For Quick Alerts
ALLOW NOTIFICATIONS  
For Daily Alerts

  ತಂತ್ರಜ್ಞನೋ ತಂತ್ರಗಾರನೋ ?

  By Staff
  |

  *ಕುಮಾರ್‌

  ಕನ್ನಡ ಚಿತ್ರರಂಗ ಕಂಡ ಮಹಾ ತಂತ್ರಜ್ಞನೆಂದರೆ ರಾಜೇಂದ್ರಸಿಂಗ್‌ಬಾಬು.

  ನಾಗರಹೊಳೆಯಿಂದ ಹಿಡಿದು ಕೋತಿಗಳು ಸಾರ್‌ ತನಕ, ವಿಷ್ಣುವರ್ಧನ್‌ರಿಂದ ಹಿಡಿದು ರಾಜ್‌ಕುಮಾರ್‌ತನಕ, ಬಾಬು ತಂತ್ರಗಳು ಯಶಸ್ವಿ ಪ್ರಯೋಗಗಳನ್ನು ಕಂಡಿವೆ. ಅವರ ತಂತ್ರಗಳಿಗೆ ದೇಶಭಾಷೆಯ ಹಂಗಿಲ್ಲ. ಬಡವ ಬಲ್ಲಿದನೆಂಬ ಭೇದವಿಲ್ಲ. ಬಾಬು ಸ್ಪರ್ಶದಿಂದ ಎಂಥೆಂಥವರೋ ಸ್ಟಾರ್‌ ಆಗಿದ್ದಾರೆ, ಅಷ್ಟೇ ಜನ ಪಾಪರ್‌ ಕೂಡಾ ಆಗಿದ್ದಾರೆ. ಬಾಬು ಚಿತ್ರರಂಗದ ಸಕಲ ನಿಯಮಗಳನ್ನೂ ಮುರಿಯಬಲ್ಲರು, ನೀತಿಗಳನ್ನು ಧ್ವಂಸ ಮಾಡಬಲ್ಲರು. ಕೊನೆಗೆ ಏನೂ ಆಗದವರಂತೆ ತೆಪ್ಪಗೆ ಇರಬಲ್ಲರು.

  ‘ನಾಗರಹೊಳೆ’ಯಂಥಾ ಮಕ್ಕಳಚಿತ್ರದಿಂದ ಹಿಡಿದು ‘ಅಂತ’ದಂಥ ‘ದೊಡ್ಡವರ’ಚಿತ್ರದ ತನಕ, ‘ಮುತ್ತಿನಹಾರ’ದಂಥಾ ದೇಶಪ್ರೇಮದ ಕತೆ ತನಕ, ‘ಹೂವುಹಣ್ಣಿ’ನಂಥಾ ಕ್ರಾಂತಿಕಾರಿ ಚಿತ್ರದಿಂದ ಹಿಡಿದು ‘ಕುರಿಗಳು ಸಾರ್‌’ನಂಥಾ ನಗೆಚಿತ್ರದ ತನಕ. ಬಾಬು ಎಂಬ ಆಡು ಮುಟ್ಟದ ಸೊಪ್ಪೇ ಇಲ್ಲ. ಅವರದು ಮೂರು ದಶಕಗಳ ಅಮೋಘ ಸೇವೆ.

  ಕನ್ನಡದ ನಿರ್ದೇಶಕರ ಪೈಕಿ ಗಿರೀಶ್‌ ಕಾಸರವಳ್ಳಿ ಬಿಟ್ಟರೆ ಓದುವ ಅಭ್ಯಾಸ ಬೆಳೆಸಿಕೊಂಡಿರುವ ಮತ್ತೊಬ್ಬ ನಿರ್ದೇಶಕನೆಂದರೆ ಬಾಬು ಮಾತ್ರ. ಅವರ ಮನೆ ತುಂಬಾ ಇಂಗ್ಲಿಷ್‌ ಪುಸ್ತಕಗಳಿವೆ, ಆಡಿಯೋ ವಿಡಿಯೋ ಕ್ಯಾಸೆಟ್‌ಗಳಿವೆ. ಅವರಿಗೆ ಇಂಗ್ಲಿಷ್‌ ಅಂದರೆ ಪ್ರೀತಿ, ಇಂಗ್ಲಿಷ್‌ ಚಿತ್ರಗಳನ್ನು ಕದಿಯೋದು ಅಂದರೆ ಇನ್ನೂ ಪ್ರೀತಿ, ರಿಮೇಕು ವಿರುದ್ಧ- ಗುಡುಗುತ್ತಲೇ ಹಾಲಿವುಡ್‌ ಚಿತ್ರವೊಂದನ್ನು ಕನ್ನಡಕ್ಕೆ ಭಟ್ಟಿಯಿಳಿಸುತ್ತಾರೆ. ಉದಾಹರಣೆಗೆ ಮುಂಗಾರಿನ ಮಿಂಚು. ಇದಕ್ಕೆ ‘ವಾಕಿಂಗ್‌ ಇನ್‌ ದ ಕ್ಲೌಡ್ಸ್‌’ ಚಿತ್ರವೇ ಆಧಾರ. ಕೆಟ್ಟ ಚಿತ್ರ ‘ಭೂಮಿತಾಯಿಯ ಚೊಚ್ಚಲಮಗ’ನಾಗುತ್ತದೆ. ಕನ್ನಡಿಗರಿಗೆ ಇದೆಲ್ಲಾ ಎಲ್ಲಿ ಅರ್ಥ ಆಗುತ್ತೆ ಅಂತ ಬಾಬು ಮೀಸೆಯಲ್ಲೇ ನಗುತ್ತಾರೆ.

  ಆದರೂ ಅಪರೂಪಕ್ಕೊಮ್ಮೆ ಬಾಬು ಕದ್ದಮಾಲು ಸಮೇತ ಸಿಕ್ಕಿಹಾಕಿಕೊಳ್ಳುವುದೂ ಉಂಟು. ‘ಭಾರತ್‌ 2000’ ಚಿತ್ರವನ್ನು ಮೊದಲು ತೆಲುಗಿನಲ್ಲಿ ಮಾಡಿ, ಅನಂತರ ಕನ್ನಡಕ್ಕೆ ಡಬ್‌ ಮಾಡಿದ ಕುಖ್ಯಾತಿ ಅವರ ಬೆನ್ನಿಗಂಟಿದೆ. ಫಿಲಂಚೇಂಬರ್‌ ಅವರಿಗೆ ಬಹಿಷ್ಕಾರ ಶಿಕ್ಷೆ ವಿಧಿಸಿದ್ದೂ ಉಂಟು. ಅನಂತರ ಕ್ಷಮೆ ಸಿಕ್ಕಿತು. ಬಾು ಮತ್ತೆ ನಿರ್ದೇಶಕ ಸಂಘದ ಅಧ್ಯಕ್ಷರಾಗಿ ರಾರಾಜಿಸತೊಡಗಿದರು. ನಿರ್ದೇಶಕರ ಸಂಘಕ್ಕೆ ಬಾಬು ಬಿಟ್ಟರೆ ಬೇರೆ ಗತಿಯಿಲ್ಲ.

  ಕನ್ನಡದ ಸಹವಾಸ ಬೋರ್‌ ಆದಾಗಲೆಲ್ಲಾ ಬಾಬು ಬಾಂಬೆ ಪ್ರವಾಸ ಕೈಗೊಳ್ಳುತ್ತಾರೆ. ಅಲ್ಲೊಂದು ಹಿಂದಿಚಿತ್ರದ ಮುಹೂರ್ತ ನಡೆಸಿ ವಾಪಸ್ಸಾಗುತ್ತ್ತಾರೆ. ಆ ಚಿತ್ರ ಅರ್ಧಕ್ಕೇ ಖುಲಾಸ್‌. ರಾಜ್‌ಕುಮಾರ್‌ ಅಪಹರಣವಾದಾಗ ಕನ್ನಡ ಚಿತ್ರೋದ್ಯಮ ಬಂದ್‌ ಆಚರಿಸಿತು. ಆಗ ‘ರಾಜ್‌ ಬರುವ ತನಕ ನೋ ಆ್ಯಕ್ಷನ್‌, ಬರೀ ಕಟ್‌ ಮಾತ್ರ’ ಎಂದು ಘೂೕೕಷಿಸಿದ್ದ ಬಾಬು ಮುಂಬೈಗೆ ಹೋಗಿ ಚಿತ್ರಕತೆ ಬರೀತಾ ಕುಳಿತಿದ್ದರು. ಒಂದು ಫೈನ್‌ ಡೇ ಅಲ್ಲಿಂದ ಬಂದವರೇ ‘ಯಾರು ಇರಲಿ ಇಲ್ಲದೇ ಇರಲಿ. ದಿ ಶೋ ಮಸ್ಟ್‌ ಗೋ ಆನ್‌’ ಅಂತ ಆಪ್ಪಣೆ ಕೊಡಿಸಿದರು. ಎಂಬಲ್ಲಿಗೆ ರಾಜ್‌ ಕಂಪನಿ ಜೊತೆ ಬಾಬು ಸಂಬಂಧ ಹಳಸಿಹೋಯಿತು. ಆದರೆ ಬಾಬು ಮಹಾ ತಂತ್ರಜ್ಞ! ಬಂದೇ ಬರುತಾವ ಕಾಲ ಎಂದು ಕಾಯುವ ಸಮಯದ ಬೊಂಬೆ. ‘ಸಿನಿಮಾ ಇತಿಹಾಸ’ ಪುಸ್ತಕದಲ್ಲಿ ರಾಜ್‌ ಬಗ್ಗೆ ಅವಹೇಳನಕಾರಿ ಪದಗಳಿವೆ ಎಂದು ಯಾರೋ ಹೇಳಿದ್ದೇ ತಡ ಬಾಬು ಪತ್ರಿಕಾ ಹೇಳಿಕೆ ನೀಡಿಯೇ ಬಿಟ್ಟರು. ರಾಜ್‌ ಅವರನ್ನು ಅವಮಾನಿಸಿದ ಪುಸ್ತಕಕ್ಕೆ ಬಹಿಷ್ಕಾರ ಹಾಕಬೇಕು ಎಂದು ಗರ್ಜಿಸಿದರು. ಬಾಬು ಅವರ ಅಭಿಮಾನ ಕಂಡು ಬೆರಗಾದ ಪಾರ್ವತಮ್ಮ ಹಳೆಯದೆಲ್ಲವನ್ನೂ ಮರೆತರು. ಸದ್ಯದಲ್ಲೆ ರಾಜ್‌ ಕಂಪನಿಗೆ ಬಾಬು ಚಿತ್ರ ಮಾಡಿಕೊಟ್ಟರೆ ಆಶ್ಚರ್ಯವೇನಿಲ್ಲ.

  ಹಿಮಪಾತ ಚಿತ್ರ ಅಪಘಾತಕ್ಕೀಡಾದ ಬಳಿಕ ಬಾಬು ಹೆಸರು ಕೇಳಿದರೇ ನಿರ್ಮಾಪಕರು ಬೆಚ್ಚಿಬೀಳುವಂತಾಗಿತ್ತು. ‘ಭೂಮಿತಾಯಿ ಚೊಚ್ಚಲಮಗ’ ಬಿದ್ದುಹೋದ ನಂತರ ಅವರ ಭಾವ ಜೈಜಗದೀಶರೇ ಬಾಬುವನ್ನು ಬಾಂಬಿನ ಥರ ನೋಡತೊಡಗಿದ್ದರು. ಬಾಬು ಇಂಥಾದ್ದಕ್ಕೆಲ್ಲಾ ಕೇರ್‌ ಮಾಡುವವರಲ್ಲ. ಯಾಕೆಂದರೆ ಕೆಲಸವಿಲ್ಲದೇ ಇದ್ದರೂ ಅವರು ನಿರುದ್ಯೋಗಿಯಾಗುವುದಿಲ್ಲ. ಯಾರಿಗಾದರೂ ತಗಲಿಕೊಳ್ಳುತ್ತಾರೆ. ಕಳಕೊಳ್ಳುವುದಕ್ಕೆ ಏನೂ ಇಲ್ಲದವರಿಗೆ ಇರುವ ಧೈರ್ಯ ಪಡಕೊಂಡವರಿಗಿರುವುದಿಲ್ಲ ಅನ್ನೋ ಸತ್ಯ ಬಾಬು ಅವರಿಗೆ ಗೊತ್ತು . ವಿಷ್ಣುವರ್ಧನ್‌ ಕಾಲ್‌ಷೀಟ್‌ ಸಿಗಲಿಲ್ಲ ಅಂದಾಕ್ಷಣ ಅವರ ಮೇಲೆ ಆರೋಪಗಳ ಮಳೆ ಸುರಿಸಿದರು. ಕನ್ನಡ ವಿರೋಧಿ, ಜುಗ್ಗ, ಕೆಟ್ಟ ನಟ ಎಂದೆಲ್ಲಾ ಹಳಿದರು. ಆರಂಭದಲ್ಲಿ ಸುಮ್ಮನಿದ್ದ ವಿಷ್ಣು ಅನಂತರ ಬಾಬು ಜಾತಕವನ್ನು ಬಿಡಿಸಿಬಿಟ್ಟರು. ಬಾಬು ಸುಮ್ಮನಾದರು.

  ಬಾಬು ಪ್ರಚಾರಪ್ರಿಯ. ಸನ್ಮಾನವೋ, ಅವಮಾನವೋ ಒಟ್ಟಿನಲ್ಲಿ ಸುದ್ದಿಯಲ್ಲಿರಬೇಕು. ಕಾರ್ಮಿಕರ ಒಕ್ಕೂಟವನ್ನು ಒಡೆದ ಖ್ಯಾತಿ ಇವರದು. ಅವರೇ ಹುಟ್ಟುಹಾಕಿದ ಮತ್ತೊಂದು ಸಂಸ್ಥೆಗೆ ಈಗ ಗಾಢನಿದ್ರೆ. ರೀಮೇಕು ವಿರೋಧಿ ಚಳವಳಿಯ ಮುಂಚೂಣಿಯಲ್ಲಿದ್ದವರು. ಆದರೆ ಅವರದೇ ಸಂಸ್ಥೆ ಕೆಲವು ರೀಮೇಕು ಚಿತ್ರಗಳನ್ನು ನಿರ್ಮಿಸಿತ್ತು. ಸ್ಟಾರ್‌ಗಳನ್ನು ಕಂಡರೆ ಅವರಿಗೆ ಆಗಿರುವುದಿಲ್ಲ. ಹಾಗಿದ್ದೂ ರವಿಚಂದ್ರನ್‌ ಡೇಟ್ಸ್‌ ಕೊಡಲಿಲ್ಲ ಅಂತ ಜಗಳವಾಡಿದ್ದುಂಟು. ಕನ್ನಡದಲ್ಲಿ ಕತೆಗಳಿಲ್ಲ ಅಂದರೆ ಬಾಬು ವಿಪರೀತ ಸಿಟ್ಟಾಗುತ್ತಾರೆ, ಆದರೆ ಅವರ ಚಿತ್ರಗಳಿಗೆ ತೆಲುಗು ಕತೆಗಾರನೇ ಕತೆ ಬರೆಯುತ್ತಾರೆ. ಸೆನ್ಸಾರ್‌ ಮಂಡಳಿಯವರು ಲಂಚ ತಿನ್ನುತ್ತಾರೆ ಎಂದು ನಡುಬೀದಿಯಲ್ಲಿ ನಿಂತು ಆರೋಪ ಮಾಡುತ್ತಾರೆ, ಅದಕ್ಕೆ ತಕ್ಕ ದಾಖಲೆ ಕೊಡಿ ಅಂದರೆ ಕೈ ಅಲ್ಲಾಡಿಸುತ್ತಾರೆ.

  ಬಾಬು ಅವರಿಗೆ ಖಾಯಂ ಸ್ನೇಹಿತರಿಲ್ಲ, ಅವರಿಗೆ ಅದು ಬೇಕಾಗಿಯೂ ಇಲ್ಲ. ಅಗತ್ಯ ಬಿದ್ದಾಗ ಸ್ನೇಹಿತರನ್ನು ಸಂಪಾದಿಸುತ್ತಾರೆ, ಆಮೇಲೆ ಅವರನ್ನು ನಡುನೀರಲ್ಲಿ ಕೈಬಿಟ್ಟು ಮುಂದೆ ಹೋಗ್ತಾರೆ ಅನ್ನುವ ಆರೋಪ ಅವರ ಮೇಲಿದೆ. ಬೇರೆಯವರ ವಿಚಾರ ಬಿಡಿ, ಅವರ ಭಾವ ಜೈಜಗದೀಶ್‌ ಅವರೇ ಬಾರ್‌ ಒಂದರಲ್ಲಿ ಕುಳಿತು ‘ಬಾಬು ಕನ್ನಡ ಕಂಡ ಮಹಾನ್‌ ನಿರ್ದೇಶಕ, ಹಲವಾರು ಯಶಸ್ವಿ ಚಿತ್ರಗಳನ್ನು ಕೊಟ್ಟಿದ್ದಾರೆ. ಆದರೂ ನನ್ನನ್ನು ಬಿಟ್ರೆ ಬೇರೆ ಯಾರೂ ಯಾಕೆ ಅವರಿಗೆ ಅವಕಾಶ ಕೊಡುವುದಿಲ್ಲ’ ಎಂದು ಹೇಳಿದ್ದನ್ನು ಕೇಳಿಸಿಕೊಂಡವರಿದ್ದಾರೆ.

  ಬಾಬು ಅವರಿಗೆ ಹಣದಾಸೆಯಿಲ್ಲ . ಲಾಭದ ಸಲುವಾಗಿ ಅವರು ಚಿತ್ರಗಳನ್ನು ಮಾಡುವುದೂ ಇಲ್ಲ. ಹಾಗನ್ನುವ ಹೊತ್ತಿಗೇ ಲಹರಿ ಕಂಪನಿ ಮತ್ತು ಬಾಬು ನಡುವಿನ ಜಗಳ ನೆನಪಾಗುತ್ತ್ತದೆ. ಲಹರಿ ಚೆಕ್‌ ಬೌನ್ಸ್‌ ಆದ ಕೇಸು ಹಾಕಿತ್ತು . ಬಾಬು ಅದೃಷ್ಟ ಚೆನ್ನಾಗಿತ್ತು. ಅವರು ಅಲ್ಲೂ ಬಚಾವಾದರು.

  ಇಂತಿಪ್ಪ ಬಾಬು ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಸಿನಿಮಾ ಇತಿಹಾಸದ ವಿರುದ್ಧ ಪ್ರತಿಭಟನೆ, ಛೇಂಬರ್‌ ವಿರುದ್ಧ ಧರಣಿ, ಇವೆರಡೂ ಕಾರ್ಯಕ್ರಮಗಳೂ ಸಾಂಗವಾಗಿ ನೆರವೇರಿವೆ. ‘ಕೊತ್ವಾಲ’ ಚಿತ್ರದ ನಿರ್ದೇಶನ ಮುಂದೆ ಹೋಗಿದೆ, ಆ ಜಾಗದಲ್ಲಿ ‘ಹಿಂದೂ’ ಎಂಬ ಚಿತ್ರ ಸೆಟ್ಟೇರಲಿದೆ. ಅದು ಮತ್ತೊಂದು ವಿವಾದಾಸ್ಪದ ಚಿತ್ರವಾಗಲಿದೆ ಅನ್ನುವ ಸುದ್ದಿಯಿದೆ. ಉಪೇಂದ್ರ ಮತ್ತು ಬಾಬು ಅವರಿಬ್ಬರಿಗೂ ವಿವಾದಗಳೆಂದರೆ ಇಷ್ಟ . ಕಷ್ಟವಾಗುವುದು ಮಿಕ್ಕವರಿಗೆ !

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more