»   » ‘ಓಂ’ ರೌಡಿಗೆ ಜೈಲು !

‘ಓಂ’ ರೌಡಿಗೆ ಜೈಲು !

Subscribe to Filmibeat Kannada

*ವಿಘ್ನೕಶ್ವರ ಕುಂದಾಪುರ

‘ಓಂ’ ಸಿನಿಮಾ ಬಂದ ನಂತರ ಸಂಚಲನೆ ಹುಟ್ಟಿಸಿದ್ದ ಈ ಮುಖವನ್ನು ನೀವು ಸಾಕಷ್ಟು ಚಿತ್ರಗಳಲ್ಲಿ ನೋಡಿರಬಹುದು. ಉಡುಪಿ ಮೂಲದ ಈ ವ್ಯಾಪಾರಿ ಕನ್ನಡ ಸಿನಿಮಾಗಳಲ್ಲಿ ಖಾಯಂ ಖಳನಟ. ಆದರೀಗ ನಿಜ ಜೀವನದಲ್ಲೂ ಇವ ಖಳನಾಯಕನಾಗಿದ್ದಾನೆ. ಉಡುಪಿ ಜಿಲ್ಲಾ ಸೆಷನ್ಸ್‌ ಕೋರ್ಟು ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಈತನ ನಿಜ ನಾಮಧೇಯ ಹರೀಶ್‌ ಆಚಾರ್ಯ.

ಫ್ಲ್ಯಾಷ್‌ಬ್ಯಾಕ್‌

ಉಡುಪಿಯ ಕ್ರಿಶ್ಚಿಯನ್‌ ಶಾಲೆಯಾಂದರಲ್ಲಿ ಮೇಷ್ಟ್ರಾಗಿದ್ದ ಜಯರಾಮ ರಾವ್‌ ಎಂಬುವರ ಮೇಲೆ 1992, ನವೆಂಬರ್‌ 13ನೇ ತಾರೀಕು ರಾತ್ರಿ ಮೂವರು ಸ್ನೇಹಿತರೊಟ್ಟಿಗೆ ಹರೀಶ್‌ ಹಲ್ಲೆ ಮಾಡಿದ. ಕೆಎಂಸಿ ಆಸ್ಪತ್ರೆಯಲ್ಲಿ ನವೆಂಬರ್‌ 26ರವರೆಗೆ ನರಳಾಡಿದ ನಂತರ ಜಯರಾಮ ರಾವ್‌ ಸತ್ತರು.

ಜಯರಾಮ ರಾವ್‌ ತಮ್ಮ ಹೆಂಡತಿ ಹೆಸರಲ್ಲಿ ಕಣ್ಣೀರಪಾಡಿಯಲ್ಲಿ ಸಂಧ್ಯಾ ಫೈನಾನ್ಸ್‌ ಕಂಪನಿಯನ್ನು ನಡೆಸುತ್ತಿದ್ದರು. ವ್ಯಾವಹಾರಿಕವಾಗಿ ಏನೋ ತಿಕ್ಕಾಟ ಶುರುವಾಗಿ, ಹರೀಶ್‌ ಆಚಾರ್ಯನಿಗೂ ಇವರಿಗೂ ಹಳಸಿಕೊಂಡಿತು. ಜಗಳ ಸಿಟ್ಟಿಗೆ ಮೂಲವಾಯಿತು. ಸಿಟ್ಟು ಸೇಡಿನ ಕಿಚ್ಚು ಹಚ್ಚಿತು. ಹರೀಶ್‌ ದಾಳಿಗೆ ಜಯರಾಮ ರಾವ್‌ ಇಲ್ಲವಾದರು. ಸಾಯೋಕೆ ಮುಂಚೆಯೇ ಪೊಲೀಸರಿಗೆ ಹರೀಶನ ಮೇಲೆ ದೂರು ಕೊಟ್ಟಿದ್ದರಿಂದ ಕೇಸು ಬಲವಾಯಿತು.

ಹರೀಶ್‌ ಆಚಾರ್ಯ ಖಳನಾಯಕ ರಾಯ್‌ ಆದದ್ದು : ಇಷ್ಟೆಲ್ಲಾ ಕೋರ್ಟಿನಲ್ಲಿ ಸಾಬೀತಾದದ್ದು 10 ವರ್ಷಗಳ ನಂತರ. ಈ ಅವಧಿಯಲ್ಲಿ ಹರೀಶ್‌ ಆಚಾರ್ಯ ಹರೀಶ್‌ ರಾಜ್‌ ಆದ. ‘ಓಂ’ ಯಸಸ್ಸಿನ ನಂತರ ಹರೀಶ್‌ ರಾಯ್‌ ಆದ. ತೆಳ್ಳನೆಯ ದೇಹ. ತಲೆತುಂಬಾ ಕೂದಲು. ಸೂಟು- ಬೂಟು ಸ್ಟೈಲಿಗೆ ಕಮ್ಮಿಯಿಲ್ಲ. ಜೇಬಲ್ಲಿ ಸದಾ ದುಡ್ಡು ಝಣಝಣ. ಶೋಕಿಯೇ ಬಂಡವಾಳವಾಗಿ, ಖಳ ನಾಯಕನ ಆಯ್ಕೆ ವೇಳೆ ರಾಯ್‌ ಸದಾ ಕೇಳಿ ಬರುವಂಥಾ ಹೆಸರಾಯಿತು. ಸಾಕಷ್ಟು ಸಿನಿಮಾಗಳಲ್ಲಿ ಖಳನಾಯಕನಾಗಿ ರಾಯ್‌ ಮಿಂಚಿದ್ದೂ ಉಂಟು.

ಪಬ್ಲಿಕ್‌ ಪ್ರಾಸಿಕ್ಯೂಟರ್‌ ಚಂದ್ರಶೇಖರ ಹಿರೇಮಠ್‌ 10 ಸಾಕ್ಷಿಗಳನ್ನು ಕೋರ್ಟಿಗೆ ಹಾಜರುಪಡಿಸಿ, ರಾಯ್‌ ಆಚಾರ್ಯನಾಗಿದ್ದಾಗ ಮಾಡಿರುವ ಕೊಲೆಯನ್ನು ಸಾಬೀತು ಮಾಡಿದರು. ಮುಖ್ಯ ನ್ಯಾಯಮೂರ್ತಿ ರಾಯ್‌ಗೆ ಜೀವಾವಧಿ ಶಿಕ್ಷೆ ನೀಡಿದ್ದಲ್ಲದೆ, 3 ಸಾವಿರ ರುಪಾಯಿ ದಂಡ ವಿಧಿಸಿದರು.

ತೆರೆ ಮೇಲೆ ಮಾಡಿದ ಕೆಲಸವನ್ನೇ ನಿಜ ಜೀವನದಲ್ಲೂ ಮಾಡಿರುವ ಕಾರಣ ಇನ್ನು ಮುಂದೆ ಹರೀಶ್‌ ರಾಯ್‌ ಬಣ್ಣ ಹಚ್ಚುವಂತಿಲ್ಲ.

ಗಾಂಧಿನಗರದ ಬಣ್ಣಗಳು ಹೇಗೆ ಬದಲಾಗುತ್ತಿವೆ ನೋಡಿ ; ಹಿರಿಯ ನಿರ್ಮಾಪಕ-ನಿರ್ದೇಶಕ-ನಟನಟಿಯರು ವಾನಪ್ರಸ್ಥಕ್ಕೆ ತೆರಳಿರುವಾಗ, ಸಜ್ಜನರ ನೆರಳೇ ಗಾಂಧಿನಗರದಲ್ಲಿ ಅಪರೂಪವಾಗಿದೆ ಎನ್ನುವ ಮಾತಿಗೆ ಹರೀಶ್‌ ರಾಯ್‌ ಪ್ರಕರಣ ಒಂದು ಉದಾಹರಣೆಯಂತಿದೆ!

Post your Views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada