»   » ಖಾಕಿಗೆ ದಾರಿಬಿಟ್ಟ ‘ರೌಡಿ’ ಅಳಿಯ !

ಖಾಕಿಗೆ ದಾರಿಬಿಟ್ಟ ‘ರೌಡಿ’ ಅಳಿಯ !

Posted By:
Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೊ

ಇತ್ತೀಚೆಗೇಕೊ ಶಿವರಾಜ್‌ಕುಮಾರ್‌ ಗ್ರಹಗತಿ ಸರಿಯಾಗಿದ್ದಂತಿಲ್ಲ . ಒಂದೆಡೆ ಭಾರೀ ನಿರೀಕ್ಷೆಯ ಚಿತ್ರಗಳು ಠುಸ್‌ ಅನ್ನುತ್ತಿದ್ದರೆ, ಇನ್ನೊಂದೆಡೆ ಉದ್ಯಮದಲ್ಲಿನ ಪರಿಸರವೂ ಅವರಿಗೆ ಪೂರಕವಾದಂತಿಲ್ಲ .

‘ರೌಡಿ ಅಳಿಯ’ ಚಿತ್ರವನ್ನೇ ನೋಡಿ : ಗೆಲುವಿಗಾಗಿ ತಹತಹಿಸುತ್ತಿರುವ ಶಿವರಾಜ್‌ ‘ರೌಡಿ ಅಳಿಯ’ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಹೊಂದಿದ್ದಾರೆ. ಸಾಯಿಪ್ರಕಾಶ್‌-ಜಯಮಾಲಾ-ಶಿವಣ್ಣ ಕಾಂಬಿನೇಷನ್‌ನ ‘ಗಡಿಬಿಡಿ ಅಳಿಯ’ ಚಿತ್ರ ಭಾರೀ ಯಶಸ್ಸು ಗಳಿಸಿದ್ದ ಹಿನ್ನೆಲೆಯಲ್ಲಿ , ‘ರೌಡಿ ಅಳಿಯ’ ಚಿತ್ರದ ಬಗೆಗೂ ಗಾಂಧಿನಗರದಲ್ಲಿ ಅಪಾರ ನಿರೀಕ್ಷೆಯಿದೆ. ಆದರೆ, ಈ ಚಿತ್ರಕ್ಕೆ ಕೆಂಪೇಗೌಡ ರಸ್ತೆಯಲ್ಲಿ ಹೇಳಿಕೊಳ್ಳುವಂಥ ಚಿತ್ರಮಂದಿರವೇ ಸಿಕ್ಕಿಲ್ಲ !

ಫೆ.6ರ ಶುಕ್ರವಾರ ‘ರೌಡಿ ಅಳಿಯ’ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಕೆಂಪೇಗೌಡ ರಸ್ತೆಯಲ್ಲಿನ ಸಾಗರ್‌ ಚಿತ್ರಮಂದಿರವನ್ನು ನಿರ್ಮಾಪಕರು ಬಯಸಿದ್ದರು. ಇನ್ನೇನು ಸಾಗರ್‌ ಚಿತ್ರಮಂದಿರ ಸಿಕ್ಕೇಬಿಟ್ಟಿತು ಅನ್ನುವಾಗ್ಗೆ , ಹಿಂದಿಪ್ರಿಯ ಚಿತ್ರಮಂದಿರದ ಮಾಲಿಕರು ‘ರೌಡಿ ಅಳಿಯ’ನನ್ನು ಬಹಿಷ್ಕರಿಸಬೇಕೆ ? ಸಾಗರ್‌ ಚಿತ್ರಮಂದಿರವೀಗ ಅಮಿತಾಬ್‌ರ ‘ಖಾಕಿ’ ಪಾಲಾಗಿದೆ. (ಖಾಕಿ ಎದುರಾದಾಗ ರೌಡಿ ದಾರಿಬಿಡಬೇಕು ತಾನೆ !?)

ಕನ್ನಡ ಚಿತ್ರವೊಂದಕ್ಕೆ ಅನ್ಯಾಯವಾಗುತ್ತಿರುವುದು ಇದು ಮೊದಲೂ ಅಲ್ಲ , ಕೊನೆಯದೂ ಅಲ್ಲ . ಕೆಂಪೇಗೌಡ ರಸ್ತೆಯಲ್ಲಿನ ಥಿಯೇಟರ್‌ಗಳ ಮಾಲಿಕರು ಮೊದಲಿನಿಂದಲೂ ಕನ್ನಡ ವಿರೋಧಿಗಳಂತೆಯೇ ನಡೆದುಕೊಳ್ಳುತ್ತಿದ್ದಾರೆ. ರವಿಚಂದ್ರನ್‌, ಜಗ್ಗೇಶ್‌ರಂಥವರು ಈ ಸಂಬಂಧ ಬೀದಿಗಿಳಿದದ್ದೂ ಉಂಟು ; ಪ್ರಯೋಜನ ಮಾತ್ರ ಅಷ್ಟಕ್ಕಷ್ಟೆ .

ಇಷ್ಟೆಲ್ಲಾ ಗೊಂದಲ ಉಂಟಾದರೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾತ್ರ ತಣ್ಣಗೆ ಕೂತಿದೆ. ವಾಣಿಜ್ಯ ಮಂಡಳಿ ಅಧ್ಯಕ್ಷರು ನೆರವು ನೀಡುವುದು ಉಪೇಂದ್ರ ಹಾಗೂ ಕುಮಾರಸ್ವಾಮಿ ಅವರಿಗೆ ಮಾತ್ರ ಎಂದು ಗಾಂಧಿನಗರ ಪಿಸುಗುಡುತ್ತಿದೆ.

ಕೆಂಪೇಗೌಡ ರಸ್ತೆಯ ಹೊಂದಿಕೊಂಡಿರುವ ಓಣಿಯಲ್ಲಿನ ‘ಅಭಿನಯ್‌’ ಚಿತ್ರಮಂದಿರಲ್ಲೀಗ ‘ರೌಡಿ ಅಳಿಯ’ ತೆರೆ ಕಾಣುತ್ತಿದೆ. ಈ ಥಿಯೇಟರ್‌ನಲ್ಲಿ ಕನ್ನಡ ಚಿತ್ರಗಳು ಓಡಿ ಯಾವ ಕಾಲವಾದವೊ ?

ಶಿವರಾಜ್‌ರ ‘ಚಿಗುರಿದ ಕನಸು’ ಚಿತ್ರ ಕೂಡ ಥಿಯೇಟರ್‌ ರಾಜಕೀಯಕ್ಕೆ ಬಲಿಯಾಗಿತ್ತು . ಈಗ ‘ರೌಡಿ ಅಳಿಯ’ನಿಗೆ ಥಿಯೇಟರ್‌ ಭೂತ ಅಟಕಾಯಿಸಿಕೊಂಡಿದೆ. ಹೀಗಾದರೆ ಕನ್ನಡ ಚಿತ್ರಗಳು ಗೆಲ್ಲೋದು ಹೇಗೆ ?

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada