For Quick Alerts
  ALLOW NOTIFICATIONS  
  For Daily Alerts

  ಕಬಡ್ಡಿಗೆ ಕೈಕೊಟ್ಟ ಪ್ರಬುದ್ಧ ವಿಲನ್ ಕಿಶೋರ್?

  By Staff
  |

  ಹಿಂದೆಲ್ಲಾ ಕನ್ನಡಚಿತ್ರರಂಗದಲ್ಲಿ ನಾಯಕನಟನಿಗೆ ಸಿಕ್ಕಷ್ಟು ಪ್ರೋತ್ಸಾಹ ಖಳನಾಯಕರಿಗೂ ಸಿಗುತ್ತಿತ್ತು. ಅಂದಿನ ಕಾಲದ ಉದಯ್ ಕುಮಾರ್, ವಜ್ರಮುನಿ, ಸುಂದರ ಕೃಷ್ಣ ಅರಸ್, ತೂಗುದೀಪ ಶ್ರೀನಿವಾಸ್, ಮುಸುರಿ ಕೃಷ್ಣ ಮೂರ್ತಿ, ಸುಧೀರ್, ..ಇತ್ಯಾದಿ ಇತ್ಯಾದಿ ಖಳನಟರು ಬೆಳ್ಳಿತೆರೆಯ ಮೇಲೆ ಅದ್ಭುತ ನಟನೆ ನೀಡಿ ಮರೆಯಾದ ಮೇಲೆ, ಅವಿನಾಶ್, ಶೋಭರಾಜ್ , ಸತ್ಯಜಿತ್, ರಂಗಾಯಣ ರಘು..ಮಿಂಚುತ್ತಿದ್ದಾರೆ ಹಾಗೂ ಈ ಪಟ್ಟಿಯಲ್ಲಿ ಸೇರಲೇ ಬೇಕಾದ ಹೆಸರೆಂದರೆ ಅದು ಕಿಶೋರ್ ಅವರದು.

  *ಮಹೇಶ್ ಮಲ್ನಾಡ್

  ಕಂಠಿ ಚಿತ್ರದ ಮೂಲಕ ಕನ್ನಡ ಚಿತ್ರಕ್ಕೆ ಪಾದಾರ್ಪಣೆ ಮಾಡಿದ ಕಂಚಿನ ಕಂಠದ ಎತ್ತರದ ಮನುಷ್ಯ. ಬಹು ಬೇಗ ತನ್ನ ಸ್ಪಷ್ಟ ಉಚ್ಚಾರಣೆ, ನಟನೆಯಿಂದ ಜನಮನ ಗೆದ್ದಿದ್ದು ಸುಳ್ಳಲ್ಲ. ಇತ್ತೀಚೆಗೆ ತಮಿಳಿನ 'ಪೊಲ್ಲಾದವನ್ 'ಚಿತ್ರದಲ್ಲಿನ ವಿಲನ್ ಪಾತ್ರಕ್ಕೆ ವಿಜಯ್ ಟಿವಿಯಿಂದ ಅತ್ಯುತ್ತಮ ಖಳ ನಟ ಪ್ರಶಸ್ತಿ ಗಳಿಸಿದ್ದಾರೆ. ಈ ಚಿತ್ರದ ಯಶಸ್ಸಿನ ನಂತರ ತಮಿಳಿನ ಅವಕಾಶಗಳನ್ನು ಗಿಟ್ಟಿಸಿಕೊಂಡ ಕಿಶೋರ್ ಸದ್ಯ 'ವೆನಿಲಾ ಕಬಡ್ಡಿ ಬಾಯ್ಸ್ 'ಎಂಬ ಚಿತ್ರದಲ್ಲಿ ಕೋಚ್ ಪಾತ್ರ ಮಾಡುತ್ತಿದ್ದಾರೆ. ಸುಶೇಂದ್ರನ್ ಅ ಚಿತ್ರದ ನಿರ್ದೇಶಕರಾಗಿದ್ದು, ತಮಿಳುನಾಡಿನ ಮಾಜಿ ಕ್ರಿಕೆಟ್ ಆಟಗಾರ ವಿಷ್ಣು ಕಬಡ್ಡಿ ಆಟಗಾರನಾಗಿ ಕಾಣಿಸಿಕೊಳ್ಳಲಿದ್ದಾನೆ. ಆದರೆ ಸಮಸ್ಯೆ ಬಂದಿರುವುದೇ ಇಲ್ಲಿ.

  ಈಗಾಗಲೇ ಕನ್ನಡದಲ್ಲಿ ಕಬಡ್ಡಿ ಬಗ್ಗೆ ಚಿತ್ರ ತೆಗೆಯುತ್ತಿದ್ದು, ಅದರಲ್ಲೂ ಕಿಶೋರ್ ಕೋಚ್ ಪಾತ್ರ ಮಾಡಿದ್ದಾರೆ. ಎರಡೂ ಚಿತ್ರಗಳ ಕಥೆ ಒಂದೇ ಆಗಿದೆ. ಕನ್ನಡದ ಕಥೆಯನ್ನು ತಮಿಳಿನವರಿಗೆ ಕಿಶೋರ್ ಹೇಳಿದ್ದಾರೆ ಎಂಬ ಶಂಕೆ ಉಂಟಾಗಿದೆ. ಒಮ್ಮೆ ತಮಿಳಿನಲ್ಲಿ ಚಿತ್ರ ಬಿಡುಗಡೆಯಾದರೆ, ನಮ್ಮ ಚಿತ್ರ ರಿಮೇಕ್ ಎಂಬ ಅಪವಾದಕ್ಕೊಳಗಾಗುತ್ತದೆ. ಇದರ ಪರಿಣಾಮವಾಗಿ ಸಬ್ಸಿಡಿ, ತೆರಿಗೆ ವಿನಾಯಿತಿ ಇತ್ಯಾದಿಗಳಿಂದ ವಂಚಿತರಾಗುವ ಅಪಾಯವಿದೆ ಎಂದು ಕಬಡ್ಡಿ ಚಿತ್ರದ ಸಹನಿರ್ಮಾಪಕ ರವಿ ಇತ್ತೀಚೆಗೆ ಸುದ್ದಿಗಾರರ ಮುಂದೆ ಹಲುಬಿದ್ದಾರೆ.

  ಈ ಬಗ್ಗೆ ಸ್ಪಷ್ಟ ಚಿತ್ರಸಿಗಲಿ ಎಂಬ ಉದ್ದೇಶದಿಂದ ಕಬಡ್ಡಿ ಚಿತ್ರದ ನಿರ್ಮಾಪಕ ಹಾಗೂ ನಟ ಆಗಿರುವ ಕಿಶೋರ್ ಅವರನ್ನು ಪತ್ರಿಕಾಗೋಷ್ಠಿಗೆ ಕರೆದರೆ ಬಂದಿಲ್ಲ. ಇದರಿಂದ ನಮಗೆ ಗಾಬರಿಯಾಗಿದೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ನಿರ್ದೇಶಕ ನರೇಂದ್ರ ಬಾಬು ಹೇಳುತ್ತಾರೆ.

  ಕಿಶೋರ್ ಸ್ಪಷ್ಟನೆ:
  ಕಾರಣಾಂತರಗಳಿಂದ ನಾನು ಪತ್ರಿಕಾಗೋಷ್ಠಿಗೆ ಬರಲಾಗಲಿಲ್ಲ. ಎರಡೂ ಚಿತ್ರಗಳು ಕಬಡ್ಡಿ ಆಟದ ಕಥೆ ಹೊಂದಿದೆ. ನನ್ನ ಪಾತ್ರ ಕೂಡ ಒಂದೇ ಎನ್ನುವುದು ನಿಜವಾದರೂ ಕಥೆ ಸಂಪೂರ್ಣವಾಗಿ ಬೇರೆ ಬೇರೆ. ಕನ್ನಡದ ಕಬಡ್ಡಿಯಲ್ಲಿ ಒಟ್ಟು ಕಬಡ್ಡಿಯೇ ಮುಖ್ಯ. ಆದರೆ ತಮಿಳಿನಲ್ಲಿ ಗೆಲ್ಲುವುದು ವ್ಯಕ್ತಿ.ಅಲ್ಲಿಯ ಕಥೆ ಚಕ್ ದೇ ಇಂಡಿಯಾ ತರದ್ದು, ಕೋಚ್ ಸಾಯುವುದಿಲ್ಲ. ಇಲ್ಲಿ ನೈಜ ಕಥೆ ಕೋಚ್ ಸಾಯುತ್ತಾನೆ. ಇದರ ಅರಿವಿದ್ದರಿಂದಲೇ ನಾನು ಆ ಪಾತ್ರ ಒಪ್ಪಿಕೊಂಡಿದ್ದು, ಮೊದಲೇ ಈ ಬಗ್ಗೆ ಕನ್ನಡದ ತಂಡಕ್ಕೆ ತಿಳಿಸಿದ್ದರೆ, ಎರಡೂ ಚಿತ್ರಗಳಿಗೂ ತೊಂದರೆಯಾಗುವ ಸಾಧ್ಯತೆಯಿತ್ತು. ತಮಿಳಿಗೆ ಮೊದಲು ನಮ್ಮಲ್ಲಿ ಚಿತ್ರ ಬಿಡುಗಡೆಯಾದರೆ ಯಾವ ಸಮಸ್ಯೆಯೂ ಇರುವುದಿಲ್ಲ ಎಂದು ಸಮಜಾಯಿಷಿ ನೀಡಿದರು.

  ಅಷ್ಟಕ್ಕೂ ಕನ್ನಡ ಚಿತ್ರಕ್ಕೆ 'ಮ್ಯಾನ್ ಆಫ್ ದಿ ಇಯರ್ 'ಎಂಬ ಆಂಗ್ಲ ಚಿತ್ರ ಸ್ಫೂರ್ತಿ ಎಂದು ನಿರ್ದೇಶಕ ನರೇಂದ್ರ ಬಾಬು ಹೇಳಿ ಆಗಿದೆ. ಈ ಚಿತ್ರದಲ್ಲಿ ಮಂಡ್ಯದ ಹುಡುಗ ಹೀರೋ ಆದರೆ, ಕೋಚ್ ಕಿಶೋರ್ ಧಾರವಾಡ ಹೈದನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗೊಂದಲ ನಿವಾರಣೆಯಾಗಿ ಯುವತಂಡ ಬೆಳ್ಳಿತೆರೆಯ ಮೇಲೆ ಕಬಡ್ಡಿ ಆಡುವಂತಾಗಲಿ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X