»   » ದೀಪಾ ಮೆಹ್ತಾರ ‘ವಾಟರ್‌’ ಚಿತ್ರ ಮಾ.9ರಂದು ಬಿಡುಗಡೆ

ದೀಪಾ ಮೆಹ್ತಾರ ‘ವಾಟರ್‌’ ಚಿತ್ರ ಮಾ.9ರಂದು ಬಿಡುಗಡೆ

Subscribe to Filmibeat Kannada


ಕೊನೆಗೂ ಭಾರತದಲ್ಲಿ ‘ವಾಟರ್‌’ ಚಿತ್ರವನ್ನು ಬಿಡುಗಡೆ ಮಾಡೋ ದೀಪಾ ಮೆಹ್ತಾರ ಕನಸು ನನಸಾಗಲಿದೆ. ಮಾ.9ರಂದು ಚಿತ್ರ ಬಿಡುಗಡೆಯಾಗಲಿದೆ.

ಆಸ್ಕರ್‌ ಪಡೆಯುವ ಕನಸು ನನಸಾಗದಿದ್ದರೂ, ಭಾರತದಲ್ಲಿ ಚಿತ್ರ ತೆರೆ ಕಾಣುತ್ತಿರುವುದು, ದೀಪಾ ಮೆಹ್ತಾರಿಗೆ ಸಂತಸ ತಂದಿದೆ. ವರ್ಷದ ಕೆಳಗೆ ‘ವಾಟರ್‌’ ಚಿತ್ರದ ಚಿತ್ರೀಕರಣಕ್ಕಾಗಿ ವಾರಣಾಸಿಗೆ ದೀಪಾ ಮೆಹ್ತಾರ ತಂಡ ಕಾಲಿಟ್ಟಾಗ, ಭಾರಿ ಪ್ರತಿಭಟನೆ ಜರುಗಿ, ಚಿತ್ರೀಕರಣ ಸ್ಥಗಿತಗೊಂಡಿತ್ತು.

ಅದರೆ ಛಲಬಿಡದ ದೀಪಾ, ಗುಟ್ಟಾಗಿ ಶ್ರೀಲಂಕಾಕ್ಕೆ ತೆರಳಿ ಫುಲ್‌ಮೂನ್‌ ಎಂಬ ಬೇನಾಮಿ ಹೆಸರಿನಲ್ಲಿ ಶೂಟಿಂಗ್‌ ಮಾಡಿದ್ದರು. ಅಷ್ಟರಲ್ಲಿ ಚಿತ್ರದ ತಾರಾಗಣವೂ ಬದಲಾಗಿತ್ತು, ಶಬನಾ ಆಜ್ಮಿ, ಅಕ್ಷಯ್‌ ಕುಮಾರ್‌ ಹಾಗೂ ನಂದಿತಾ ದಾಸ್‌ ಬದಲಿಗೆ, ಸೀಮಾ ಬಿಸ್ವಾಸ್‌, ಜಾನ್‌ ಅಬ್ರಹಾಂ ಹಾಗೂ ಲೀಸಾ ರೇ ಬಂದಿದ್ದರು.

ಏನಿದೆ ಅಂತದ್ದು ಈ ಸಿನಿಮಾದಲ್ಲಿ?

‘ಫೈರ್‌’ ಮತ್ತು ‘ಅರ್ಥ್‌’ ಚಿತ್ರಗಳ ವಿವಾದ ಪ್ರೇಕ್ಷಕರಿಗೆ ನೆನಪಿರಬೇಕು. ಈ ‘ವಾಟರ್‌’ ಚಿತ್ರದ್ದು ಇನ್ನೊಂದು ವಿವಾದ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಆಳುತ್ತಿದ್ದ ಕಾಲ, ಅಂದರೆ 1938ರ ಸಮಯದಲ್ಲಿ ವಾರಣಾಸಿಯಲ್ಲಿ ನಡೆಯುವ ಆಚಾರ ವಿಚಾರಗಳ ಕಥಾನಕವನ್ನು ‘ವಾಟರ್‌’ ಚಿತ್ರ ಹೊಂದಿದೆ.

ಬಾಲ್ಯ ವಿವಾಹ, ವಿಧವಾ ವಿವಾಹ, ಶೋಷಣೆ, ಗಾಂಧಿವಾದ, ವಿಧವೆಯರ ಬಲವಂತದ ಆಶ್ರಮವಾಸ ಇದರ ಸುತ್ತಾ ಕಥೆ ಸುತ್ತುತ್ತದೆ. ವಿಧವೆ ಪಾತ್ರಧಾರಿ ಲೀಸಾ ರೇ, ಗಾಂಧಿವಾದಿ ಜಾನ್‌ ಅಬ್ರಹಾಂನನ್ನು ವರಿಸಲು ಇಚ್ಛಿಸುವುದು, ನಾಯಕನ ಮನೆಯಲ್ಲಿ ಸಮ್ಮತಿ, ನಂತರ ವಿರೋಧ. ಕೊನೆಗೆ ನಾಯಕಿಯ ಆತ್ಮಾರ್ಪಣೆ, ಬಾಲ ವಿಧವೆಯಾಬ್ಬಳನ್ನು ಆಶ್ರಮದಿಂದ ಮುಕ್ತಗೊಳಿಸಿ ಗಾಂಧಿವಾದಿಗಳ ವಶಗೊಪ್ಪಿಸುವುದರೊಂದಿಗೆ ಕಥೆ ಅಂತ್ಯ ಕಾಣುತ್ತದೆ.

ಮೂಲಭೂತವಾದಿಗಳ ಆಚರಣೆ ಹಾಗೂ ಹೆಂಗಸರ ಕೇಶಮುಂಡನ ಮುಂತಾದ ಅಂಶಗಳು, ಕೆಲ ವರ್ಗದವರನ್ನು ಕೆರಳಿಸಿವೆ. ಹೀಗಾಗಿ ಚಿತ್ರ ಭಾರತದಲ್ಲಿ ತೆರೆ ಕಂಡಿರಲಿಲ್ಲ. ಆದರೆ ಡಿವಿಡಿಗಳಲ್ಲಿ ಈಗಾಗಲೇ ವೀಕ್ಷಿಸಿರುವವರು ಚಿತ್ರಮಂದಿರಕ್ಕೆ ಬರುತ್ತಾರಾ ಎಂಬುದು ಒಂದು ಪ್ರಶ್ನೆ?

(ಏಜನ್ಸೀಸ್‌)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada