ಹಂಪೆ ಸೀತೆ ಸೆರಗು ಪ್ರದೇಶದಲ್ಲಿ ತಮಿಳು ಶೃಂಗಾರ ಚಿತ್ರ

ಈ ಹಿಂದೆ ತೆಲುಗು ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿಯೂ ಕೂಡ ಹೆಣ್ಣು ಗಂಡು ಪರಸ್ಪರ ಚುಂಬನ ದೃಶ್ಯದ ಚಿತ್ರೀಕರಣ ನಡೆಸಿದ್ದರು. ಆ ಚಿತ್ರ ಹಂಪೆಯ ನಾಗರಿಕರ ಹಾಗೂ ಸಂಘ ಸಂಸ್ಥೆಗಳ ವ್ಯಾಪಕ ಟೀಕೆಗಳಿಗೆ ಗುರಿಯಾಗಿತ್ತು. ಅಲ್ಲದೇ, ಹಂಪೆಗೆ ಭೇಟಿ ನೀಡುತ್ತಿರುವ ವಿದೇಶಿ ಪ್ರವಾಸಿಗರು ಕೂಡ ಇಂಥಹ ಚುಂಬನ ದೃಶ್ಯಗಳನ್ನು ನೋಡಿ ಹಂಪೆಯನ್ನು ವಿಲಾಸಿ, ಮೋಜು ಮಸ್ತಿಯ ತಾಣವನ್ನಾಗಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದ್ದರು.
ಈ ಚಿತ್ರೀಕರಣ ತಂಡವು ಭಾರಿ ವಾಹನಗಳಲ್ಲಿ ವಿಜಯ ವಿಠ್ಠಲ ದೇವಸ್ಥಾನದ ಪಕ್ಕದ ರಸ್ತೆಯಿಂದ ಸೀತೆ ಸೆರಗು ಪ್ರದೇಶ ಸೇರಿವೆ. ಹಂಪೆ ವಿಶ್ವ ಪರಂಪರೆ ಪ್ರದೇಶ ನಿರ್ವಾಹಣ ಪ್ರಾಧಿಕಾರ ಎಲ್ಲಾ ವಾಹನಗಳು ಗೆಜ್ಜಲ ಮಂಟಪದ ಬಳಿ ನಿಲ್ಲಿಸಿ, ಅಲ್ಲಿಂದ ಬ್ಯಾಟರಿ ಚಾಲಿತ ವಾಹನದಲ್ಲಿ ಎಲ್ಲರೂ ಸಂಚರಿಸಬೇಕೆಂದು ನಿಯಮ ರೂಪಿಸಿದೆ. ವಾಯು ಮಾಲಿನ್ಯ ತಡೆದು, ಸ್ಮಾರಕಗಳಿಗೆ ಯಾವುದೇ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು ಎಂದು ಕಟ್ಟುನಿಟ್ಟಾಗಿ ಆದೇಶ ನೀಡಿದೆ.
ಆದರೆ ಚಿತ್ರೀಕರಣ ತಂಡ ಪ್ರಾಧಿಕಾರದ ಎಲ್ಲಾ ನೀತಿ, ನಿಯಮಗಳನ್ನು ಗಾಳಿಗೆ ತೂರಿ ಚಿತ್ರೀಕರಣ ನಡೆಸಿದೆ. ಚಿತ್ರೀಕರಣ ತಂಡದ ಬಸ್, ಬೃಹತ್ ಜನರೇಟರ್ ವಾಹನ, ಕ್ರೇನ್, ಮತ್ತಿತರರ ವಾಹನಗಳು ನಿರ್ಭಿಡೆಯಿಂದ ಈ ರಸ್ತೆಯಲ್ಲಿ ಸಂಚರಿಸಿದವು. ಗೆಜ್ಜಲ ಮಂಟಪದ ಬಳಿ ವಾಹನ ನಿಲ್ಲಿಸಿ, ಬ್ಯಾಟರಿ ಚಾಲಿತ ವಾಹನದಲ್ಲಿ ಸಂಚರಿಸಬೇಕು ಸೂಚಿಸಲಾಗಿದೆ.
ಈ ಚಿತ್ರೀಕರಣಕ್ಕೆ ಭಾರತೀಯ ಪುರಾತತ್ವ ಇಲಾಖೆ ಪರವಾನಗಿ ನೀಡಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಪೊಲೀಸರು ಮಾತ್ರ ಈ ಚಿತ್ರೀಕರಣದ ತಂಡಕ್ಕೆ ಬಂದೋಬಸ್ತ್ ವ್ಯವಸ್ಥೆ ಗೊಳಿಸಿದ್ದರು. ಇನ್ನೂ ಮೂರು ನಾಲ್ಕು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.


Click it and Unblock the Notifications











