»   » ‘ಏಕಾಂಗಿ ಎಂಬ ಕಮಂಗಿಗೇ ಈಪಾಟಿ ಪ್ರಶಸ್ತಿ ಕೊಟ್ಟರೆ ಹೇಗೆ’ !

‘ಏಕಾಂಗಿ ಎಂಬ ಕಮಂಗಿಗೇ ಈಪಾಟಿ ಪ್ರಶಸ್ತಿ ಕೊಟ್ಟರೆ ಹೇಗೆ’ !

Posted By:
Subscribe to Filmibeat Kannada

*ಕೀರ್ತಿ, ಬೆಂಗಳೂರು

ವಾದಿರಾಜ್‌ ಸಾಹೇಬರಿಗೆ ದೊಡ್ಡ ನಮಸ್ಕಾರ,

ನೀವು ಹಿರಿಯರು, ಸದಭಿಮಾನಿಗಳ ಸರೀಕರು ಅಂದುಕೊಂಡಿದ್ದೆ. ಆದರೆ, ಅರುಳು ಮರುಳು ಅನ್ನೋದನ್ನ ಸಾಬೀತು ಮಾಡಿಬಿಟ್ಟಿರಿ. ಈ ಸೀಟಿಗೆ ವಾದಿರಾಜ ಬಂದರೂ ಅಷ್ಟೆಯಾ, ಹೇಮರಾಜ ಬಂದರೂ ಅಷ್ಟೆಯಾ !

ನನಗಂತೂ ನೀವು ‘ಏಕಾಂಗಿ’ ಸಿನಿಮಾಗೆ ಈಪಾಟಿ ಪ್ರಶಸ್ತಿ ಕೊಟ್ಟಿರೋದು ‘ಅಯ್ಯಯ್ಯಪ್ಪೋ’ ಅನ್ನುವಂತೆ ಮಾಡಿದೆ. ಫಸ್ಟ್‌ ಪ್ರೆೃಸನ್ನೇನೋ ‘ದ್ವೀಪ’ಕ್ಕೆ ಕೊಟ್ಟು ಧನ್ಯರಾಗಿಬಿಟ್ಟಿರಿ. ಆ ಸಿನಿಮಾನ ನಾನೂ ಸೇರಿದಂತೆ ಅಭಿಮಾನಿಗಳು ಇನ್ನೂ ನೋಡಿಲ್ಲ. ನೋಡುವ ಅವಕಾಶ ಸಿಗುತ್ತೋ ಇಲ್ಲವೋ ಅನ್ನುವ ಅನುಮಾನವೂ ಇದೆ, ಅದಿರಲಿ. ‘ಏಕಾಂಗಿ’ಯಲ್ಲಿ ಅಂಥಾದ್ದೇನಿದೆ ವಾದಿರಾಜ್‌?!

ತಂತ್ರಗಾರಿಕೆ ಹಾಗಿದೆ ಹೀಗಿದೆ ಅಂತೆಲ್ಲಾ ಸಮರ್ಥನೆ ಕೊಟ್ಟಿದ್ದೀರಿ. ಅಪ್ಪ ಓಡಿಸುವ ಸ್ಯಾಂಟ್ರೋ ಕಾರು ಮಗನ ಕೈಗೆ ಬಂದರೂ ಹಾಗೇ ಹೊಸದಾಗೇ ಇರುತ್ತೆ ! ಅಪ್ಪ ಏನೋ ಸಾಫ್ಟ್‌ವೇರ್‌ ಎಂಜಿನಿಯರ್‌; ಮಗ ಮಾಡೋದೇನು? ಅಪ್ಪ ಮಾಡಿರುವ ಆಸ್ತಿ ತಿಂತಾನಾ? ಮನೇಲೇ ಬಾರು, ಗಾಜಿನ ಕೇರಮ್ಮು, ಬಡಪಾಯಿ ಮೀನುಗಳಿರುವ ಅಕ್ವೇರಿಯಮ್ಮು, ಇದನ್ನು ಒಡೆದು ರವಿಚಂದ್ರನ್‌ ಶ್ರೀಮಂತಿಕೆ ಮೆರೆಯುವಾಗ ಅವುಗಳ ನರಳಾಟ, ರವಿ ಮನಸೋ ಇಚ್ಛೆ ಹಾರಾಡುವ ಹಳದಿ ಬಣ್ಣದ ಸಿಲ್ಕು ಬಟ್ಟೆಗಳು, ಟೇಬಲ್‌ ಟೆನಿಸ್ಸು, ಕಣ್ಣಾಮುಚ್ಚಾಲೆ ಆಟ, ಹೆಜ್ಜೆಗೊಂದು ಭೂತಾಕಾರದ ಟೆಡ್ಡಿ ಬೇರ್‌... ಅಬ್ಬಬ್ಬಾ ! ಕೊಳೆಯೇ ಆಗದ ನೆಲವನ್ನು ಮಿರಮಿರ ಮಿಂಚುವ ಬಣ್ಣದ ಹಿಡಿ ಬ್ರಷ್ಷಿಂದ ರ್ಯಾಂಡಮ್‌ ಆಗಿ ಒರೆಸುವ ಅಪ್ಪ- ಮಗ; ಇಬ್ಬರೂ ರವಿಚಂದ್ರನ್‌. ಇಂಥಾ ಭಯಂಕರ ಏಕಾಂಗಿಗಳಿಗೆ ಭಯಂಕರ ಪ್ರಶಸ್ತಿಗಳು!

ಒಬ್ಬ ನಿಜವಾದ ‘ಏಕಾಂಗಿ’ ರೂಪುಗೊಳ್ಳುವುದು ಆತನ ಮನಸ್ಥಿತಿಯಿಂದ. ಆದರೆ ರವಿಚಂದ್ರನ್‌ ಕಾನ್ಸೆಪ್ಟಿನ ಏಕಾಂಗಿ ಏಕಾಂಗಿಯಲ್ಲ, ಕಮಂಗಿ ! ಈ ನೇರ ಮಾತುಗಳಿಂದ ಬೇಸರವಾಗಿಯಾದರೂ ರವಿಚಂದ್ರನ್‌ ಎಚ್ಚೆತ್ತುಕೊಳ್ಳಲಿ. ಇನ್ನು ಹಾಡಿನ ಸಮಾಚಾರ- ಏಕಾಂಗಿ ಟ್ಯೂನ್‌ಗಳೇನೋ ಚೆನ್ನಾಗಿವೆ. ‘ಒನ್ಸ್‌ ಅಪಾನ್‌ ಎ ಟೈಮ್‌’, ‘ಬಣ್ಣ ಬಣ್ಣದ ಲೋಕ’, ‘ಏಕಾಂಗಿ ನಾನಮ್ಮ...’ ಈ ಹಾಡುಗಳು ಪದೇ ಪದೇ ಗುನುಗುವಂತಿವೆ. ಈ ಹಾಡುಗಳನ್ನು ಹಾಡಿರೋದು ಕ್ರವಾಗಿ ಸೋನು ನಿಗಮ್‌, ಶಂಕರ್‌ ಮಹದೇವನ್‌ ಮತ್ತು ಹರಿಹರನ್‌. ಆದರೆ ರಾಜೇಶ್‌ ಕೃಷ್ಣನ್‌ ಹಾಡಿರುವ ಹಾಡಿಗೆ ಪ್ರಶಸ್ತಿ ಕೊಟ್ಟಿದೀರಿ. ಹೊರಗಿನ ಗಾಯಕರಿಗೆ ಪ್ರಶಸ್ತಿ ಕೊಡೋದು ಬೇಡ ಎಂಬ ಪೂರ್ವಾಗ್ರಹವೇನಾದರೂ ಈ ನಿರ್ಧಾರದ ಹಿಂದೆ ಇದೆಯೇ? ಸಂಗೀತ ನಿರ್ದೇಶನಕ್ಕಾಗಿ ರವಿಚಂದ್ರನ್‌ಗೆ ಕೊಟ್ಟಿರುವ ಪ್ರಶಸ್ತಿಯನ್ನು ನಾನು ಒಪ್ಪುತ್ತೇನೆ. ಆದರೆ ನಟನೆ, ನಿರ್ದೇಶನಕ್ಕಾಗಿ ರವಿ ಈ ಪರಿಯ ಗೌರವಕ್ಕೆ ‘ಏಕಾಂಗಿ’ಯಲ್ಲಂತೂ ಖಂಡಿತ ಅರ್ಹರಾಗಿಲ್ಲ.

ಪ್ರಶಸ್ತಿಗಳ ಬಗ್ಗೆ ತಕರಾರಿನ ಪಟ್ಟಿ ಮಾಡುತ್ತಾ ಹೋದರೆ ಪ್ರಕಟಿಸೋಕೆ ಜಾಗವೇ ಸಾಕಾಗೋದಿಲ್ಲ. ಯಾವ ತೀಟೆಗೆ ಇಂಥಾ ಕೆಲಸ ಮಾಡ್ತೀರಿ ಸ್ವಾಮಿ? ಪಿ.ಶೇಷಾದ್ರಿ ತೆಗೆದಿರೋ ‘ಅತಿಥಿ’ ಸಿನಿಮಾ ಚೆನ್ನಾಗಿತ್ತು. ‘ಸೈನಿಕ’ ಕೂಡ ‘ಏಕಾಂಗಿ’ಗಿಂತ ಮಿಗಿಲಾಗಿತ್ತು.

ಇನ್ನೊಂದು ಕಿರಿಕ್ಕು :
ನನ್ನ ಪರಿಚಯಸ್ಥರ ದೂರದ ಸಂಬಂಧಿ ನಂದಿತಾ ಚೆನ್ನಾಗಿ ಹಾಡ್ತಾಳೆ. ‘ಗಂಧದ ಬೊಂಬೆ’ ಸಿನಿಮಾದ ಎಲ್ಲಾ ಹಾಡುಗಳನ್ನು ಅಧಿಕೃತವಾಗಿ ಹಾಡಿರೋದು ಈ ಹುಡುಗಿಯೇ (ನೀವು ಪ್ರಶಸ್ತಿಗೆ ಆಯ್ಕೆ ಮಾಡಿರುವ ಬಿಳಿ ಬಣ್ಣದ ಗಿಣಿ.. ಹಾಡನ್ನೂ ಸೇರಿಸಿ). ಆದರೆ ನೀವು ಬಿ.ಆರ್‌.ಛಾಯಾಗೆ ಪ್ರಶಸ್ತಿ ಪ್ರಕಟಿಸಿದ್ದೀರಿ. ಇದು ಆ ಸಿನಿಮಾ ನಿರ್ಮಾಪಕ ಶ್ರೀನಿವಾಸ್‌ ಎಂಬಾತನ ಅವಾಂತರ ಅಂತ ಸಂಗೀತ ನಿರ್ದೇಶಕ ವಿ.ಮನೋಹರ್‌ ಸ್ಪಷ್ಟೀಕರಿಸಿದ್ದಾರೆ. ಮೊದಲು ಬಿ.ಆರ್‌.ಛಾಯಾ ಕೈಲಿ ಹಾಡಿಸಿ, ನಂತರ ಅದು ಸರಿ ಬರಲಿಲ್ಲ ಎಂಬ ಕಾರಣಕ್ಕೆ ನಂದಿತಾ ಕೈಲಿ ಅದೇ ಹಾಡನ್ನು ಹಾಡಿಸಿದ್ದಾರೆ ಶ್ರೀನಿವಾಸ. ನೀವು ಕೇಳಿದ್ದು ಛಾಯಾ ಹಾಡಿದ ಹಾಡೋ, ನಂದಿತ ಹಾಡಿದ ಹಾಡೋ ಗೊತ್ತಿಲ್ಲ. ಒಟ್ಟಿನಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಉತ್ತಮ ಹಿನ್ನೆಲೆ ಗಾಯಕಿಯ ಪ್ರಶಸ್ತಿ ವಿಷಯದಲ್ಲಿ ಕಿರಿಕ್ಕಾಗಿದೆ.

ಈ ತಪ್ಪಿಗೆ ಯಾರು ಮೂಲ ಕಾರಣ ಅನ್ನೋದು ನನ್ನಂಥ ಪಾಮರರಿಗೆ ಗೊತ್ತಾಗೋಕೆ ಸಾಧ್ಯವಿಲ್ಲ. ಆಯ್ಕೆ ಮಾಡುವ ಸೀಟಲ್ಲಿ ಕೂತ ನಿಮಗೆ ಕನಿಷ್ಠ ಪ್ರಶಸ್ತಿ ಕೊಡುವ ವಿಷಯದ ಹಿಂದೂಮುಂದೂ ಗೊತ್ತಿಲ್ಲದಿದ್ದರೆ ಹೇಗೆ, ಹೇಳಿ? ನಂದಿತಾ ಅಷ್ಟೇ ಅಲ್ಲ, ಛಾಯಾಗೂ ಕೂಡ ಈ ಗೊಂದಲದಿಂದ ಕಿರಿಕಿರಿಯಾಗಿದೆ.

ವಾದಿ, I am sorry to say you have done a blunder !

Post your views

ಪೂರಕ ಓದಿಗೆ...
‘ಏಕಾಂಗಿ’ಗೆ ಕಂಡಾಪಟ್ಟೆ ಪ್ರಶಸ್ತಿ


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada