ಸಿನಿಮಾ ತಾರೆ ರಂಜಿತಾಗೆ ಮದನ್ ಪಟೇಲ್ ಸವಾಲು
ಸ್ವಾಮಿ ನಿತ್ಯಾನಂದ ರಾಸಲೀಲೆ ಕಥಾವಸ್ತು ಒಳಗೊಂಡ "ಸತ್ಯಾನಂದ...ಎ ಟ್ರೂ ಸ್ಟೋರಿ ಆಫ್ ನಿತ್ಯಾನಂದ" ಎಂಬ ಚಿತ್ರವನ್ನು ನಟ, ನಿರ್ಮಾಪಕ ಹಾಗೂ ನಿರ್ದೇಶಕ ಮದನ್ ಪಟೇಲ್ ಕೈಗೆತ್ತಿಕೊಂಡಿರುವುದು ಗೊತ್ತೇ ಇದೆ. ಜನವರಿ 27ರಿಂದ ಚಿತ್ರೀಕರಣ ಆರಂಭವಾಗಲಿದ್ದು ಚಿತ್ರವನ್ನು ಏಪ್ರಿಲ್ ಹೊತ್ತಿಗೆ ಬಿಡುಗಡೆ ಮಾಡಲಿರುವುದಾಗಿ ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ನಟಿ ರಂಜಿತಾ ಅವರಿಗೆ ಮದನ್ ಸವಾಲೊಂದನ್ನು ಎಸೆದಿದ್ದಾರೆ. ತಾವು ಸ್ವಾಮಿ ನಿತ್ಯಾನಂದ ಜೊತೆ ರಾಸಲೀಲೆಯಲ್ಲಿ ತೊಡಗಿಕೊಂಡಿರಲಿಲ್ಲ. ಸಿಡಿಯಲ್ಲಿರುವುದು ಎಲ್ಲವೂ ಬೋಗಸ್ ಎಂದು ರಂಜಿತಾ ಹೇಳಿದ್ದಾರೆ. ಇದು ನಿಜವೇ ಆದರೆ ರಂಜಿತಾ ತಮ್ಮ ಚಿತ್ರದಲ್ಲಿ ನಟಿಸಲಿ ಎಂದು ಸವಾಲು ಎಸೆದಿದ್ದಾರೆ.
ನಿತ್ಯಾನಂದ ರಾಸಲೀಲೆ ದೃಶ್ಯಗಳಲ್ಲಿರುವುದು ನಾನಲ್ಲ ಎಂದು ಇತ್ತೀಚೆಗೆ ಮಾಧ್ಯಮಗಳಿಗೆ ರಂಜಿತಾ ಪ್ರತಿಕ್ರಿಯಿಸಿದರು. ಅವರು ಹೇಳುತ್ತಿರುವುದೆಲ್ಲಾ ನಿಜವೇ ಆದರೆ ತಮ್ಮ ಚಿತ್ರದಲ್ಲಿ ರಂಜಿತಾ ನಟಿಸಲಿ.ಅವರಿಗೆ ಸೂಕ್ತ ಸಂಭಾವನೆಯನ್ನೂಕೊಡುವುದಾಗಿ ಹೇಳಿದ್ದಾರೆ.
ಸ್ವಾಮಿ ನಿತ್ಯಾನಂದ ಅವರು ಯಾವುದೇ ತಪ್ಪು ಮಾಡಿಲ್ಲ ಎಂದಾದರೆ ಅವರನ್ನೂ ತಮ್ಮ ಚಿತ್ರದಲ್ಲಿ ಅಭಿನಯಿಸಲು ಆಹ್ವಾನಿಸುತ್ತೇನೆ. ತಾವು ಯಾವುದೇ ಕಾಮಕೇಳಿಯಲ್ಲಿ ತೊಡಗಿಕೊಂಡಿಲ್ಲ ಎಂದಿರುವ ರಂಜಿತಾ, ಪತ್ರಿಕಾಗೋಷ್ಠಿಯ ಮರುದಿನವೇ ನಿತ್ಯಾನಂದನ ಪಾದ ಪೂಜೆ ಮಾಡಿರುವುದು ಸುಳ್ಳೇ ಎಂದು ಪ್ರಶ್ನಿಸಿದ್ದಾರೆ.
ತಮಗೆ ಯಾವುದೇ ಆಮಿಷ, ಬೆದರಿಕೆ ಒಡ್ಡಿದರು ಯಾವುದೇ ಕಾರಣಕ್ಕೂಸತ್ಯಾನಂದ ಚಿತ್ರೀಕರಣವನ್ನು ನಿಲ್ಲಿಸುವುದಿಲ್ಲ. ನಿತ್ಯಾನಂದನ ಲೀಲೆಗಳನ್ನು ಜನತೆಯ ಮುಂದೆ ಇಡುವುದಾಗಿ ಮದನ್ ತಿಳಿಸಿದ್ದಾರೆ. ನಿತ್ಯಾನಂದನಿಂದ ಅನ್ಯಾಯಕ್ಕೊಳಗಾದವರು, ಮೋಸಕ್ಕೊಳಗಾದವರು, ಲೈಂಗಿಕ ದೌರ್ಜನ್ಯಕ್ಕೊಳಗಾದವರು ತಮ್ಮನ್ನು ಸಂಪರ್ಕಿಸಿ ಮಾಹಿತಿ ನೀಡಿದಲ್ಲಿ ಅಂಥಹವರ ಹೆಸರುಗಳನ್ನು ಗೌಪ್ಯವಾಗಿಡಲಾಗುವುದು ಎಂದರು.
ರಂಜಿತಾ ಚಿತ್ರೀಕರಣದಲ್ಲಿ ಭಾಗವಹಿಸುವಂತೆ ಕೇಳಲು ಮಾಧ್ಯಮ ಪ್ರತಿನಿಧಿಗಳ ಮುಂದೆಯೇ ಮದನ್ ಫೋನ್ ಮಾಡಿದರು. ಆದರೆ ರಂಜಿತಾ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ತಾವು ಸಂಪರ್ಕಿಸುವ ಸುದ್ದಿ ಆಕೆಗೆ ಮೊದಲೇ ತಿಳಿದು ಸ್ವಿಚ್ ಆಫ್ ಮಾಡಿದ್ದಾರೆ ಎಂದು ಮದನ್ ಪ್ರತಿಕ್ರಿಯಿಸಿದರು.
ಸಮಯ ಟಿವಿಯ ಕ್ಯಾಮೆರಾಮೆನ್ ನಾಯಕ: 'ಸತ್ಯಾನಂದ' ಚಿತ್ರದ ಪೋಸ್ಟರ್‌ಗಳನ್ನು ನೋಡಿದವರು ಈತನನ್ನು ನಿತ್ಯಾನಂದ ಎಂದೇ ಭಾವಿಸಿದ್ದಾರೆ. ಆದರೆ ಅವರು ನಿತ್ಯಾನಂದ ಅಲ್ಲ. ಸತ್ಯನಂದ ಪಾತ್ರಧಾರಿ ಬೇರಾರು ಅಲ್ಲ. ಈತನ ಹೆಸರು ಶಿವಪುತ್ರ. ಸಮಯ ವಾಹಿನಿಯಲ್ಲಿ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮದನ್ ವಿವರ ನೀಡಿದರು.
ನಿತ್ಯಾನಂದನ ಪಾತ್ರಕ್ಕೆ ಒಟ್ಟು 30 ಜನಕ್ಕೆ ಸ್ಕ್ರೀನ್ ಟೆಸ್ಟ್ ಮಾಡಲಾಗಿತ್ತು. ಕೊನೆಗೆ ಶಿವಪುತ್ರ ಅವರನ್ನು ಆಯ್ಕೆ ಮಾಡಲಾಗಿದೆ. ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 430 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಅದರಲ್ಲಿನ ಅಂಶಗಳನ್ನು ತಾವು ಚಿತ್ರದಲ್ಲಿ ಸೇರಿಸಿಕೊಳ್ಳುತ್ತ್ತಿರುವುದಾಗಿ ಮದನ್ ತಿಳಿಸಿದ್ದಾರೆ. [ರಂಜಿತಾ]


Click it and Unblock the Notifications











