ಚಿತ್ರತಂಡದಿಂದ ಲೈಂಗಿಕ ಕಿರುಕುಳ ಅನುಭವಿಸಿದ ನೇಹಾ
ಕನ್ನಡ ಚಿತ್ರರಂಗಕ್ಕೆ ವಿವಾದಗಳು ಹೊಸದಲ್ಲ. ಕೆಲವು ಬೆಂಕಿಯ ಕಿಡಿಯಂತೆ ಚಿಮ್ಮಿ ಕಾಳ್ಗಿಚ್ಚಿನ ಸ್ವರೂಪ ಪಡೆದು ಬಳಿಕ ತಣ್ಣಗಾದ ಉದಾಹರಣೆಗಳು ಬಹಳಷ್ಟಿವೆ. ಈಗ ಅಂತಹದ್ದೇ ಒಂದು ಸುದ್ದಿ ಹೊಗೆಯಾಡುತ್ತಿದೆ. ಅದು ಯಾವಾಗ ಬೆಂಕಿಯ ಬಲೆಯಾಗುತ್ತದೋ ಗೊತ್ತಿಲ್ಲ. ನಟಿಯೊಬ್ಬರು ಲೈಂಗಿಕ ಕಿರುಕುಳದಂತಹ ಗಂಭೀರ ಆರೋಪ ಮಾಡಿದ್ದಾರೆ.
ಹುಬ್ಬಳ್ಳಿ ಹುಡುಗಿ ನೇಹಾ ಪಾಟೀಲ್ ಅವರಿಗೆ ಆರಂಭದಲ್ಲೇ ಆಘಾತವಾಗಿದೆ. ಸಾಕಷ್ಟು ಕನಸುಗಳನ್ನು ಹೊತ್ತು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನೇಹಾ, 'ಸಂಕ್ರಾಂತಿ' ಚಿತ್ರದಲ್ಲಿ ನಾಯಕಿಯಾಗಿ ಅವಕಾಶ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದರು. ಚಿತ್ರತಂಡದಿಂದ ಏಕಾಏಕಿ ಹೊರಬಿದ್ದಿರುವ ಆಕೆ 'ಸಂಕ್ರಾಂತಿ' ಚಿತ್ರತಂಡದಿಂದ ತಾನು ಲೈಂಗಿಕ ಕಿರುಕುಳ ಅನುಭವಿಸಿದ್ದಾಗಿ ಘನ ಗಂಭೀರವಾಗಿ ಆರೋಪ ಎಸಗಿದ್ದಾರೆ.
'ಸಂಕ್ರಾಂತಿ' ಚಿತ್ರವನ್ನು ಆರ್ ಎಸ್ ಗೌಡ ನಿರ್ಮಿಸುತ್ತಿದ್ದು 'ಮುಸ್ಸಂಜೆ' ಮಹೇಶ್ ಆಕ್ಷನ್, ಕಟ್ ಹೇಳುತ್ತಿದ್ದಾರೆ. ನವರಸ ನಾಯಕ ಜಗ್ಗೇಶ್ ಅವರ ಮಗ ಗುರುರಾಜ್ ಚಿತ್ರದ ನಾಯಕ ನಟ. ಕಳೆದ ಕೆಲ ದಿನಗಳ ಹಿಂದಷ್ಟೇ ಈ ಚಿತ್ರಕ್ಕೆ ಅದ್ದೂರಿ ಮುಹೂರ್ತ ನಡೆದಿತ್ತು. ಬಳಿಕ ಏನಾಯಿತೋ ಏನೋ ನೇಹಾರನ್ನು ಚಿತ್ರದಿಂದ ಕೈಬಿಡಲಾಯಿತು.
ಇದರಿಂದ ಕೊಂಚ ಆಘಾತ ಅನುಭವಿಸಿದ ನೇಹಾ ಮಾಧ್ಯಮಗಳ ಮುಂದೆ ಹಾಜರಾಗಿ ತನಗೆ ನಡೆದಿರುವ ಅನ್ಯಾಯವನ್ನು ತೆರೆದಿಟ್ಟಿದ್ದಾರೆ. ನನಗೆ ಒಂದು ಮಾತೂ ತಿಳಿಸದೆ ಚಿತ್ರರಂಗದಿಂದ ಹೊರ ಹಾಕಿದ್ದಾರೆ. ಈ ಘಟನೆಯಿಂದ ನಾನು ಮಾನಸಿಕವಾಗಿ ಆಘಾತಗೊಂಡಿದ್ದೇನೆ. ಚಿತ್ರದ ನಾಯಕಿ ನಾನೇ ಎಂದು ಪ್ರಚಾರ ಮಾಡಲಾಗಿತ್ತು. ಈಗ ಇಲ್ಲಸಲ್ಲದ ಕಾರಣ ನೀಡಿ ನನ್ನನ್ನು ಹೊರ ಹಾಕಿರುವು ಎಷ್ಟು ಸರಿ ಎಂದು ನೇಹಾ ಅಲವತ್ತುಕೊಂಡಿದ್ದಾರೆ.
"ನೇಹಾ ಹೊಸಬರು. ಸಂಕ್ರಾಂತಿ ಆಕೆಯ ಚೊಚ್ಚಲ ಚಿತ್ರ. ಆಕೆಗೆ ಅಭಿನಯ ಗೊತ್ತು ಎಂದು ನಾವು ಅವಕಾಶ ಕೊಟ್ಟೆವು. ಎರಡು ಮೂರು ದಿನಗಳ ಚಿತ್ರೀಕರಣ ಬಳಿಕ ಆಕೆಗೆ ಕನಿಷ್ಠ ಅಭಿನಯವು ಗೊತ್ತಿಲ್ಲ ಎಂಬುದು ಮನದಟ್ಟಾಯಿತು. ಈ ವಿಷಯವನ್ನು ಅವರ ಬಳಿ ಮಾತನಾಡಿ ನಾವೇ ಬೇಡ ಎಂದು ತಿಳಿಸಿದೆವು. ಈಗ ವಿಷಯವನ್ನು ಅವರೇ ದೊಡ್ಡದು ಮಾಡುತ್ತಿದ್ದಾರೆ" ಎಂದು ನಿರ್ಮಾಪಕ ಹಾಗೂ ನಿರ್ದೇಶಕರು ಹೇಳಿದ್ದಾರೆ.
ನೇಹಾ ಅವರ ತಾಯಿ ಹೇಳುವುದೇನೆಂದರೆ, ನನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಚಿತ್ರದ ಪ್ರೊಡಕ್ಷನ್ ಮ್ಯಾನೇಜರ್ ನಮ್ಮ ಬಳಿ ದುಡ್ಡು ಕೇಳಿದ. ನಾವು ಯಾವುದಕ್ಕೂ ಸೊಪ್ಪು ಹಾಕದ ಕಾರಣ ಅವರು ಇಲ್ಲಸಲ್ಲದ ಕಾರಣಗಳನ್ನು ನೀಡಿ ನನ್ನ ಮಗಳನ್ನು ಚಿತ್ರತಂಡದಿಂದ ಹೊರಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.


Click it and Unblock the Notifications











