»   » ರಜನಿಕಾಂತ್‌ಗೆ ಕಮಲಹಾಸನ್‌ ರಾಜಕೀಯ ಸೆಡ್ಡು ?

ರಜನಿಕಾಂತ್‌ಗೆ ಕಮಲಹಾಸನ್‌ ರಾಜಕೀಯ ಸೆಡ್ಡು ?

Posted By:
Subscribe to Filmibeat Kannada

* ಅಯ್ಯಪ್ಪನ್‌, ಚೆನ್ನೈ

ತಮಿಳುನಾಡಲ್ಲಿ ಕಮಲ ಹಾಸನ್‌ ಮತ್ತು ರಜನಿಕಾಂತ್‌ ರಾಜಕೀಯ ಕ್ಷೇತ್ರದಲ್ಲಿ ಮುಖಾಮುಖಿಯಾಗಲು ಅಣಿಯಾಗುತ್ತಿದ್ದಾರಾ?ಇಂಥಾ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಇಬ್ಬರೂ ನಟರ ಅಭಿಮಾನಿ ಬಳಗಗಳನ್ನು ಹಾದು ಬಂದರೆ, ಹೌದೆಂಬ ಉತ್ತರ ಸಿಕ್ಕೀತು. ಇದಕ್ಕೆ ಪುಷ್ಟಿ ಕೊಡುವಂಥಾ ಕೆಲವು ಘಟನಾವಳಿಗಳನ್ನು ಗಮನಿಸಿ-

ಕಾವೇರಿ ನೀರಿನ ಸಮಸ್ಯೆ ಮುಂದಿಟ್ಟುಕೊಂಡು ರಜನಿ ಪ್ರತ್ಯೇಕ ನಿರಶನಕ್ಕೆ ಕೂತಾಗ, ಅದನ್ನು ಪಕ್ಕಾ ರಾಜಕೀಯ ನಾಟಕ ಎಂದು ಕಮಲ್‌ ಖುಲ್ಲಂಖುಲ್ಲಾ ಬಣ್ಣಿಸಿದರು. ನೈವೇಲಿ ರ್ಯಾಲಿಗೆ ಹೀಗೆ ಬಂದು ಹಾಗೆ ಹೋದರೂ, ಭಾಷಣ ಕೊಚ್ಚುವುದನ್ನು ಮಾತ್ರ ಕಮಲ್‌ ಮರೆಯಲಿಲ್ಲ.

ನದಿ ಸಮಸ್ಯೆಗಳಿಗೆ ಪೂರ್ಣವಿರಾಮ ಹಾಕುವ ನಿಟ್ಟಿನಲ್ಲಿ ಹಿಮಾಲಯನ್‌ ಮತ್ತು ಪೆನಿನ್‌ಸ್ಯುಲಾರ್‌ ನದಿಗಳನ್ನು ಸೇರಿಸಬೇಕು ಎಂಬುದು ರಜನಿ ಆಗ್ರಹ. ಇದಕ್ಕಾಗಿ ಜನಾಂದೋಳನದ ಸಂಕಲ್ಪ ಮಾಡಿರುವ ರಜನಿ ಬುಲಾವಿಗೆ ಓಗೊಡುತ್ತಿರುವ ಅಭಿಮಾನಿಗಳಿಗೇನೂ ಬರವಿಲ್ಲ. ಹೀಗೆ ಜನರನ್ನು ಸೇರಿಸಿಕೊಂಡು ರಜನಿ ಹೆಜ್ಜೆ ಹಾಕುತ್ತಿರುವುದೇ ರಾಜಕೀಯಕ್ಕೆ ಎಂಟ್ರಿ ಪಡೆಯಲು ಎಂದು ಪಿಎಂಕೆ ನಾಯಕ ರಾಮದಾಸ್‌ ಘಂಟಾಘೋಷವಾಗಿ ಹೇಳುತ್ತಲೇ ಇದ್ದಾರೆ.

ರಜನಿ ವಿರುದ್ಧ ಕಮಲ ಹಾಸನ್‌ರನ್ನು ಎತ್ತಿ ಕಟ್ಟುತ್ತಿದ್ದಾರೆ ಎಂಬ ಮಾತು ರಜನಿ ಆಪ್ತ ವಲಯದಲ್ಲಿ ಪ್ರತಿಧ್ವನಿಸುತ್ತಿದೆ. ಇದು ಅಹುದೇನೋ ಎಂಬಂತೆ ಕಮಲ್‌ ಸಮಾಜ ಸೇವೆಗೆ ಕಂಕಣ ತೊಟ್ಟಿದ್ದಾರೆ.

ಪುಕ್ಕಟೆ ಧೋತಿ- ಸೀರೆ ಯೋಜನೆಯನ್ನು ತಮಿಳುನಾಡು ಸರ್ಕಾರ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಕೈಮಗ್ಗ ನೇಕಾರರ ಹೊಟ್ಟೆಗೆ ತಣ್ಣೀರು ಬಟ್ಟೆ ಬೀಳುವ ಪರಿಸ್ಥಿತಿ ಬಂದಿದೆ. ಅದಕ್ಕೇ ಅವರ ಕಣ್ಣೀರೊರೆಸಲು ಕಮಲ್‌ ಬೀದಿಗಿಳಿದಿದ್ದಾರೆ. ನವೆಂಬರ್‌ 7ರಂದು ಕಮಲ್‌ ಹುಟ್ಟುಹಬ್ಬ. ಈ ಪ್ರಯುಕ್ತ ತಮ್ಮ ಅಭಿಮಾನಿಗಳಲ್ಲಿ ಕಮಲ್‌ ಮಾಡಿಕೊಂಡಿರುವ ಮನವಿ ಏನೆಂದರೆ- ‘ಕೈಮಗ್ಗದ ನೇಕಾರರಿಂದ ಬಟ್ಟೆಗಳನ್ನು ಖರೀದಿಸಿ, ಅವನ್ನೇ ಉಡುಗೊರೆಯಾಗಿ ನನಗೆ ಕೊಡಿ. ನಾನು ಅದನ್ನು ಬಡ ಮಕ್ಕಳಿಗೆ ಹಂಚುತ್ತೇನೆ. ಈ ಮೂಲಕ ಕೈಮಗ್ಗದ ನೇಕಾರರ ಹಾಗೂ ಬಟ್ಟೆ ಇಲ್ಲದ ಬಡವರ ಕಣ್ಣೀರನ್ನು ಒಟ್ಟಿಗೇ ಒರೆಸಿದಂತಾಗುತ್ತದೆ’.

ಹೀಗೆ ಕಮಲ್‌ ಕಳಕಳಿ ಹೊರಬಿದ್ದದ್ದೇ ತಡ, ಅಭಿಮಾನಿಗಳು ಬಟ್ಟೆಗಳ ಚೀಲ ಹೊತ್ತು ಕಮಲ್‌ ಮನೆಯ ಮುಂದೆ ಜಮಾಯಿಸಿದ್ದಾರೆ. ಇನ್ನೊಂದು ಭಾಷಣದ ತಯಾರಿಯಲ್ಲಿರುವ ಕಮಲ್‌ರನ್ನು ಇದು ರಾಜಕೀಯದ ಸ್ಟಂಟಾ ಎಂದು ಕೆಣಕಿದರೆ, ಮೀಸೆಯಡಿಯಿಂದ ಮುಸಿಮುಸಿ ನಗುತ್ತಾರೆ. ಇದೇ ವಿಷಯವನ್ನು ರಜನಿ ಮುಂದಿಟ್ಟರೆ, ಪಡಿಯಪ್ಪನ ನೋಟ ಬೀರಿ ‘ನಾನಂತೂ ರಾಜಕೀಯಕ್ಕಾಗಿ ಜನಾಂದೋಳನ ಮಾಡ್ತಿಲ್ಲ ’ ಅಂತಾರೆ.

ಕಮಲ ಹಾಸನ್‌ ವೆಲ್‌ಫೇರ್‌ ಅಸೋಸಿಯೇಶನ್‌ನ ಅಧ್ಯಕ್ಷ ಗುಣಶೀಲನ್‌ ರಾಜಕೀಯ ವಲಯಗಳಲ್ಲಿ ಕಮಲ್‌ ಹೆಸರು ಮುಂದಿಟ್ಟುಕೊಂಡು ಜೋರಾಗಿ ಓಡಾಡುತ್ತಿರುವುದಂತೂ ಹದಿನಾರಾಣೆ ಸತ್ಯ.

ಎಂಬಲ್ಲಿಗೆ, ಕಮಲ ವರ್ಸಸ್‌ ರಜನಿ ರಾಜಕೀಯ ಧೂಳು ಅಮ್ಮಾ ನೆಲದಲ್ಲಿ ಜೋರಾಗೇ ಏಳುತ್ತಿದೆ !

Post your Views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada