»   » 'ನಾನು ಮದುವೆಯಾಗಿದ್ದು, ರೊಮ್ಯಾನ್ಸ್‌ ಮಾಡಿದ್ದು ಒಬ್ಬರನ್ನು ಮಾತ್ರ'

'ನಾನು ಮದುವೆಯಾಗಿದ್ದು, ರೊಮ್ಯಾನ್ಸ್‌ ಮಾಡಿದ್ದು ಒಬ್ಬರನ್ನು ಮಾತ್ರ'

Subscribe to Filmibeat Kannada

ಕಮಲ ಹಾಸನ್‌ ಫಿಲಾಸಫಿಕಲ್‌ ಆಗಿದ್ದಾರಾ?
ಪ್ರತಿಯಾಬ್ಬನ ಜೀವನದ ಪರಮ ಸತ್ಯವೆಂದರೆ ಸಾವು ಎಂದು ಅವರು ಪದೇಪದೇ ಹೇಳಿಕೊಂಡು ಓಡಾಡುತ್ತಿರುವುದನ್ನು ನೋಡಿದರೆ, ಹೌದೆನ್ನಬೇಕು. ಆದರೆ ಕಮಲ್‌ ಇದು ಫಿಲಾಸಫಿ ಅಲ್ಲ, ಅನುಭವದ ಮಾತು ಎನ್ನುತ್ತಾರೆ.

ಪತ್ರಕರ್ತರನ್ನು ಕಂಡರೆ ದೂರ ಬಲು ದೂರ ಹೋಗುವ ಕಮಲ್‌, ವನಿತಾ ಎಂಬ ಮಲೆಯಾಳಿ ಪತ್ರಿಕೆಗೆ ಸಂದರ್ಶನ ಕೊಟ್ಟಿದ್ದಾರೆ. ಆದರೆ, ಅಲ್ಲಿ ಕೇಳಿ ಬಂದಿರುವ ಮಾತುಗಳೆಲ್ಲಾ ಮುಗುಮ್ಮು. ಮದುವೆ, ವಿಚ್ಛೇದನ, ರೊಮ್ಯಾನ್ಸ್‌- ಈ ವಿಷಯಗಳ ಬಗೆಗೆ ಅನಿರೀಕ್ಷಿತ ಉತ್ತರಗಳು.

ಸಾರಿಕಾಗೆ ಕಮಲ್‌ ನಿಜವಾಗಿ ಡೈವೊರ್ಸ್‌ ಕೊಟ್ಟಿದ್ದಾರಾ? ಸಿಮ್ರಾನ್‌ಳನ್ನು ಬಾಳ ಸಂಗಾತಿಯಾಗಿಸಿಕೊಂಡಿದ್ದಾರಾ?
ಇದಕ್ಕೆ ಕಮಲ್‌ ನೇರ ಉತ್ತರ ಕೊಡುವುದಿಲ್ಲ. ಹೌದು ಅಥವಾ ಇಲ್ಲ ಅಂತ ಸುತಾರಾಂ ಹೇಳುವುದಿಲ್ಲ. ಮಾಧ್ಯಮಗಳು ಈ ವಿಷಯವಾಗಿ ಸಾಕಷ್ಟು ಗುಲ್ಲೆಬ್ಬಿಸಿವೆ. ಆದರೆ ಇದರಲ್ಲಿ ಕೇವಲ ಅರ್ಧ ಮಾತ್ರ ಸತ್ಯ ಎನ್ನುತ್ತಾರೆ ಕಮಲ್‌. ಆ ಅರ್ಧ ಸತ್ಯ ಯಾವುದು?- ಸಾರಿಕಾಗೆ ಡೈವೊರ್ಸ್‌ ಕೊಟ್ಟಿರುವುದೋ ಅಥವಾ ಸಿಮ್ರನ್‌ಳನ್ನು ಸಂಗಾತಿಯಾಗಿ ಸ್ವೀಕರಿಸಿರುವುದೋ? ಕಮಲ್‌ ಹೇಳೋಕೆ ಸಿದ್ಧರಿಲ್ಲ. ಮಾತಿನ ವರಸೆಯನ್ನೇ ಬದಲಿಸಿ, ಈ ರೀತಿ ಮಾತಾಡುತ್ತಾರೆ...

ಸಾರಿಕಾ- ನಾನು ಒಳ್ಳೆ ಫ್ರೆಂಡ್ಸ್‌. ಆಕೆಯ ಜೊತೆ ನಾನು ಸಾಕಷ್ಟು ಕಾಲ ಕಳೆದಿದ್ದೇನೆ. ನನ್ನ ಸಿನಿಮಾಗಳು ರೊಮ್ಯಾಂಟಿಕ್‌ ಅಂತ ಅಭಿಮಾನಿಗಳು ಹೇಳುತ್ತಾರೆ. ಹೆಂಗಸರ ತುಮುಲ- ತುಡಿತಗಳು ನನಗೆ ಮನದಟ್ಟು. ಆ ಕಾರಣಕ್ಕೇ ಅವರ ಮನಸಿನ ಒಳ ಪದರಗಳನ್ನು ಸಿನಿಮಾಗಳ ಮೂಲಕ ಬಿಚ್ಚಿಡುವ ಕೆಲಸವನ್ನು ನಾನು ಮಾಡಿದ್ದೇನೆ. ಆದರೆ, ಕೆಲವರು ನನ್ನನ್ನು ವುಮನೈಸರ್‌, ಮಹಿಳಾ ಶೋಷಕ ಎನ್ನುವಂತೆ ಪುಕಾರೆಬ್ಬಿಸಿದ್ದಾರೆ. ಅದು ಶುದ್ಧ ಸುಳ್ಳು.

ವಾಣಿ ಗಣಪತಿಯನ್ನು ಮದುವೆಯಾದಾಗ ನಾನಿನ್ನೂ ತೀರಾ ಚಿಕ್ಕವ; ಪ್ರಬುದ್ಧನಾಗಿರಲಿಲ್ಲ. ಆ ಕಾರಣಕ್ಕೇ ಆ ಮದುವೆ ಹೆಚ್ಚು ಕಾಲ ಉಳಿಯಲಿಲ್ಲ. ಸಾರಿಕಾಳನ್ನು ನಾನು ಇವತ್ತಿಗೂ ಗೌರವಿಸುತ್ತೇನೆ. ಹಾಗಂತ ಆಕೆ ವಂಡರ್‌ಫುಲ್‌ ಹೆಂಡತಿಯಾಗಬೇಕು ಅಂತಿಲ್ಲವಲ್ಲ. ನಾನು ನಿಜವಾಗಿ ಮದುವೆಯಾಗಿದ್ದು, ರೊಮ್ಯಾನ್ಸ್‌ ಮಾಡಿದ್ದು ಒಬ್ಬರ ಜೊತೆ ಮಾತ್ರ. ಅದು ಯಾವುದೇ ವ್ಯಕ್ತಿಯಲ್ಲ. ನಾನು ನೆಚ್ಚಿಕೊಂಡಿರುವ ಸಿನಿಮಾ !

ಅಂದಹಾಗೆ, ಕಮಲ್‌ ಅವರದ್ದು ಈಗ ಕವಿ ಹೃದಯ. ಹಾಗೆಂದರೆ ಅವರಿಗೆ ಕೋಪ ಬರುತ್ತದೆ. ನಾನು ಇವತ್ತು ಕವಿಯಾದವನಲ್ಲ. ಹಲವು ವರ್ಷಗಳಿಂದಲೇ ಕವನಗಳನ್ನು ಬರೆದಿದ್ದೇನೆ. ಈವರೆಗೆ 80 ಕವನಗಳನ್ನು ಬರೆದಿದ್ದೇನೆ. ಅವುಗಳನ್ನು ಹಾಡಾಗಿಸಿ, ಸಿ.ಡಿ.ಯಲ್ಲಿ ತುಂಬಿಸುವುದು ನನ್ನ ಹೊಸ ಪ್ರಾಜೆಕ್ಟ್‌. ಕವಿ ವೈರಮುತ್ತು ಈ ಕೆಲಸಕ್ಕೆ ಬೆಂಬಲಿಗರಾಗಿ ನಿಂತಿದ್ದಾರೆ ಅನ್ನುತ್ತಾರೆ ಕಮಲ್‌.

ಅಪ್ಪ- ಅಮ್ಮ ಜಗಳದಲ್ಲಿ ಕೂಸು ಬಡವಾಯ್ತು ಅಂತಾರಲ್ಲ. ನಿಮ್ಮ ಮಕ್ಕಳು ಈಗ ಏನನ್ನುತ್ತಿವೆ ಎಂದು ಕಿಚಾಯಿಸಿದರೆ, ಕಮಲ್‌ ಮುಂಬಯಿಯ ಮನೆಗೆ ಕರೆಯುತ್ತಾರೆ. ಅಲ್ಲಿ ಮಕ್ಕಳು ನನ್ನ ಜೊತೆಯಲ್ಲೇ ಹೇಗೆ ನಗುನಗುತ್ತಾ ಇವೆ ಅನ್ನುವುದನ್ನು ನೀವೇ ನೋಡಿ ಅಂತ ಬುಲಾವು ಕೊಡುತ್ತಾರೆ. ಕಮಲ್‌ ಸಿನಿಮಾದಿಂದ ನಿವೃತ್ತರಾಗಲೂ ರೆಡಿ. ಜನ ಬೇಡವೆಂದರೆ ಗುಡ್‌ ಬೈ ಹೇಳಲು ಸಿದ್ಧ. ಈ ವಿಷಯವಾಗಿ ಇನ್ನಷ್ಟು ಕೆದಕಿದರೆ, ಹೊಸಬರಿಗೆ ದಾರಿ ಬಿಡಬೇಕು ಅಂತ ಹೊಸ ಫಿಲಾಸಫಿಯನ್ನು ಶುರುವಿಟ್ಟುಕೊಳ್ಳುತ್ತಾರೆ. ಒಟ್ಟಿನಲ್ಲಿ ಕಮಲ ಹಾಸನ್‌ ಈಸ್‌ ಇಂಟರೆಸ್ಟಿಂಗ್‌. ಅಲ್ಲವಾ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada