»   » ಈಗ ನಿಜವಾಗಲೂ ಫಿಲ್ಟರ್‌ ತೆಗೆದಿದ್ದೇನೆ : ಉಪೇಂದ್ರ

ಈಗ ನಿಜವಾಗಲೂ ಫಿಲ್ಟರ್‌ ತೆಗೆದಿದ್ದೇನೆ : ಉಪೇಂದ್ರ

Subscribe to Filmibeat Kannada

*ವಿಘ್ನೕಶ್ವರ ಕುಂದಾಪುರ

‘ಬಾಂಬೆನಲ್ಲಿ ಒಬ್ಬ ನಿರ್ದೇಶಕ ಸಾಕಷ್ಟು ಹಿಟ್‌ ಸಿನಿಮಾ ಕೊಟ್ಟ . ಎಲ್ಲಾ ಅವನನ್ನು ಹೊಗಳಿ ಅಟ್ಟಕ್ಕೇರಿಸಿದರು. ಆಮೇಲೆ ಒಂದು ಚಿತ್ರ ತೋಪಾಯಿತು. ಪತ್ರಿಕೆಯವರು ಕ್ಯಾಕರಿಸಿ ಉಗಿದರು. ಸುಮಾರು ವರ್ಷ ಆತ ಸಿನಿಮಾನೇ ಮಾಡಲಿಲ್ಲ. ಆಮೇಲೆ ಭರ್ಜರಿ ಹಿಟ್‌ ಚಿತ್ರ ಕೊಟ್ಟ. ಎಲ್ಲರೂ ಅವನನ್ನು ಹೊಗಳಿದರು. ಸಿನಿಮಾದ ಸಂತೋಷ ಕೂಟಕ್ಕೆ ಎಲ್ಲರನ್ನೂ ಕರೆದು, ಗಂಟೆಗಟ್ಟಲೆ ಬೈದ. ಆಮೇಲೆ, ಅದು ತನ್ನ ಕೊನೆ ಚಿತ್ರ ಅಂತ ಘೋಷಿಸಿ, ಹಿಮಾಲಯದ ಕಡೆಗೆ ಹೋಗಿಬಿಟ್ಟ’.

ಇದು ಉಪೇಂದ್ರ ಚಕ್ಕಳ ಮಕ್ಕಳ ಹಾಕಿಕೊಂಡು ಕುಳಿತು ಹೇಳಿದ ಕತೆ. ಸದ್ಯಕ್ಕೆ ಉಪೇಂದ್ರ ಅವರ ಮನಸ್ಥಿತಿ ಹೇಗಿದೆ ಅನ್ನುವುದನ್ನು ಈ ಕತೆಯೇ ಹೇಳುತ್ತದೇನೋ...?

ಕನ್ನಡ ಚಿತ್ರೋದ್ಯಮ, ಉದ್ಯಮದಲ್ಲಿನ ಮಂದಿ ಹಾಗೂ ತಮ್ಮ ಕುರಿತು ಉಪ್ಪಿ ಏನು ಹೇಳುತ್ತಾರೆ ಗೊತ್ತಾ ? ಆಯ್ದ ಕೆಲವು ಅಣಿ ಮುತ್ತುಗಳನ್ನು ಓದಿ-

  • ನಾನು ನಟ- ನಿರ್ದೇಶಕಾಗಿ ಗೆದ್ದವನು. ಕೇವಲ ನಟನಾಗಿ ಕಾಣಿಸಿಕೊಂಡಾಗಲೂ, ಚಿತ್ರ ನನ್ನದೇ ಎಂಬ ರೀತಿಯಲ್ಲಿ ಉದ್ಯಮ ನೋಡಿತು. ಆದರೆ ಅಲ್ಲಿ ನಾನು ನಿರ್ದೇಶಕ ಅಲ್ಲ ಅನ್ನುವುದನ್ನ ಗಮನಿಸಲೇ ಇಲ್ಲ.
  • ನಿರ್ಮಾಪಕರು ಹೇಳಿಕೊಂಡಷ್ಟು ಹಣವನ್ನು ನಾನು ಯಾವ ಚಿತ್ರಕ್ಕೂ ಖರ್ಚು ಮಾಡಿಸಿಲ್ಲ . ನಿಂಗ್ಯಾಕೆ ಅನ್ನುವ ಸಿನಿಮಾ ನಿರ್ಮಾಪಕರು ಕೆಟ್ಟ ಕತೆ ಇಟ್ಟುಕೊಂಡು ಆರು ಕೋಟಿ ರುಪಾಯಿ ಕಳೆದುಕೊಳ್ಳೋಕೆ ಸಿದ್ಧವಿದ್ದರು. ಅದನ್ನು ತಪ್ಪಿಸಿದ್ದೇ ನಾನು.
  • ಬಗೆಬಗೆಯ ಊಟ ಹಾಕಿಸಿ ಧನರಾಜ್‌ ನಮ್ಮನ್ನು ಮರುಳು ಮಾಡಿದರು. ರುಚಿಯಾದ ಊಟಕ್ಕೆ ನಾವು ಮರುಳಾಗ್ತೀವಿ ಅಂತ ಅವರಿಗೆ ಗೊತ್ತಿತ್ತು. ನಮ್ಮನ್ನ ಚೆನ್ನಾಗಿ ಯಾಮಾರಿಸಿದರು.
  • ‘ಸೂಪರ್‌ ಸ್ಟಾರ್‌’ ಫ್ಲಾಪಾದ ಕಾರಣಕ್ಕೆ ‘ಕುಟುಂಬ’ನ ಫ್ರೀ ಆಗಿ ಮಾಡಿಕೊಡ್ತಿದಾನೆ ಅಂತ ನನ್ನ ಬಗ್ಗೆ ಇಲ್ಲಸಲ್ಲದನ್ನ ಹೇಳಿದ್ದಾರೆ. ಆದರೆ, ನಾನು ಸೂಪರ್‌ ಸ್ಟಾರ್‌ ಸಿನಿಮಾ ಫ್ರೀ ಆಗಿ ಮಾಡಿದ್ದೆ. ಕುಟುಂಬಕ್ಕೆ ದುಡ್ಡು ಇಸಿದುಕೊಂಡಿದೀನಿ.
  • ಶ್‌.. ಸಿನಿಮಾ ಟೈಮಲ್ಲಿ ನಮ್ಮಣ್ಣನ ಮದುವೆ ಫಿಕ್ಸ್‌ ಆಗಿತ್ತು. ದುಡ್ಡಿನ ಜರೂರತ್ತಿತ್ತು. ಆ ಸಿನಿಮಾ ಬೇರೆ ಭಾಷೆಗೂ ಮಾರಾಟ ಆಗಿತ್ತು. ಕೇಳಿದ್ದಕ್ಕೆ, 70 ಸಾವಿರ ರುಪಾಯಿಗೆ ಎರಡು ಚೆಕ್‌ ಕೊಟ್ಟರು. ಎರಡೂ ಬೌನ್ಸ್‌ ಆದವು. ಅಗ್ರಿಮೆಂಟ್‌ ಇದ್ದದ್ದೇ ಒಬ್ಬರ ಹೆಸರಲ್ಲಿ. ಚೆಕ್‌ ಕೊಟ್ಟವರು ಅವರಲ್ಲ. ಅದಕ್ಕೇ ನಾನು ಏನೂ ಮಾಡೋಕಾಗಲಿಲ್ಲ.
  • ಪ್ರಭುದೇವ ಜಾಣ. ಹೊಟೇಲ್‌ ಬಾಡಿಗೆ, ಪೂರ್ತಿ ಫೀಸು, ರಿಟರ್ನ್‌ ಟಿಕೇಟು ಎಲ್ಲಾ ಕೊಟ್ಟ ನಂತರವೇ ಆತ ಎಚ್‌ಟುಓನಲ್ಲಿ ನಟಿಸಿದ್ದು. ನಾನು ಹಾಗೆ ಮಾಡಲಿಲ್ಲ. ರಾಜಾಸ್ಥಾನಕ್ಕೆ ರಿಟರ್ನ್‌ ಟಿಕೇಟಿಲ್ಲದೆ ಹೋದೆ. ಅಲ್ಲಿ ರೂಮು ಬಾಡಿಗೇನೂ ಕೊಟ್ಟಿರಲಿಲ್ಲ. ನಮ್ಮ ಸಾಮಾನು ಸರಂಜಾಮನ್ನೆಲ್ಲಾ ರೂಮಲ್ಲಿ ಹಾಕಿ, ಬೀಗ ಹಾಕಿದ್ದರು. ಅಂಥ ಜಾಗದಲ್ಲಿ ಯಾರು ನಮಗೆ ಸಹಾಯ ಮಾಡ್ತಾರೆ ಹೇಳಿ?
  • ‘ಉಪೇಂದ್ರ’ ಸಿನಿಮಾ ನೂರು ದಿನ ಓಡಿದ ಖುಷಿಯ ಸಮಾರಂಭದಲ್ಲಿ ಚಿತ್ರದ ನಿರ್ಮಾಪಕ ಶಿಲ್ಪ ಶ್ರೀನಿವಾಸ್‌ ನನಗೆ ಒಂದು ಪೈಸಾನೂ ಬರಲಿಲ್ಲ ಅಂದರು. ಆಗಲೂ ನಾನು ಮಾತಾಡಲಿಲ್ಲ.
  • ಇಷ್ಟು ದಿನ ಸಿನಿಮಾದಲ್ಲಿ ಮಾತ್ರ ಫಿಲ್ಟರ್‌ ತೆಗೀತಿದ್ದೆ. ಈಗ ಯಾವಾಗಲೂ ಫಿಲ್ಟರ್‌ ತೆಗೆದೇ ಮಾತಾಡ್ತೀನಿ. ಇಲ್ಲದಿದ್ದರೆ ಎಲ್ಲರೂ ನಂಗೇ ಉಲ್ಟಾ ಹೊಡೆಯುತ್ತಾರೆ.
ಕಮಿಟ್‌ ಆಗಿರೋ ಚಿತ್ರಗಳು ಮುಗಿದ ಮೇಲೆ ನನ್ನ ಚಿತ್ರ, ನಾನೇ ನಿರ್ದೇಶಕ ಅನ್ನುವ ತೀರ್ಮಾನಕ್ಕೆ ಬಂದಿದ್ದೇನೆ. ಲಾಭ ಬಂದರೂ ನಂದೇ. ಕೋಟಿ ಕೋಟಿ ಮುಳುಗಿ ಹೋದರೂ ನಂದೇ- ಅನ್ನುವ ಉಪ್ಪಿಯಲ್ಲೀಗ ಆತ್ಮವಿಶ್ವಾಸ ಮಡುಗಟ್ಟಿದೆ. ಸೋಲುಗಳ ಮೆಟ್ಟಿದ ನಂತರವೇ ಅಲ್ಲವೇ ಗೆಲುವಿನ ಸರದಾರ ಆಗೋದು.

ಉಪ್ಪಿಯಲ್ಲಿ ತಮ್ಮದೇ ಚಿತ್ರಗಳ ಕೊಡುವ ಹುಮ್ಮಸ್ಸು ಇರುವುದರಿಂದ ಆ ಬಾಂಬೆ ನಿರ್ದೇಶಕನ ತರಹ ಹಿಮಾಲಯಕ್ಕೆ ಹೋಗುವುದಿಲ್ಲ ಅಂದುಕೊಳ್ಳಬಹುದು.

ಉಪ್ಪಿ ಹೇಳೋದನ್ನ ನೀವು ಒಪ್ಪುತ್ತೀರಾ?

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada