»   » ಸೋತು ಸುಣ್ಣವಾಗಿರುವ ಉಪ್ಪಿ ಮೇಲೆ ಹೆಂಗಸರ ‘ನಾಗರ ಹಾವು’!

ಸೋತು ಸುಣ್ಣವಾಗಿರುವ ಉಪ್ಪಿ ಮೇಲೆ ಹೆಂಗಸರ ‘ನಾಗರ ಹಾವು’!

Posted By:
Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಎಚ್‌ಟುಒ, ಸೂಪರ್‌ ಸ್ಟಾರ್‌, ನಾಗರ ಹಾವು...ಒಂದಾದ ಮೇಲೊಂದು ಚಿತ್ರಗಳು ತಾಚೊಂಡು ಉಪ್ಪಿ ಭವಿತವ್ಯದ ಪುನರ್‌ ನಿರ್ಮಾಣ ಕೆಲಸಕ್ಕೆ ತೊಡಗಬೇಕಿರುವ ಅನಿವಾರ್ಯತೆ ಒಂದೆಡೆ. ಉಪ್ಪಿಯ ‘ಉಪೇಂದ್ರ’ದಂಥ ಚಿತ್ರಗಳೇ ಹಿಂಸೆಗೆ ಚೋದಕ ಎಂಬ ಮಹಿಳೆಯರ ಸೊಲ್ಲು ಇನ್ನೊಂದೆಡೆ !

ಮೊದಲೇ ಉಪ್ಪಿ ಚಿತ್ರಗಳು ಆ್ಯಂಟಿ ಹೆಂಗಸರವು; ಹೆಂಗಸರಾರೂ ತಣ್ಣಗೆ ಕೂತು ನೋಡುವಂಥವು ಅವಲ್ಲ ಎಂಬ ಬಲವಾದ ಅಭಿಪ್ರಾಯವಿದೆ. ಈಚೆಗೆ ಉಪೇಂದ್ರ ಚಿತ್ರಗಳ ಸೋಲಿಗೆ ಇದೂ ಮುಖ್ಯ ಕಾರಣ ಎಂಬ ಪ್ರತಿಧ್ವನಿ ಗಾಂಧಿನಗರದಲ್ಲಿ ಅನುರಣಿಸುತ್ತಿದೆ. ಅಷ್ಟೇ ಅಲ್ಲ ಈಗ ಅಖಿಲ ಕರ್ನಾಟಕ ಸುದೀಪ್‌ ಅಭಿಮಾನಿಗಳ ಸಂಘ ಹುಟ್ಟಿಕೊಂಡಿದೆ. ತಮ್ಮ ನೆಚ್ಚಿನ ನಾಯಕನ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿ ಸಾವಿರಾರು ಭಿತ್ತಿ ಪತ್ರ ಅಂಟಿಸುವ ಮಟ್ಟಿಗೆ ಈ ಸಂಘ ಸದ್ದೇ ಮಾಡದಂತೆ ಬೆಳೆದು ನಿಂತಿದೆ. ಬಲ್ಲವರು ಹೇಳುವ ಪ್ರಕಾರ, ಉಪೇಂದ್ರ ಅಭಿಮಾನಿಗಳು ಸುದೀಪ್‌, ಪುನೀತ್‌ ಹಾಗೂ ದರ್ಶನ್‌ರಂಥಾ ಉದಯೋನ್ಮುಖ ನಟರ ಅಭಿಮಾನಿ ವೃಂದಕ್ಕೆ ಶಿಫ್ಟ್‌ ಆಗಿರುವುದೂ ಉಂಟು.

ಕುದಿಯುತ್ತಿದ್ದ ಹೆಂಗಸರ ದನಿ ಬೀದಿಗೂ ಬಿತ್ತು
ಇಷ್ಟೆಲ್ಲಾ ಬ್ಯಾಡ್‌ ಟೈಮಿನ ನಡುವೆ ಇದೀಗ ಉಪೇಂದ್ರನತ್ತ ನೇರವಾಗಿ ಬೆಟ್ಟು ತೋರಿಸುತ್ತಾ ನಿಂತಿದ್ದಾರೆ ಮಹಿಳಾ ಜಾಗೃತಿ ಕಾರ್ಯಕರ್ತರು. ಇತ್ತೀಚೆಗೆ ಬೆಂಗಳೂರಿನ ಹತ್ತನೇ ಇಯತ್ತೆಯ ಸ್ಫುರದ್ರೂಪಿ ಹುಡುಗಿ ಶೃತಿ ಮೇಲೆ ದುಷ್ಕರ್ಮಿಯಾಬ್ಬ ಆ್ಯಸಿಡ್‌ ಎರಚಿ, ತೀರಾ ಘಾಸಿಗೊಳಿಸಿದ. ಆಕೆಗೆ ಪ್ಲಾಸ್ಟಿಕ್‌ ಸರ್ಜರಿ ಮಾಡಿ, ಚಹರೆಯನ್ನು ಸುಮಾರಾಗಿ ಆಗುವಂತೆ ಮಾಡಲು ಏಳೆಂಟು ಲಕ್ಷ ರುಪಾಯಿಯಾದರೂ ಬೇಕಂತೆ. ಶಿವರಾಜ್‌ಕುಮಾರ್‌ 50 ಸಾವಿರ, ಮಧು ಬಂಗಾರಪ್ಪ 20 ಸಾವಿರ ಹಾಗೂ ಜೈಲಿನಲ್ಲಿರುವ ಭೂಗತ ದೊರೆ ಮುತ್ತಪ್ಪ ರೈ 50 ಸಾವಿರ ರುಪಾಯಿ ನೆರವನ್ನು ಈಗಾಗಲೇ ಶೃತಿಗೆ ಕೊಟ್ಟಿದ್ದಾರೆ.

ಮೊನ್ನೆ ಶಿವಾಜಿನಗರದಿಂದ ಪೊಲೀಸ್‌ ಆಯುಕ್ತರ ಕಚೇರಿಗೆ ಸುಮಾರು 100 ಮಂದಿ ಹೆಂಗಸರು ಪ್ರತಿಭಟನೆಯ ಸೊಲ್ಲೆತ್ತಿ ಮೆರವಣಿಗೆ ಹೊರಟರು. ಇವರ ಕೂಗಿನಲ್ಲಿ ಉಪೇಂದ್ರ ಹೆಸರು ತೇಲುತ್ತಾ ಇತ್ತು. ತನಗೆ ದಕ್ಕದ ಹುಡುಗಿ ಬೇರೆ ಯಾರಿಗೂ ಸಿಗಬಾರದೆಂಬ ವಿಕೃತ ಭಾವನೆ, ಎಂಥದೋ ವಿಚಿತ್ರ ದಾರ್ಷ್ಟ, ಹೆಣ್ಣಿನ ಬಾಹ್ಯ ಸೌಂದರ್ಯವ ಮೊಗೆಯುವ ಕಾಂಕ್ಷೆ- ಇಂಥಾ ಅತಿರೇಕಗಳಿಗೆ ‘ಉಪೇಂದ್ರ’ದಂಥ ಚಿತ್ರ ಕುಮ್ಮಕ್ಕು ಕೊಡುತ್ತದೆ. ಅಂಥ ಚಿತ್ರಗಳನ್ನು ಸೆನ್ಸಾರ್‌ ಮಂಡಳಿ ತೆರೆಗೇ ತರಬಾರದು ಅನ್ನುವುದು ಈ ಪ್ರತಿಭಟನೆಕಾರರ ಸೊಲ್ಲು. ಉಪೇಂದ್ರ ಚಿತ್ರ ಬಂದ ನಂತರ ಆಸಿಡ್‌ ಎರಚಾಟ, ಬೀದಿ ಕಾಮಣ್ಣರ ಪುಂಡಾಟ ಹೆಚ್ಚಾಗಿದೆ ಅನ್ನುವುದು ಇವರ ವಾದ.

ಇದಕ್ಕೆ ಪೂರಕವಾಗಿ ಅಂಕಿ- ಅಂಶಗಳನ್ನೂ ಹೇಳಲು ಈ ಹೆಂಗಸರು ಹಿಂಜರಿಯಲಿಲ್ಲ. ಮಾಧ್ಯಮಗಳ ಹಾಗೂ ಪೊಲೀಸರ ಗಮನವನ್ನು ತೀರಾ ಸೆಳೆದ ಆ್ಯಸಿಡ್‌ಎರಚಾಟದ ಕೆಲವು ಪ್ರಕರಣಗಳು-

  • ಹಸೀನಾ ಎಂಬಾಕೆಯ ಮೇಲೆ ಆ್ಯಸಿಡ್‌ದಾಳಿ ನಡೆದದ್ದು 1999ರಲ್ಲಿ. ಹರಿದು ಬಂದ ಹಣದ ನೆರವಿನಿಂದ ಈಗ ಆಕೆಯ ಮುಖ ಮಾಮೂಲಿನಂತಾಗಿದೆ.
  • ಅದೇ ವರ್ಷದಲ್ಲಿ ಲೈವ್‌ ಬ್ಯಾಂಡ್‌ ಹುಡುಗಿಯರ ಮೇಲೂ ಆ್ಯಸಿಡ್‌ ಎರಚಿರುವ ಪ್ರಕರಣಗಳು ದಾಖಲಾಗಿವೆ.
  • ಪ್ರಸಕ್ತ ವರ್ಷ ಅತ್ತಿಗುಪ್ಪೆಯ ಶಾಲಿನಿ ಹಾಗೂ ಶೃತಿ ಕಾಮುಕರ ಆ್ಯಸಿಡ್‌ಗೆ ಬಲಿಯಾಗಿದ್ದಾರೆ.
ಅಂದಹಾಗೆ, ಯಾವುದೇ ಅಂಗಡಿಯವರು ಆ್ಯಸಿಡ್‌ ಮಾರುವಂತಿಲ್ಲ ಎಂದು ಸಾಂಗ್ಲಿಯಾನ ಆದೇಶ ಕೊಟ್ಟಿದ್ದಾರೆ. ಆದರೆ ಉಪೇಂದ್ರ ಕುರಿತ ಹೆಂಗಸರ ದನಿ ಇನ್ನೂ ತಣ್ಣಗಾಗಿಲ್ಲ.

ಒಟ್ಟಿನಲ್ಲಿ ಅಧಿಕಮಾಸದಲ್ಲಿ ದುರ್ಭಿಕ್ಷ ಎಂಬಂತಾಗಿದೆ ಉಪ್ಪಿ ಸ್ಥಿತಿ. ಇನ್ನಾದರೂ ಉಪ್ಪಿ ವರಸೆ ಬದಲಿಸಿ, ತನ್ನ ಅಗ್ರೆಸಿವ್‌ ಧೋರಣೆಯನ್ನೇ ಬಂಡವಾಳವಾಗಿಸಿ ಒಳ್ಳೆಯ ಚಿತ್ರ ಕೊಡಲಿ. ಉಪೇಂದ್ರ ಏನು ಮಾಡಬೇಕು, ನೀವೇ ಹೇಳಿ?

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada