ಸಾವಿರ ರುಪಾಯಿ ನೋಟಿನ ಬಣ್ಣ ನಸುಗೆಂಪು ಏಕೆ?
ಸಂಜಯ್ ದತ್, ಕಂಗನಾ ರನೌತ್ ಮತ್ತು ಇರ್ಫಾನ್ ಖಾನ್ ಮುಖ್ಯಭೂಮಿಕೆಯಲ್ಲಿರುವ 'ನಾಕ್ ಔಟ್' ಚಿತ್ರಕ್ಕೆ ಸೆನ್ಸಾರ್ ಸಮಸ್ಯೆ ಎದುರಾಗಿದೆ. ಸಾಹಸ ಪ್ರಧಾನ ಈ ಚಿತ್ರದ ಟ್ರೈಲರ‍್ನ್ನು ಸೆನ್ಸಾರ್ ಮಂಡಳಿ ನಿಷೇಧಿಸಿದೆ. ಚಿತ್ರದಲ್ಲಿ ಸಾವಿರ ರೂಪಾಯಿ ನೋಟಿನ ಬಗ್ಗೆ ವಿವಾದಾತ್ಮಕ ಹೇಳಿಗೆ ನೀಡಿರುವುದೇ ಈ ನಿಷೇಧಕ್ಕೆ ಕಾರಣವಾಗಿದೆ.
ಚಿತ್ರದಲ್ಲಿನ ಸಂಭಾಷಣೆಯೊಂದು ಹೀಗಿದೆ. "ಸಾವಿರ ರುಪಾಯಿ ನೋಟಿನ ಬಣ್ಣ ನಸುಗೆಂಪು ಏಕೆ? ಎಂದು ಒಬ್ಬ ಪ್ರಶ್ನಿಸುತ್ತಾನೆ. ಇದಕ್ಕೆ ಇರ್ಫಾನ್ ಕೊಡುವ ಉತ್ತರ, ಶ್ರೀಸಾಮಾನ್ಯನ ಬೆವರು ಮತ್ತು ರಕ್ತದಿಂದ ಈ ನೋಟನ್ನು ತಯಾರಿಸಲಾಗಿದೆ" ಎನ್ನುತ್ತಾರೆ. ಈ ಹೇಳಿಕೆಗೆ ಸೆನ್ಸಾರ್ ಮಂಡಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಭಾರತೀಯ ನೋಟಿನ ಬಗ್ಗೆ ಹೀಗೆ ಹಗುರವಾಗಿ ಮಾತನಾಡುವುದು ತರವಲ್ಲ ಎಂಬುದು ಸೆನ್ಸಾರ್ ಅವರ ವಾದ. ಚಿತ್ರದಲ್ಲಿನ ವಿವಾದಾತ್ಮಕ ಸನ್ನಿವೇಶಕ್ಕೆ ಕತ್ತರಿ ಹಾಕಲು ಸೂಚಿಸಿದೆ. ಆದರೆ ಕ್ಯಾರೆ ಎನ್ನದ ಚಿತ್ರದ ನಿರ್ಮಾಪಕರು ಪರಿಷ್ಕೃತ ಸಮಿತಿಯ ಬಾಗಿಲು ತಟ್ಟಿದ್ದಾರೆ. "ಶ್ರೀಸಾಮನ್ಯನಿಗೆ ದ್ರೋಹ ಬಗೆಯುತ್ತಿರುವ ರಾಜಕಾರಣಿಗಳು ದೇಶದ ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದಾರೆ. ಇದನ್ನೆ ನಾವು ಹೇಳಿದರೆ ಅದು ಹೇಗೆ ವಿವಾದಾತ್ಮಕವಾಗುತ್ತದೆ " ಎಂದು ಪ್ರಶ್ನಿಸಿದ್ದಾರೆ.
ಈಗಾಗಲೆ ಭಾರತೀಯ ಕರೆನ್ಸಿ ಬಗ್ಗೆ ಜಾನ್ ಅಬ್ರಹಾಂ ಅವರ 'ಆಶಾಯಿ' ಚಿತ್ರದಲ್ಲಿ ದುಡ್ಡು ಎಸೆಯುವ, ಒದೆಯುವ ಹಾಗೂ ತಲೆದಿಂಬಿನ ಕೆಳಗೆ ಇಟ್ಟುಕೊಳ್ಳುವ ಸಾಕಷ್ಟು ಸನ್ನಿವೇಶಗಳು ಬಂದಿದೆ. ಈ ಬಗ್ಗೆ ಯಾಕೆ ಸೆನ್ಸಾರ್ ಮಂಡಳಿ ಮೌನವಹಿಸಿತ್ತು. ಈ ಬಗ್ಗೆ ಯಾಕೆ ಸೆನ್ಸಾರ್ ಮಂಡಳಿ ಆಕ್ಷೇಪಿಸಲಿಲ್ಲ ಎಂದು ಚಿತ್ರದ ನಿರ್ಮಾಪಕ ಸೋಹೈಲ್ ಪ್ರಶ್ನಿಸಿದ್ದಾರೆ.


Click it and Unblock the Notifications











