twitter
    For Quick Alerts
    ALLOW NOTIFICATIONS  
    For Daily Alerts

    ಒರಟ ಗಾಂಧಿ ವಿರುದ್ಧ ವ್ಯಾಪಕ ಪ್ರತಿಭಟನೆ

    By Shami
    |

    Hoo producer Dinesh Gandhi
    ತಮ್ಮ ಚಿತ್ರದ ವಿಮರ್ಶೆಯನ್ನು 'ಸರಿಯಾಗಿ ಬರೆದಿಲ್ಲ' ಎಂದು ಸಿನಿ ವರದಿಗಾರನಿಗೆ ಧಮಕಿ ಹಾಕಿದ ನಿರ್ಮಾಪಕನ ಧೋರಣೆಯನ್ನು ಖಂಡಿಸಿ ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಮೂಹ ಇಂದು ಬೆಂಗಳೂರಿನಲ್ಲಿ ಪ್ರತಿಭಟನಾ ಸಭೆ ನಡೆಸಿತು. ರವಿಚಂದ್ರನ್ ಮತ್ತು ನಮಿತಾ ಜೋಡಿಯ ಹೂ ಚಿತ್ರದ ನಿರ್ಮಾಪಕ ದಿನೇಶ್ ಗಾಂಧಿ ಬೆಂಗಳೂರು ಮಿರರ್ ಇಂಗ್ಲಿಷ್ ಪತ್ರಿಕೆಯ ವರದಿಗಾರ ಶ್ಯಾಮ್ ಪ್ರಸಾದ್ ಗೆ ಮೊನ್ನೆ ಫೋನ್ ಮೂಲಕ ಕರೆಮಾಡಿ "ಏನ್ರಿ ಹಾಗೆಲ್ಲ ಬರೆದಿದೀರಾ" ಎಂದು ಮುಂತಾಗಿ ಬೈಯ್ದಿದ್ದರು.

    ಹಾಗೆಲ್ಲ ಬೈಗುಳದ ಮಳೆ ಸುರಿಸಿದ್ದ ನಿರ್ಮಾಪಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು ಅದನ್ನು ತೆರವುಗೊಳಿಸಲು ಗಾಂಧಿ ಕಡೆಯಿಂದ ತೆರೆಮರೆಯ ಪ್ರಯತ್ನ ಶುರುವಾಗಿದ್ದರೂ ಉದ್ಧಟವಾಗಿ ವರ್ತಿಸುವ ಚಿತ್ರೋದ್ಯಮಿಗಳನ್ನು ಹಾಗೆ ಸುಮ್ಮನೆ ಬಿಡಬಾರದು ಎಂಬ ಮಾತುಗಳು ಇಂದಿನ ಪ್ರತಿಭಟನಾ ಸಭೆಯಲ್ಲಿ ಕೇಳಿ ಬಂದವು. ಗಾಂಧಿ ವಿರುದ್ಧದ ಕೇಸನ್ನು ವಾಪಸ್ಸು ತೆಗೆದುಕೊಳ್ಳಬೇಕೆಂದು ಉಮೇಶ್ ಬಣಕಾರ್ ಪತ್ರಕರ್ತರನ್ನು ಓಲೈಸಲು ಸಭೆಗೆ ಬಂದಿದ್ದರು.

    ಇಂಥ ಸಂದರ್ಭ ಬಂದಾಗ ಸಿನಿ ಪತ್ರಕರ್ತರು ಒಗ್ಗಟ್ಟಾಗಿ ನಿಲ್ಲಬೇಕು. ಆದರೆ ನಮ್ಮಲ್ಲಿ ಒಗ್ಗಟ್ಟು ತುಸು ಕಡಿಮೆ. ಇಂತಹ ಘಟನೆಗಳು ಮರುಕಳಿಸಿದರೆ ಹೋರಾಡಲು ಒಂದು ಸಂಘ ಕಟ್ಟುವ ಅಗತ್ಯವಿದೆ ಎಂದು ಇದೇ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಿನಿ ಪತ್ರಕರ್ತರ ಕಷ್ಟ ಸುಖಗಳ ವಿಚಾರಿಸಲು ಅತ್ಯಗತ್ಯವಾಗಿರುವ ಒಂದು ವೇದಿಕೆ ಬಗ್ಗೆ ನಿರ್ದೇಶಕರೂ ಆಗಿರುವ ಸದಾಶಿವ ಶೆಣೈ ದೀರ್ಘವಾಗಿ ಪ್ರಸ್ತಾಪಿಸಿದರು.

    ಸಿನಿ ಪತ್ರಕರ್ತರ ಮೇಲೆ ಈ ರೀತಿ ಪದೇ ಪದೇ ನಡೆಯುವ ದಾಳಿಯ(ದೈಹಿಕ ಹಾಗೂ ಮಾನಸಿಕ) ಬಗ್ಗೆ ಕೈಗೊಳ್ಳಬೇಕಾದ ಕ್ರಮ, ಕಟ್ಟಬೇಕಾದ ಸಂಘ ಮತ್ತು ಆ ಸಂಘದ ರೂಪು ರೇಷೆ ರೂಪಿಸಲು ಈ ಸಂದರ್ಭದಲ್ಲಿ ಒಂದು ತಾತ್ಕಾಲಿಕ ಸಮಿತಿಯ ರಚನೆಯೂ ಆಯಿತು. ಈ ಸಮಿತಿಯಲ್ಲಿ ಬಾನಾ ಸುಬ್ರಮಣ್ಯ, ಸದಾಶಿವ ಶೆಣೈ, ವಿಜಯಸಾರಥಿ ಮತ್ತು ಯತಿರಾಜ್ ಇದ್ದು ಇನ್ನು ಹತ್ತು ದಿನಗಳಲ್ಲಿ ಸಂಘದ ಸ್ವರೂಪ ಮತ್ತು ಧೇಯೋದ್ದೇಶಗಳನ್ನು ರೂಪಿಸುವ ಜವಾಬ್ದಾರಿಯನ್ನು ಈ ನಾಲಕ್ಕು ಮಂದಿಗೆ ವಹಿಸಲಾಯಿತು.

    ಸದ್ಯಕ್ಕೆ ನಾಪತ್ತೆಯಾಗಿರುವ ಹೂ ಚಿತ್ರದ ನಿರ್ಮಾಪಕ ದಿನೇಶ್ ಗಾಂಧಿಯನ್ನು ಕೂಡಲೇ ಬಂಧಿಸಬೇಕು. ಗಾಂಧಿ ವಿರುದ್ಧ ಕ್ರಮಕೈಗೊಳ್ಳಲು ಪೊಲೀಸರು ವಿಳಂಬ ಮಾಡಿದರೆ, ಎಲ್ಲಾ ಪತ್ರಕರ್ತರು ಸೇರಿ ಪ್ರತಿಭಟನೆ ನಡೆಸಿ, ಹಕ್ಕೊತ್ತಾಯ ಮಾಡಲಾಗುವುದು ಎಂದು ಕೆಲವರು ಸಿನಿ ಪತ್ರಕರ್ತರು ಪ್ರತಿಯಾಗಿ ಧಮಕಿ ಹಾಕಿದ್ದೂ ಸಭೆಯಲ್ಲಿ ಕೇಳಿಬಂತು. ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ ಹಾಗೂ ನಾನಾ ಟಿವಿ ಚಾನೆಲ್ಲುಗಳ ಸುಮಾರು 50 ಪತ್ರಕರ್ತರು ಮತ್ತು ಛಾಯಾಚಿತ್ರಕಾರರು ಸಭೆಯಲ್ಲಿ ಪಾಲ್ಗೊಂಡಿದ್ದರು.

    ಪತ್ರಕರ್ತರು ಮಾಡುವುದೆಲ್ಲ ಸರಿ ಎಂದು ನಾನು ಹೇಳುವುದಿಲ್ಲ. ನಾವೂ ಕೂಡ ಆತ್ಮಾವಲೋಕನ ಮಾಡಿಕೊಳ್ಳಬೇಕು. ಜವಾಬ್ದಾರಿಯ ನಡವಳಿಕೆ ಮತ್ತು ಎಚ್ಚರದ ಬರವಣಿಗೆಯನ್ನು ರೂಢಿಸಿಕೊಳ್ಳಬೇಕು. ಅದು ನಮಗೆ ನೀಡುವ ನೈತಿಕ ಬಲ ನಿಜಕ್ಕೂ ದೊಡ್ಡದು ಎಂದು ಸಭೆಯನಂತರ ದಟ್ಸ್ ಕನ್ನಡದೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಸದಾಶಿವ ಶೆಣೈ ಅಭಿಪ್ರಾಯಪಟ್ಟರು.

    ಹೂವು ಮುಳ್ಳು : ಬೆಂಗಳೂರ್ ಮಿರರ್ ನಲ್ಲಿ ಹೂ ಚಿತ್ರದ ವಿಮರ್ಶೆ ಕೆಟ್ಟದಾಗಿ ಬಂದಿದೆ ಎಂದು ಚಿತ್ರದ ನಿರ್ಮಾಪಕ ದಿನೇಶ್ ಗಾಂಧಿ, ಜೂ.5ರ ಬೆಳಗ್ಗೆ ಸುಮಾರು 11.30ಕ್ಕೆ ಪತ್ರಕರ್ತ ಶ್ಯಾಮ್ ಗೆ ಕರೆ ಮಾಡಿ ಧಮಕಿ ಹಾಕಿದ್ದರು. ಲೋಫರ್ ನನ್ಮಗನೇ ನಿನ್ . . .. ಮುಂತಾದ ಅವಾಚ್ಯ ಶಬ್ದಗಳಲ್ಲಿ ನಿಂದಿಸುತ್ತಾ ನಿನ್ನ ಕೈಕಾಲು ಮುರಿಯುತ್ತೇನೆ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದರು.

    ಶ್ಯಾಂ ಅವರ ಮೊಬೈಲ್ ನಂಬರ್ ಅನ್ನು ಪಿಆರ್ ಒ ಡಿಜಿ ವೆಂಕಟೇಶ್ ಅವರಿಂದ ಪಡೆದಿದ್ದ ಗಾಂಧಿ ಸುಮಾರು 3 ನಿಮಿಷ 11 ಸೆಕೆಂಡುಗಳ ಗಳ ಕಾಲ ಬೆದರಿಕೆ ಕರೆ ಮಾಡಿದ್ದರು. ಕರೆಯನ್ನು ಶ್ಯಾಂ ಅವರು ರಿಕಾರ್ಡ್ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 504 ಹಾಗೂ 506 ಅನ್ವಯ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

    Monday, June 7, 2010, 19:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X