For Quick Alerts
  ALLOW NOTIFICATIONS  
  For Daily Alerts

  ‘ಐ ಡೋಂಟ್‌ ಕೇರ್‌’- ಪಾರ್ವತಮ್ಮ ರಾಜ್‌ಕುಮಾರ್‌

  By Staff
  |

  *ಎಸ್ಕೆ. ಶಾಮಸುಂದರ

  ‘ಇವರ್ಯಾರ ಕೈಲೂ ಏನೂ ಮಾಡಕ್ಕಾಗಲ್ಲ. ಫಾಲ್ಕೆ, ಪದ್ಮಭೂಷಣ ಎಲ್ಲ ಪ್ರಶಸ್ತಿಗಳನ್ನು ತೆಗೆದುಕೊಂಡು ಹೋಗಿ ಸುಮ್ಮನೆ ವಾಪಸ್ಸು ಕೊಟ್ಟು ಬಿಡು !’

  ವೀರಪ್ಪನ್‌ ಸೆರೆಯಲ್ಲಿದ್ದಾಗ, ಕಾಡಿನಿಂದ ಬಂದವರ ಕೈಲಿ ನಮ್ಮ ಮನೆಯವರು ನನಗೆ ಕಳುಹಿಸಿದ್ದ ಪತ್ರದಲ್ಲಿ ಹೀಗೆ ಬರೆದಿದ್ದರು. ಅವರೆಂದಿಗೂ ಪ್ರಶಸ್ತಿಗೆ ಬಾಯಿ ಬಿಟ್ಟವರಲ್ಲ. ಅಂಥಾದರಲ್ಲಿ , ರಾಜಕೀಯಕ್ಕೆ ಬರದಂತೆ ಮಾಡಲು ಪದ್ಮಭೂಷಣ ಕೊಟ್ಟರು ಅಂತ ಇತಿಹಾಸದ ಪುಸ್ತಕದಲ್ಲಿ ಬರೆದಿದ್ದಾರೆ. ಪದ್ಮಭೂಷಣ ಕೊಟ್ಟಾಗಲೇ ಯಾಕೆ ಯಾರೂ ಈ ಬಗ್ಗೆ ಮಾತಾಡಲಿಲ್ಲ ? ಆಗ ಯಾಕೆ ಹೊಗಳು ಭಟ್ಟರಾಗಿದ್ದರು? ಈಗ ಕೊಂಕು ನುಡಿಯುತ್ತಿರುವುದೇಕೆ?

  ಪಾರ್ವತಮ್ಮನವರ ನೋವು ಕಟ್ಟೆಯಾಡೆದಿತ್ತು. ಹಣೆಯಲ್ಲಿ ಸಾಲು ಗಟ್ಟಿದ ಬೆವರು. ರಕ್ತದೊತ್ತಡ ಹೆಚ್ಚಾದಂತಿತ್ತು . ‘ಅಮ್ಮ ಹೋಗಲಿ ಬಿಡಮ್ಮ , ಸಿಟ್ಟು ಮಾಡ್ಕೊಬೇಡ’ ಎಂದು ಶಿವಣ್ಣ ಸಮಾಧಾನ ಹೇಳುತ್ತಿದ್ದರು. ಪಾರ್ವತಮ್ಮ ಭೋರ್ಗರೆಯುತ್ತಲೇ ಇದ್ದರು.

  ನೋವಿನ ಕಟ್ಟೆ ಒಡೆದಿತ್ತು
  ಕರ್ನಾಟಕ ಚಲನಚಿತ್ರ ಇತಿಹಾಸ ಪುಸ್ತಕದ ಎರಡು ಸಂಪುಟಗಳ ಮುನ್ನೂರಕ್ಕೂ ಹೆಚ್ಚು ಪುಟಗಳಲ್ಲಿ ಡಾ.ರಾಜ್‌ ಅವರ ಕಾಲೆಳೆಯುವಂತಹ ಸಾಲುಗಳಿರುವಾಗ ಆ ಜೀವ ಹೇಗೆ ತಾನೆ ಸಹಿಸಿಕೊಂಡೀತು. ಜೂನ್‌ 5ರ ಸಂಜೆ ರಾಘವೇಂದ್ರ ರಾಜ್‌ಕುಮಾರ್‌ ಹಾಗೂ ಪುನೀತ್‌ ನಿರ್ಮಾಣದ ಬೆಳದಿಂಗಳಾಗಿ ಬಾ ದೈನಿಕ ಧಾರಾವಾಹಿ 100 ಕಂತು ಪೂರೈಸಿದಕ್ಕಾಗಿ ನಡೆದ ಸಂತೋಷ ಕೂಟದಲ್ಲಿ ರಾಜ್‌ ಒಬ್ಬರನ್ನು ಬಿಟ್ಟು, ಅವರ ಇಡೀ ಕುಟುಂಬ ನೆರೆದಿತ್ತು. ಆಯ್ದ ಪತ್ರಕರ್ತರ ಪುಟ್ಟ ಗುಂಪಿಗೆ ಕಂಡದ್ದು ಪಾರ್ವತಮ್ಮನವರ ಕೋಪ, ಅಳಲು, ವಿಷಾದ, ನೋವು, ಸಂಕಟ. ಅವರು ಅಕಟಕಟಾ ಅನ್ನುವುದೊಂದೇ ಬಾಕಿ.

  ಈಟಿವಿಯ ಧಾರಾವಾಹಿ ಬೆಳದಿಂಗಳಾದರೂ, ಜೂನ್‌ 5ರ ಸಂತೋಷ ಕೂಟದ ರಾತ್ರಿ ಬೆಳದಿಂಗಳು ಇರಲಿಲ್ಲ. ನಿಂತಾಗ, ಕುಂತಾಗ, ಮಕ್ಕಳೊಂದಿಗೆ ಓಡಾಡುವಾಗ... ಎಲ್ಲ ಕದಲಿಕೆಯಲ್ಲೂ ಇತಿಹಾಸ ಪುಸ್ತಕದ ತಪ್ಪುಗಳದ್ದೇ ಮಾತು....

  • ನಾನು ಯಾವುದನ್ನೂ ಒಳಗೆ ಇಟ್ಟುಕೊಳ್ಳೋದಿಲ್ಲ. ಯಾಕೆಂದರೆ, ತಪ್ಪು ಮಾಡೋದಿಲ್ಲ ಎಂಬ ಧೈರ್ಯ ನನಗಿದೆ. ಇದುವರೆಗೆ ಪತ್ರಿಕೆಗಳಲ್ಲಿ ಏನೇನೋ ಬರೆದಿದ್ದಾರೆ. ಆದರೆ ಅದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಲಿಲ್ಲ. ಆದರಿದು ಇತಿಹಾಸ. ಮುಂದಿನ ಜನಾಂಗಕ್ಕೆ ಕೈಪಿಡಿ. ಎಕ್ಕಾಮಕ್ಕಾ ಏನೇನೋ ಬರೆದವರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು.
  • ರಾಜ್‌ಕುಮಾರ್‌ ಅಂತ ಒಬ್ಬ ನಟ ಇದ್ದರು ಎಂದು ಬರೆದಿದ್ದರೆ ಸಾಕಾಗಿತ್ತು !!!
  • ನಾಗರ ಹಾವು ಸಿನಿಮಾ ಮಾಡುವಾಗ ಪುಟ್ಟಣ್ಣ, ರಾಜ್‌ಕುಮಾರ್‌ ಕೈಲಿ ರಾಮಾಚಾರಿ ಪಾತ್ರ ಮಾಡಿಸಲು ಸಾಧ್ಯವೇ ಅಂತ ಕೇಳಿದ್ದರೆಂದು ಬರೆದಿದ್ದಾರೆ. ಇದು ನಿಜವೇ ಅಂತ ಕೇಳಲು ಇವತ್ತು ಪುಟ್ಟಣ್ಣನವರೇ ಇಲ್ಲ.
  • ನಿಮ್ಮಪ್ಪನ್ನ ಅಂದ್ರೆ ನಿನಗೆ ನೋವಾಗೋದಿಲ್ವಾ, ಹಾಗೇ ಅ್ಪಪಾಜೀನ ಅಂದ್ರೆ ನಮಗೆ ನೋವಾಗುತ್ತೆ. ನಾಳೆ ನನ್ನ ಮಗ, ತಾತ ಅಂಥವರು ಇಂಥವರು ಅಂತೀರಿ. ಇಲ್ಲಿ ನೋಡಿದರೆ, ಅವರು ಹೀಗಾ ಅಂತ ಕೇಳಿದರೆ ಏನು ಹೇಳೋದು ಅಂತ ನನ್ನ ಮಗ ಕೇಳಿದ. ನಾವು ಯಾರಿಗೆ ಉತ್ತರ ಕೊಡೋದು?
  • ಯಾರೋ ರಾಜ್‌ಕುಮಾರ್‌ನ ಹಿಟ್ಲರ್‌ ಅಂತ ಕರೆದಿದ್ದರೆ, ಅದನ್ನು ಪುಸ್ತಕದಲ್ಲಿ ಬರೆಯೋದು ಎಷ್ಟು ಸರಿ? ಅವರು ಏನೇ ಮಾಡಿದ್ದರೂ ಅದು ಕನ್ನಡಕ್ಕಾಗಿ. 1953ರಲ್ಲಿ ಬಾಲಕೃಷ್ಣ, ನರಸಿಂಹ ರಾಜು ಅವರೊಂದಿಗೆ ರಾಜ್‌ಕುಮಾರ್‌ ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ. ಮೂವರೂ ಆಗ ನಡೆಯುತ್ತಿದ್ದ ನಾಟಕಗಳಿಗೆ ಹೋಗಿ, ಕನ್ನಡ ಚಿತ್ರಗಳನ್ನು ನೋಡಿ ಅಂತ ಕೇಳಿಕೊಂಡಿದ್ದಾರೆ. ಮದ್ರಾಸಿನಲ್ಲಿದ್ದಾಗಲೂ ನಾವು ಇಲ್ಲಿಂದಲೇ ಕನ್ನಡದ ತಂತ್ರಜ್ಞರನ್ನು ಕರೆಸುತ್ತಿದ್ದೆವು.
  • ಆಧ್ಯಾತ್ಮದಿಂದ ರಾಜ್‌ ಎತ್ತರಕ್ಕೇರಿದ್ದಾರೆ ಹಾಗೆ ಹೀಗೆ ಅಂತೆಲ್ಲ ಬರೆಯುತ್ತಿದ್ದವರು, ನಮ್ಮ ಮನೆಗೆ ಬಂದು ಮೂರ್ನಾಲ್ಕು ತಾಸು ಚೆನ್ನಾಗಿ ಮಾತಾಡಿ ಹೋಗುತ್ತಿದ್ದವರು ರಾಜ್‌ಕುಮಾರ್‌ ಅವರನ್ನು ಅರ್ಥ ಮಾಡಿಕೊಂಡಿರುವುದು ಇಷ್ಟೇನಾ? ಇವರಿಗೆ ಕನ್ನಡದಲ್ಲಿ ಆಷಾಢಭೂತಿಗಳು ಅಂತಾರೆ.
  • ರಾಜ್‌ಕುಮಾರ್‌ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು ಅಂತ ಬರೆದಿದ್ದಾರೆ. ಅದನ್ನು ಇವರಿಗೆ ಹೇಳಿದ್ದು ಯಾರು? ಆತ್ಮಹತ್ಯೆ ಮಾಡಿಕೊಳ್ಳುವಂಥಾದ್ದು ರಾಜ್‌ಗೆ ಏನಾಗಿದೆ?
  • ಅಷ್ಟೇ ಅಲ್ಲ, ರಾಜ್‌ಕುಮಾರ್‌ ಎಕ್ಸ್‌ಪೋಸ್‌ ಮಾಡಿದ್ದಾರೆ ಅಂತಲೂ ಬರೆದಿದ್ದಾರೆ. ಎಕ್ಸ್‌ಪೋಸ್‌ ಅಂದರೆ ಏನು ಅಂತ ಇದನ್ನು ಬರೆದವರಿಗೆ ಗೊತ್ತಿದೆಯಾ? ಇದು ಇತಿಹಾಸವಾ?
  • ನಾಲ್ಕು ವರ್ಷದ ಗ್ಯಾಪ್‌ ನಂತರ ನಾಲ್ಕು ಹಿಟ್‌ ಕೊಟ್ಟವರು ರಾಜ್‌ಕುಮಾರ್‌. ಕನ್ನಡ ಚಿತ್ರರಂಗ ಬಾಲ್ಯಾವಸ್ಥೆಯಲ್ಲಿದ್ದಾಗ ಕೈ ಹಿಡಿದು, ಅದಕ್ಕಾಗೇ ತೇದವರು. ಇದು ಅರ್ಥವಾಗಲಿಲ್ಲವೇ?
  • ನನ್ನ ಮಗ ಶಿವಣ್ಣಂದು ಕೀರಲು ಧ್ವನಿ ಅಂತೆ. ಭಾರತದಲ್ಲೇ ಯಾರೂ ಮಾಡದ ಸಾಧನೆಯನ್ನು ನನ್ನ ಮಗ ಮಾಡಿದ್ದಾನೆ. ಮೊದಲ ಮೂರೂ ಸಿನಿಮಾಗಳು ಹಿಟ್‌ ಆಗಿ ಹ್ಯಾಟ್ರಿಕ್‌ ಹೀರೋ ಎನಿಸಿಕೊಂಡಿದ್ದಾನೆ. ಜನ ಆತನನ್ನು ಒಪ್ಪಿಕೊಂಡಿರೋದು ಸುಳ್ಳೆ. ಕೀರಲು ಅಂತ ಬರೆಯೋದು ಇತಿಹಾಸವಾ?
  • ಚೇಂಬರ್‌ಗೆ ಹೆಚ್ಚು ಹಣ ಕಟ್ಟೋದು ನಮ್ಮ ವಜ್ರೇಶ್ವರಿ ಕಂಬೈನ್ಸ್‌ . ಆ ದುಡ್ಡಲ್ಲೇ ಇಂಥಾ ಇತಿಹಾಸದ ಪುಸ್ತಕ ಬರೆಸುವ ಅವಶ್ಯಕತೆಯಾದರೂ ಏನಿತ್ತು?
  • ಪುಸ್ತಕ ಬರೆದವರು ಇದೆಲ್ಲ ಸರಿಯಾ ಎಂದು ತಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಬೇಕು. ಆದರೆ, ಅವರಿಗೆ ಆತ್ಮಸಾಕ್ಷಿ ಇಲ್ಲ .
  • ಪುಸ್ತಕದಲ್ಲಿ ಏನಿದೆ ಎಂದು ಬರೆದವರಿಗೂ ಗೊತ್ತಿಲ್ಲ , ಬರೆಸಿದವರಿಗೂ ಗೊತ್ತಿಲ್ಲ .
  ಪಾರ್ವತಮ್ಮ ಎರಡು ಗಂಟೆಗೂ ಹೆಚ್ಚು ಕಾಲ ಮಾತಾಡುತ್ತಲೇ ಇದ್ದರು!

  ವಿವಾದ ಪರ್ವ..
  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X