ಐದು ಜಿಲ್ಲೆಗಳಲ್ಲಿ ಶಿವಣ್ಣನ 'ಚೆಲುವೆ'ಗೆ ತಡೆ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಚೆಲುವೆಯೇ ನಿನ್ನೇ ನೋಡಲು' ಇಂದು(ಆ.6) ರಾಜ್ಯದಾದ್ಯಂತ ಬಿಡುಗಡೆಯಾಗಿದೆ. ಆದರೆ ರಾಜ್ಯದ ಚಿತ್ರ 5 ಜಿಲ್ಲೆಗಳ ಪ್ರೇಕ್ಷಕರಿಗೆ 'ಚೆಲುವೆ'ಯನ್ನು ನೋಡುವ ಸೌಭಾಗ್ಯವಿಲ್ಲ. ಕಾರಣ ನಗರದ ಸಿಟಿ ಸಿವಿಲ್ ಕೋರ್ಟ್ 'ಚೆಲುವೆಯೇ ನಿನ್ನೇ ನೋಡಲು' ಚಿತ್ರಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
ಹಣಕಾಸು ವಿವಾದದ ಹಿನ್ನೆಲೆಯಲ್ಲಿ ನಿರ್ಮಾಪಕ ರಾಘವೇಂದ್ರ ಕಾಮತ್ ಅವರು 'ಚೆಲುವೆಯೇ ನಿನ್ನೇ ನೋಡಲು' ಚಿತ್ರದ ನಿರ್ಮಾಪಕ ಎನ್ ಎಂ ಸುರೇಶ್ ವಿರುದ್ಧ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಮೈಸೂರು, ಮಂಡ್ಯ, ಚಾಮರಾಜ ನಗರ, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಚಿತ್ರ ಪ್ರದರ್ಶನಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
'ಗಾಂಧಿ ಸ್ಮೈಲ್' ಚಿತ್ರ ನಿರ್ಮಾಣದ ವೇಳೆ ಎಂ ಎನ್ ಸುರೇಶ್ ಅವರಿಗೆ ಸಹ ನಿರ್ಮಾಪಕರಾಗಿದ್ದ ರಾಘವೇಂದ್ರ ಕಾಮತ್ ರು.22 ಲಕ್ಷ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಐದು ಜಿಲ್ಲೆಗಳ ಹಂಚಿಕೆ ಹಕ್ಕುಗಳನ್ನು ಕಾಮತ್ ಅವರಿಗೆ ನೀಡುವುದಾಗಿ ಒಪ್ಪಂದವಾಗಿತ್ತು. ಆದರೆ ಐದು ಜಿಲ್ಲೆಗಳ ವಿತರಣೆ ಹಕ್ಕುಗಳನ್ನು ಸುರೇಶ್ ಅವರು ಶಿವಪ್ರಸಾದ್ ಎಂಬುವವರಿಗೆ ನೀಡಿದ್ದರು. ಇದನ್ನು ಪ್ರಶ್ನಿಸಿ ಕಾಮತ್ ಅವರು ಕೋರ್ಟ್ ಗೆ ಮೊರೆ ಹೋಗಿದ್ದರು.


Click it and Unblock the Notifications











