ಕೆಯಲ್ಲಿ ಮುಳುಗಿದ್ದೇವೆ. ಇದಕ್ಕೆ ಸ್ವಲ್ಪ ಸಮಯ ಹಿಡಿಸಬಹುದು. ನಿಮ್ಮ ಪ್ರಶ್ನೆಗೆ ರಾಕ್ ಲೈನ್ ವೆಂಕಟೇಶ್ ಅವರು ಸೂಕ್ತವಾಗಿ ಉತ್ತರಿಸುತ್ತಾರೆ ಎಂದರು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಲು ಲಗೋರಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೈಗೇ ಸಿಗುತ್ತಿಲ್ಲ.

ಯೋಗರಾಜ್ ಭಟ್ಟರೇ ನೀವೇನಂತೀರಾ?ಎಂದು ಕೇಳಿದ್ದಕ್ಕೆ ''ಲಗೋರಿ ಆಡಲು ಎಲ್ಲ ಕಲ್ಲುಗಳು ಸಿಕ್ಕಿವೆ. ಆದರೆ ಕೊನೆಯ ಕಲ್ಲು ಮಾತ್ರ ಸಿಗುತ್ತಿಲ್ಲ ಅಷ್ಟೇ! ಆದರೆ ಕೊನೆ ಕಲ್ಲು ಸಿಗುವವರೆಗೂ ಬಿಡುವುದಿಲ್ಲ.ಲಗೋರಿ ಆಡುವುದು ಶತಃಸಿದ್ಧ '' ಎಂದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada