ಡಬ್ಬಿಂಗ್ ಬಂದ್ರೆ ಕಲಾವಿದರಿಗೆ ಕಷ್ಟ ಎಂಬ ಬುರುಡೆ

ತನ್ಮೂಲಕ ಪರಭಾಷೆ ಚಿತ್ರಗಳು ನಿಯಮ ಮೀರಿ ಬಿಡುಗಡೆಯಾಗಲು ಪರೋಕ್ಷವಾಗಿ ಬೆಂಬಲ ಸೂಚಿಸಿ, ಅವುಗಳ ಮಾರುಕಟ್ಟೆ ಕರ್ನಾಟಕದಲ್ಲಿ ಇನ್ನಷ್ಟು ವಿಸ್ತರಿಸಲು ಅವಕಾಶ ಕೊಟ್ಟು, ಕನ್ನಡ ಚಿತ್ರಗಳ ಮಾರುಕಟ್ಟೆಯನ್ನು ಇನ್ನಷ್ಟು ಹಾಳುಗೆಡವಲು ಬಿಟ್ಟು ಹಾಯಾಗಿ ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಆಟದಲ್ಲಿ ನಿರತರಾಗಿದ್ದರು ನಮ್ಮ ಕಲಾವಿದರು.
ತಮ್ಮ ತಲೆ ಮೇಲೆ ಚಪ್ಪಡಿ ಕಲ್ಲು ಹಾಕಿಕೊಂಡು, ಸ್ಪರ್ಧೆ ನೀಡುತ್ತಿರುವವರ ತಲೆ ಮೇಲೆ ಕಿರೀಟ ತೊಡಿಸುವ ಇವರ ನಡೆ ನಿಜಕ್ಕೂ ಚಿತ್ರರಂಗದ ಏಳಿಗೆಗೆ ಸಂಬಂದಪಟ್ಟಂತೆ ಆತಂಕ ಸೃಷ್ಟಿಸುತ್ತದೆ.
ಡಬ್ಬಿಂಗ್ ವಿಚಾರ ಬಂದರೆ ಇದೇ ಚಲನಚಿತ್ರ ಮಂಡಳಿ ಮಾಡಿರುವ ಅಸಂವಿಧಾನಿಕ ನಿಯಮವನ್ನು ಮುಂದಿಟ್ಟುಕೊಂಡು ಪ್ರತಿಭಟಿಸಿ, ಅನ್ನದ ಪ್ರಶ್ನೆ ಬಗ್ಗೆ ಮಾತನಾಡುವ ನಮ್ಮ ಕಲಾವಿದರು ಅದೇ ಅನ್ನವನ್ನು ಪರಭಾಷೆ ಚಿತ್ರಗಳು ದಿನದಿಂದ ದಿನಕ್ಕೆ ಕಸಿದುಕೊಳ್ಳುತ್ತಿರುವಾಗ ಅದರ ಬಗ್ಗೆ ಗಮನ ಹರಿಸದೇ ಜಾಣಮೌನ ಪ್ರದರ್ಶಿಸುತ್ತಿದ್ದಾರೆ.
ಇದರಿಂದ ಒಂದು ಕಡೆ, ಕನ್ನಡ ಕಲಾವಿದರ ಅನ್ನಕ್ಕೂ ಕುತ್ತು, ಇನ್ನೊಂದು ಕಡೆ ಕನ್ನಡ ಪ್ರೇಕ್ಷಕರಿಗೆ ಇಲ್ಲದ ಕನ್ನಡ ಮನರಂಜನೆ.
ಪರಿಣಾಮವಾಗಿ, ಕನ್ನಡ ಚಿತ್ರಗಳ ಗ್ರಾಹಕರು ಪರಭಾಷೆ ಚಿತ್ರಗಳ ಗ್ರಾಹಕರಾಗಿ ಪರಿವರ್ತಿತವಾಗಿ ತರುವಾಯ ಕನ್ನಡ ಮಾರುಕಟ್ಟೆ ಕುಸಿಯುವುದಕ್ಕೆ ಕಾರಣವಾಗುತ್ತಿದೆ. ಕನ್ನಡ ಚಿತ್ರಗಳ ಮಾರುಕಟ್ಟೆ ಬೆಳವಣಿಗೆಗೆ ಕನ್ನಡ ಕಲಾವಿದರಿಂದಲೇ ಹಿನ್ನೆಡೆಯಾಗುತ್ತಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೇ.?


Click it and Unblock the Notifications











