ಕೋರ್ಟ್ ಮೆಟ್ಟಿಲೇರಿದ ಪ್ರಭುದೇವ ಪತ್ನಿ ರಾಮಲತಾ
ನಟ ಪ್ರಭುದೇವ ಮತ್ತು ನಯನತಾರಾ ಅವರ ಮದುವೆ ಸಂಭ್ರಮಕ್ಕೆ ಮತ್ತೊಂದು ವಿಘ್ನ ಎದುರಾಗಿದೆ. ಪ್ರಭುದೇವ ಪತ್ನಿ ರಾಮಲತಾ ಅವರು ಈ ಮದುವೆಯನ್ನು ತಡೆಯಲು ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನಟಿ ನಯನತಾರಾ ಜೊತೆಗೆ ಪ್ರಭುದೇವ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ. ತನ್ನ ಗಂಡನನ್ನು ಮರಳಿ ನನಗೆ ಕೊಡಿಸಿ ಎಂದು ಆಕೆ ಅಲವತ್ತುಕೊಂಡಿದ್ದಾರೆ.
ಈಗಾಗಲೆ ರಾಮಲತಾ ಅವರು ಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿದ್ದಾರೆ ಎನ್ನಲಾಗಿದೆ. "ತಮ್ಮ ಹಾಗೂ ಪ್ರಭುದೇವ ಮದುವೆ 1995ರಲ್ಲಿ ನೆರವೇರಿತು.ಈ ದಾಂಪತ್ಯದ ಫಲವಾಗಿ ನಮಗೆ ಮೂವರು ಮಕ್ಕಳಿದ್ದಾರೆ. 2008ರಲ್ಲಿ ನಯನತಾರಾ ಮುಖ್ಯಭೂಮಿಕೆಯಲ್ಲಿದ್ದ 'ವಿಲ್ಲು' ಚಿತ್ರವನ್ನು ಪ್ರಭು ನಿರ್ದೇಶಿಸುವವರೆಗೂ ನಮ್ಮ ದಾಂಪತ್ಯ ಜೀವನ ಸುಖಕರವಾಗಿತ್ತು" ಎಂದು ಆಕೆ ಅರ್ಜಿಯಲ್ಲಿ ತಿಳಿಸಿದ್ದಾರೆ.
ಬಳಿಕ ಮಾಧ್ಯಮಗಳಲ್ಲಿ ಪ್ರಭು ಮತ್ತು ನಯನತಾರಾ ಸಂಬಂಧದ ಬಗ್ಗೆ ಗುಸುಗುಸು ಮಾತುಗಳು ಕೇಳಿಬಂದವು. ಇವೆಲ್ಲಾ ಕೇವಲ ವದಂತಿಗಳಷ್ಟೆ ಎಂದು ನಯನತಾರಾ ತಳ್ಳಿಹಾಕಿದ್ದರು. ತಾವು ಸತ್ಯಾಸತ್ಯತೆಗಳನ್ನು ತಿಳಿದುಕೊಳ್ಳಲು ಮುಂದಾದಾಗ, ಸ್ವತಃ ನಯನತಾರಾ ತಮಗೆ ರು.3 ಕೋಟಿ ನಗದು ಹಾಗೂ ಚಿನ್ನಾಭರಣಗಳನ್ನು ಕೊಡುವುದಾಗಿ ಹೇಳಿದ್ದರು.
ಪ್ರಭುದೇವ ಅವರನ್ನು ಮದುವೆಯಾಗುತ್ತಿರುವುದಾಗಿ ತಿಳಿಸಿದರು. ಇದಕ್ಕೆ ನಾನು ಸುತಾರಾಂ ಒಪ್ಪಲಿಲ್ಲ. ಈಗ ಇಬ್ಬರೂ ಏಕಾಏಕಿ ಮದುವೆ ಮಾಡಿಕೊಳ್ಳಲು ಹೊರಟಿದ್ದಾರೆ. ತಾನು ಹಾಗೂ ತನ್ನ ಮಕ್ಕಳು ಜೀವನಾಧರಕ್ಕಾಗಿ ಪ್ರಭುದೇವ ಮೇಲೆ ಅವಲಂಬಿಸಿದ್ದೇವೆ. ತಮಗೆ ನ್ಯಾಯ ದೊರಕಿಸಿಕೊಡಿ ಎಂದು ಪ್ರಭುದೇವ ಪತ್ನಿ ನ್ಯಾಯಾಲಯಕ್ಕೆ ಸಲ್ಲಿಸುಸಿರುವ ಅರ್ಜಿಯಲ್ಲಿ ದೂರಿದ್ದಾರೆ. ಇಷ್ಟೆಲ್ಲಾ ರಾದ್ಧಾಂತವಾಗಿದ್ದರೂ ಪ್ರಭುದೇವ ಮತ್ತು ನಯನತಾರಾ ಮಾತ್ರ ಕ್ಯಾರೆ ಎನ್ನುತ್ತಿಲ್ಲವಂತೆ.


Click it and Unblock the Notifications











