ಅಂದು ಮಾಡಿದ ತಪ್ಪು ಒಪ್ಪಿಕೊಂಡ ಶಿವರಾಜ್ ಕುಮಾರ್
ಶಿವರಾಜ್ ಕುಮಾರ್ ಗೆಳೆತನಕ್ಕೆ ಸದಾ ಓಪನ್ ಹಾರ್ಟ್ ಎನ್ನುವುದು ಇಡೀ ಉದ್ಯಮಕ್ಕೆ ಗೊತ್ತು. ಅವರಿಗೆ ಅಭಿಮಾನಿಗಳೆಂದರೆ ಎಲ್ಲಿಲ್ಲದ ಪ್ರೀತಿ. ಅವರು ತಮ್ಮ ಚಿತ್ರ ಹೇಗಿರಬೇಕು? ಅದು ಸೋತಿದ್ದು ಏಕೆ? ಎಂಬಿತ್ಯಾದಿ ಬಗ್ಗೆ ಸದಾ ತಮ್ಮ ಗೆಳೆಯರ ಬಳಗದ ಜೊತೆ ಚರ್ಚೆ ಮಾಡುತ್ತಾರೆ. ತಮ್ಮ ಕಡೆಯಿಂದ ತಪ್ಪಾಗಿದ್ದರೆ ಒಪ್ಪಿಕೊಳ್ಳುತ್ತಾರೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆ ಇದೆ...
ಸಾಯಿಪ್ರಕಾಶ್ ನಿರ್ದೇಶಕದ ತವರಿಗೆ ಬಾ ತಂಗಿ ಚಿತ್ರ ಸೆಟ್ಟೇರಿದ ಟೈಮದು. ಶಿವಣ್ಣ ಮೊದಲ ಬಾರಿಗೆ ತಂಗಿ ಹೈಲೈಟ್ ಆಗುವ ಚಿತ್ರವನ್ನು ಒಪ್ಪಿಕೊಂಡಿದ್ದರು. ಅವರು ಹಾಗೆ ನಿರ್ಧಾರಕ್ಕೆ ಬಂದಿರುವುದು ಅವರ ಅಭಿಮಾನಿ ಬಳಗಕ್ಕೆ ಬೇಸರ ತರಿಸಿತ್ತು.
ಸ್ವತಃ ಶಿವಣ್ಣ ಫ್ಯಾನ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಕೆ.ಪಿ.ಶ್ರೀಕಾಂತ್ ಅವರ ಮುಂದೆ ಕಿತ್ತಾಡಿದ್ದೂ ಇದೆ. ಆಗ ಶಿವಣ್ಣನ ಮೌನ ಉತ್ತರವಾಗಿತ್ತು. ಮುಂದೆ ಅದೇ ತವರಿನ ಸಿನಿಮಾ ಹಿಗ್ಗಾ ಮಗ್ಗಾ ಹಿಟ್ ಆದಾಗ ಶಿವಣ್ಣನ ನಿರ್ಧಾರ ಸರಿಯಾಗಿದೆ ಎಂದು ಶ್ರೀಕಾಂತ್ ಒಪ್ಪಿಕೊಂಡರು.
ಅದಾದನಂತರ ಶಿವಣ್ಣ ಕೋದಂಡರಾಮ ಚಿತ್ರ ಒಪ್ಪಿಕೊಂಡರು. ಅದರಲ್ಲಿ ರವಿಚಂದ್ರನ್ ಜೊತೆ ಶಿವಣ್ಣ ಕಾಣಿಸಿಕೊಂಡಿದ್ದರು. ಒಂದು ದೃಶ್ಯದಲ್ಲಿ ರವಿ ಅವರು ಶಿವಣ್ಣನ ಕೆನ್ನೆಗೆ ಭಾರಿಸುವ ದೃಶ್ಯವೂ ಇತ್ತು. ಈ ಬಗ್ಗೆ ಶ್ರೀಕಾಂತ್ ಶಿವಣ್ಣನ ಮುಂದೆ ಖ್ಯಾತೆ ತೆಗೆದರು. ಪ್ರೀತಿಯಿಂದ- "ಶಿವಣ್ಣ, ನಿಮಿಗೆ ಬುದ್ದಿ ಇದ್ಯಾ? ಹೋಗಿ ಹೋಗಿ ಇಂಥಾ ಪಾತ್ರಾನೆಲ್ಲಾ ಒಪ್ಪಕೊಳ್ಳೋದಾ?" ಎಂದು ಜಗಳವನ್ನೇ ಆಡಿದರು. ಶಿವಣ್ಣ ಅಲ್ಲಿಯೂ ಮೌನವಾಗಿದ್ದರು.
ಅದೇ ಕೋದಂಡ ರಾಮ ಚಿತ್ರ ತೆರೆಕಂಡ ಮೊದಲ ವಾರದಲ್ಲೇ ಮುಗ್ಗರಿಸಿತು. ಆಗ ಸ್ವತಃ ಶಿವಣ್ಣ ಶ್ರೀಕಾಂತ್‌ರನ್ನು ಮನೆಗೆ ಕರೆಸಿ-ಸಾರಿ ಶ್ರೀ.. ನೀನ್ ಹೇಳೀದ್ದೇ ರೈಟು. ನಾನ್ ಆ ಪಿಕ್ಚರ್ ಒಪ್ಕೋಬಾರದಿತ್ತು.. ಎಂದು ತಪ್ಪೊಪ್ಪಿಕೊಂಡರು!ಇಂದಿಗೂ ಶಿವಣ್ಣ ತಮ್ಮ ಮುಂದಿನ ಚಿತ್ರದ ಬಗ್ಗೆ ತಮ್ಮ ಅಭಿಮಾನಿ ಸಂಘದವರ ಜೊತೆ ಮಾತುಕತೆ ನಡೆಸಿಯೇ ನಿರ್ಧಾರ ಕೈಗೊಳ್ಳುತ್ತಾರೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು! (ದಟ್ಸ್‌ಕನ್ನಡ ಸಿನಿ ಬ್ಯೂರೋ)


Click it and Unblock the Notifications











